ಮಂಡ್ಯ ಸಂಸದೆ ಸುಮಲತಾ ಅಂಬರೀಷ್‌ ಮತ್ತು ಜಿಲ್ಲೆಯ ಜೆಡಿಎಸ್‌ ಶಾಸಕರ ನಡುವಿನ ತಿಕ್ಕಾಟ  ಜಿಲ್ಲಾ ಅಭಿವೃದ್ಧಿ ಉಸ್ತುವಾರಿ ಸಮಿತಿ ಸಭೆಯಲ್ಲೂ ಜಟಾಪಟಿ

ಮಂಡ್ಯ (ಆ.19): ಮಂಡ್ಯ ಸಂಸದೆ ಸುಮಲತಾ ಅಂಬರೀಷ್‌ ಮತ್ತು ಜಿಲ್ಲೆಯ ಜೆಡಿಎಸ್‌ ಶಾಸಕರ ನಡುವಿನ ತಿಕ್ಕಾಟ ಬುಧವಾರ ನಡೆದ ಜಿಲ್ಲಾ ಅಭಿವೃದ್ಧಿ ಉಸ್ತುವಾರಿ ಸಮಿತಿ ಸಭೆಯಲ್ಲೂ ಮುಂದುವರಿಯಿತು. ಇದೇ ಮೊದಲ ಬಾರಿಗೆ ಸಭೆಗೆ ಹಾಜರಾದ ದಳಪತಿಗಳು ಸಂಸದೆ ವಿರುದ್ಧ ಹರಿಹಾಯ್ದರು. ಸದಾ ಸಂಸದರ ಜೊತೆಗಿರುತ್ತಿದ್ದ ಆಪ್ತ ಮದನ್‌ಕುಮಾರ್‌ ಹಾಗೂ ಆಪ್ತ ಕಾರ್ಯದರ್ಶಿ ಶ್ರೀನಿವಾಸ ಭಟ್‌ ಸಭೆಯಲ್ಲಿ ಉಪಸ್ಥಿತರಿರುವುದನ್ನು ಪ್ರಶ್ನಿಸಿದ ದಳಪತಿಗಳು ಅವರನ್ನು ಹೊರ ಕಳುಹಿಸುವಲ್ಲಿ ಯಶಸ್ವಿಯಾದರು.

ನಗರದ ಜಿ.ಪಂ. ಕಾವೇರಿ ಸಭಾಂಗಣದಲ್ಲಿ ಸುಮಲತಾ ಅಂಬರೀಶ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜೆಡಿಎಸ್‌ ಶಾಸಕರು ಪ್ರಶ್ನಾವಳಿಗಳ ಸುರಿಮಳೆಯನ್ನೇ ಸುರಿಸಿದರು. ಸಭೆ ಆರಂಭದಲ್ಲೇ ಶಾಸಕ ರವೀಂದ್ರ ಶ್ರೀಕಂಠಯ್ಯ, ಸಂಸದರ ಲೆಟರ್‌ಹೆಡ್‌ ದುರುಪಯೋಗವಾಗಿದೆ. ಆಪ್ತ ಕಾರ್ಯದರ್ಶಿ ಶ್ರೀನಿವಾಸ ಭಟ್‌ ಅವರು ಸಂಸದರ ಲೆಟರ್‌ಹೆಡ್‌ ಬಳಸಿಕೊಂಡು ಅಧಿಕಾರಿಗಳೊಂದಿಗೆ ಪತ್ರ ವ್ಯವಹಾರ ಮಾಡಿದ್ದಾರೆ. ಅವರಿಗೆ ಸಂಸದರ ಲೆಟರ್‌ಹೆಡ್‌ನಲ್ಲಿ ಸಹಿ ಮಾಡಿ ಕಳುಹಿಸುವ ಅಧಿಕಾರವಿದೆಯೇ ಎಂದು ಪ್ರಶ್ನಿಸಿದರು.

ದಶಪಥ ಯೋಜನೆ ಬಗ್ಗೆ ಅನುಮಾನ ಇದ್ರೆ ತಜ್ಞರನ್ನು ಕರೆತಂದು ಪರಿಶೀಲಿಸಲಿ: ಪ್ರತಾಪ್ ಸಿಂಹ

ಇದಕ್ಕೆ ತಿರುಗೇಟು ನೀಡಿದ ಸುಮಲತಾ ಈ ಸಭೆಯಲ್ಲಿ ಇಂತಹ ವಿಷಯಗಳ ಚರ್ಚೆಗೆ ಅವಕಾಶವಿಲ್ಲ. ನೀವು ಮೊದಲೇ ನನ್ನ ಗಮನಕ್ಕೆ ಈ ವಿಚಾರ ತಂದಿದ್ದರೆ ತಪ್ಪುಗಳನ್ನು ಸರಿಪಡಿಸುತ್ತಿದ್ದೆ ಎಂದರು.

ಆ ನಂತರವೂ ಜೆಡಿಎಸ್‌ ಶಾಸಕರು ವಿವಿಧ ವಿಚಾರಗಳಿಗೆ ಸಂಬಂಧಿಸಿ ಒಂದಾಗಿ ಪ್ರಶ್ನೆಯ ಮೇಲೆ ಪ್ರಶ್ನೆ, ಆರೋಪಗಳ ಮೇಲೆ ಆರೋಪ ಮಾಡಿದಾಗ ಮತ್ತೆ ಸಿಡಿಮಿಡಿಗೊಂಡ ಸಂಸದೆ, ಸಭೆ ನಡೆಸಲೇಬಾರದೆಂದು ತೀರ್ಮಾನಿಸಿಕೊಂಡು ಬಂದಿದ್ದರೆ ಬಹಿರಂಗವಾಗಿ ಹೇಳಿಬಿಡಿ ಎಂದರು.

ನಂತರ ಸುದ್ದಿಗಾರರ ಜತೆಗೆ ಮಾತನಾಡಿದ ಸುಮಲತಾ, ನನ್ನನ್ನು ಬೆದರಿಸಿದರೆ ನಾನು ಹೆದರೋಳಲ್ಲ, ನನ್ನ ಶಕ್ತಿ ಮತ್ತು ಸ್ಪೂರ್ತಿ ಬಗ್ಗೆ ಅವರಿಗೆ ಗೊತ್ತಿಲ್ಲ. ಅಕ್ರಮ ಗಣಿಗಾರಿಕೆ ನಿಂತಿದ್ದರಿಂದಲೇ ನನ್ನನ್ನು ನೇರ ಟಾರ್ಗೆಟ್‌ ಮಾಡಿದ್ದಾರೆ. ಏಳು ದಿಶಾ ಸಭೆಗೆ ಬಾರದವರು 8ನೇ ಸಭೆಗೆ ಬಂದಿದ್ದಾರೆ ಎಂದರೆ ಏನರ್ಥ? ಇವರು ಅಕ್ರಮ ಗಣಿಗಾರಿಕೆಯನ್ನು ಸಮರ್ಥನೆ ಮಾಡುವ ಉದ್ದೇಶದಿಂದಲೇ ಸಭೆಗೆ ಬಂದಿದ್ದರು ಎಂದರು.