Chitradurga: ಒನಕೆ ಓಬವ್ವ ನಿಗಮ ರಚನೆ ಮಾಡುವೆ ಎಂದು ಬೊಮ್ಮಾಯಿ ಭರವಸೆ
ರಾಜ್ಯ ಸರ್ಕಾರದಿಂದ ಮುಂದಿನ ಬಜೆಟ್‍ನಲ್ಲಿ ‘ಓಬವ್ವ’ ಹೆಸರಿನಲ್ಲಿ ನಿಗಮ ಸ್ಥಾಪನೆ ಮಾಡಿ, ಮಹಿಳೆಯರ ಅಭಿವೃದ್ಧಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಡಿ.18): ರಾಜ್ಯ ಸರ್ಕಾರದಿಂದ ಮುಂದಿನ ಬಜೆಟ್‍ನಲ್ಲಿ ‘ಓಬವ್ವ’ ಹೆಸರಿನಲ್ಲಿ ನಿಗಮ ಸ್ಥಾಪನೆ ಮಾಡಿ, ಮಹಿಳೆಯರ ಅಭಿವೃದ್ಧಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು. ಚಿತ್ರದುರ್ಗ ನಗರದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದ ಮುರುಘಾ ರಾಜೇಂದ್ರ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಒನಕೆ ಓಬವ್ವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದ ಯಾವುದಾದರೂ ವಿಶ್ವವಿದ್ಯಾನಿಲಯದಲ್ಲಿ ಓಬವ್ವ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪನೆ ಮಾಡಲಾಗುವುದು. ಶೈಕ್ಷಣಿಕ ಅಭಿವೃದ್ಧಿಗಾಗಿ ರಾಜ್ಯದಲ್ಲಿ 100 ಅಂಬೇಡ್ಕರ್ ಹಾಗೂ 50 ಕನಕ ವಿದ್ಯಾರ್ಥಿ ನಿಲಯ ಸ್ಥಾಪನೆ ಮಾಡಲಾಗುವುದು. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮೂಲಕ 224 ವಿಧಾನ ಸಭಾ ಕ್ಷೇತ್ರಗಳಲ್ಲಿಗೂ ಪ್ರತಿ ಕ್ಷೇತ್ರಕ್ಕೆ 100 ಯುವಕರಿಗೆ ಉದ್ಯೋಗಕ್ಕಾಗಿ ಸೌಲಭ್ಯ ಕಲ್ಪಿಸಲಾಗುವುದು ಎಂದರು. ಚಿತ್ರದುರ್ಗ ನಗರದಲ್ಲಿ 80 ಎಕರೆ ಜಾಗವನ್ನು ಒನಕೆ ಓಬವ್ವ ಟ್ರಸ್ಟ್‌ಗೆ ಮಂಜೂರು ಮಾಡಲು ಜಿಲ್ಲಾಧಿಕಾರಿಗಳಿಂದ ವರದಿ ಪಡೆದು ಕ್ರಮ ವಹಿಸಲಾಗುವುದು. ರಾಜ್ಯದ ಅಭಿವೃದ್ಧಿಯಲ್ಲಿ ಎಲ್ಲ ಸಮುದಾಯಗಳ ಕೊಡುಗೆ ಅಪಾರವಾಗಿದೆ. ಚಿಕ್ಕಂದಿನಲ್ಲಿ ನನ್ನ ತಾಯಿ ಒನಕೆ ಓಬವ್ವ ಕಥೆ ಹೇಳುತ್ತಿದ್ದರು. ಅಧಿಕಾರ ಇದ್ದವರು ಸಾಧನೆ ಮಾಡುವುದು ಸಹಜ. ಆದರೆ ಅಧಿಕಾರ ಇಲ್ಲದೇ ಒನಕೆ ಓಬವ್ವ ಸಾಧನೆ ಮಾಡಿದ್ದಾಳೆ. ಅವಳ ಹೋರಾಟ ಹಾಗೂ ತ್ಯಾಗ ಸುವರ್ಣಾಕ್ಷರದಲ್ಲಿ ಬರೆಯಬೇಕು.
ಗೃಹಿಣಿಯಾಗಿ ಪತಿ ಊಟ ಮಾಡುವಾಗ ಎಬ್ಬಿಸಬಾರದು ಎಂಬ ಸಂಪ್ರದಾಯಕ್ಕೆ ತಲೆಬಾಗಿ, ವೈರಿ ಹೈದರಾಲಿ ಸೇನೆಯ ರುಂಡ ಚಂಡಾಡಿದಳು. ಓಬವ್ವನ ಕಥೆ ನಮ್ಮೆಲ್ಲರಿಗೂ ಪ್ರೇರಣೆ. ಕಿತ್ತೂರು ಚೆನ್ನಮ್ಮ, ಕೆಳದಿ ಚನ್ನಮ್ಮ, ಉಳ್ಳಾಲದ ಅಬ್ಬಕ್ಕ ನಮಗೆ ಆದರ್ಶಪ್ರಾಯರು. ಮಹಿಳೆಯರ ಸಾಧನೆ ಇತಿಹಾಸ ಪುಟಗಳಲ್ಲಿ ನೋಡಿದರೆ ಮಹಿಳೆಯರು ಅಬಲೆಯರಲ್ಲ ಎಂಬುದು ಸಾಬೀತು ಆಗುತ್ತದೆ. ಓಬವ್ವನಿಂದ ಕರ್ತವ್ಯ ನಿಷ್ಠೆ, ದೇಶ ಪ್ರೇಮ ತ್ಯಾಗಗಳ ಗುಣ ಕಲಿಯಬೇಕು. ಈ ಗುಣಗಳು ಛಲವಾದಿ ಸಮುದಾಯದಲ್ಲಿ ಬಹಳ ಹಿಂದಿನಿಂದ ಬೆಳದು ಬಂದಿವೆ. ಇವು ಓಬವ್ವನಲ್ಲಿ ಅಂತರ್ಗತ ಇದ್ದು ಸಾಧನೆಗೆ ಪ್ರೇರೇಪಿಸಿವೆ ಎಂದು ಹೇಳಿದರು.
ಸಿದ್ದರಾಮಯ್ಯ ವೀಕ್ ಸಿಎಂ ಆಗಿದ್ದರಿಂದಲೇ ಕಾಂಗ್ರೆಸ್ ಸೋತಿದೆ: ಕೆ.ಎಸ್ ಈಶ್ವರಪ್ಪ
ಅಂಬೇಡ್ಕರ್ ವಿಚಾರದಲ್ಲಿ ನಂಬಿಕೆ ಇಟ್ಟು, ಬದ್ಧನಾಗಿ ಕೆಲಸ ಮಾಡುತ್ತಿದ್ದೇನೆ. ಬುದ್ಧ, ಬಸವ, ಅಂಬೇಡ್ಕರ್ ಗಾಂಧಿ, ವಾಲ್ಮೀಕಿ ನನಗೆ ಆದರ್ಶಪ್ರಾಯರು. ಅಂಬೇಡ್ಕರ್ ಅವರು ಸಮಾಜದ ಎಲ್ಲಾ ಸಮುದಾಯಗಳಿಗೆ ಅವಕಾಶ ಕೊಡಬೇಕು ಎಂದು ಸಂವಿಧಾನದ ಪ್ರಸ್ತಾವನೆಯಲ್ಲಿ ತಿಳಿಸಿದ್ದಾರೆ.
Haveri: ತೇನ್‌ಸಿಂಗ್ ಕತೆ ಹೇಳಿ ಮಕ್ಕಳಿಗೆ ದೃಢಸಂಕಲ್ಪದ ಪಾಠ ಮಾಡಿದ ಸಿಎಂ ಬೊಮ್ಮಾಯಿ
ಸಂವಿಧಾನ ದೇಶದ 130 ಕೋಟಿ ಜನರು ಒಟ್ಟಾಗಿರಲು ಕಾರಣ. ಛಲವಾದಿ ಸಮುದಾಯದಲ್ಲಿ ಪ್ರತಿಭೆಗೆ ಕೊರತೆ ಇಲ್ಲ. ಅವಕಾಶಗಳ ಕೊರತೆ ಇದೆ. ಅವಕಾಶ ಕೊಟ್ಟರೆ ರಾಜ್ಯ ಕಟ್ಟಬಹುದು ರಾಜ್ಯ ಆಳ್ವಿಕೆ ಮಾಡಬಹುದು ಎಂದರು. ಎರಡು ತರಹದ ರಾಜಕಾರಣ ಇದೆ, ಒಂದು ಅಧಿಕಾರದ ರಾಜಕಾರಣ, ಇನ್ನೊಂದು ಜನ ರಾಜಕಾರಣ. ಜನರ ಸೇವೆಯನ್ನು ನಿಷ್ಠೆಯಿಂದ ಮಾಡಿದರೆ ಜನರು ನಮ್ಮನ್ನು ನಾಯಕರನ್ನಾಗಿ ಮಾಡುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಭಿಪ್ರಾಯಪಟ್ಟರು.