ಬೆಂಗಳೂರು(ಮಾ.20): ಬಿಟ್‌ ಕಾಯಿನ್‌ ಕಂಪನಿಯ ಖಾತೆಗೆ ಕನ್ನ ಹಾಕಿ 3.6 ಕೋಟಿ ಮೌಲ್ಯದ 64 ಬಿಟ್‌ ಕಾಯಿನ್‌ ಕಳವು ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ಸು ಕಂಡಿರುವ ಸಿಐಡಿ ಸೈಬರ್‌ ಕ್ರೈಂ ವಿಭಾಗದ ಪೊಲೀಸರು, ಆ ಕಂಪನಿಯ ಮಾಜಿ ಮಹಿಳಾ ಉದ್ಯೋಗಿಯೊಬ್ಬಳನ್ನು ಸೆರೆ ಹಿಡಿದಿದ್ದಾರೆ.

ಮಹದೇವಪುರದ ಬಿಟ್‌ ಸೈಪರ್‌ ಲ್ಯಾಬ್ಸ್‌ ಒಡೆತನಕ್ಕೆ ಸೇರಿದ ಕಾಯಿನ್‌ ಸ್ವಿಚ್‌ ಕಂಪನಿಯ ಮಾಜಿ ಉದ್ಯೋಗಿ ಆಯುಷಿ ಬಂಧಿತಳಾಗಿದ್ದು, ಆರೋಪಿಯಿಂದ ಲ್ಯಾಪ್‌ಟಾಪ್‌, ಮೊಬೈಲ್‌, ಐ-ಪಾಡ್‌ ಮತ್ತು 1 ಬಿಟ್‌ ಕಾಯಿನ್‌, ಹಾರ್ಡ್‌ವೇರ್‌ ವಶಕ್ಕೆ ಪಡಿಸಿಕೊಳ್ಳಲಾಗಿದೆ.

ಪಾಸ್‌ವರ್ಡ್‌ ಕದ್ದು 3.66 ಕೋಟಿ ಬಿಟ್‌ ಕಾಯಿನ್‌ ದೋಚಿದ ಕಳ್ಳರು!

ಕೆಲ ದಿನಗಳ ಹಿಂದೆ ಲ್ಯಾಬ್ಸ್‌ ಕಂಪನಿಯ ಬಿಟ್‌ ಕಾಯಿನ್‌ ವ್ಯಾಲೆಟ್‌ನ ಪಾಸ್‌ವರ್ಡ್‌ಗಳನ್ನು ಅಕ್ರಮವಾಗಿ ಬಳಸಿಕೊಂಡು ಆರೋಪಿ ಈ ಕೃತ್ಯ ಎಸಗಿದ್ದಳು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಎಸ್ಪಿ ಎಂ.ಡಿ.ಶರತ್‌ ನೇತೃತ್ವದ ತಂಡವು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಿದೆ ಎಂದು ಸಿಐಡಿ ಐಜಿಪಿ ಬಿ.ದಯಾನಂದ್‌ ತಿಳಿಸಿದ್ದಾರೆ.

ಬಿಟ್‌ ಸೈಪರ್‌ ಲ್ಯಾಬ್ಸ್‌ ಕಂಪನಿ ಮಾಲಿಕತ್ವದ ಕಾಯಿನ್‌ ಸ್ವಿಚ್‌ ಸಂಸ್ಥೆಯು ಬಿಟ್‌ಕಾಯಿನ್‌ ವ್ಯವಹಾರದಲ್ಲಿ ತೊಡಗಿದೆ. ಈ ಕಂಪನಿಯು 100 ಬಿಟ್‌ ಕಾಯಿನ್‌ ಹೊಂದಿದ್ದು, ಪ್ರತ್ಯೆಕ ಎರಡು ಹಾರ್ಡ್‌ವೇರ್‌ಗಳಲ್ಲಿ ವ್ಯಾಲೆಟ್ಸ್‌ಗಳನ್ನು ಸಂಗ್ರಹಿಸಿದೆ. ಆ ಕಂಪನಿ, ಬಿಟ್‌ ಕಾಯಿನ್‌ ವ್ಯಾಲೆಟ್‌ಗಳನ್ನು ತೆರೆಯಲು 24 ಪದಗಳ ಪಾಸ್‌ವರ್ಡ್‌ ಅಳವಡಿಸಿದ್ದರು. ಈ ವ್ಯಾಲೆಟ್‌ಗಳನ್ನು ಸುರಕ್ಷತೆ ಸಲುವಾಗಿ ಬ್ಯಾಂಕ್‌ ಲಾಕರ್‌ನಲ್ಲಿ ಇಟ್ಟಿದ್ದರು. ಆದರೆ ಪಾಸ್‌ವರ್ಡನ್ನು ಪುಸ್ತಕದಲ್ಲಿ ಬರೆದು ಕಂಪನಿಯ ಕಚೇರಿ ಲಾಕರ್‌ನಲ್ಲಿ ಅಧಿಕಾರಿಗಳು ಇಟ್ಟಿದ್ದರು.

ಮಾ.13ರಂದು ಹಾರ್ಡ್‌ವೇರ್‌ ವ್ಯಾಲೆಟ್‌ ತೆರೆದು ನೋಡಿದಾಗ ವ್ಯಾಲೆಟ್‌ನಲ್ಲಿ .3.6 ಕೋಟಿ ಮೌಲ್ಯದ 64 ಬಿಟ್‌ ಕಾಯಿನ್‌ಗಳು ಕಳವಾಗಿದ್ದವು. ಆತಂಕಕ್ಕೊಳಗಾದ ಕಂಪನಿ ಮಾಲಿಕರು, ಮಾ.17ರಂದು ಸಿಐಡಿ ಸೈಬರ್‌ ಕ್ರೈಂ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ತನಿಖೆ ಆರಂಭಿಸಿದ ಎಸ್ಪಿ ಎಂ.ಡಿ.ಶರತ್‌ ನೇತೃತ್ವದ ತಂಡವು ಬಿಟ್‌ ಕಾಯಿನ್‌ಗಳು ವರ್ಗಾವಣೆಯಾದ ವ್ಯಾಲೆಟ್‌ಗಳನ್ನು ಪರಿಶೀಲಿಸಿತು. ಆಗ ಸ್ವಾಯಪ್‌ ಲ್ಯಾಬ್‌ ಎಂಬ ವಿನಿಮಯ ಕೇಂದ್ರದಿಂದ ಬಿಟ್‌ ಕಾಯಿನ್‌ಗಳು ಮನೇರೊ ಎಂಬ ಮತ್ತೊಂದು ಬಿಟ್‌ ಕಾಯಿನ್‌ಗೆ ಜ.11ರಿಂದ ಮಾಚ್‌ರ್‍ 11ರವರೆಗೆ ವರ್ಗಾವಣೆ ಆಗಿರುವುದು ಕಂಡು ಬಂದಿದೆ.

ಈ ಮಾಹಿತಿ ತಿಳಿದ ಕೂಡಲೇ ಚುರುಕಾದ ತನಿಖಾ ತಂಡವು, ಆ ಸುಳಿವು ಬೆನ್ನಹತ್ತಿ ಶೋಧಿಸಿದಾಗ ಹಾರ್ಡ್‌ವೇರ್‌ ವ್ಯಾಲೆಟ್‌ಗಳಲ್ಲಿದ್ದ ಬಿಟ್‌ ಕಾಯಿನ್‌ಗಳನ್ನು ವರ್ಗಾವಣೆಗೆ ಹಾರ್ಡ್‌ವೇರ್‌ ವ್ಯಾಲೆಟ್‌ ಅಥವಾ 24 ಸಂಖ್ಯೆ ಪಾಸ್‌ವರ್ಡ್‌ ಬಳಸಿರುವುದು ಖಚಿತವಾಗಿದೆ. ಇದರಿಂದ ಕೃತ್ಯದಲ್ಲಿ ಕಂಪನಿ ನೌಕರರ ಅಥವಾ ಸಾಫ್ಟ್‌ವೇರ್‌ ಹ್ಯಾಕ​ರ್‍ಸ್ಗಳ ಕೈವಾಡವಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಅನುಮಾನದ ಮೇರೆಗೆ ಪೊಲೀಸರು, ತನಿಖೆ ಮುಂದುವರೆಸಿದಾಗ ಆರೋಪಿ ಆಯುಷಿ ಸುಳಿವು ಸಿಕ್ಕಿದೆ. ಆರೋಪಿಯ ಲ್ಯಾಪ್‌ಟಾಪ್‌, ಮೊಬೈಲ್‌ ಹಾಗೂ ಐ-ಪಾಡ್‌ ವಶಕ್ಕೆ ಪಡೆದು ಪರಿಶೀಲಿಸಿದಾಗ ಪುರಾವೆಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಕಂಪನಿ ತೆರೆಯಲು ಸಿದ್ಧತೆ!

ಕಾಯಿನ್‌ ಸ್ವಿಚ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆಯುಷಿ, ತನ್ನ ಕೆಲಸದಿಂದ ಮಾಲಿಕರ ವಿಶ್ವಾಸಗಳಿಸಿದ್ದಳು. ಕೊನೆಗೆ ಹಣದಾಸೆಗೆ ಅವರಿಗೆ ದ್ರೋಹ ಬಗೆದಿದ್ದಾಳೆ ಎಂದು ಪೊಲೀಸರು ಹೇಳುತ್ತಾರೆ.
ಬಿಟ್‌ ಕಾಯಿನ್‌ ವ್ಯಾಲೆಟ್‌ಗಳ ಲಾಕರ್‌ನ ಪಾಸ್‌ವರ್ಡನ್ನು ಇಟ್ಟಿರುವ ಬೀರುವಿನ ಕೀಗಳನ್ನು ಆರೋಪಿಗೆ ಕೊಟ್ಟಿದ್ದರು. ಆಗ ಕಚೇರಿಯಲ್ಲಿ ಯಾರು ಇಲ್ಲದೆ ಸಂದರ್ಭದಲ್ಲಿ ಪಾಸ್‌ವರ್ಡ್‌ ಬರೆದಿದ್ದ ಪುಸ್ತಕದ ಹಾಳೆಯ ಭಾವಚಿತ್ರವನ್ನು ಆಯುಷಿ ಮೊಬೈಲ್‌ನಲ್ಲಿ ತೆಗೆದುಕೊಂಡಿದ್ದಳು. ಕೆಲ ದಿನಗಳ ಬಳಿಕ ಕಂಪನಿ ಉದ್ಯೋಗ ತೊರೆದ ಆಕೆ, ಆ ಪಾಸ್‌ವರ್ಡ್‌ ಬಳಸಿ ಬಿಟ್‌ ಕಾಯಿನ್‌ ಕದ್ದು ಪ್ರತ್ಯೇಕ ಬಿಟ್‌ ಕಾಯಿನ್‌ ವ್ಯವಹಾರದ ಮತ್ತೊಂದು ಕಂಪನಿ ತೆರೆಯಲು ಮುಂದಾಗಿದ್ದಳು ಎಂದು ತಿಳಿದು ಬಂದಿದೆ.

ಇಂಟರ್‌ನೆಟ್‌ ಮೂಲಕ ಹಣಕಾಸು ವ್ಯವಹಾರ ನಡೆಸುವ ಖಾತೆಗಳ ಪಾಸ್‌ವರ್ಡ್‌ ಹಾಗೂ ಸೆಕ್ಯುರಿಟಿ ಕೀ ವರ್ಡ್‌ಗಳನ್ನು ಸುರಕ್ಷಿತವಾಗಿ ಗೌಪ್ಯವಾಗಿಡಬೇಕು. ಇದನ್ನು ಕಂಪನಿ ಉದ್ಯೋಗಿಗಳಿಗೆ ತಿಳಸದಿರುವುದು ಒಳಿತು. ಕಾಲಕಾಲಕ್ಕೆ ಸಾಫ್ಟ್‌ವೇರ್‌ಗಳನ್ನು ಅಪ್‌ಡೇಟ್‌ ಮಾಡಿಸಬೇಕು ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.