ದಾಬಸ್‌ಪೇಟೆ (ನ.23): ಸರ್ಕಾರ ಕೊರೋನಾ ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ವಿಫಲವಾಗಿದ್ದು, ಸಂಕಷ್ಟದಲ್ಲಿರುವ ಕಾರ್ಮಿಕರ ಬೇಡಿಕೆ ಈಡೇರಿಕೆಗಾಗಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಕ್ರಮದ ವಿರುದ್ಧ ನ.26ರಂದು ಅಖಿಲ ಭಾರತ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಪ್ರತಾಪ್‌ ಸಿಂಹ ಹೇಳಿದ್ದಾರೆ. ಕಾರ್ಮಿಕರು ಹಾಗೂ ಸಾರ್ವಜನಿಕರು ಬೆಂಬಲ ನೀಡಲಿದ್ದಾರೆ ಎಂದರು.

ದಾಬಸ್‌ಪೇಟೆ ಪಟ್ಟಣದ ಉದ್ದಾನೇಶ್ವರ ವೃತ್ತದಲ್ಲಿ ಸಿಐಟಿಯು ಸಂಘಟನೆಯಿಂದ ಹಮ್ಮಿಕೊಂಡಿದ್ದು ಬಹಿರಂಗ ಅಧಿವೇಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿಫಲ ಕ್ರಮಗಳಿಂದ ಕೊರೋನಾ ಸಾಂಕ್ರಾಮಿಕ ರೋಗ ಜನಸಮೂಹದ ನಡುವೆ ವ್ಯಾಪಕವಾಗಿ ವಿಸ್ತರಿಸುತ್ತಿದೆ. ಕೋವಿಡ್‌ ಪರಿಹಾರ ಕಾರ್ಯಗಳನ್ನು ಸಮರ್ಪಕವಾಗಿ ಕೈಗೊಳ್ಳದ ಪರಿಣಾಮ ದುಡಿಯುವ ಜನರು ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಈ ಅನ್ಯಾಯದ ವಿರುದ್ಧ ಹೋರಾಟಕ್ಕೆ ಮುಂದಾಗಿದ್ದೇವೆ ಎಂದರು.

ಪ್ರತಿಷ್ಠೆಗಾಗಿ ನಡೆಯುತ್ತಿದೆಯಾ ಕರ್ನಾಟಕ ಬಂದ್‌: ಸಂಘಟನೆಗಳಿಗೆ ಬೆದರಿಕೆ ಹಾಕಿದ್ರಾ ವಾಟಾಳ್‌.

ಬಂಡವಾಳಗಾರರಿಗೆ ಕೊರೋನಾ ರಿಯಾಯಿತಿಗಳನ್ನು ಪ್ರಕಟಿಸಿದ ಕೇಂದ್ರ, ರಾಜ್ಯ ಸರ್ಕಾರಗಳು ಲಾಕ್ಡೌನ್‌ನಿಂದಾಗಿ ಸಂತ್ರಸ್ತರಾದ ವಲಸೆ ಕಾರ್ಮಿಕರು, ಅಸಂಘಟಿತ ಕಾರ್ಮಿಕರು, ಕೆಲಸ ಕಳೆದುಕೊಂಡ ಕೈಗಾರಿಕಾ ಕಾರ್ಮಿಕರು, ಕೋವಿಡ್‌ ವಾರಿಯ​ರ್‍ಸ್ಗಳಾಗಿ ಕೆಲಸ ಮಾಡುತ್ತಿರುವವರ ರಕ್ಷಣೆಗೆ ನಿಲ್ಲಲಿಲ್ಲ. ಇದರಿಂದ ದೇಶದಲ್ಲಿ ಲಾಕ್ಡೌನ್‌ ನಂತರ ಸಂಘಟಿತ-ಅಸಂಘಟಿತ ವಲಯದ 14 ಕೋಟಿ ಕಾರ್ಮಿಕರಿಗೆ ಉದ್ಯೋಗ ಇಲ್ಲದಂತಾಗಿದೆ ಎಂದು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಸಮಿತಿ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ, ಜೀವನ ಭದ್ರತೆಗಳು ದುರ್ಬಲಗೊಳ್ಳುತ್ತಿವೆ. ಆರೋಗ್ಯ, ಶಿಕ್ಷಣ ದುಬಾರಿಯಾಗುತ್ತಿದೆ, ದೇಶದ ಆರ್ಥಿಕತೆ ಕುಸಿಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ದೇಶದ ಜನರ ರಕ್ಷಣೆಗೆ ನಿಲ್ಲಬೇಕಾದ ಕೇಂದ್ರ ಸರ್ಕಾರ ಕೊರೋನಾ ಸಂದರ್ಭವನ್ನು ಬಳಸಿ ವೇಗವಾಗಿ ತನ್ನ ಉದಾರವಾದಿ ಆರ್ಥಿಕ ನೀತಿಗಳ ಮೂಲಕ ಕೃಷಿ, ಶಿಕ್ಷಣ, ಸಾರ್ವಜನಿಕ ಕ್ಷೇತ್ರದ ಉದ್ದಿಮೆ ಮತ್ತು ಸೇವೆಗಳನ್ನು ಕಾಪೊರ್‍ರೇಟ್‌ ಬಂಡವಾಳಗಾರರ ಲಾಭಕ್ಕೆ ಖಾಸಗೀಕರಣ ಮಾಡುತ್ತಿದೆ ಎಂದರು.