Asianet Suvarna News Asianet Suvarna News

ವಿಜಯನಗರ ಸಾಮ್ರಾಜ್ಯದಂತೆ ಹೊಸ ಜಿಲ್ಲೆಯೂ ಸುಭಿಕ್ಷವಾಗಲಿ : ಸಿಎಂ

  • ರಾಜ್ಯದ 31ನೇ ಜಿಲ್ಲೆಯಾ​ಗಿ ಅಸ್ತಿತ್ವಕ್ಕೆ ಬಂದಿರುವ ವಿಜಯನಗರ ಜಿಲ್ಲೆ
  •  ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ. ವಿಜಯನಗರ ಸಾಮ್ರಾಜ್ಯದಲ್ಲಿದ್ದಂತೆ ಎಲ್ಲರಿಗೂ ಸುಖ-ಶಾಂತಿ ನೆಮ್ಮದಿ ಎಲ್ಲರ ಬದುಕಲ್ಲಿ ನೆಲೆ ಕಾಣುವಂತೆ ಮಾಡುತ್ತೇವೆ. 
CM Basavaraj Bommai Assure To New Vijayanagara District snr
Author
Bengaluru, First Published Oct 3, 2021, 7:27 AM IST

 ವಿಜಯನಗರ (ಅ.03):  ರಾಜ್ಯದ 31ನೇ ಜಿಲ್ಲೆಯಾ​ಗಿ ಅಸ್ತಿತ್ವಕ್ಕೆ ಬಂದಿರುವ ವಿಜಯನಗರ (vijayanagara) ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ. ವಿಜಯನಗರ ಸಾಮ್ರಾಜ್ಯದಲ್ಲಿದ್ದಂತೆ ಎಲ್ಲರಿಗೂ ಸುಖ-ಶಾಂತಿ ನೆಮ್ಮದಿ ಎಲ್ಲರ ಬದುಕಲ್ಲಿ ನೆಲೆ ಕಾಣುವಂತೆ ಮಾಡುತ್ತೇವೆ. ಅಭಿವೃದ್ಧಿಯ ನಿಮ್ಮ ಕನಸನ್ನು ನಾವು ನನಸು ಮಾಡಿ ತೋರಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಘೋಷಿಸಿದ್ದಾರೆ.

ವಿಜಯನಗರ ಜಿಲ್ಲೆ ಅಸ್ತಿತ್ವಕ್ಕೆ ಬರುವ ಮೂಲಕ ವಿಜಯನಗರ ಸಾಮ್ರಾಜ್ಯ ಪುನರಸ್ಥಾಪನೆಯಾದಂತಾಗಿದೆ ಎಂದು ತಿಳಿಸಿದ ಅವರು, ಐಕೋನಿಕ್‌ ಟೂರಿಸಂ, ಹೆಲಿಟೂರಿಸಂ ಮೂಲಕ ಪ್ರವಾಸೋದ್ಯಮದಲ್ಲಿ (Tourism) ಹೆಚ್ಚಿನ ಅಭಿವೃದ್ಧಿ ಸಾಧಿಸಲಾಗುವುದು ಎಂದೂ ತಿಳಿಸಿದರು.

ವಿಜಯನಗರದ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ವಿಜಯನಗರ ಜಿಲ್ಲೆಯನ್ನು ಅಧಿಕೃತವಾಗಿ ಉದ್ಘಾಟಿಸಿ ಅವರು ಮಾತನಾಡಿದರು.

ವಿಜಯನಗರ ಸಾಮ್ರಾಜ್ಯದಲ್ಲಿ ಶಾಂತಿ-ಸುಖ, ನೆಮ್ಮದಿ, ಅಭಿವೃದ್ಧಿ ಸಮೃದ್ಧಿ ಎಲ್ಲವೂ ಇತ್ತು. ಪ್ರತಿಯೊಬ್ಬರೂ ಸುಭಿಕ್ಷವಾಗಿ, ನೆಮ್ಮದಿಯಾಗಿದ್ದರು. ಆಗ ಬೀದಿ ಬದಿಗಳಲ್ಲಿ ವಜ್ರ ವೈಢೂರ‍್ಯಗಳನ್ನು ಮಾರಾಟ ಮಾಡುತ್ತಿದ್ದರು. ಅಷ್ಟೊಂದು ಆಗ ಆರ್ಥಿಕವಾಗಿ ಸಬಲವಾಗಿತ್ತು. ಆಗಿನ ವಿಜಯನಗರ ಸಾಮ್ರಾಜ್ಯಕ್ಕೆ ವಿದ್ಯಾರಣ್ಯರ ಆಶೀರ್ವಾದವಿತ್ತು. ಈ ನೂತನ ಜಿಲ್ಲೆಗೆ ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಶೀರ್ವಾದವಿದೆ.

ಹೊಸಪೇಟೆ: ವಿಜಯನಗರ ಉದಯಕ್ಕೆ ಭವ್ಯ ವೇದಿಕೆ..!

ವಿಜಯನಗರ ಸಾಮ್ರಾಜ್ಯದಲ್ಲಿದ್ದಂತೆ ನೆಮ್ಮದಿ ನೂತನವಾಗಿ ಅಸ್ತಿತ್ವಕ್ಕೆ ಬಂದ ವಿಜಯನಗರ ಜಿಲ್ಲೆಯ ಪ್ರತಿಯೊಬ್ಬರಲ್ಲೂ ಮನೆ ಮಾಡಬೇಕು. ಈ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಭಿವೃದ್ಧಿ ಪರ್ವ ಶುರುವಾದಂತಾಗಿದೆ. ಪ್ರತಿ ಗ್ರಾಮ ಕಟ್ಟಕಡೆಯ ಮನುಷ್ಯ ಕೂಡ ಸುಭಿಕ್ಷೆಯಿಂದ ಬದುಕು ಸಾಗಿಸುವಂತಾಗಬೇಕು. ಈ ಹಿನ್ನೆಲೆಯಲ್ಲಿ ವಿಜಯನಗರ ಸಮಗ್ರ ಅಭಿವೃದ್ಧಿಗೆ ಸರ್ಕಾರ (Karnataka Govt) ಬದ್ಧ. ಇದಕ್ಕೆ ಅಗತ್ಯವಿರುವ ಹಣಕಾಸಿನ ನೆರವು ನೀಡಲು ನಾವು ಸದಾಸಿದ್ಧ. ಇದೀಗ ವಿಜಯನಗರ ಸಾಮ್ರಾಜ್ಯ ಪುನರಸ್ಥಾಪನೆಯಾದಂತಾಗಿದೆ ಎಂದು ಪುನರುಚ್ಛರಿಸಿದರು.

250 ಬೆಡ್‌ಗಳ ಆಸ್ಪತ್ರೆ:

ವಿಜಯನಗರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಕಟಿಬದ್ಧವಾಗಿದೆ. ಇಲ್ಲಿಂದ ಅಭಿವೃದ್ಧಿ ಪರ್ವ ಶುರುವಾಗಿದೆ. 250 ಹಾಸಿಗೆಯುಳ್ಳ ಆಸ್ಪತ್ರೆಗೆ ಮಂಜೂರಾತಿ ನೀಡಿದ್ದೇವೆ. ಶೀಘ್ರದಲ್ಲಿ ಅದರ ಕಾಮಗಾರಿಯೂ ಶುರುವಾಗಲಿದೆ. ಹೊಸ ಜಿಲ್ಲೆಯಾದ ಹಿನ್ನೆಲೆಯಲ್ಲಿ ಇಲ್ಲಿ ವಿವಿಧ ಕಚೇರಿಗಳನ್ನು ತರಬೇಕಿದೆ. ವಿವಿಧ ಕಚೇರಿಗಳ ನಿರ್ಮಾಣಕ್ಕೆ .50 ಕೋಟಿ ಬಿಡುಗಡೆ ಮಾಡಲಾಗಿದೆ. ಇನ್ನೂ ಹೆಚ್ಚಿನ ಹಣಕಾಸನ್ನು ನೀಡಲು ಸರ್ಕಾರ ಬದ್ಧವಿದೆ.

ಐಕೊನಿಕ್‌ ಟೂರಿಸಂ:

ವಿದೇಶಿಗರು ಹೆಚ್ಚೆಚ್ಚು ಬರುವಂತಹ ಪ್ರದೇಶವಿದು. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿಗರು ಇಲ್ಲಿಗೆ ಬರಬೇಕು. ಇದಕ್ಕಾಗಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ .600 ಕೋಟಿಗೂ ಹೆಚ್ಚಿನ ಅನುದಾನದಿಂದ ಐಕೊನಿಕ್‌ ಟೂರಿಸಂ ಜಾರಿಗೊಳಿಸುವ ಹೊಸ ಯೋಚನೆ ಇದೆ. ಈ ಮೂಲಕ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ನುಡಿದರು.

ಇಡೀ ರಾಜ್ಯಕ್ಕೆ ಮಾದರಿಯಾದ ಟೂರಿಸ್ಂಗೆ ಇಲ್ಲಿಂದ ಚಾಲನೆ ನೀಡಲಾಗುವುದು. ಹಂಪಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ವೀಕ್ಷಣೆಗೆ ಹೆಲಿಟೂರಿಸಂ ಪ್ರಾರಂಭಿಸಲಾಗುವುದು. ಇಲ್ಲಿನ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದಲೇ ಆನಂದಸಿಂಗ್‌ ಅವರಿಗೆ ಪ್ರವಾಸೋದ್ಯಮ ಖಾತೆ ನೀಡಲಾಗಿದೆ. ಅವರ ಮೂಲಕ ಇಲ್ಲಿನ ಸಮಗ್ರ ಅಭಿವೃದ್ಧಿ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ತಮ್ಮ ಭಾಷಣದುದ್ದಕ್ಕೂ ವಿಜಯನಗರ ಸಾಮ್ರಾಜ್ಯದ ವೈಭವವನ್ನು ವಿವರಿಸುತ್ತಲೇ ಅದೇ ಮಾದರಿಯಲ್ಲಿ ಅಭಿವೃದ್ಧಿ ಪಡಿಸುತ್ತೇವೆ. ಕನ್ನಡಿಗರು ಸ್ವಾಭಿಮಾನದಿಂದ ಬದುಕುವಂತೆ ಮಾಡುವುದೇ ನಮ್ಮ ಸರ್ಕಾರದ ಆದ್ಯತೆ ಎಂದೂ ನುಡಿದರು.

Follow Us:
Download App:
  • android
  • ios