Udupi Files: ಉಡುಪಿ ವಿಡಿಯೋ ಪ್ರಕರಣ: ಸಿಐಡಿ ತನಿಖೆ ಶುರು
ಉಡುಪಿ ಎಸ್ಪಿ ಕಚೇರಿಗೆ ಆಗಮಿಸಿ, ಎಸ್ಪಿ ಹಾಕೆ ಅಕ್ಷಯ್ ಮಚ್ಚಿಂದ್ರ, ಎಎಸ್ಪಿ ಸಿದ್ದಲಿಂಗಪ್ಪ ಅವರಿಂದ ಪ್ರಕರಣದ ಮಾಹಿತಿಗಳನ್ನು ಪಡೆದುಕೊಂಡರು. ಈವರೆಗೆ ತನಿಖೆ ನಡೆಸಿದ ತನಿಖಾಧಿಕಾರಿ ಡಿವೈಎಸ್ಪಿ ಬೆಳ್ಳಿಯಪ್ಪ ತಾವು ನಡೆಸಿದ ತನಿಖೆಯ ವರದಿ, ದಾಖಲೆಗಳನ್ನು, ಹೇಳಿಕೆಗಳನ್ನು ಅಂಜುಮಾಲಾ ಅವರಿಗೆ ಹಸ್ತಾಂತರಿಸಿದರು.
ಉಡುಪಿ(ಆ.09): ನಗರದ ಪಾರಾಮೆಡಿಕಲ್ ಕಾಲೇಜಿನ ಶೌಚಾಲಯ ವಿಡಿಯೋ ಪ್ರಕರಣ ತನಿಖೆಗೆ ಬೆಂಗಳೂರಿನಿಂದ ಸಿಐಡಿ ಡಿವೈಎಸ್ಪಿ ಅಂಜುಮಾಲಾ ನಾಯಕ್ ಮಂಗಳವಾರ ಉಡುಪಿಗೆ ಆಗಮಿಸಿದ್ದಾರೆ. ಉಡುಪಿ ಎಸ್ಪಿ ಕಚೇರಿಗೆ ಆಗಮಿಸಿ, ಎಸ್ಪಿ ಹಾಕೆ ಅಕ್ಷಯ್ ಮಚ್ಚಿಂದ್ರ, ಎಎಸ್ಪಿ ಸಿದ್ದಲಿಂಗಪ್ಪ ಅವರಿಂದ ಪ್ರಕರಣದ ಮಾಹಿತಿಗಳನ್ನು ಪಡೆದುಕೊಂಡರು. ಈವರೆಗೆ ತನಿಖೆ ನಡೆಸಿದ ತನಿಖಾಧಿಕಾರಿ ಡಿವೈಎಸ್ಪಿ ಬೆಳ್ಳಿಯಪ್ಪ ತಾವು ನಡೆಸಿದ ತನಿಖೆಯ ವರದಿ, ದಾಖಲೆಗಳನ್ನು, ಹೇಳಿಕೆಗಳನ್ನು ಅಂಜುಮಾಲಾ ಅವರಿಗೆ ಹಸ್ತಾಂತರಿಸಿದರು.
ಕಾಲೇಜಿನ ಶೌಚಾಲಯದಲ್ಲಿ ಮೂವರು ಮುಸ್ಲಿಂ ವಿದ್ಯಾರ್ಥಿನಿಯರು ಹಿಂದೂ ಹುಡುಗಿಯೊಬ್ಬಳ ವಿಡಿಯೋ ಮಾಡಿರುವ ಪ್ರಕರಣವನ್ನು ಉಡುಪಿ ರಾಜ್ಯ ಸರ್ಕಾರ ಸೋಮವಾರ ಸಿಐಡಿ ತನಿಖೆಗೆ ಒಪ್ಪಿಸಿದೆ. ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳು ಈ ಪ್ರಕರಣವನ್ನು ವಿಶೇಷ ತನಿಖಾ ದಳ (ಎಸ್‌ಐಟಿ) ಅಥವಾ ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ಕ್ಕೆ ಒಪ್ಪಿಸುವಂತೆ ಆಗ್ರಹಿಸಿ ಪ್ರತಿಭಟನೆ, ರಾಜ್ಯಪಾಲರಿಗೆ ಮನವಿ ಮಾಡಿವೆ. ಅಲ್ಲದೆ, ಈವರೆಗೆ ತನಿಖೆ ನಡೆಸುತ್ತಿದ್ದ ಉಡುಪಿ ಪೊಲೀಸರಿಂದ ಖಚಿತ ಸಾಕ್ಷ್ಯಗಳನ್ನು ಸಂಗ್ರಹಿಸುವುದಕ್ಕೆ ಸಾಧ್ಯವಾಗಿಲ್ಲ. ಈ ಎಲ್ಲಾ ಹಿನ್ನೆಲೆಯಲ್ಲಿ ಸರ್ಕಾರ ಪ್ರಕರಣವನ್ನು ಸಿಐಡಿಗೆ ಒಪ್ಪಿಸಿದೆ.
ಉಡುಪಿ ವಿಡಿಯೋ ಕೇಸ್: ಪ್ರತಿಭಟನೆ ವೇಳೆ ಪ್ರಚೋದನಕಾರಿ ಭಾಷಣ, ಮೂವರ ಮೇಲೆ ಕೇಸ್
ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಈ ಪ್ರಕರಣವು ಅತ್ಯಂತ ಸೂಕ್ಷ್ಮವಾಗಿದ್ದು, ಹೆಣ್ಣುಮಕ್ಕಳ ಖಾಸಗಿ ಮತ್ತು ಅವರ ಭವಿಷ್ಯದ ವಿಷಯವಾಗಿರುವುದರಿಂದ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಪ್ರಕರಣದ ತನಿಖೆ ಇನ್ನಷ್ಟು ಆಳವಾಗಿ ಮತ್ತು ಸ್ವತಂತ್ರವಾಗಿ ನಡೆಯಲಿ ಎನ್ನುವ ಕಾರಣಕ್ಕೆ ಸಿಐಡಿಗೆ ಒಪ್ಪಿಸಲಾಗಿದೆ ಎಂದಿದ್ದಾರೆ.