ಕ್ವಾರಂಟೈನ್ ಆಗಲು ಒಪ್ಪದವರು ಮತ್ತೊಂದು ರೈಲಲ್ಲಿ ದೆಹಲಿಗೆ ವಾಪಸ್..!
ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ‘ಕ್ವಾರಂಟೈನ್’ ಹೈಡ್ರಾಮಾ| ದಿಲ್ಲಿಯಿಂದ ನಗರಕ್ಕೆ ಮೊದಲ ವಿಶೇಷ ರೈಲ್ಲಿನಲ್ಲಿ 681 ಪ್ರಯಾಣಿಕರ ಆಗಮನ| ಹೋಟೆಲ್ ಕ್ವಾರಂಟೈನ್ ಕಡ್ಡಾಯ ಎನ್ನುತ್ತಿದ್ದಂತೆ ರಂಪಾಟ| ಕ್ವಾರಂಟೈನ್ ಬಗ್ಗೆ ಹೇಳೇ ಇರಲಿಲ್ಲವೆಂದು ಸಂಜೆವರೆಗೂ ಪೊಲೀಸರ ಜತೆ ಕೂಗಾಟ|ಕೊನೆಗೂ ಕ್ವಾರಂಟೈನ್‌ಗೆ ಒಪ್ಪದವರನ್ನು ವಾಪಸ್ ದೆಹಲಿಗೆ|
ಬೆಂಗಳೂರು(ಮೇ.15): ಲಾಕ್‌ಡೌನ್ ಸಡಿಲಿಕೆ ನಂತರ ಮೊಟ್ಟ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ ಬೆಂಗಳೂರು- ದೆಹಲಿ ವಿಶೇಷ ರೈಲಿನಲ್ಲಿ ಆಗಮಿಸಿದ 681 ಪ್ರಯಾಣಿಕರ ಪೈಕಿ ಹಲವರು ನಗರ ಕೇಂದ್ರ ರೈಲ್ವೆ ನಿಲ್ದಾಣದಲ್ಲಿ ಗುರುವಾರ ಇಡೀ ದಿನ ಭರ್ಜರಿ ಹೈಡ್ರಾಮಾ ಸೃಷ್ಟಿಸಿದ್ದರು.
"
ಕ್ವಾರಂಟೈನ್‌ನಿಂದ ತಪ್ಪಿಸಿಕೊಳ್ಳಲು ಕೆಲವರು ಕಣ್ಣೀರು ಸುರಿಸಿದರೆ, ಮತ್ತಷ್ಟು ಮಂದಿ ರೇಷಾವೇಷ ಪ್ರದರ್ಶಿಸಿ, ಕೂಗಾಡಿ, ಪ್ರತಿಭಟಿಸಿದರು. ಮತ್ತೆ ಕೆಲವರು ಸದ್ದಿಲ್ಲದೇ ಪರಾರಿಯಾಗಲು ಯತ್ನಿಸಿ ಅಧಿಕಾರಿಗಳನ್ನು ಸುಸ್ತು ಮಾಡಿದರು.
ಪ್ರಯಾಣಿಕರ ಈ ರಂಪಾಟಕ್ಕೆ ಸೊಪ್ಪು ಹಾಕದ ಅಧಿಕಾರಿಗಳು, ಹರಸಾಹಸದ ನಂತರ ಬಹುತೇಕ ಮಂದಿಯನ್ನು ಕ್ವಾರಂಟೈನ್‌ಗೆ ಒಪ್ಪಿಸಿದರು. ಒಪ್ಪದವರನ್ನು ದೆಹಲಿಗೆ ತೆರಳಲು ಸಜ್ಜಾಗಿದ್ದ ರೈಲಿಗೆ ಹೆಚ್ಚುವರಿ ಬೋಗಿಗಳನ್ನು ಅಳವಡಿಸಿ ವಾಪಸ್ ಕಳುಹಿಸಿದರು. ಈ ಎಲ್ಲ ಪ್ರಕ್ರಿಯೆಲ್ಲಿ ಬಿಬಿಎಂಪಿಗೆ ಹೆಗಲು ಕೊಟ್ಟು ಸಹಕರಿಸಿದ ರೈಲ್ವೆ ಐಜಿಪಿ ಡಿ. ರೂಪಾ ಅವರು, ರೈಲ್ವೆ ಅಧಿಕಾರಿಗಳ ಮನವೊಲಿಸಿ ಕ್ವಾರಂಟೈನ್ ಒಪ್ಪದ 19 ಮಂದಿಗಾಗಿ ಹೆಚ್ಚುವರಿ ಬೋಗಿಗಳ ವ್ಯವಸ್ಥೆ ಕಲ್ಪಿಸುವಲ್ಲಿ ವಿಶೇಷ ಪಾತ್ರ ವಹಿಸಿದರು. ಕೊನೆಗೆ 662 ಪ್ರಯಾಣಿಕರು ಕ್ವಾರಂಟೈನ್‌ಗೆ ತೆರಳಿದರು.
ಬೆಂಗಳೂರಲ್ಲಿ ಮಾರಕ ಕೊರೋನಾ ಸೋಂಕಿತರ ಸಂಖ್ಯೆ 200ರ ಗಡಿಯತ್ತ..!
"
ವಾಗ್ವಾದ:
681 ಪ್ರಯಾಣಿಕರನ್ನು ಒತ್ತ ವಿಶೇಷ ರೈಲು ದೆಹಲಿಯಿಂದ ನಗರಕ್ಕೆ ಗುರುವಾರ ಬೆಳಗ್ಗೆ 7.30ಕ್ಕೆ ಆಗಮಿಸಿತು. ಪ್ರತಿಯೊಬ್ಬರನ್ನು ಕ್ವಾರಂಟೈನ್‌ಗೆ ಒಳಪಡಿಸಲು ಪೊಲೀಸ್ ಭದ್ರತೆಯೊಂದಿಗೆ ಅಧಿಕಾರಿಗಳು ಸರ್ವ ಸಿದ್ಧತೆ ನೆಡೆಸಿದ್ದರು. ಪ್ರಯಾಣಿಕರು ಬರುತ್ತಿದ್ದಂತೆಯೇ ಹೊಟೇಲ್‌ಗಳಿಗೆ ಒಯ್ಯಲು ಅವರಿಗಾಗಿಯೇ ಸಜ್ಜುಗೊಳಿಸಿದ್ದ ಬಸ್‌ಗಳತ್ತ ತೆರಳುವಂತೆ ಸೂಚಿಸಿದರು. ಆದರೆ, ಇದಕ್ಕೆ ಪ್ರಯಾಣಿಕರು ನಿರಾಕರಿಸುವ ಮೂಲಕ ಹೈಡ್ರಾಮಾ ಆರಂಭಗೊಂಡಿತು.
ಆದರೆ, ಕ್ವಾರಂಟೈನ್‌ಗೆ ಹೋಗಲೇಬೇಕೆಂಬ ಪಟ್ಟನ್ನು ಅಧಿಕಾರಿಗಳು ಬಿಡಲಿಲ್ಲ. ಪೊಲೀಸರ ಜೊತೆ ಮಹಿಳೆಯರು ಸೇರಿದಂತೆ ಅನೇಕರು ವಾಗ್ವಾದ ನಡೆಸಿದರು. ಕೆಲವರು ಕಣ್ಣೀರು ಹಾಕಿ ಮನವೊಲಿಸಲು ಪ್ರಯತ್ನಿಸಿದರು. ಕೆಲವರು ಬೇಕಾದರೆ ಮನೆಯಲ್ಲಿ ಕ್ವಾರಂಟೈನ್ ಆಗುತ್ತವೆ. ಆದರೆ ಹೊಟೇಲ್ ಕ್ವಾರಂಟೈನ್ ಆಗಲು ದುಡ್ಡಿಲ್ಲ ಎಂದು ಅಲವತ್ತುಕೊಂಡರು. ಈ ನಡುವೆ ದಂಪತಿ, ಅಧಿಕಾರಿಗಳು ಪೊಲೀಸರ ಕಣ್ಣು ತಪ್ಪಿಸಿ ಮನೆಗೆ ಹೋಗಲು ಮುಂದಾದ ಪ್ರಸಂಗ ಕೂಡಾ ನಡೆಯಿತು.
ದೆಹಲಿಯಲ್ಲಿ ಹೋಂ ಕ್ವಾರಂಟೈನ್‌ಗೆ ಅವಕಾಶ ನೀಡಿದ್ದರು. ಅಲ್ಲದೆ, ಕಳೆದ ಎರಡು ತಿಂಗಳಿಂದ ಕೆಲಸ ಇಲ್ಲ. ಈಗ ಇಲ್ಲಿ ಹೋಟೆಲ್‌ಗೆ ಸಾವಿರಾರು ರು. ಪಾವತಿಸಿ 14 ದಿನ ಉಳಿಯಬೇಕು ಎಂದರೆ ಕಷ್ಟವಾಗುತ್ತದೆ. ಇದರ ಬದಲಾಗಿ ಸೀಲ್ ಹಾಕಿ ಮನೆಗಳಿಗೆ ಕಳುಹಿಸುವಂತೆ ಪಟ್ಟು ಹಿಡಿದರು. ಈ ವೇಳೆ ರೈಲು ನಿಲ್ದಾಣದ ಒಂದನೇ ಪ್ಲಾಟ್ ಫಾಮ್‌ರ್‍ನಲ್ಲಿ ಪ್ರಯಾಣಿಕರು ಹಾಗೂ ಬಿಬಿಎಂಪಿ ಅಧಿಕಾರಿಗಳ ನಡುವೆ ಮಾತಿನ ಚಕಮಕಿ, ಕೂಗಾಟ ನಡೆಯಿತು.
'ಹೊರ ರಾಜ್ಯದಿಂದ ಬಂದವರಿಗೆ ಕ್ವಾರಂಟೈನ್ ಕಡ್ಡಾಯ'
3 ಆಯ್ಕೆ ನೀಡಿದ ಬಿಬಿಎಂಪಿ
ಈ ಕೂಗಾಟ, ಪ್ರತಿಭಟನೆ, ಮನವೊಲಿಕೆ ಪ್ರಯತ್ನಗಳು ಬೆಳಗ್ಗೆ 7.30ಕ್ಕೆ ಆರಂಭಗೊಂಡಿದ್ದು, ಮಧ್ಯಾಹ್ನದ 1.30ರವರೆಗೂ ಮುಂದುವರೆದರೂ ಸಫಲವಾಗಲಿಲ್ಲ. ಕೊನೆಗೆ ಬಿಬಿಎಂಪಿ ಅಧಿಕಾರಿಗಳು ಕ್ವಾರಂಟೈನ್‌ಗೆ ತೆರಳಲು ನಿರಾಕರಿಸಿದ ಪ್ರಯಾಣಿಕರಿಗೆ ಮೂರು ಆಯ್ಕೆಗಳನ್ನು ಮುಂದಿಟ್ಟರು.
1- ಕ್ವಾರಂಟೈನ್‌ಗೆ ಒಪ್ಪದಿದ್ದರೆ ರಾತ್ರಿ ದೆಹಲಿಗೆ ತೆರಳುವ ವಿಶೇಷ ರೈಲಿನಲ್ಲಿ ವಾಪಾಸ್ ಹೋಗಬಹುದು.
2- ಪಕ್ಕದ ಕೇರಳ, ತಮಿಳುನಾಡಿಗೆ ಹೋಗುವವರು ಬಾಡಿಗೆ ಕ್ಯಾಬ್‌ಗಳ ಮೂಲಕ ತವರು ರಾಜ್ಯಗಳಿಗೆ ತೆರಳಬಹುದು. ಆದರೆ, ಮಾರ್ಗ ಮಧ್ಯೆ ಕರ್ನಾಟಕದ ಸ್ಥಳಗಳಲ್ಲಿ ಉಳಿಯುವಂತಿಲ್ಲ. ಒಂದು ವೇಳೆ ಉಳಿದರೆ, ಪ್ರಯಾಣಿಕರು ಹಾಗೂ ಕ್ಯಾಬ್ ಚಾಲಕನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು.
3- ಬಿಬಿಎಂಪಿ ಸೂಚಿಸಿರುವ ಹೋಟೆಲ್ ಅಥವಾ ಹಾಸ್ಟೆಲ್‌ಗಳಲ್ಲಿ ಕ್ವಾರಂಟೈನ್‌ಗೆ ಒಳಗಾಗಬೇಕು. ಈ ಮೂರು ಆಯ್ಕೆ ನೀಡಿದ ಬಳಿಕ 19 ಮಂದಿ ಪ್ರಯಾಣಿಕರು ಕ್ವಾರಂಟೈನ್ ಆಗದೆ ರಾತ್ರಿ ರೈಲಿನಲ್ಲಿ ದೆಹಲಿಗೆ ವಾಪಸಾಗುವುದಾಗಿ ಹೇಳಿದರು. ಇದಕ್ಕೆ ಸಮ್ಮತಿ ಸೂಚಿಸಿದ ಅಧಿಕಾರಗಳು, ಉಳಿದ 662 ಪ್ರಯಾಣಿಕರನ್ನು ಅವರ ಆಯ್ಕೆಯಂತೆ ಹೋಟೆಲ್ ಹಾಗೂ ಹಾಸ್ಟೆಲ್‌ಗಳಿಗೆ ಕ್ವಾರಂಟೈನ್ ಮಾಡಲು ಕಳುಹಿಸಿದರು. ಎಲ್ಲರಿಂದ 50 ರು. ಪಡೆದು ಬಿಎಂಟಿಸಿ ಬಸ್‌ನಲ್ಲಿ ಕಳಿಸಲಾಯಿತು.
ದೆಹಲಿಯಿಂದ ಬಂದ ವಿಶೇಷ ರೈಲಿನಲ್ಲಿ ಬಂದ ಒಟ್ಟು 960 ಮಂದಿ ಪ್ರಯಾಣಿಕರ ಪೈಕಿ ಮಾರ್ಗ ಮಧ್ಯದಲ್ಲಿ 279 ಮಂದಿ ಪ್ರಯಾಣಿಕರು ಇಳಿದಿದ್ದಾರೆ. ಉಳಿದ 681ಮಂದಿ ಬೆಂಗಳೂರಿಗೆ ಬಂದಿದ್ದರು. ಈ ಪೈಕಿ ಕ್ವಾರಂಟೈನ್‌ಗೆ ಒಪ್ಪದೆ 19 ಮಂದಿ ದೆಹಲಿಗೆ ತೆರಳುವ ರೈಲಿನಲ್ಲಿ ವಾಪಸ್ಸಾಗಲು ನಿರ್ಧರಿಸಿದರು. ಉಳಿದ 662 ಮಂದಿ ಪ್ರಯಾಣಿಕರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ನೋಡೆಲ್ ಅಧಿಕಾರಿ ಕೆ.ಎ.ದಯಾನಂದ ಅವರು ಹೇಳಿದ್ದಾರೆ.
ಕ್ವಾರಂಟೈನ್ ಮಾಡದೆ ಮನೆಗೆ
ದೆಹಲಿಯಿಂದ ಕೆಎಸ್‌ಆರ್ ರೈಲು ನಿಲ್ದಾಣಕ್ಕೆ ಬಂದಿದ್ದ ಕೇರಳ ಮೂಲದ ವ್ಯಕ್ತಿಯೊಬ್ಬರನ್ನು ಬಿಬಿಎಂಪಿ ಅಧಿಕಾರಿಗಳು ಕ್ವಾರಂಟೈನ್‌ಗೆ ಕಳುಹಿಸದೆ ಮನೆಗೆ ಕಳುಹಿಸಿದ್ದಾರೆ. ಮೇಲಾಧಿಕಾರಿಗಳ ಸೂಚನೆ ಮೇರೆಗೆ ಅವರನ್ನು ಕಳುಹಿಸಿದ್ದಾಗಿ ಆ ಸಿಬ್ಬಂದಿ ಹೇಳಿದ್ದಾರೆ. ಇದು ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಕ್ವಾರಂಟೈನ್ ಬಗ್ಗೆ ಗೊತ್ತಿರಲಿಲ್ಲ ಎಂಬ ಕೆಲವು ಪ್ರಯಾಣಿಕರ ಆರೋಪವನ್ನು ತಳ್ಳಿ ಹಾಕಿದ ನೈಋುತ್ಯ ರೈಲ್ವೆ, ಟಿಕೆಟ್ ಮುಂಗಡ ಕಾಯ್ದಿರಿಸುವಾಗಲೇ ಕರ್ನಾಟಕ ರಾಜ್ಯಕ್ಕೆ ಬರುವವರಿಗೆ ಇರುವ ನಿಯಮಗಳನ್ನು ತಿಳಿಸಲಾಗಿತ್ತು. ಜತೆಗೆ ಕುಡಿಯುವ ನೀರು ಮತ್ತು ಆಹಾರ ವ್ಯವಸ್ಥೆಯನ್ನು ಪ್ರಯಾಣಿಕರೇ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಮೊದಲೇ ತಿಳಿಸಲಾಗಿತ್ತು ಎಂದು ಹೇಳಿದೆ.
ಗರ್ಭಿಣಿ ಸೊಸೆ ಆಸ್ಪತ್ರೆಯಲ್ಲಿದ್ದಾಳೆ!
ಗರ್ಭಿಣಿಯಾಗಿರುವ ಸೊಸೆಯನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ, ಆಕೆಯನ್ನು ನೋಡಿಕೊಳ್ಳಲು ದೆಹಲಿಯಿಂದ ಬಂದ ನನಗೆ ಕ್ವಾರಂಟೈನ್ ಮಾಡುವುದಾಗಿ ಹೇಳುತ್ತಿದ್ದಾರೆ. ಈ ವಿಚಾರ ಮೊದಲೇ ತಿಳಿಸಿದ್ದರೆ ನಾನು ಬೆಂಗಳೂರಿಗೆ ಬರುತ್ತಿರಲಿಲ್ಲ ಎಂದು ದೆಹಲಿ ಮೂಲದ ಬ್ರಿಜೇಶ್ ಮಿಶ್ರಾ ಅಳಲು ತೋಡಿಕೊಂಡರು.
ಪರಿಸ್ಥಿತಿ ನಿಭಾಯಿಸಿದ ರೂಪಾ!
ದೆಹಲಿಯಿಂದ ಆಗಮಿಸಿದ ಪ್ರಯಾಣಿಕರು ನಡೆಸಿದ ಹೈಡ್ರಾಮಾ ವಿಕೋಪಕ್ಕೆ ಹೋಗದಂತೆ ತಡೆದು, ಬಹುತೇಕರ ಕ್ವಾರಂಟೈನ್‌ಗೆ ಮನವೊಲಿಸಿ ಒಪ್ಪದವರನ್ನು ಮತ್ತೆ ದೆಹಲಿಗೆ ವಾಪಸ್ ಕಳಿಸುವ ಮೂಲಕ ಈ ಪ್ರಹಸನಕ್ಕೆ ಶುಭಾಂತ್ಯ ನೀಡುವಲ್ಲಿ ವಿಶೇಷ ಪಾತ್ರವಹಿಸಿದವರು ರೈಲ್ವೆ ಐಜಿಪಿ ಡಿ. ರೂಪಾ.
ಕ್ವಾರಂಟೈನ್‌ಗೆ ಹೋಗಲು ನಿರಾಕರಿಸಿ ಪ್ರತಿಭಟನೆ ನಡೆಸುತ್ತಿದ್ದ ಪ್ರಯಾಣಿಕರ ಬಳಿ ಬಂದು ಖುದ್ದಾಗಿ ಹೋಗಿ ಮನವೊಲಿಸಿದರು. ಆದರೆ ಕೆಲವರು ಯಾವುದೇ ಕಾರಣಕ್ಕೂ ಕ್ವಾರಂಟೈನ್‌ಗೆ ಹೋಗುವುದಿಲ್ಲ, ಬದಲಾಗಿ ರಾತ್ರಿ ದೆಹಲಿಗೆ ತೆರಳುವ ರೈಲಿನಲ್ಲಿ ಹೋಗುವುದಾಗಿ ಪಟ್ಟು ಹಿಡಿದರು. ಆಗ ರೈಲ್ವೆಯ ಹಿರಿಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಹೆಚ್ಚುವರಿ ಬೋಗಿಗಳನ್ನು ಕಲ್ಪಿಸಿದರು. ಬೆಳಗ್ಗೆಯೇ ರೈಲು ನಿಲ್ದಾಣಕ್ಕೆ ಬಂದ ರೂಪಾ, ಎಲ್ಲರು ಕ್ವಾರಂಟೈನ್‌ಗೆ ಹೋಗುವವರೆಗೂ ರೈಲು ನಿಲ್ದಾಣದಲ್ಲೇ ಇದ್ದರು.