ಪೌರ ಕಾರ್ಮಿಕರನ್ನು ಕಾಯಂ ಮಾಡಲಾಗುವುದು :ಡಾ. ಜಿ. ಪರಮೇಶ್ವರ್

ಮಹಾನಗರ ಪಾಲಿಕೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಾಜ್ಯದ ಎಲ್ಲ ಪೌರ ಕಾರ್ಮಿಕರನ್ನು ಮುಂದಿನ ದಿನಗಳಲ್ಲಿ ಖಾಯಂ ಮಾಡುವ ಇಂಗಿತವನ್ನು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ವ್ಯಕ್ತಪಡಿಸಿದ್ದಾರೆ.

Civilian workers will be made permanent snr

 ತುಮಕೂರು :  ಮಹಾನಗರ ಪಾಲಿಕೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಾಜ್ಯದ ಎಲ್ಲ ಪೌರ ಕಾರ್ಮಿಕರನ್ನು ಮುಂದಿನ ದಿನಗಳಲ್ಲಿ ಖಾಯಂ ಮಾಡುವ ಇಂಗಿತವನ್ನು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ವ್ಯಕ್ತಪಡಿಸಿದ್ದಾರೆ.

ಮಹಾನಗರ ಪಾಲಿಕೆ ವತಿಯಿಂದ ಪಾಲಿಕೆ ವ್ಯಾಪ್ತಿ ದಿಬ್ಬೂರಿನ ಬಿ.ಎಚ್.ಪಾಳ್ಯದಲ್ಲಿ ಏರ್ಪಡಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ತುಮಕೂರು ಮಹಾನಗರ ಪಾಲಿಕೆಯ 27 ಮಹಿಳೆಯರು ಹಾಗೂ 84 ಮಂದಿ ಪುರುಷರು ಸೇರಿದಂತೆ 121 ಪೌರ ಕಾರ್ಮಿಕರನ್ನು ಖಾಯಂ ಮಾಡಲಾಗಿದೆ. ವಾಲ್ವ್ಮೆನ್, ಚಾಲಕರು, ಲೋಡರ್ಸ್‌, ಹೆಲ್ಪರ್ಸ್‌ಗಳನ್ನು ಸಹ ಖಾಯಂ ಮಾಡುವಂತೆ ಬೇಡಿಕೆ ಇದ್ದು, ಸರ್ಕಾರದ ಮಟ್ಟದಲ್ಲಿ ಈ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.

ಪಾಲಿಕೆಗೆ 507 ಪೌರ ಕಾರ್ಮಿಕರ ಹುದ್ದೆಗಳು ಮಂಜೂರಾಗಿದ್ದು, ಪ್ರಸ್ತುತ 222 ಖಾಯಂ ಹಾಗೂ 221 ನೇರ ಪಾವತಿ ಪೌರ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ದಿಬ್ಬೂರಿನ 40/1ಎ ರ 2 ಎಕರೆ ಪ್ರದೇಶದಲ್ಲಿ 7.18 ಕೋಟಿ ರೂ. ವೆಚ್ಚದಲ್ಲಿ ಜಿ+2 ಮಾದರಿಯಲ್ಲಿ ನಿರ್ಮಿಸಿರುವ 52 ಮನೆಗಳನ್ನು ಅರ್ಹ ಖಾಯಂ ಪೌರಕಾರ್ಮಿಕ ಫಲಾನುಭವಿಗಳಿಗೆ ಹಂಚಿಕೆ ಮಾಡಲು ಲಾಟರಿ ಮೂಲಕ ವಸತಿಗಳನ್ನು ಸಚಿವರು ಆಯ್ಕೆ ಮಾಡಿ ಹಕ್ಕುಪತ್ರಗಳನ್ನು ವಿತರಿಸಿದರು.

ವಸತಿ ಹಂಚಿಕೆ ಮಾಡಿದ ನಂತರ ಮಾತನಾಡಿದ ಅವರು, ಸುಮಾರು 7 ವರ್ಷಗಳಿಂದ ನಿರ್ಮಿಸಲಾಗುತ್ತಿದ್ದ ಈ ವಸತಿಗಳನ್ನು ಉದ್ಘಾಟಿಸಿದ ದಿನವೇ ಹಂಚಿಕೆ ಮಾಡಲು ಮುಂದಾಗಿರುವ ಪಾಲಿಕೆಗೆ ಅಭಿನಂದನೆ ಸಲ್ಲಿಸಿ, ನಗರದ ಸ್ವಚ್ಛತೆಗಾಗಿ ಪೌರ ಕಾರ್ಮಿಕರ ಶ್ರಮ ವಿವರಣಾತೀತವಾದುದು. ಕೀಳರಿಮೆಯಿಲ್ಲದೆ ನಿಸ್ವಾರ್ಥ ಸೇವೆ ಸಲ್ಲಿಸುವ ಪೌರ ಕಾರ್ಮಿಕರಿಗೆ ವಸತಿ ಹಂಚಿಕೆ ಮಾಡಿರುವುದು ನನಗೆ ಸಂತಸ ತಂದಿದೆ ಎಂದು ತಿಳಿಸಿದರು.

ಖಾಯಂ ಅಲ್ಲದೆ ತಾತ್ಕಾಲಿಕವಾಗಿ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ವೇತನ ನೇರ ಪಾವತಿಯಾಗುತ್ತಿರುವುದರಿಂದ ಗುತ್ತಿಗೆದಾರರಿಂದ ಆಗುತ್ತಿದ್ದ ಶೋಷಣೆ ತಪ್ಪಿದೆ. ಸೇವೆಗೆ ತಕ್ಕ ವೇತನ ಪಾವತಿಯಾಗುತ್ತಿದೆ ಎಂದು ಹೇಳಿದರು.

ತುಮಕೂರು ನಗರವನ್ನು ಸ್ವಚ್ಛ ಸುಂದರವಾಗಿ ಇಡಬೇಕು. ಉಳಿದ ನಗರಗಳಿಗೆ ಮಾದರಿಯಾಗಿರಬೇಕು. ಮೈಸೂರು ನಗರವನ್ನು ಸ್ವಚ್ಛ ನಗರಿ ಎನ್ನುವಂತೆ ತುಮಕೂರನ್ನು ಸಹ ಸ್ವಚ್ಛ ನಗರವನ್ನಾಗಿ ರೂಪಿಸಬೇಕು. ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳುವಲ್ಲಿ ಸಾರ್ವಜನಿಕರೂ ಸಹ ಭಾಗಿಯಾಗಬೇಕು. ಈ ನಿಟ್ಟಿನಲ್ಲಿ ಪಾಲಿಕೆ ಅಧಿಕಾರಿಗಳು ರಸ್ತೆಯ ಬದಿ ಹೂವಿನ ಗಿಡ ನೆಡಬೇಕು. ತುಮಕೂರು ನಗರವನ್ನು ಪ್ರವೇಶಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ವಾಗತ ಕಮಾನು ನಿರ್ಮಾಣ ಮಾಡಬೇಕು. ಬೆಂಗಳೂರಿನಂತೆಯೇ ಬೆಳೆಯುತ್ತಿರುವ ತುಮಕೂರನ್ನು ವಿಸ್ತರಣೆ ಮಾಡಿ, ಹೊಸ ಬಡಾವಣೆಗಳನ್ನು ನಿರ್ಮಿಸಿ, ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆಂದು ಸಲಹೆ ನೀಡಿದರು.

ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿ, ವಸತಿ ಸೌಲಭ್ಯ ಎಲ್ಲಾ ಅರ್ಹ ಪೌರ ಕಾರ್ಮಿಕರಿಗೆ ದೊರೆಯಬೇಕು. ಅವರನ್ನು ಗೌರವದಿಂದ ಕಾಣಬೇಕು. ಪೌರ ಕಾರ್ಮಿಕರು ಪಾಲಿಕೆಯಿಂದ ನೀಡಲಾಗಿರುವ ಸುರಕ್ಷತಾ ಪರಿಕರಗಳನ್ನು ಧರಿಸಿಯೇ ತಮ್ಮ ಕಾರ್ಯ ನಿರ್ವಹಿಸಬೇಕು. ಸ್ವಾಭಿಮಾನದಿಂದ ಜೀವನ ಮಾಡಲು ನಮ್ಮೆಲ್ಲರ ಸಹಕಾರ ಸದಾ ಇರುತ್ತದೆ ಎಂದು ತಿಳಿಸಿದರು.

ಅಧ್ಯಕ್ಷತೆವಹಿಸಿದ್ದ ಪಾಲಿಕೆ ಮೇಯರ್ ಪ್ರಭಾವತಿ ಸುಧೀಶ್ವರ್, ಪ್ರತಿ ವರ್ಷ ಪೌರ ಕಾರ್ಮಿಕರ ದಿನಾಚರಣೆಯಂದು ಪಾಲಿಕೆಯಿಂದ ಉಡುಗೊರೆ ನೀಡಿದಂತೆಯೇ ಈ ಬಾರಿಯೂ ಉಡುಗೊರೆಯಾಗಿ ವಸತಿ ಹಂಚಿಕೆ ಮಾಡಲಾಗಿದೆ. ನಗರ ನೈರ್ಮಲ್ಯತೆಗಾಗಿ ಪೌರ ಕಾರ್ಮಿಕರ ಸೇವೆ ಪಡೆಯುತ್ತಿರುವ ನಾವೆಲ್ಲರೂ ಅವರಿಗೆ ಆಭಾರಿಯಾಗಿರಬೇಕೆಂದು ತಿಳಿಸಿದರು.

ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ವೀಣಾ ಬಿ.ಜಿ. ಮಾತನಾಡಿ, ಪೌರ ಕಾರ್ಮಿಕರಿಗೆ ದಿನಾಚರಣೆಯು ಹಬ್ಬದ ವಾತಾವರಣವನ್ನುಂಟು ಮಾಡಿದೆ. ದಿಬ್ಬೂರಿನಲ್ಲಿ ನಿರ್ಮಿಸಿರುವ ವಸತಿ ಸಂಕೀರ್ಣದಲ್ಲಿ ಅಂಗನವಾಡಿ, ಶಾಲೆ, ಪೊಲೀಸ್ ಠಾಣೆ, ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಗೃಹ ಸಚಿವರಲ್ಲಿ ಮನವಿ ಮಾಡಿದರು.

ನಿಕಟಪೂರ್ವ ಮೇಯರ್ ಫರೀದಾಬೇಗಂ ಮಾತನಾಡಿ, ಪ್ರತಿದಿನ ಪೌರಕಾರ್ಮಿಕರಿಲ್ಲದೆ ನಗರ ಜೀವನ ಪ್ರಾರಂಭವಾಗುವುದಿಲ್ಲ. ಕೋವಿಡ್ ಸಂದರ್ಭದಲ್ಲಿ ಅವರ ಸೇವೆಯನ್ನು ನಾವೆಂದೂ ಮರೆಯುವುದಿಲ್ಲ. ನಗರದಲ್ಲಿ ನಿವೇಶನಗಳನ್ನು ಗುರುತಿಸಿ ಉಳಿದ ಪೌರ ಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸಬೇಕೆಂದು ಸಚಿವರಲ್ಲಿ ಮನವಿ ಮಾಡಿದರು.

ಪಾಲಿಕೆ ಆಯುಕ್ತೆ ಬಿ.ವಿ. ಅಶ್ವಿಜ ಸ್ವಾಗತಿಸಿ, ದಿಬ್ಬೂರಿನಲ್ಲಿ ಪೌರ ಕಾರ್ಮಿಕರಿಗಾಗಿ ಗೃಹ ಭಾಗ್ಯ ಯೋಜನೆಯಡಿ ನಿರ್ಮಿಸಿರುವ ಮನೆ ಸೇರಿದಂತೆ ಪೌರ ಕಾರ್ಮಿಕರ ಮಕ್ಕಳಿಗಾಗಿ ಕಂಪ್ಯೂಟರ್ ಸೆಂಟರ್, ಮೂಲಭೂತ ಸೌಕರ್ಯಗಳಾದ ರಸ್ತೆ, ಚರಂಡಿ, ಒಳಚರಂಡಿ, ಕುಡಿಯುವ ನೀರು ಹಾಗೂ ವಿದ್ಯುತ್ ದೀಪದ ವ್ಯವಸ್ಥೆ ಕಲ್ಪಿಸಲು ಅಂದಾಜು 7.18 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ. ಎಲ್ಲಾ ಪೌರ ಕಾರ್ಮಿಕರಿಗೆ ಬೆಳಗಿನ ಉಪಹಾರ ಹಾಗೂ ಸುರಕ್ಷತಾ ಪರಿಕರಗಳನ್ನು ಒದಗಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಅಕಾಲಿಕ ಮರಣವನ್ನು ಅಪ್ಪಿದ, ಪಾಲಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಯುಜಿಡಿ ಸೂಪರ್‌ವೈಸರ್ ಆರ್. ಮಂಜುನಾಥ್, ಪೌರ ಕಾರ್ಮಿಕರ ಉದ್ಯೋಗದಾತ-ಉದ್ಯೋಗಿ ಜೀವವಿಮಾ ಯೋಜನೆಯಡಿ ಅವರ ತಾಯಿ ಬಿ.ಕೆ. ಸುಧಾ ಅವರಿಗೆ 4.17 ಲಕ್ಷ ರೂ.ಗಳ ಜೀವ ವಿಮಾ ಮೊತ್ತದ ಚೆಕ್‌ನ್ನು ವಿತರಿಸಲಾಯಿತು.

ಇದಕ್ಕೂ ಮುನ್ನ ಪೌರ ಕಾರ್ಮಿಕ ದಿನಾಚರಣೆ ಅಂಗವಾಗಿ ಆರೋಗ್ಯ ತಪಾಸಣೆ, ಯೋಗ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಪಾಲಿಕೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಜಿ.ಎಸ್.ನೇತ್ರಾವತಿ ಪ್ರಾರ್ಥನಾ ಗೀತೆ ಹಾಡಿದರು. ಮಧು ಎನ್. ಬಿ. ನಿರೂಪಿಸಿದರು.

ಉಪಮೇಯರ್ ಟಿ.ಕೆ. ನರಸಿಂಹಮೂರ್ತಿ, ಪಾಲಿಕೆಯ ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್, ಪಾಲಿಕೆ ಪ್ರದೀಪ್ ಸೇರಿದಂತೆ ಮತ್ತಿತರರು ಹಾಜರಿದ್ದರು.

ಬಾಕ್

ವಸತಿ ಹಂಚಿಕೆಗೆ ಕ್ರಮ

ವಸತಿ ಹಂಚಿಕೆಯಲ್ಲಿ ಆಯ್ಕೆಯಾಗದವರು ವಸತಿ ದೊರೆತಿಲ್ಲವೆಂಬ ಚಿಂತೆ ಬೇಡ. ನಗರದ ಡಿ.ಎಂ.ಪಾಳ್ಯದಲ್ಲಿ ಕೊಳಚೆ ಅಭಿವೃದ್ಧಿ ಮಂಡಳಿಯಿಂದ ನಿರ್ಮಿಸಿರುವ ವಸತಿಗಳನ್ನು ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಸರ್ಕಾರದ ಕಳೆದ ಬಾರಿಯ ಅಧಿಕಾರಾವಧಿಯಲ್ಲಿ ಸುಮಾರು ೧೪ ಲಕ್ಷ ವಸತಿಗಳನ್ನು ನಿರ್ಮಾಣ ಮಾಡಿ ಅರ್ಹರಿಗೆ ಹಂಚಿಕೆ ಮಾಡಲಾಗಿತ್ತು. ಈ ಬಾರಿಯೂ ಸಹ ಅರ್ಹ ಬಡವರಿಗೆ, ನಿರ್ಗತಿಕರಿಗೆ ವಸತಿ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Latest Videos
Follow Us:
Download App:
  • android
  • ios