Asianet Suvarna News Asianet Suvarna News

ಕ್ಷೇತ್ರಕ್ಕೆ ಬಂಪರ್ : ಸಿಎಂ ಅಭಿನಂದನೆ ತಿಳಿಸಿದ ಹುಣಸೂರು ಕೈ ಶಾಸಕ

  •  ನಾಲ್ಕು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮರದೂರು 2ನೇ ಹಂತದ ಏತ ನೀರಾವರಿ ಯೋಜನೆಗೆ ಸರ್ಕಾರ ಹಸಿರುನಿಶಾನೆ
  •  63.50 ಕೋಟಿ ವೆಚ್ಚದ ಯೋಜನೆಯ ಶೀಘ್ರ ಜಾರಿಗೆ ಸ್ವತಃ ಮುಖ್ಯಮಂತ್ರಿಗಳೇ ಕಾವೇರಿ ನೀರಾವರಿ ನಿಗಮಕ್ಕೆ ಲಿಖಿತ ಸೂಚನೆ
CM Basavaraj Bommai Green signal To Cauvery irrigation projects in hunsur snr
Author
Bengaluru, First Published Sep 27, 2021, 9:02 AM IST
  • Facebook
  • Twitter
  • Whatsapp

ಹುಣಸೂರು (ಸೆ.27):  ಕಳೆದ ನಾಲ್ಕು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮರದೂರು 2ನೇ ಹಂತದ ಏತ ನೀರಾವರಿ ಯೋಜನೆಗೆ ಸರ್ಕಾರ ಹಸಿರು ನಿಶಾನೆ ತೋರಿದ್ದು,  63.50 ಕೋಟಿ ವೆಚ್ಚದ ಯೋಜನೆಯ ಶೀಘ್ರ ಜಾರಿಗೆ ಸ್ವತಃ ಮುಖ್ಯಮಂತ್ರಿಗಳೇ ಕಾವೇರಿ ನೀರಾವರಿ ನಿಗಮಕ್ಕೆ (Cauvery Irrigation Corporation) ಲಿಖಿತ ಸೂಚನೆ ನೀಡಿದ್ದಾರೆ ಎಂದು ಶಾಸಕ ಎಚ್‌.ಪಿ. ಮಂಜುನಾಥ್‌ (HP Manjunath) ತಿಳಿಸಿದರು.

ಪಟ್ಟಣದ ಶಾಸಕರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕಾವೇರಿಯ ಉಪನದಿ ಲಕ್ಷ್ಮಣತೀರ್ಥ ನದಿದಡದಲ್ಲಿ ಮರದೂರು ಬಳಿ 2ನೇ ಹಂತದ ಏತ ನೀರಾವರಿ ಯೋಜನೆ ಸ್ಥಾಪನೆಯಾಗಲಿದೆ. ಯೋಜನೆಗೆ ಒಟ್ಟು   63.50 ಕೋಟಿ ರು. ವೆಚ್ಚವಾಗಲಿದ್ದು, ಯೋಜನೆಯಡಿ ತಾಲೂಕಿನ 47 ಕೆರೆಗಳು ಮತ್ತು ಎಚ್‌.ಡಿ. ಕೋಟೆ ತಾಲೂಕಿನ 2 ಕೆರೆಗಳಿಗೆ ನೀರು ತುಂಬಿಸಲಾಗುವುದು. ಯೋಜನೆಯಿಂದ 30 ಗ್ರಾಮಗಳಿಗೆ ಕುಡಿಯುವ ನೀರಿನೊಂದಿಗೆ ಕೃಷಿ ಕಾರ್ಯಕ್ಕೂ ನೀರು ಸಿಗಲಿದೆ. ನದಿಯಿಂದ 0.235 ಟಿಎಂಸಿ (31 ಕ್ಯೂಸೆಕ್ಸ್‌) ನೀರು ಪಡೆಯಲಾಗುವುದು. ವರ್ಷದ 90 ದಿನಗಳ (ಜುಲೈನಿಂದ ಸೆಪ್ಟೆಂಬರ್‌ವರೆಗೆ)ಕಾಲ ನೀರು ಎತ್ತಲಾಗುವುದು. 325 ಎಚ್‌ಪಿ ಸಾಮರ್ಥ್ಯದ 4 ಮೋಟಾರ್‌ಗಳನ್ನು ಅಳವಡಿಸಲಾಗುವುದು. ರೈಸಿಂಗ್‌ ಮೈನ್‌ 5.32 ಕಿ.ಮೀ.ಉದ್ದವಿರಲಿದೆ ಎಂದರು.

ರೈತರು ಗರಂ ಆದರೂ ಕೂಲ್‌ ಆಗಿದ್ದ ಸಿಎಂ ಬೊಮ್ಮಾಯಿ

2017ರಲ್ಲಿ ಯೋಜನೆಯ ವಿಸ್ತ್ರತ ವರದಿಯನ್ನು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳೊಂದಿಗೆ ಚರ್ಚಿಸಿ ಪ್ರಸ್ತಾವನೆ ಅಂದಾಜು ಪರಿಶೀಲನಾ ಸಮಿತಿಯ 28ನೇ ಸಭೆಯಲ್ಲಿ ಸಲ್ಲಿಸಿ ಅನುಮೋದನೆ ಪಡೆಯಲಾಗಿತ್ತು. ಯೋಜನಾ ವರದಿಗೆ ಸಮಿತಿಯ 60ನೇ ಮಂಡಳಿ ಸಭೆಯ ಅನುಮೋದನೆ ಪಡೆದು ಆಡಳಿತಾತ್ಮಕ ಅನುಮೋದನೆಗಾಗಿ ನಿಗಮದಿಂದ ಜಲಸಂಪನ್ಮೂಲ ಇಲಾಖೆಗೆ ಸಲ್ಲಿಸಿ ಆರ್ಥಿಕ ಇಲಾಖೆಗೆ ಅನುಮೋದನೆಗೆ ಸಲ್ಲಿಸಲಾಗಿತ್ತು. ಈ ನಡುವೆ 2018ರಲ್ಲಿ ರಾಜಕೀಯ ಸ್ಥಿತ್ಯಂತರದಲ್ಲಿ ಯೋಜನೆಗೆ ನೆನೆಗುದಿಗೆ ಬಿದ್ದಿತ್ತು. 2019ರಲ್ಲಿ ಉಪಚುನಾವಣೆಯಲ್ಲಿ ತಾವು ಮತ್ತೆ ಶಾಸಕರಾಗಿ ಮರು ಆಯ್ಕೆಯಾದ ನಂತರ ಪ್ರಯತ್ನ ಮುಂದುವರೆಸಿದೆ ಎಂದರು.

ಜನರ ಬಳಿ ಆಡಳಿತ ಯೋಜನೆಗೆ ಸಿದ್ಧತೆ: ಸಿಎಂ ಬೊಮ್ಮಾಯಿ

ವಾರದ ಹಿಂದೆ ವಿಧಾನಸಭೇ ಅಧಿವೇಶನ ನಡೆಯುವ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರನ್ನು ಭೇಟಿಯಾಗಿ ಯೋಜನೆಯ ಪ್ರಾಮುಖ್ಯತೆಯನ್ನು ವಿವರಿಸಿದರು. ಯೋಜನೆಯ ಮಹತ್ವವನ್ನರಿತ ಮುಖ್ಯಮಂತ್ರಿಗಳು ಸ್ಥಳದಲ್ಲೇ ಯೋಜನೆ ಜಾರಿಗಾಗಿ ಕೂಡಲೇ ಕ್ರಮವಹಿಸಲು ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಲಿಖಿತ ಸೂಚನೆಯನ್ನು ಸೆ. 22ರಂದು ನೀಡಿದ್ದಾರೆ. ಯೋಜನೆಯ ಪ್ರಸ್ತಾವನೆಯನ್ನು ಕೂಡಲೇ ಸರ್ಕಾರಕ್ಕೆ ಸಲ್ಲಿಸಿ ಆರ್ಥಿಕ ಅನುಮೋದನೆ ಪಡೆಯಲು ಮಾರನೇ ದಿನವೇ ನಿಗಮದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಮುಖ್ಯಮಂತ್ರಿಗಳಿಗೆ ಅಭಿನಂದನೆ

ತಾಲೂಕಿನ ಪ್ರಮುಖ ನೀರಾವರಿಯೋಜನೆ ಹಾಗೂ ನನ್ನ ಕನಸಿನ ಈ ಯೋಜನೆ ಜಾರಿಗಾಗಿ ನಾಲ್ಕು ವರ್ಷದಿಂದ ಪಟ್ಟಶ್ರಮ ಇದೀಗ ಸಾರ್ಥಕತೆ ಪಡದಿದೆ. ಅಧಿವೇಶನದ ವೇಳೆ ಮುಖ್ಯಮಂತ್ರಿ ಬೊಮ್ಮಾಯಿ ಸ್ಥಳದಲ್ಲೇ ಸಂಬಂಧಪಟ್ಟಇಲಾಖೆಗೆ ಸೂಚನೆ ನೀಡಿದ್ದು, ಮುಖ್ಯಮಂತ್ರಿಗಳಿಗೆ ತಾಲೂಕಿನ ಜನತೆ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ವರ್ಷದೊಳಗೆ ಯೋಜನೆ ಪೂರ್ಣಗೊಳ್ಳಲಿದೆ ಎಂಬ ವಿಶ್ವಾಸವಿದೆ.

- ಎಚ್‌.ಪಿ. ಮಂಜುನಾಥ್‌, ಶಾಸಕ, ಹುಣಸೂರು

ಯಾವ್ಯಾವ ಕೆರೆಗಳು?

ಹುಣಸೂರು ತಾಲೂಕಿನ ರಾಯನಹಳ್ಳಿಕೆರೆ, ಜಡಗನಕೊಪ್ಪಲಿನ ಗುರುಗಳ ಕೆರೆ, ಬನ್ನಿಕುಪ್ಪೆಯ ಜೋಗಿಕರೆ, ಚೌಡಿಕಟ್ಟೆ, ಹುರಿಚಿಕ್ಕನಕಟ್ಟೆ, ಶೆಟ್ಟರಕಟ್ಟೆ, ಬನ್ನಮ್ಮನ ಕೆರೆ, ಹೊಸೂರಿನ ಹೊಸಕೆರೆ, ಮಾದಳ್ಳಿಮಠದ ಮಾದಳ್ಳಿಕೆರೆ, ದಾಸನಕಟ್ಟೆ, ವಡಕೆಕಟ್ಟೆ, ಹೊಸಪುರದ ಹೊಸಪುರ ಕೆರೆ, ನಾಡಪ್ಪನಹಳ್ಳಿಯ ನಾಡಪ್ಪನಕೆರೆ, ಕರಳಕಟ್ಟೆ, ದೈತ್ಯನಕೆರೆ ಕಾವಲ್‌ನ ದೈತ್ಯನಕೆರೆ, ಜೋಡಕಟ್ಟೆ, ಹಳೆಪುರದ ಹಳೇಪುರ ಕೆರೆ, ತಿಪ್ಪೂರಿನ ತಿಪ್ಪೂರುಕೆರೆ, ತೋಟದಹೊಸಳ್ಳಿ ಕೆರೆ, ಗಾಗೇನಹಳ್ಳಿಯ ಚುಂಚಮಂಚಕಟ್ಟೆ, ರಂಗಪ್ಪಯ್ಯನ ಕೆರೆ, ಜೋಡಿಕಟ್ಟೆ, ಮಲ್ಲಯ್ಯನಕೆರೆ, ಈರನದಾಸಿಕೊಪ್ಪಲಿನ ದಾಸಿಕಟ್ಟೆ, ನಂಜಮ್ಮನಕೊಪ್ಪಲಿನ ನಂಜಮ್ಮನಕರೆ, ಚಲ್ಲಹಳ್ಳಿಯ ವಡಕೆಕಟ್ಟೆ, ಪುಟ್ಟಪ್ಪನ ಕೆರೆ, ಫಾರಂಕೆರೆ, ಚೆನ್ನಕ್ಕನ ಕೆರೆ, ಬೆಂಕಪುರದ ಸೊಡ್ರುಕೆರೆ, ಊರಮುಂದಿನ ಕೆರೆ, ಆರಾಮಕಟ್ಟೆ, ಮೊಣ್ಣನಕಟ್ಟೆ, ಕುಂಬಗಣ್ಣನಕೆರೆ, ತಿಮ್ಮನಕೆರೆ, ಅನ್ನರಾಯನಪುರದ ಅನ್ನರಾಯನಪುರ ಕೆರೆ, ಹಳ್ಳಿಕೆರೆಯ ಹಳ್ಳಿಕೆರೆ, ಗೋಹಳ್ಳಿಯ ಬಾವಿಕಟ್ಟೆ, ಒಡೆಯರಹೊಸಹಳ್ಳಿಯ ಹೊಸಹಳ್ಳಿಕೆರೆ, ಕಾಂತಯ್ಯನಕರೆ, ಹೆಗ್ಗನಹಳ್ಳಿ ಕೆರೆ, ಗೋಹಳ್ಳಿಯ ಗೋಹಳ್ಳಿಕೆರೆ, ಶಂಖಹಳ್ಳಿಯ ದಾಸನಶೆಟ್ಟಿಕೆರೆ, ಹರದನಹಳ್ಳಿಯ ಹರದನಹಳ್ಳಿ ಕೆರೆ, ಅಸ್ವಾಳು ಗ್ರಾಮದ ಗರಕೆಕೆಟ್ಟೆ, ಅಸ್ವಾಳು ಕೆರೆ ಹಾಗೂ ಎಚ್‌.ಡಿ. ಕೋಟೆ ತಾಲೂಕಿನ ತೋಟದಹಳ್ಳಿಯ ಹೊಸಕರೆ ಮತ್ತು ಕೊತ್ತೇಗಾಲದ ಕೊತ್ತೇಗಾಲ ಕೆರೆಗಳಿಗೆ ನೀರು ತುಂಬಲಾಗುವುದು.

Follow Us:
Download App:
  • android
  • ios