ವರದಿ : ಸಂದೀಪ್‌ ವಾಗ್ಲೆ

 ಮಂಗಳೂರು (ಸೆ.22): ಧೂಮಲೀಲೆಯ ಮತ್ತೇ ಗಮ್ಮತ್ತು ಎಂದುಕೊಂಡಿದ್ದ ಧೂಮಪಾನಿಗಳಿಗೆ ಕೊರೋನಾ ಆತಂಕದ ಬಿಸಿ ತಟ್ಟಿದ್ದು, ಸೋಂಕು ಆರಂಭವಾದ ಬಳಿಕ ಸಿಗರೆಟ್‌ ವ್ಯಾಪಾರ ಅರ್ಧಕ್ಕರ್ಧ ಕುಸಿದುಬಿಟ್ಟಿದೆ. ಕೊರೋನಾ ಅನ್‌ಲಾಕ್‌ ಬಳಿಕವೂ ಸಿಗರೆಟ್‌ ಸೇಲ್‌ ಶೇ.50ಕ್ಕಿಂತ ಮೇಲೇರಿಲ್ಲ!

ಧೂಮಪಾನಿಗಳಿಗೆ ಕೊರೋನಾ ಮತ್ತಷ್ಟು ರಿಸ್ಕ್‌ ತಂದೊಡ್ಡುವ ಅಪಾಯದ ಕುರಿತು ಆರೋಗ್ಯ ಸಂಸ್ಥೆಗಳು, ವೈದ್ಯರು ಎಚ್ಚರಿಸಿದ ಬಳಿಕ ಧೂಮಪಾನಿಗಳು ಸಿಗರೆಟ್‌ ಸೇದುವುದನ್ನು ಕಡಿಮೆ ಮಾಡಿರುವುದು ಮತ್ತು ರಾಜ್ಯದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿದ್ದ ವಲಸೆ ಕಾರ್ಮಿಕರು ಮರಳಿ ತಮ್ಮೂರಿಗೆ ತೆರಳಿರುವುದರಿಂದ ಸಿಗರೆಟ್‌ ವ್ಯಾಪಾರದ ಮೇಲೆ ಬಹುದೊಡ್ಡ ಹೊಡೆತ ಬಿದ್ದಿದೆ.

ಕಾರ್ಮಿಕರ ವಲಸೆ ಹೊಡೆತ: ಮಂಗಳೂರಿನ ಸಿಗರೆಟ್‌ ಡೀಲರ್‌ಗಳಲ್ಲಿ ಒಂದಾದ ವೆಸ್ಟ್‌ಕೋಸ್ಟ್‌ ಏಜೆನ್ಸೀಸ್‌ನ ಸೂಪರ್‌ವೈಸರ್‌ ಗಣೇಶ್‌ ಹೇಳುವ ಪ್ರಕಾರ, ಅನ್‌ಲಾಕ್‌ ಆದ ಬಳಿಕವೂ ಸಿಗರೆಟ್‌ ಸೇಲ್‌ ಮೇಲೇರಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.50ರಷ್ಟುಕುಸಿದಿದೆ ಎನ್ನುತ್ತಾರೆ. ಕೊರೋನಾ ಬರುವ ಮೊದಲು ಜಿಲ್ಲೆಯಲ್ಲಿ ಹೊರ ರಾಜ್ಯ, ಹೊರ ಜಿಲ್ಲೆಯ ಕಾರ್ಮಿಕರು ಸಾವಿರಾರು ಸಂಖ್ಯೆಯಲ್ಲಿದ್ದರು (ಸುಮಾರು 30- 40 ಸಾವಿರ ಮಂದಿ). ಲಾಕ್‌ಡೌನ್‌ ಬಳಿಕ ಅವರೆಲ್ಲ ತಮ್ಮೂರಿಗೆ ಹಿಂತಿರುಗಿದ್ದಾರೆ. ಅವರು ಬಂದ ಬಳಿಕವಷ್ಟೆವಹಿವಾಟು ಏರಿಕೆಯಾಗುವ ನಿರೀಕ್ಷೆಯಿದೆ ಎನ್ನುತ್ತಾರವರು.

ಕರ್ನಾಟಕದಲ್ಲಿ ಕೊಂಚ ತಗ್ಗಿದ ಕೊರೋನಾ: ಸೋಮವಾರ ಗುಣಮುಖರಾದವರ ಸಂಖ್ಯೆಯೇ ಹೆಚ್ಚು..! ...

ಸೇದೋದು ನಿಲ್ಸಿದೀನಿ!: ಸಿಗರೇಟ್‌ ಸೇದುವವರಿಗೆ ಕೊರೋನಾ ಆಪತ್ತು ಹೆಚ್ಚು ಎನ್ನುವ ಮಾಹಿತಿ ಹರಡಿದ ಬಳಿಕ ಅನೇಕ ಧೂಮಪಾನಿಗಳು ಸೇದುವುದನ್ನು ಕಡಿಮೆ ಮಾಡಿರುವುದೂ ವ್ಯಾಪಾರದ ಮೇಲೆ ಪರಿಣಾಮ ಬೀರಿರಬಹುದು. ನಾನು 15 ವರ್ಷಗಳಿಂದ ಚೈನ್‌ ಸ್ಮೋಕರ್‌ ಆಗಿದ್ದೆ. ಕೊರೋನಾ ಲಾಕ್‌ಡೌನ್‌ ಆದ ಬಳಿಕ ಸಿಗರೆಟ್‌ ಬಂದ್‌ ಆಗಿತ್ತು. ವೈದ್ಯರು ಕೂಡ ಎಚ್ಚರಿಕೆ ನೀಡಿದ ಮೇಲೆ ಈಗ ಸಿಗರೆಟ್‌ ಸೇದೋದನ್ನು ಸಂಪೂರ್ಣವಾಗಿ ನಿಲ್ಲಿಸಿದ್ದೇನೆ. ಮೊದಲಿಗಿಂತ ಹೆಚ್ಚು ಆರೋಗ್ಯವಾಗಿದ್ದೇನೆ ಅನ್ನಿಸಲು ಶುರುವಾಗಿದೆ ಎಂದು ಮಂಗಳೂರಿನ ನಿವಾಸಿ ಸ್ಟೀವನ್‌ ಅನುಭವ ಹಂಚಿಕೊಂಡರು.

ಇನ್ನೂ ತೆರೆಯದ ಪಾನ್‌ ಅಂಗಡಿಗಳು: ಸಿಗರೆಟ್‌ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುವ ಪಾನ್‌ ಅಂಗಡಿಗಳಲ್ಲಿ ಬಹುತೇಕ ಅಂಗಡಿಗಳು ಇನ್ನೂ ತೆರೆದಿಲ್ಲ. ಹೆಚ್ಚಿನವರು ಉತ್ತರ ಭಾರತದವರೇ ಆಗಿರುವುದರಿಂದ ಊರಿಗೆ ತೆರಳಿರುವ ಅವರು ಇನ್ನೂ ಆಗಮಿಸಿಲ್ಲ. ದ.ಕ. ಜಿಲ್ಲೆಯೊಂದರಲ್ಲೇ ಶೇ.75ಕ್ಕೂ ಅಧಿಕ ಪಾನ್‌ ಅಂಗಡಿಗಳು ಇನ್ನೂ ಬಂದ್‌ ಆಗಿವೆ.

‘‘ಕಾಯ್ದೆ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ, ತಂಬಾಕು ಜಗಿಯುವುದು ನಿಷಿದ್ಧ. ತಂಬಾಕು ಜಗಿದು ಎಲ್ಲೆಂದರಲ್ಲಿ ಉಗುಳುವುದರಿಂದ ಸೋಂಕು ಹರಡುವ ಸಾಧ್ಯತೆ ಇದ್ದು, ಕೊರೋನಾ ಬಳಿಕ ಅನೇಕ ಕಡೆಗಳಲ್ಲಿ ಕಾರ್ಯಾಚರಣೆ ನಡೆಸಿ ದಂಡ ವಿಧಿಸಲಾಗಿದೆ’’ ಎಂದು ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಅಧಿಕಾರಿಗಳು ಹೇಳುತ್ತಾರೆ.

ಬೀಡಿಗೆ ಹೊಡೆತ ಅಷ್ಟಿಲ್ಲ:

ಸಿಗರೆಟ್‌ ಮಾರಾಟ ಕುಸಿತದಷ್ಟುಬೀಡಿ ಉದ್ಯಮಕ್ಕೆ ಹೊಡೆತ ಬಿದ್ದಿಲ್ಲ. ಆದರೂ ಶೇ.10-20ರಷ್ಟುವಹಿವಾಟು ಕುಸಿದಿದೆ. ದಕ್ಷಿಣ ಭಾರತದಲ್ಲಿ ಯಥೇಚ್ಛ ಬೀಡಿ ಕಂಪೆನಿಗಳಿದ್ದರೂ ಅವರ ಒಟ್ಟು ಉತ್ಪಾದನೆಯ ಶೇ.75ರಷ್ಟುಬೀಡಿ ಮಾರಾಟವಾಗುವುದು ಉತ್ತರ ಭಾರತದಲ್ಲಿ. ಕರ್ನಾಟಕದಲ್ಲಿ ಅತ್ಯಲ್ಪ ಪ್ರಮಾಣದ ಸೇಲ್‌ ಇರುವುದರಿಂದ ಇಲ್ಲಿ ದೊಡ್ಡ ಮಟ್ಟದ ಹೊಡೆತ ಬಿದ್ದಿಲ್ಲ. ಆದರೂ ಒಟ್ಟಾರೆ ವಹಿವಾಟು ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ ಎಂದು ಗಣೇಶ್‌ ಬೀಡಿ ಕಂಪೆನಿಯ ಮ್ಯಾನೇಜರ್‌ ಯೋಗೀಶ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದರು. ಲಾಕ್‌ಡೌನ್‌ ಅವಧಿಯಲ್ಲಿ ಸುಮಾರು 2 ತಿಂಗಳು ಬೀಡಿ ಉದ್ಯಮ ಬಂದ್‌ ಆಗಿತ್ತು. ಅನ್‌ಲಾಕ್‌ ನಂತರ ಆರಂಭಿಕ ಕೆಲವು ದಿನಗಳ ಕಾಲ ಮಾರಾಟ ಹಿಂದಿನಂತೆಯೇ ಇತ್ತು. ಬಳಿಕ ಸ್ವಲ್ಪ ಮಟ್ಟಿಗೆ ಕುಸಿಯತೊಡಗಿದೆ ಎನ್ನುತ್ತಾರವರು. ದ.ಕ. ಜಿಲ್ಲೆಯೊಂದರಲ್ಲೇ ನಾಲ್ಕು ಲಕ್ಷಕ್ಕೂ ಹೆಚ್ಚು ಮಂದಿ ಜೀವನೋಪಾಯಕ್ಕಾಗಿ ಬೀಡಿಯನ್ನೇ ನೆಚ್ಚಿಕೊಂಡಿದ್ದಾರೆ.