ವರದಿ : ಸು.ನಾ. ನಂದಕುಮಾರ್‌

 ಚನ್ನಪಟ್ಟಣ (ನ.06):  ತಾಲೂಕಿನ ಸಿಂಗರಾಜಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ಮಾಜಿ ಸಿಎಂ ಎಚ್‌ಡಿಕೆ ಸ್ವಕ್ಷೇತ್ರದ ಜೆಡಿಎಸ್‌ ಮುಖಂಡರ ಮಧ್ಯ ಯಾದವೀ ಕಲಹಕ್ಕೆ ಎಡೆಮಾಡಿ ಕೊಟ್ಟಿದೆ.

ತಾಲೂಕು ಜೆಡಿಎಸ್‌ ಪಾಳಯದಲ್ಲಿ ಕಳೆದೊಂದು ದಶಕದಿಂದ ಸಹಕಾರ ಕ್ಷೇತ್ರದ ಚುನಾವಣೆಗಳು ತೀವ್ರ ಪ್ರತಿಷ್ಠೆಯ ಕಣವಾಗಿ ಪರಿಣಮಿಸಿದೆ. ತಾಲೂಕಿನ ಸಹಕಾರಿ ಸಂಸ್ಥೆಗಳಲ್ಲಿ ಜೆಡಿಎಸ್‌ ಪಕ್ಷ ಪ್ರಬಲವಾದ ಹಿಡಿತ ಹೊಂದಿದೆ. ಆದರೆ, ಜೆಡಿಎಸ್‌ ಪಕ್ಷದ ಎರಡು ಗುಂಪುಗಳೇ ಪ್ರತಿ ಚುನಾವಣೆಯಲ್ಲಿ ಕಾದಾಟಕ್ಕಿಳಿಯುತ್ತಿರುವುದು ಸಹಕಾರಿ ಕದನದ ಸ್ವಾರಸ್ಯ. ಇದೀಗ ನಡೆಯುತ್ತಿರುವ ತಾಲೂಕಿನ ಸಿಂಗರಾಜಪುರ ಪಿಎಸಿಎಸ್‌ ಚುನಾವಣೆ ಯಾವುದೇ ಸಾಮಾನ್ಯ ಚುನಾವಣೆಗೂ ಕಡಿಮೆ ಇಲ್ಲದಂತೆ ಜಿದ್ದಾಜಿದ್ದಿಯ ಅಖಾಡವಾಗಿ ಪರಿಣಮಿಸಿದೆ. ಈ ಚುನಾವಣೆಯನ್ನು ಜೆಡಿಎಸ್‌ ತಾಲೂಕು ಅಧ್ಯಕ್ಷ ಎಚ್‌.ಸಿ.ಜಯಮುತ್ತು ಮತ್ತು ಬಿಡಿಸಿಸಿ ಬ್ಯಾಂಕ್‌ ಮಾಜಿ ನಿರ್ದೇಶಕ ಎಸ್‌.ಲಿಂಗೇಶ್‌ಕುಮಾರ್‌ ನಡುವಿನ ಕಾಳಗ ಎಂದೇ ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

26 ಮಂದಿ ಕಣದಲ್ಲಿ:

ಆಡಳಿತ ಮಂಡಳಿಯ 11 ನಿರ್ದೇಶಕ ಸ್ಥಾನಗಳಿಗೆ ಭಾನುವಾರ ಚುನಾವಣೆ ನಡೆಯಲಿದೆ. 26 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. 43 ಮಂದಿ ನಾಮಪತ್ರ ಸಲ್ಲಿಸಿದ್ದು, 17 ಮಂದಿ ನಾಮಪತ್ರ ಹಿಂದಕ್ಕೆ ಪಡೆದಿದ್ದಾರೆ. ಸಾಲ ಪಡೆದವರ ಕ್ಷೇತ್ರದಿಂದ 10 ಮಂದಿ, ಸಾಲ ರಹಿತರ ಕ್ಷೇತ್ರದಿಂದ ಒಬ್ಬರು ನಿರ್ದೇಶಕರು ಆಯ್ಕೆಯಾಗಬೇಕಿದೆ. ಸಾಲಗಾರರ ಕ್ಷೇತ್ರದಿಂದ 22 ಮಂದಿ, ಸಾಲ ರಹಿತರ ಕ್ಷೇತ್ರದಿಂದ 4 ಮಂದಿ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. ಸಾಲ ಪಡೆದವರ ಕ್ಷೇತ್ರದಲ್ಲಿ 892 ಮಂದಿ ಮತದಾರರು, ಸಾಲ ರಹಿತರ ಕ್ಷೇತ್ರದಲ್ಲಿ 267 ಮಂದಿ ಮತದಾರರು ಮತದಾನ ಮಾಡುವ ಹಕ್ಕು ಹೊಂದಿದ್ದಾರೆ.

ರಾಜಕೀಯ ಮಹತ್ವ ಪಡೆದ ಅಖಾಡ:

ರಾಜಕೀಯವನ್ನೇ ಉಸಿರಾಡುವ ಚಾಳಿ ಹೊಂದಿರುವ ಬೊಂಬೆ ನಾಡಿನಲ್ಲಿ ಸಣ್ಣಪುಟ್ಟಚುನಾವಣೆಗಳೂ ಪ್ರತಿಷ್ಟೆಯ ಅಖಾಡವೆನಿಸುವುದು ಸಾಮಾನ್ಯ. ಆದರೆ, ಎಲ್ಲ ಚುನಾವಣೆಗಳಿಗೂ ಒಂದು ಕೈಮೇಲು ಎನ್ನುವಷ್ಟುಜಿದ್ದಾಜಿದ್ದಿ ಸಿಂಗರಾಜಪುರ ಪಿಎಸಿಎಸ್‌ ಆಡಳಿತ ಮಂಡಳಿಯ ಚುನಾವಣೆಯಲ್ಲಿ ನಡೆಯುತ್ತಿದ್ದು ಇದಕ್ಕೆ ಜೆಡಿಎಸ್‌ನ ಪ್ರಮುಖ ಮುಖಂಡರೆನಿಸಿರುವ ಜಯಮುತ್ತು ಮತ್ತು ಲಿಂಗೇಶ್‌ಕುಮಾರ್‌ ನಡುವಿನ ರಾಜಕೀಯ ವೈಷಮ್ಯವೇ ಕಾರಣವಾಗಿದೆ.

ಅವಧಿ​ಗೆ ಮುನ್ನಾ ಚುನಾವಣೆ:

ಆಡಳಿತ ಮಂಡಳಿ ರಚನೆಯಾಗಿ ಎರಡೂವರೆ ವರ್ಷವಷ್ಟೇ ಕಳೆದಿತ್ತು. ಸಂಘದ ಅ​ಧಿಕಾರವಧಿ ​ಇನ್ನೂ ಎರಡೂವರೆ ವರ್ಷಗಳಷ್ಟುಬಾಕಿ ಇತ್ತಾದರೂ ರಾಜಕೀಯ ಮೇಲಾಟಗಳಿಂದಾಗಿ ಇದೀಗ ಅವ​ಗೆ ಮುನ್ನಾ ಚುನಾವಣೆ ಎದುರಾಗಿದೆ. ಕೊರೋನಾ ಲಾಕ್‌ಡೌನ್‌ ಆರಂಭವಾಗುವುದಕ್ಕೆ ಮುನ್ನಾ ಬಿಡಿಸಿಸಿ ಬ್ಯಾಂಕ್‌ ಚುನಾವಣೆ ಸನಿಹವಾದ ಹಿನ್ನೆಲೆಯಲ್ಲಿ ಈ ಪಿಎಸಿಎಸ್‌ನ 6 ಮಂದಿ ನಿರ್ದೇಶಕರನ್ನು ರಾಜೀನಾಮೆ ಕೊಡಿಸುವ ಮೂಲಕ ಆಡಳಿತ ಮಂಡಳಿ ಅಲ್ಪಮತಕ್ಕೆ ಕುಸಿತಗೊಂಡು ಸೂಪರ್‌ ಸೀಡ್‌ ಆಗುವಂತೆ ಮಾಡಿದ್ದೇ ಇದೀಗ ಮತ್ತೆ ಚುನಾವಣೆ ಎದುರಾಗಲು ಕಾರಣವಾಗಿದೆ.

ಫಲಿತಾಂಶಕ್ಕೂ ಮುನ್ನ ಸೋಲೊಪ್ಪಿಕೊಂಡ HDK : ಬದಲಾವಣೆ ಸೂಚನೆ ಕೊಟ್ರು ..

ಬಿಡಿಸಿಸಿ ಬ್ಯಾಂಕ್‌ ಚುನಾವಣೆಯಲ್ಲಿ ಲಿಂಗೇಶ್‌ಕುಮಾರ್‌ ಸ್ಪರ್ಧೆ ಮಾಡುವುದಕ್ಕೆ ಅವಕಾಶ ತಪ್ಪಿಸುವ ಉದ್ದೇಶದಿಂದ ಅವರ ಎದುರಾಳಿ ಬಣ ನಿರ್ದೇಶಕರ ರಾಜೀನಾಮೆ ಪ್ರಹಸನವನ್ನು ನಡೆಸಿತ್ತು. ಆದರೆ ಕೊರೋನಾ ಕಾರಣದಿಂದಾಗಿ ಚುನಾವಣೆ ಮುಂದಕ್ಕೆ ಹೋಗಿ, ಇದೀಗ ಸಿಂಗರಾಜಪುರ ವಿಎಸ್‌ಎಸ್‌ಎನ್‌ಗೆ ಮತ್ತೆ ಚುನಾವಣೆ ಎದುರಾಗಿದೆ. ತಾಲೂಕಿನ ಸಿಂಗರಾಜಪುರ ಪಿಎಸಿಎಸ್‌ ಚುನಾವಣೆ ಜೆಡಿಎಸ್‌ನ ಇಬ್ಬರು ಮುಖಂಡರಾದ ಲಿಂಗೇಶ್‌ಕುಮಾರ್‌ ಮತ್ತು ಜಯಮುತ್ತು ನಡುವಿನ ಜಂಗಿ ಕುಸ್ತಿಯಿಂದಾಗಿ ಸಾಕಷ್ಟುಮಹತ್ವ ಪಡೆದಿದೆ.
 
ತಾಲೂಕಿನಲ್ಲಿ ಪಕ್ಷ ಕಟ್ಟಬೇಕಾದ ತಾಲೂಕು ಅಧ್ಯಕ್ಷರು, ಸಹಕಾರ ಸಂಘದ ಚುನಾವಣೆಯಲ್ಲಿ ನಮ್ಮ ಪಕ್ಷದಲ್ಲೇ ಎರಡು ಗುಂಪು ಮಾಡಿ ಪಕ್ಷವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ತಮ್ಮ ರಾಜಕೀಯ ದ್ವೇಷದಿಂದಾಗಿ ನಿರ್ದೇಶಕರಿಗೆ 5 ಲಕ್ಷ ರೂ. ಹಣ ನೀಡಿ ರಾಜೀನಾಮೆ ಕೊಡಿಸಿ ಸಂಘಕ್ಕೆ ಅವ​ಗೆ ಮುನ್ನಾ ಚುನಾವಣೆ ಬರುವಂತೆ ಮಾಡುವಲ್ಲಿ ತಾಲೂಕು ಜೆಡಿಎಸ್‌ ಅಧ್ಯಕ್ಷರ ಪಾತ್ರವಿದೆ. ಈ ಬಗ್ಗೆ ವರಿಷ್ಟರಿಗೆ ಮಾಹಿತಿ ನೀಡಿದ್ದೇನೆ.

-ಎಸ್‌.ಲಿಂಗೇಶ್‌ಕುಮಾರ್‌, ಬಿಡಿಸಿಸಿ ಬ್ಯಾಂಕ್‌ ಮಾಜಿ ನಿರ್ದೇಶಕ