Asianet Suvarna News Asianet Suvarna News

ಆಸ್ಪತ್ರೆಯಲ್ಲೇ ಮಾರಾಮಾರಿ: ಜಗಳ ಬಿಡಿಸಲು ಪೊಲೀಸ್ ಪೇದೆ ಹರಸಾಹಸ!

ಭಜನೆ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಹೊಡೆದಾಟ| ಚಿಕಿತ್ಸೆಗಿಂತ ಹೆಚ್ಚಾಗಿ ಜಗಳಗಳಿಗೇ ಸಾಕ್ಷಿಯಾದ ಜಿಲ್ಲಾಸ್ಪತ್ರೆ| ಇಲ್ಲದ ಸುರಕ್ಷತೆ, ವೈದ್ಯರು ಸಿಬ್ಬಂದಿಗಳ ಅಸಹಾಯಕತೆ|
 

Clash Between Two Groups in district Hospital in Yadgir
Author
Bengaluru, First Published Apr 10, 2020, 3:00 PM IST

ಯಾದಗಿರಿ(ಏ.10): ರೋಗಿಗಳಿಗೆ ಚಿಕಿತ್ಸೆಗಿಂತಲೂ ಹೆಚ್ಚಾಗಿ, ಹೊರಗಿನವರ ಮಾರಾಮಾರಿಗೆ ಅನೇಕ ಬಾರಿ ಸಾಕ್ಷಿಯಾಗಿರುವ ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಬುಧವಾರ ಮಧ್ಯರಾತ್ರಿಯೂ ಇಲ್ಲಿನ ಆವರಣದಲ್ಲಿ ರಣಾಂಗಣದ ವಾತಾವರಣ ಸೃಷ್ಟಿಯಾದಂತಿತ್ತು. ಪದೇ ಪದೇ ಇಂತಹ ಘಟನೆಗಳು ಇಲ್ಲಿನ ವೈದ್ಯರು, ಸಿಬ್ಬಂದಿಗಳು ಹಾಗೂ ರೋಗಿಗಳ ರಕ್ಷಣೆಯ ವಿಚಾರದಲ್ಲಿ ಸೋತಂತಿವೆ ಅನ್ನೋದೂ ಈ ಸನ್ನಿವೇಶ ಹೇಳುವಂತಿತ್ತು.

ತಾಲೂಕಿನ ಪಗಲಾಪೂರ ಗ್ರಾಮದಲ್ಲಿ ಭಜನೆ ವಿಚಾರಕ್ಕೆ ಸಂಬಂಧಿಸಿದಂತೆ ಬುಧವಾರ ಸಂಜೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಕೊರೋನಾ ಸೋಂಕು ಮುಂಜಾಗ್ರತಾ ಕ್ರಮವಾಗಿ ಭಜನೆ ಅಥವಾ ಜಾತ್ರೆ ಮುಂತಾದವುಗಳಿಗೆ ನಿಷೇಧ ಹೇರಿದ್ದರೂ, ಒಂದು ಗುಂಪು ಭಜನೆಗೆ ಮುಂದಾಗಿದ್ದರಿಂದ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾಗ, ಮಾತಿಗೆ ಮಾತು ಬೆಳೆದು, ಗಲಾಟೆಯಾಗಿದೆ.

ಸಾಗರದಲ್ಲಿ ಕೋಮು ಘರ್ಷಣೆ, ಕಲ್ಲು ತೂರಾಟ : ಲಾಠಿ ಪ್ರಹಾರ

ಈ ಬಗ್ಗೆ ದೂರು ನೀಡಿ, ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಲು ಬಂದಿದ್ದ ವ್ಯಕ್ತಿಯ ಮೇಲೆ ಗ್ರಾಮದ ಕೆಲವರು ಆಗಮಿಸಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಆಸ್ಪತ್ರೆಯ ಭದ್ರತಾ ಸಿಬ್ಬಂದಿ ಹಾಗೂ ಪೊಲೀಸ್ ಪೇದೆಯೊಬ್ಬರು ಜಗಳ ಬಿಡಿಸಲು ಹರಸಾಹಸ ಪಟ್ಟಿದ್ದಾರೆ. ಸಿನಿಮೀಯ ರೀತಿಯಲ್ಲಿ ಮಾರಾಮಾರಿಯಾಗಿದೆ.

ಈ ಸಂದರ್ಭದಲ್ಲಿ ವ್ಯಕ್ತಿಯೊಬ್ಬನ ರಕ್ತ ಚಿಮ್ಮಿ ಆಸ್ಪತ್ರೆಯ ವಾತಾವರಣ ದಿಗಿಲು ಮೂಡಿಸಿತ್ತು. ರೋಗಿಗಳು ಹಾಗೂ ಸಂಬಂಧಗಳು ಆತಂಕದಲ್ಲೇ ಎಲ್ಲವನ್ನೂ ನಿಂತು ನೋಡುತ್ತಿದ್ದರು. ಕೊನೆಗೆ, ಪೊಲೀಸ್ ತಂಡ ಆಗಮಿಸಿ ದಾಂಧಲೆ ಮಾಡುತ್ತಿರುವವರಬನ್ನು ಹೆಡೆಮುರಿ ಕಟ್ಟಿ, ಠಾಣೆಗೆ ಕರೆದೊಯ್ದರು. ಗ್ರಾಮೀಣ ಠಾಣೆಯಲ್ಲಿ ಎರಡೂ ಕಡೆಯಿಂದ ದೂರು ದಾಖಲಾಗಿದೆ.

ಆದರೆ, ಜಿಲ್ಲಾಸ್ಪತ್ರೆಯಲ್ಲಿ ಕೆಲವು ದಿನಗಳ ಹಿಂದೆಯೂ ಕೂಡ ಇಂತಹ ಘಟನೆ ನಡೆದು ಆತಂಕಕ್ಕೆ ಕಾರಣವಾಗಿತ್ತು. ತುರ್ತು ಚಿಕಿತ್ಸಾ ಘಟಕಕ್ಕೇ ನುಗ್ಗಿ, ಎರಡು ಗುಂಪುಗಳು ಮಾರಾಮಾರಿ ನಡೆಸಿದ್ದವು, ಬಿಡಿಸಲು ಬಂದ ಪೊಲೀಸ್ ಪೇದೆಯನ್ನೂ ಎಳೆದಾಡಿದ್ದರೆ, ಸ್ಥಳಕ್ಕೆ ಬಂದ ನಗರ ಠಾಣೆ ಪಿಎಸೈ ವಿರುದ್ಧ ದಾಂಧಲೆಕೋರರೇ ಗುಟುರು ಹಾಕಿದ್ದರು.

ಕೊನೆಗೆ, ರಾಜಕೀಯ ಪ್ರಭಾವಿಗಳ ಮಧ್ಯಸ್ಥಿಕೆಯಲ್ಲಿ ಸೆಟ್ಲಮೆಂಟ್ ಮಾಡಲಾಗಿತ್ತು. ಜಿಲ್ಲಾಸ್ಪತ್ರೆಯ ಘಟನೆ ಕುರಿತು ಪೇದೆ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ಈಗ ಅದೇ ಹಳೇಯ ದ್ವೇಷ ಹಿನ್ನೆಲೆಯಲ್ಲಿ, ಮತ್ತದೇ ಗುಂಪುಗಳ ಮಧ್ಯೆ ನಡೆದಿರುವ ಜಗಳ ಇದಾಗಿದ್ದು, ರಾಜಕೀಯ ಪ್ರಭಾವಕ್ಕೆ ಆಡಳಿತ ಮಣಿದಿದೆ ಎನ್ನುವ ಮಾತುಗಳಿವೆ. ಸೂಕ್ತ ಭದ್ರತೆಯ ಕೊರತೆ ಜಿಲ್ಲಾಸ್ಪತ್ರೆ ನರಳುತ್ತಿರುವುದು ವಿಪರ್ಯಾಸ.
 

Follow Us:
Download App:
  • android
  • ios