ಸಚಿವ - ಸಂಸದರ ನಡುವೆ ಗುದ್ದಾಟ : ಬಿಜೆಪಿಗರ ಶೀತಲ ಸಮರ
ಬಿಜೆಪಿ ಮುಖಂಡರಿಬ್ಬರ ನಡುವೆ ಮುಸುಕಿನ ಗುದ್ದಾಟ ನಡೆದಿದೆ. ಗುದ್ದಾಟದಿಂದ ನಡುವೆ ಸಿಲುಕಿರುವವರು ಹೈರಾಣಾಗಿದ್ದಾರೆ
ವರದಿ : ಸತ್ಯರಾಜ್ ಜೆ.
ಕೋಲಾರ (ಸೆ.21): ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಮತ್ತು ಸಂಸದ ಎಸ್.ಮುನಿಸ್ವಾಮಿ ನಡುವಿನ ರಾಜಕೀಯ ಕಿತ್ತಾಟದಲ್ಲಿ ಜಿಲ್ಲಾಡಳಿತ ಪರಿಸ್ಥಿತಿ ಅಪ್ಪ ಅಮ್ಮ ಜಗಳದಲ್ಲಿ ಕೂಸು ಬಡವಾದಂತಾಗಿದೆ.
ಸಚಿವ ನಾಗೇಶ್ ಮತ್ತು ಸಂಸದ ಮುನಿಸ್ವಾಮಿ ನಡುವೆ ಹೊಂದಾಣಿಕೆ ಇಲ್ಲ. ಇಬ್ಬರೂ ಹಾವು ಮುಂಗಸಿಯಂತಾಗಿದ್ದಾರೆ. ಇದರಿಂದಾಗಿ ಆಡಳಿತದ ಪರಿಸ್ಥಿತಿ ಎತ್ತು ಏರಿಗೆ ಕೋಣ ನೀರಿಗೆ ಎಂಬಂತಾಗಿರುವುದು ಬಹಿರಂಗವಾಗಿಯೆ ಕಾಣಿಸುತ್ತಿದೆ.
ಸಂಸದರ ವಿರುದ್ಧ ಸಚಿವ ಆರೋಪ
ಜಿಲ್ಲಾಡಳಿತದಲ್ಲಿ ಸಂಸದ ಮುನಿಸ್ವಾಮಿ ಹಸ್ತಕ್ಷೇಪ ಮಾಡುತ್ತಾರೆ, ವರ್ಗಾವರ್ಗಿಯಲ್ಲೂ ತಮಗೆ ಗೊತ್ತಿಲ್ಲದಂತೆ ಕೈ ಹಾಕುತ್ತಾರೆ. ಜಿಲ್ಲೆಯಲ್ಲಿ ಕಾರ್ಯಕ್ರಮಗಳನ್ನು ತಮಗೆ ಗೊತ್ತಿಲ್ಲದಂತೆ ಹಸ್ತಕ್ಷೇಪ ಮಾಡುತ್ತಾರೆ ನಾನು ಜಿಲ್ಲಾ ಮಂತ್ರಿ ಎಂಬುದನ್ನು ಗಣನೆಗೆ ತೆಗೆದುಕೊಳ್ಳದೆ ವಿರೋಧ ಪಕ್ಷದವರೊಂದಿಗೆ ಸೇರಿಕೊಂಡು ಸಭೆ ಸಮಾರಂಭಗಳನ್ನು ನಡೆಸುತ್ತಾರೆ ಎಂಬುದು ಸಚಿವ ನಾಗೇಶ್ ಅವರ ಆರೋಪ.
ನಾಗೇಶ್ ಬಿಜೆಪಿಯವರಲ್ಲ ಅವರು ಒಬ್ಬ ಪಕ್ಷೇತರ ಶಾಸಕರು. ಅವರು ಪಕ್ಷ ಸಂಘಟನೆಗೆ ಒತ್ತು ನೀಡುತ್ತಿಲ್ಲ ಎಂದು ಆರೋಪಿಸುತ್ತಿರುವ ಸಂಸದ ಮುನಿಸ್ವಾಮಿ ಅವರು, ಜಿಲ್ಲೆಯಲ್ಲಿ ಪಕ್ಷವನ್ನು ಬೆಳೆಸುವ ನಿಟ್ಟಿನಲ್ಲಿ ಆಡಳಿತವನ್ನು ಹಿಡಿತಕ್ಕೆ ತೆಗೆದು ಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಇದು ಸಚಿವ ನಾಗೇಶ್ ಅವರಿಗೆ ಹಿಡಿಸುತ್ತಿಲ್ಲ.
ಆಧಿಕಾರಿಗಳಿಗೆ ಪೀಕಲಾಟ:
ಈ ಇಬ್ಬರು ನಾಯಕರ ನಡುವಿನ ಗುದ್ದಾಟದಲ್ಲಿ ಯಾರ ಕಡೆ ಇರಬೇಕು, ಯಾರನ್ನು ದೂರ ಮಾಡಿಕೊಳ್ಳಬೇಕು ಎನ್ನುವುದು ಅಧಿಕಾರಿ ವರ್ಗದಲ್ಲಿ ಗೊಂದಲ ಸೃಷ್ಟಿಸಿದೆ. ಈ ಗೊಂದಲದಿಂದಾಗಿ ಕೆಲವು ಹಿರಿಯ ಅಧಿಕಾರಿಗಳೂ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ನಡೆದುಕೊಳ್ಳುತ್ತಿದ್ದಾರೆ.
ಈ ಬೆಳವಣಿಗೆಗಳಿಂದ ಅಧಿಕಾರಿ ಎರಡು ಗುಂಪುಗಳಾಗಿವೆ, ಒಂದು ಗುಂಪು ಸಚಿವರ ಕಡೆಗಿದ್ದರೆ ಮತ್ತೊಂದು ಗುಂಪು ಸಂಸದರ ಕಡೆಗಿದೆ. ಈ ಬೆಳವಣಿಗೆಗಳಿಂದ ಜಿಲ್ಲಾಡಳಿತ ದಿಕ್ಕು ತಪ್ಪಿ ಒದ್ದಾಡುತ್ತಿದೆ.
ಮುನಿಸ್ವಾಮಿ ಅವರ ಮಾತಿಗೆ ಒಳಪಟ್ಟು ತಾಲೂಕಿನ ಅಗ್ರಹಾರ ಕೆರೆ ಬಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕೋಲಾರ ತಾಲೂಕು ತಹಸೀಲ್ದಾರ್ ಶೋಭಿತ, ಸಣ್ಣ ನೀರಾವರಿ ಇಲಾಖೆ ಇಬ್ಬರು ಅಧಿಕಾರಿಗಳ ತಲೆಯ ಮೇಲೆ ವರ್ಗಾವಣೆಯ ತೂಗುಕತ್ತಿ ನೇತಾಡುತ್ತಿದೆ.
ಉಸ್ತುವಾರಿ ಸಚಿವರಿಗೆ ಆಹ್ವಾನ ಇಲ್ಲ
ಕೋಲಾರ ತಾಲೂಕಿನ ಎಸ್.ಅಗ್ರಹಾರ ಕೆರೆ ತುಂಬಿ ಹರಿಯುತ್ತಿದ್ದು ಈ ಕೆರೆಗೆ ಬಾಗೀನ ಅರ್ಪಿಸುವ ಕಾರ್ಯಕ್ರಮಗಳನ್ನು ಇತ್ತಿಚೆಗೆ ಏರ್ಪಡಿಸಲಾಗಿತ್ತು. ಇದರಲ್ಲಿ ವಿರೋಧ ಪಕ್ಷಕ್ಕೆ ಸೇರಿಂದ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಮಾಜಿ ಸಚಿವ ಕೃಷ್ಣಬೈರೇಗೌಡ ಸೇರಿದಂತೆ ಜಿಲ್ಲೆಯ ಕೆಲ ಶಾಸಕರನ್ನು ಆಹ್ವಾನಿಸಲಾಗಿತ್ತು. ಆದರೆ ಜಿಲ್ಲಾ ಉಸ್ತುವಾರಿ ಸಚಿವ ನಾಗೇಶ್ ಹಾಗು ಜಿ.ಪಂ.ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಎಂಎಲ್‌ಸಿ ಗೋವಿಂದರಾಜ್ ಅವರಿಗೆ ಆಹ್ವಾನವಿರಲಿಲ್ಲ.
ಈ ಬೆಳವಣಿಯನ್ನು ಸಚಿವ ನಾಗೇಶ್ ಗಂಭೀರವಾಗಿ ಪರಿಗಣಿಸಿದ್ದಾರೆ. ಜಿಲ್ಲೆಯಲ್ಲಿ ಏನು ನಡೆಯುತ್ತಿದೆ, ವಿರೋಧ ಪಕ್ಷದವರನ್ನು ಜತೆಗೆ ಹಾಕಿಕೊಂಡು ಸಂಸದ ಮುನಿಸ್ವಾಮಿ ತಮ್ಮನ್ನು ತುಳಿಯಲು ಯತ್ನಿಸುತ್ತಿದ್ದಾರೆ ಎಂದು ಸಚಿವ ನಾಗೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂದು ಆ ಕಾರ್ಯಕ್ರಮಕ್ಕೆ ಹೋಗಿದ್ದ ಕೋಲಾರ ತಹಸೀಲ್ದಾರ್ ಶೋಭಿತ, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಮತ್ತು ಎಂಜಿನೀಯರ್‌ಗಳ ವಿರುದ್ಧ ಕ್ರಮಕ್ಕೆ ಸಚಿವರು ಮುಂದಾಗಿದ್ದಾರೆ.
ಇದಕ್ಕೂ ಮುಂಚೆ ಕೋಚಿಮುಲ್‌ಗೆ ಸೇರಿದ ಹೊಳಲಿ ಗ್ರಾಮದ ಬಳಿ ಇರುವ 50 ಎಕರೆ ಜಮೀನನ್ನು ವಶ ಪಡಿಸಿಕೊಳ್ಳುವ ವಿಚಾರದಲ್ಲಿಯೂ ಜಿಲ್ಲಾ ಮಂತ್ರಿಯಾಗಿರುವ ಎಚ್.ನಾಗೇಶ್ ಅವರನ್ನು ಆಹ್ವಾನಿಸದೆ ಕಾರ್ಯಕ್ರಮವನ್ನು ನಡೆಸಲಾಗಿತ್ತು. ಈ ಮಧ್ಯೆ ಕೆ.ಸಿ.ವ್ಯಾಲಿಗೆ ಸಂಬಂಧಿಸಿದ ಕೆಲ ಕಾರ್ಯಕ್ರಮಗಳಿಂದಲೂ ನಾಗೇಶ್ ಅವರನ್ನು ಹೊರಗಿಡಲಾಗಿತ್ತು.
ಇಬ್ಬರ ನಡುವೆ ಸಂಧಾನ:
ಸಚಿವ ನಾಗೇಶ್ ಮತ್ತು ಸಂಸದ ಎಸ್.ಮುನಿಸ್ವಾಮಿ ನಡುವೆ ಮೊದಲಿನಿಂದಲೂ ಆಗಾಗ ಈ ಮುಸುಕಿನ ಗುದ್ದಾಟ ನಡೆಯುತ್ತಿದೆ. ಇದಕ್ಕೆ ಬ್ರೇಕ್ ಹಾಕಲು ಜಿಲ್ಲೆಯವರೇ ಆದ ಕೆಲ ದಲಿತ ಮುಖಂಡರು ಸಂಧಾನ ನಡೆಸಿದ್ದರು. ಆದರೆ ಈ ಕಲಹ ಪದೇ ಪದೇ ಮರುಕಳಿಸುತ್ತಿದೆ.