ಧಾರವಾಡ :  ಕಳೆದ 7 ವರ್ಷಗಳಿಂದಲೂ ಸಾಂಗವಾಗಿ ನಡೆದುಕೊಂಡು ಬಂದಿದ್ದ ಧಾರವಾಡ ಸಾಹಿತ್ಯ ಸಂಭ್ರಮದಲ್ಲಿ ಈ ಬಾರಿ ವಿಷಾದಕರ ಘಟನೆ ನಡೆದು ಹೋಗಿದೆ. ಸೈನಿಕರು ಅತ್ಯಾಚಾರಿಗಳೆಂದು ಹೇಳಿದ ಚಿಂತಕ ಶಿವ್‌ ವಿಶ್ವನಾಥನ್‌ ಅವರ ಹೇಳಿಕೆ ಹಾಗೂ ಗೋಮೂತ್ರ ಕುಡಿಯುವವರು ಹಂದಿ ಮೂತ್ರ ಏತಕ್ಕೆ ಕುಡಿಯಬಾರದು ಎಂಬ ಲಕ್ಷ್ಮಣ ಗಾಯಕವಾಡ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು ಭಾನುವಾರ ಸಂಜೆ ಸಮಾರೋಪ ಸಮಾರಂಭ ವೇದಿಕೆಗೆ ನುಗ್ಗಿದ ನಾಲ್ಕೈದು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಮೈಕ್‌, ಪೋಡಿಯಂ ಎಸೆದು ಕುರ್ಚಿಯಿಂದ ಬ್ಯಾನರ್‌ ಸಹ ಹರಿದು ಹಾಕಿರುವ ಘಟನೆ ನಡೆದಿದೆ.

ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣ ಭವನದಲ್ಲಿ ನಡೆದ ಧಾರವಾಡ ಸಾಹಿತ್ಯ ಸಂಭ್ರಮದ ಎರಡನೇ ದಿನವಾದ ಶನಿವಾರ ನಡೆದ ‘ರಾಷ್ಟ್ರೀಯತೆ- ಸಮಕಾಲೀನ ಸಂದರ್ಭದಲ್ಲಿನ ವಾಗ್ವಾದಗಳು’ ಗೋಷ್ಠಿಯಲ್ಲಿ ಚಿಂತಕ ಶಿವ್‌ ವಿಶ್ವನಾಥನ್‌ ಅವರು ಅಸ್ಸಾಂನಲ್ಲಿ ಮತ್ತು ಕಾಶ್ಮೀರದಲ್ಲಿ ಸೈನಿಕರು ನಡೆಸಿದ ಅತ್ಯಾಚಾರ ಪ್ರಕರಣಗಳ ಬಗ್ಗೆ ಮಾತನಾಡಿದ್ದರು.

ಈ ಹೇಳಿಕೆ ಖಂಡಿಸಿ ಭಾನುವಾರ ಮಧ್ಯಾಹ್ನ ಮಾಜಿ ಸೈನಿಕರ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ ಸಾಹಿತ್ಯ ಸಂಭ್ರಮದ ಅಧ್ಯಕ್ಷ ರಾಘವೇಂದ್ರ ಪಾಟೀಲರಿಗೆ ಘೇರಾವ್‌ ಹಾಕಿದ್ದರು. ಈ ವೇಳೆ ಜಟಾಪಟಿ, ತಳ್ಳಾಟ, ನೂಕಾಟ ಉಂಟಾಗಿ ಸಾಹಿತ್ಯ ಸಂಭ್ರಮದಲ್ಲಿ ಬಿಗುವಿನ ವಾತಾವರಣವೂ ನಿರ್ಮಾಣವಾಗಿತ್ತು. ಕೊನೆಗೆ ರಾಘವೇಂದ್ರ ಪಾಟೀಲ ಬಹಿರಂಗವಾಗಿ ಕ್ಷಮೆ ಕೇಳುವ ಮೂಲಕ ಪ್ರತಿಭಟನಾಕಾರರನ್ನು ಶಾಂತಗೊಳಿಸಿದರು.

ಪೊಲೀಸ್‌ ಕಣ್ತಪ್ಪಿಸಿ ಒಳನುಗ್ಗಿದರು:  ಈ ಘಟನೆಯಾದ ಬಳಿಕ ಪೊಲೀಸ್‌ ಭದ್ರತೆಯನ್ನು ಬಿಗಿಗೊಳಿಸಲಾಯಿತು. ಸಾಹಿತ್ಯ ಸಂಭ್ರಮದ ಆವರಣದ ಎರಡು ದ್ವಾರ ಬಾಗಿಲುಗಳಲ್ಲಿ ಪೊಲೀಸರು ಕಾವಲು ಕಾಯಲು ಆರಂಭಿಸಿದರು. ಒಂದು ಗೇಟ್‌ಗಂತೂ ಬೀಗವನ್ನೇ ಹಾಕಲಾಗಿತ್ತು. ತದನಂತರ ಬಿಗಿ ಪೊಲೀಸ್‌ ಭದ್ರತೆಯಲ್ಲೇ ಮುಂದಿನ ಎಲ್ಲ ಗೋಷ್ಠಿಗಳು ನಡೆದವು.

ಆದರೆ, ಸಂಜೆ ಕೃಷ್ಣಮೂರ್ತಿ ಹನೂರ ಅವರು ಒಟ್ಟಾರೆ ಸಂಭ್ರಮದ ಸಮೀಕ್ಷೆ ಮಾಡುವಾಗ, ಪೊಲೀಸರ ಕಣ್ತಪ್ಪಿಸಿ ಒಳಬಂದ ಆರೆಸ್ಸೆಸ್‌ ಕಾರ್ಯಕರ್ತ, ಬಿಜೆಪಿ ಯುವ ಮುಖಂಡ ಶರಣು ಅಂಗಡಿ, ಅನುದೀಪ ಕುಲಕರ್ಣಿ ಹಾಗೂ ವಿಜಯಕುಮಾರ ಅಪ್ಪಾಜಿ ಮತ್ತು ಕೆಲವರು ಸಾಹಿತ್ಯಾಸಕ್ತರನ್ನು ಒಂದು ಕ್ಷಣ ದಂಗು ಬಡಿಸಿದರು. ಭಾರತ ಮಾತಾಕಿ ಜೈ ಎನ್ನುತ್ತಾ ಮೈಕ್‌ ಹಾಗೂ ಟೇಬಲ್‌ಗಳನ್ನು ಎಳೆದು ಒಗೆದರು. ಅಷ್ಟರಲ್ಲಿ ಪೊಲೀಸರು ವೇದಿಕೆಗೆ ಆಗಮಿಸಿ ಅವರನ್ನು ಬಂಧಿಸಿ ಕರೆದೊಯ್ದರು.

ವೇದಿಕೆಯ ಬಳಿಯ ಕೆಲವು ಸಾಹಿತ್ಯಾಸಕ್ತರು ಘಟನೆಯನ್ನು ಖಂಡಿಸಿ, ಡಾ.ಎಂ.ಎಂ.ಕಲಬುರ್ಗಿ ಹತ್ಯೆ ಮುಂದುವರಿಕೆಯ ಭಾಗವಿದು. ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಕೆಲಸ ನಡೆಯುತ್ತಿದೆ. ಪ್ರಜಾಪ್ರಭುತ್ವ ವಿರೋಧಿ ನಿಲುವಿಗೆ ನಮ್ಮ ಧಿಕ್ಕಾರ ಎಂಬ ಘೋಷಣೆಗಳನ್ನು ಕೂಗಿದರು.

ಹೀಗಾದರೆ ಸಂಭ್ರಮ ಕಷ್ಟ: ರಾಘವೇಂದ್ರ ಪಾಟೀಲ್‌

ಭಾನುವಾರ ಬೆಳಗ್ಗೆ ಮತ್ತು ಮಧ್ಯಾಹ್ನ ಪ್ರತಿಭಟನೆ ನಡೆದ ವೇಳೆ ಸಾಹಿತ್ಯ ಸಂಭ್ರಮದ ಅಧ್ಯಕ್ಷ ರಾಘವೇಂದ್ರ ಪಾಟೀಲ ಅವರು, ಸೈನಿಕರ ಹಾಗೂ ವಿದ್ಯಾರ್ಥಿಗಳ ಪ್ರತಿಭಟನೆ ಬಳಿಕ ಬಹಿರಂಗವಾಗಿ ಕ್ಷಮೆ ಯಾಚಿಸಿದ್ದರು. ಡಾ.ಶಿವ ವಿಶ್ವನಾಥನ್‌ ಅವರ ಹೇಳಿಕೆಗೆ ಗೋಷ್ಠಿ ವೇಳೆಯೇ ಪ್ರೇಕ್ಷಕರಿಂದ ವಿರೋಧ ವ್ಯಕ್ತವಾಗಿತ್ತು. ಇದೀಗ ಮಾಜಿ ಸೈನಿಕರು ಅದನ್ನು ವಿರೋಧಿಸಿ ಮನವಿ ಕೊಟ್ಟಿದ್ದಾರೆ. ಅದನ್ನು ವಿಶ್ವನಾಥನ್‌ ಅವರಿಗೆ ಕಳುಹಿಸಿಕೊಡುತ್ತೇವೆ ಎಂದು ಸಾಹಿತ್ಯ ಸಂಭ್ರಮದ ಅಧ್ಯಕ್ಷ ರಾಘವೇಂದ್ರ ಪಾಟೀಲ ತಿಳಿಸಿದ್ದರು. ಮಾಧ್ಯಮಗಳೊಂದಿಗೆ ಮಾತನಾಡುವ ವೇಳೆಯೂ, ‘ನಾವು ಸಂಪನ್ಮೂಲ ವ್ಯಕ್ತಿಗಳನ್ನು ಕರೆಯಿಸಿರುತ್ತೇವೆ. ಅವರಿಗೆ ನಾವು ಬರೆದುಕೊಟ್ಟು ಇದನ್ನೇ ಮಾತನಾಡಿ ಎಂದು ಹೇಳಲು ಬರುವುದಿಲ್ಲ. ಅವರು ಏನು ಮಾತನಾಡುತ್ತಾರೋ ನಮಗೆ ಗೊತ್ತಿರುವುದಿಲ್ಲ. ವಿಶ್ವನಾಥನ್‌ ಹೇಳಿಕೆಗೆ ಸಂಘಟನೆ ವತಿಯಿಂದ ನಾನು ಬಹಿರಂಗವಾಗಿ ಕ್ಷಮೆಯಾಚಿಸಿದ್ದೇನೆ’’ ಎಂದು ತಿಳಿಸಿದ್ದರು. ಸಂಜೆ ಗಲಾಟೆ ಬಳಿಕ ಮುಂದುವರಿದ ಸಮಾರೋಪದಲ್ಲಿ ಅಧ್ಯಕ್ಷತೆ ವಹಿಸಿದ್ದ ಅವರು, ಮಧ್ಯಾಹ್ನವಷ್ಟೇ ಮಾಜಿ ಸೈನಿಕರ ಬಳಿ ಕ್ಷಮೆ ಸಹ ಕೇಳಿದ್ದೆ. ಇಷ್ಟಾಗಿಯೂ ಗಲಾಟೆ ಮಾಡಿದ್ದು ಮನಸ್ಸಿಗೆ ನೋವು ತರಿಸಿದೆ. ಆಶಯ ಭಾಷಣದಲ್ಲಿ ಬರಗೂರು ರಾಮಚಂದ್ರಪ್ಪ ಅವರು ಹೇಳಿದಂತೆ ಸಂಭ್ರಮದ ಜತೆಗೆ ಸಂಕಟವೂ ಆಯಿತು. ಈ ರೀತಿ ಘಟನೆಗಳಾದರೆ ಸಂಭ್ರಮ ಮಾಡುವುದು ಕಷ್ಟಎಂದು ಅಸಹಾಯಕತೆ ತೋರಿದರು.