ಬಿಬಿಎಂಪಿಯಿಂದ ಕೈಗೊಂಡ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದ ಮುಖ್ಯ ಆಯುಕ್ತ ತುಷಾರ್ ಗಿರಿನಾಥ ಅವರು ವಾಹನ ಸಂಚಾರಕ್ಕೆ ತೊಂದರೆ ಉಂಟಾಗದಂತೆ ತ್ವರಿತವಾಗಿ ಕಾಮಗಾರಿ ಮುಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.
ಬೆಂಗಳೂರು (ಮೇ.09): ಬಿಬಿಎಂಪಿಯಿಂದ (BBMP) ಕೈಗೊಂಡ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ (Tushar Girinath) ಅವರು ವಾಹನ ಸಂಚಾರಕ್ಕೆ ತೊಂದರೆ ಉಂಟಾಗದಂತೆ ತ್ವರಿತವಾಗಿ ಕಾಮಗಾರಿ ಮುಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ. ಯಲಹಂಕದ 1.8 ಕಿ.ಮೀ. ಉದ್ದದ ಇಂಟಿಗ್ರೇಟೆಡ್ ಎಲಿವೇಟೆಡ್ ಕಾರಿಡಾರ್, ಜಯಮಹಲ್ ಹಾಗೂ ಸ್ಯಾಂಕಿ ಬಂಡ್ ರಸ್ತೆಯ ಅಗಲೀಕರಣ, ಸಂಪಿಗೆ ರಸ್ತೆಯ ವೈಟ್ ಟಾಪಿಂಗ್ ಕಾಮಗಾರಿ ಮತ್ತು ಕೋರಮಂಗಲ ರಾಜಕಾಲುವೆ (ಕೆ-100) ಜಲಮಾರ್ಗ ಯೋಜನೆಯ ಕಾಮಗಾರಿಯನ್ನು ಭಾನುವಾರ ಪರಿಶೀಲನೆ ನಡೆಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಲಹಂಕ ಪೊಲೀಸ್ ಸ್ಟೇಷನ್ ಜಂಕ್ಷನ್‌ನಿಂದ ಯಲಹಂಕ ನ್ಯೂಟೌನ್‌ನ ಜಲಮಂಡಳಿಯ ಜಂಕ್ಷನ್ ವರೆಗೆ 1.8 ಕಿ.ಮೀ. ಉದ್ದದ ಇಂಟಿಗ್ರೇಟೆಡ್ ಎಲಿವೇಟೆಡ್ ಕಾರಿಡಾರನ್ನು .175 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗಿದ್ದು, ಕಾಮಗಾರಿ ಪೂರ್ಣಗೊಂಡರೆ ಈ ಭಾಗದಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಲಿದೆ. ಎಂ.ಎಸ್.ಪಾಳ್ಯ ಜಂಕ್ಷನ್‌ನಲ್ಲಿ ನಗರೋತ್ಥಾನ ಯೋಜನೆ ಅನುದಾನದಲ್ಲಿ ಗ್ರೇಡ್ ಸೆಪರೇಟರ್ ಕಾಮಗಾರಿಗೆ ಟೆಂಡರ್ ಅಂತಿಮಗೊಂಡಿದ್ದು, ಸರ್ಕಾರದ ಅನುಮೋದನೆ ಬಳಿಕ ಕಾಮಗಾರಿ ಆರಂಭಿಸಲಾಗುವುದು ಎಂದರು.
ಬಿಬಿಎಂಪಿ ಬಜೆಟ್ ಗಾತ್ರ 377 ಕೋಟಿ ಹಿಗ್ಗಿಸಿ ಸರ್ಕಾರದಿಂದ ಅನುಮೋದನೆ
ವೈಟ್ ಟಾಪಿಂಗ್ ಕಾಮಗಾರಿ ಪರಿಶೀಲನೆ: ಮಲ್ಲೇಶ್ವರದದ ಮಂತ್ರಿ ಮಾಲ್‌ನಿಂದ ಯಶವಂತಪುರವರೆಗೆ ವೈಟ್ ಟಾಪಿಂಗ್ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಪಾದಚಾರಿ ಮಾರ್ಗ, ಜಲಮಂಡಳಿಯ ಕುಡಿಯುವ ನೀರು ಹಾಗೂ ಒಳಚರಂಡಿ ಕಾಮಗಾರಿ, ಬೆಸ್ಕಾಂ, ಓಎಫ್‌ಸಿ ಕೇಬಲ್ ಅಳವಡಿಕೆಗೆ ಡಕ್ಟ್ ಅಳವಡಿಕೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ಅವಕಾಶ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಭಾಷ್ಯಂ ವೃತ್ತದಿಂದ ಮಲ್ಲೇಶ್ವರ 18ನೇ ಕ್ರಾಸ್‌ನವರೆಗಿನ ಸ್ಯಾಂಕಿ ಬಂಡ್ ರಸ್ತೆಯನ್ನು .60 ಕೋಟಿ ವೆಚ್ಚದಲ್ಲಿ ಅಗಲೀಕರಣ ಮಾಡಲಾಗುವುದು. ಈ ಸಂಬಂಧ ಟೆಂಡರ್ ಸೇರಿದಂತೆ ಮುಂದಿನ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಜಯಮಹಲ್ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಭೂಸ್ವಾಧೀನ ಮಾಡಿಕೊಳ್ಳಬೇಕಿದೆ. ಸದ್ಯ ರಸ್ತೆ ದುರಸ್ತಿ ಕಾಮಗಾರಿಯನ್ನು ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದರು.
ಪ್ರಗತಿಯಲ್ಲಿ ಜಲ ಮಾರ್ಗದ 3 ಸೇತುವೆ ನಿರ್ಮಾಣ ಕಾರ‍್ಯ: ನವನಗರೋತ್ಥಾನ ಯೋಜನೆಯಡಿ .175 ಕೋಟಿ ವೆಚ್ಚದಲ್ಲಿ ಕೋರಮಂಗಲ ರಾಜಕಾಲುವೆ (ಕೆ-100) ಕೆ.ಆರ್.ಮಾರುಕಟ್ಟೆಯಿಂದ ಬೆಳ್ಳಂದೂರು ಕೆರೆವರೆಗೆ 9.6 ಕಿ.ಮೀ ಉದ್ದದ ರಾಜಕಾಲುವೆಯಲ್ಲಿ ಜಲಮಾರ್ಗ ಯೋಜನೆ ಕಾಮಗಾರಿ ಪರಿಶೀಲನೆ ನಡೆಸಲಾಗಿದೆ. 6 ಕಿ.ಮೀ ರಾಜಕಾಲುವೆ ಸ್ವಚ್ಛತಾ ಕಾಮಗಾರಿ ಪೂರ್ಣಗೊಳಿಸಲಾಗಿದೆ. 3.6 ಕಿ.ಮೀ ಉದ್ದದ ರಾಜಕಾಲುವೆಯಲ್ಲಿ ಹೂಳೆತ್ತುವ ಕಾರ್ಯ ಪ್ರಗತಿಯಲ್ಲಿದೆ ಎಂದು ತುಷಾರ್ ಗಿರಿನಾಥ ಹೇಳಿದರು.
ಜೆ.ಸಿ ರಸ್ತೆಯಿಂದ ಶಾಂತಿನಗರ ಬಸ್ ನಿಲ್ದಾಣದವರೆಗಿನ 1.5 ಕಿ.ಮೀ. ಉದ್ದದ ರಾಜಕಾಲುವೆ ಮಾರ್ಗದಲ್ಲಿ ಎರಡೂ ಬದಿಯ ತಡೆಗೋಡೆ, ತಳಮಟ್ಟದ ಸೇತುವೆಗಳನ್ನು ವಾಸ್ತುಶಿಲ್ಪದ ಮಾದರಿಯಲ್ಲಿ ವಿನ್ಯಾಸಗೊಳಿಸುವುದು. ಹಸಿರೀಕರಣ, ರಾತ್ರಿ ಸಮಯದಲ್ಲಿ ಉದ್ಯಾನ ವನದ ರೀತಿಯಲ್ಲಿ ಅಲಂಕಾರಿಕ ಕಾರ್ಯ, ಗ್ರಾನೈಟ್ ಅಳವಡಿಕೆ, ತೋಟಗಾರಿಕೆ, ಪಾದಚಾರಿ ಮಾರ್ಗ, ಗ್ರಿಲ್ ಅಳವಡಿಕೆ, ಕುಂಬಾರಗುಂಡಿ ಬಳಿ ರಾಜಕಾಲುವೆಯಲ್ಲಿ ಹರಿಯುವ ನೀರನ್ನು ಶುದ್ಧೀಕರಿಸಲು 5 ಎಂಎಲ್‌ಡಿ ಎಸ್‌ಟಿಪಿ ಕಾಮಗಾರಿ ಪ್ರಗತಿಯಲ್ಲಿದೆ. ರಾಜಕಾಲುವೆ ಮೇಲೆ ಎರಡೂ ಬದಿ ಸಂಚರಿಸಲು ನಿರ್ಮಿಸುತ್ತಿರುವ 6 ಸೇತುವೆಗಳು ಪೂರ್ಣಗೊಂಡಿದ್ದು, ಉಳಿದ 3 ಸೇತುವೆ ಕೆಲಸ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
BBMP ನೂತನ ಮುಖ್ಯ ಆಯುಕ್ತರಾಗಿ ತುಷಾರ್ ಗಿರಿನಾಥ್ ಅಧಿಕಾರ ಸ್ವೀಕಾರ
ರಸ್ತೆ ಗುಂಡಿ ಸಮಸ್ಯೆ ಪರಿಹಾರಕ್ಕೆ ಸಭೆ: ನಗರದ ರಸ್ತೆ ಗುಂಡಿ ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿದಂತೆ ಬಿಬಿಎಂಪಿಯ ರಸ್ತೆ ಮತ್ತು ಮೂಲಸೌಕರ್ಯ ವಿಭಾಗ ಹಾಗೂ ಯೋಜನಾ ವಿಭಾಗದ ಅಧಿಕಾರಿಗಳೊಂದಿಗೆ ಸೋಮವಾರ ಮುಖ್ಯ ಆಯುಕ್ತರು ಸಭೆ ನಡೆಸುವುದಾಗಿ ಸುದ್ದಿಗಾರರಿಗೆ ತಿಳಿಸಿದರು.
