ಬೆಂಗಳೂರು(ಮಾ.20): ಕೊರೋನಾ ವೈರಸ್‌ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಗುರುವಾರದಿಂದ ಹೈಕೋರ್ಟ್‌ ಆವರಣ ಪ್ರವೇಶಿಸದಂತೆ ಕಕ್ಷಿದಾರರು ಹಾಗೂ ಸಂದರ್ಶಕರಿಗೆ ನಿರ್ಬಂಧ ವಿಧಿಸಲಾಗಿತ್ತು. ಬುಧವಾರ ಕೈಗೊಂಡ ನಿರ್ಣಯದಂತೆ ಹೈಕೋರ್ಟ್‌ನ ಮೂರು ಪೀಠಗಳು ಮತ್ತು ಬೆಂಗಳೂರು ನಗರ ಮತ್ತು ಕಲಬುರಗಿ ಜಿಲ್ಲೆಯಲ್ಲಿರುವ ಎಲ್ಲ ನ್ಯಾಯಾಲಯಗಳಿಗೆ ಕಕ್ಷಿದಾರರು ಪ್ರವೇಶಿಸುವುದನ್ನು ಗುರುವಾರದಿಂದ ಸಂಪೂರ್ಣ ನಿರ್ಬಂಧಿಸಲಾಗಿದೆ.

ವಕೀಲರ ಸರ್ಟಿಫಿಕೇಟ್‌ನೊಂದಿಗೆ ಬಂದ ಕಕ್ಷಿದಾರರಿಗೆ ಮಾತ್ರ ಹೈಕೋರ್ಟ್‌ ಪ್ರವೇಶಾವಕಾಶ ಕಲ್ಪಿಸಲಾಯಿತು. ಸುಮಾರು 50ಕ್ಕೂ ಹೆಚ್ಚು ಕಕ್ಷಿದಾರರು ತಮ್ಮ ವಕೀಲರಿಂದ ಸರ್ಟಿಫಿಕೇಟ್‌ ತಂದು ಹೈಕೋರ್ಟ್‌ ಒಳಗೆ ಪ್ರವೇಶ ಮಾಡಿದರು. ಸರ್ಟಿಫಿಕೇಟ್‌ ತರದ ಕಕ್ಷಿದಾರರಿಗೆ ಪ್ರವೇಶಾವಕಾಶ ನಿರಾಕರಿಸಲಾಯಿತು. ಹಾಗೆಯೇ, ತಮ್ಮ ಪ್ರಕರಣದ ವಿವರ ಹಾಗೂ ದಾಖಲೆಗಳನ್ನು ಒದಗಿಸಿ ಲಿಖಿತ ಮನವಿ ಸಲ್ಲಿಸಿದ ಪಾರ್ಟಿ ಇನ್‌ ಪರ್ಸನ್‌ಗಳಿಗೆ ಹೈಕೋರ್ಟ್‌ ಒಳಗೆ ಪ್ರವೇಶಿಸಲು ಅನುಮತಿ ನೀಡಲಾಯಿತು.

ವಾಗ್ವಾದ:

ಈ ವೇಳೆ ಹೈಕೋರ್ಟ್‌ ಆವರಣ ಪ್ರವೇಶಿಸಲು ಅವಕಾಶ ನೀಡದ ಭದ್ರತಾ ಸಿಬ್ಬಂದಿ ಜೊತೆ ಕಕ್ಷಿದಾರರು ವಾಗ್ವಾದ ನಡೆಸಿದರು. ಬಳಿಕ ಪೊಲೀಸರು, ಕೋರ್ಟ್‌ ಆದೇಶವನ್ನು ವಿವರಿಸಿ ವಾಪಸ್ಸು ಕಳುಹಿಸಿದರು. ಉಳಿದಂತೆ ಹೈಕೋರ್ಟ್‌ ಸಿಬ್ಬಂದಿ, ಸರ್ಕಾರಿ ಅಧಿಕಾರಿಗಳು ವಿಚಾರಣೆಗೆ ತೆರಳಲು ಯಾವುದೇ ಅಡ್ಡಿ ಇರಲಿಲ್ಲ. ಹೈಕೋರ್ಟ್‌ಗೆ ಆಗಮಿಸುವ ಎಂದಿನಂತೆ ಥರ್ಮಲ್‌ ಸ್ಕ್ರೀನಿಂಗ್‌ ನಡೆಸಿಯೆ ಒಳಗೆ ಬಿಡಲಾಯಿತು.

ಎಲ್ಲೆಡೆ ಖಾಲಿ ಖಾಲಿ:

ತುರ್ತು ಪ್ರಕರಣಗಳ ವಿಚಾರಣೆ ಹಿನ್ನೆಲೆಯಲ್ಲಿ ಹೈಕೋರ್ಟ್‌ ಆವರಣದಲ್ಲಿ ವಕೀಲರ ಸಂಖ್ಯೆ ಗಣನೀಯವಾಗಿ ಕುಗ್ಗಿತ್ತು. ಗುರುವಾರವಂತೂ ಕೋರ್ಟ್‌ ಹಾಲ್‌ ಹಾಗೂ ಕಾರಿಡಾರ್‌ಗಳು ಜನರಿಲ್ಲದೆ ಬಿಕೋ ಎನ್ನುವಂತಿದ್ದವು. ವಾಹನ ನಿಲುಗಡೆಯೂ ಖಾಲಿ ಖಾಲಿಯಾಗಿತ್ತು.

ರಿಜಿಸ್ಟ್ರಾರ್‌ ಜನರಲ್‌ ಪರಿಶೀಲನೆ:

ಕಕ್ಷಿದಾರರ ಪ್ರವೇಶಕ್ಕೆ ನಿರ್ಬಂಧ ಹೇರಿದ ಹಿನ್ನೆಲೆಯಲ್ಲಿ ರಿಜಿಸ್ಟ್ರಾರ್‌ ರಾಜೇಂದ್ರ ಬಾದಾಮಿಕರ್‌ ಅವರು, ಗುರುವಾರ ಎರಡು ಮೂರು ಬಾರಿ ಭದ್ರತಾ ಕಾರ್ಯ ಹಾಗೂ ಥರ್ಮಲ್‌ ಸ್ಕ್ರೀನಿಂಗ್‌ ಕಾರ್ಯ ಪರಿಶೀಲಿಸಿದರು. ಆಡಳಿತ ವಿಭಾಗದ ರಿಜಿಸ್ಟ್ರಾರ್‌ ಸಹ ಎಲ್ಲ ಪ್ರವೇಶ ದ್ವಾರಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸರ್ಟಿಫಿಕೆಟ್‌ ಪ್ರತಿ ವೆಬ್‌ಸೈಟಲ್ಲಿ ಲಭ್ಯ

ಹೈಕೋರ್ಟ್‌ ಸೇರಿದಂತೆ ನಗರದ ಎಲ್ಲಾ ಕೋರ್ಟ್‌ಗಳ ಆವರಣಗಳಿಗೆ ತಮ್ಮ ಕಕ್ಷಿದಾರರಿಗೆ ಅನುಮತಿ ಕಲ್ಪಿಸಲು ಕೋರಿ ವಕೀಲರು ನೀಡಬೇಕಿರುವ ‘ಸರ್ಟಿಫಿಕೇಟ್‌’ನ ನಮೂನೆಯನ್ನು ಹೈಕೋರ್ಟ್‌ ವೆಬ್‌ಸೈಟ್‌ ಅಲ್ಲಿ ಪ್ರಕಟಿಸಲಾಗಿದೆ. ಹಾಗೆಯೇ, ಪ್ರವೇಶ ಕೋರಿ ಕಕ್ಷಿದಾರರು ಮತ್ತು ಪಾರ್ಟಿ ಇನ್‌ ಪರ್ಸನ್‌ ಸಲ್ಲಿಸಬೇಕಾದ ಅರ್ಜಿಯ ನಮೂನೆಯನ್ನೂ ಪ್ರಕಟಿಸಲಾಗಿದೆ.

ಕೊರೋನಾ ಕಾಟ: ಈರುಳ್ಳಿ ಬೆಲೆಯಲ್ಲಿ ಭಾರೀ ಕುಸಿತ..!

ಇದೇ ವೇಳೆ ನ್ಯಾಯಾಲಯಗಳಿಗೆ ಭೇಟಿ ನೀಡುವ ವಿದ್ಯುನ್ಮಾನ ಮಾಧ್ಯಮ, ಪತ್ರಿಕಾ ಪ್ರತಿನಿಧಿಗಳು ಕಡ್ಡಾಯವಾಗಿ ಸಂಸ್ಥೆಯ ಗುರುತಿನ ಚೀಟಿ ತರಬೇಕು. ವಕೀಲರ ಗುಮಾಸ್ತ ಹಾಗೂ ಸಿಬ್ಬಂದಿ ತಮ್ಮ ವಕೀಲರಿಂದ ಲೆಟರ್‌ ಹೆಡ್‌ ತರುವುದು ಕಡ್ಡಾಯವಾಗಿದೆ ಎಂದು ರಿಜಿಸ್ಟ್ರಾರ್‌ ಜನರಲ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.