ಬೆಂಗಳೂರು [ಆ.01 ]:  ಬಿಬಿಎಂಪಿ 2019-20ನೇ ಸಾಲಿನ ಬಜೆಟ್‌ನಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರಿಗೆ ಮೀಸಲಿಟ್ಟದ ಅನುದಾನ ಕಡಿತ ಮಾಡಿದ್ದು, ಕೌನ್ಸಿಲ್‌ ಸಭೆಯಲ್ಲಿ ಆಡಳಿತ- ಪ್ರತಿಪಕ್ಷಗಳ ನಡುವೆ ಆರೋಪ- ಪ್ರತ್ಯಾರೋಪಗಳಿಗೆ ಕಾರಣವಾಯಿತು.

ಬಿಬಿಎಂಪಿ ಮಂಡಿಸಿದ್ದ ಬಜೆಟ್‌ ಅನ್ನು ಸಚಿವ ಸಂಪುಟದ ಒಪ್ಪಿಗೆ ನೀಡುವ ವೇಳೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರ ಅನುದಾನಕ್ಕೆ ಕತ್ತರಿ ಹಾಕಿ ಬಿಜೆಪಿ ಸದಸ್ಯರಿಗೆ ನೀಡಿತ್ತು. ಈ ಹಿನ್ನೆಲೆಯಲ್ಲಿ ದೋಸ್ತಿ ಪಕ್ಷದ ಸದಸ್ಯರು ಶನಿವಾರ ವಿಷಯಾಧಾರಿತ ಸಭೆಯಲ್ಲಿ ಬಿಜೆಪಿ ವಿರುದ್ಧ ದ್ವೇಷದ ರಾಜಕಾರಣದ ಆರೋಪ ಮಾಡಿದರು.

ಕಾಂಗ್ರೆಸ್‌ ಸದಸ್ಯ ಎಂ.ಶಿವರಾಜು, ಮಂಡಿಸಿದ ಬಜೆಟ್‌ ಅನ್ನು ಬಿಜೆಪಿ ಸದಸ್ಯರು ಬೋಗಸ್‌ ಬಜೆಟ್‌ ಎಂದು ಸಭಾತ್ಯಾಗ ಮಾಡಿದರು. ಆದರೀಗ ಅದೇ ಬಜೆಟ್‌ಗೆ ಅನುಮೋದನೆಯನ್ನು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ನೀಡಿದೆ. ಈ ಮೂಲಕ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮಂಡನೆ ಮಾಡಿದ ವಾಸ್ತವಿಕ ಬಜೆಟ್‌ ಎಂಬುದು ಸ್ಪಷ್ಟವಾಗಿದೆ ಎಂದರು.

ಈ ವೇಳೆ ಬಿಜೆಪಿ ವಾಮಮಾರ್ಗದಲ್ಲಿ ಸರ್ಕಾರ ರಚನೆ ಮಾಡಿದೆ ಎಂದು ಆರೋಪಿಸಿದರು. ವಾಮಮಾರ್ಗದ ಸರ್ಕಾರ ಎಂಬ ಮಾತಿಗೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು, ಶಿವರಾಜು ಕ್ಷಮೆ ಕೋರುವಂತೆ ಆಗ್ರಹಿಸಿದರು. ಅಲ್ಲದೆ, ತಮ್ಮ ಆಸನಗಳಿಂದ ಎದ್ದು ಘೋಷಣೆ ಕೂಗ ತೊಡಗಿದರು.

ಆಗ ಮೇಯರ್‌ ಗಂಗಾಂಬಿಕೆ, ನಿಮ್ಮ ಆಸನದಲ್ಲಿ ಕುಳಿತುಕೊಂಡು ಸಭೆ ನಡೆಸಲು ಬಿಡಿ. ಇಲ್ಲಿ ಕೂತು ಸಭೆಯಲ್ಲಿ ಪಾಲ್ಗೊಳ್ಳಲು ಇಷ್ಟವಿಲ್ಲದವರು, ಹೊರಗೆ ಹೋಗಬಹುದು ಎಂದು ಖಡಕ್‌ ಆಗಿ ಎಚ್ಚರಿಕೆ ನೀಡಿದರು. ನಂತರ ಬಿಜೆಪಿ ಸದಸ್ಯರು ಘೋಷಣೆ ಕೂಗುವುದನ್ನು ನಿಲ್ಲಿಸಿದರು.