Asianet Suvarna News Asianet Suvarna News

ಸರ್ಕಾರಿ ಯೋಜನೆ ಸಾಲ ಮಂಜೂರಾತಿಗೆ ಸಿಬಿಲ್ ಬೇಡ

ಸರ್ಕಾರದ ವಿವಿಧ ಯೋಜನೆಗಳಡಿ ಸಾಲ ಮಂಜೂರಾತಿಗೆ ಬ್ಯಾಂಕುಗಳು ಸಿಬಿಲ್ ಸ್ಕೋರ್ ಪರಿಗಣಿಸಬಾರದು ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ತಾಕೀತು ಮಾಡಿದರು.

CIBIL is not required for government scheme loan sanction snr
Author
First Published Oct 17, 2023, 8:38 AM IST

 ಚಿತ್ರದುರ್ಗ :  ಸರ್ಕಾರದ ವಿವಿಧ ಯೋಜನೆಗಳಡಿ ಸಾಲ ಮಂಜೂರಾತಿಗೆ ಬ್ಯಾಂಕುಗಳು ಸಿಬಿಲ್ ಸ್ಕೋರ್ ಪರಿಗಣಿಸಬಾರದು ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ತಾಕೀತು ಮಾಡಿದರು.

ಜಿ.ಪಂ. ಸಭಾಂಗಣದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಸಫಾಯಿ ಕರ್ಮಚಾರಿ ಹಾಗೂ ದಿವ್ಯಾಂಗರ ರಾಷ್ಟ್ರೀಯ ಹಣಕಾಸು ಹಾಗೂ ಅಭಿವೃದ್ಧಿ ನಿಗಮಗಳ ಅನುದಾನದಡಿ ನೀಡುವ ಸಾಲ ಸೌಲಭ್ಯ ಯೋಜನೆ ಅನುಷ್ಠಾನದ ಕುರಿತು ಚಿತ್ರದುರ್ಗ, ತುಮಕೂರು, ದಾವಣಗೆರೆ ಜಿಲ್ಲೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ಬ್ಯಾಂಕ್ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು. ಹಾಲು ಉತ್ಪಾದಕ ಸಂಘಗಳ ಸಹಯೋಗದಲ್ಲಿ ಹಸು ಸಾಕಾಣಿಕೆಗೆ, ಸಣ್ಣ ಘಟಕಗಳ ಆಧಾರದಲ್ಲಿ ಪಾರಂಪರಿಕ ಕುರಿ ಸಾಕಾಣಿಕೆ ಮಾಡಿಕೊಂಡು ಬಂದ ಸಮುದಾಯಗಳಿಗೆ ರಿಯಾಯಿತಿ ಬಡ್ಡಿ ದರದಲ್ಲಿ ಸಾಲ ಒದಗಿಸುವಂತೆ ಸೂಚಿಸಿದರು.

ಬಳಕೆಯಾಗಿಲ್ಲ: ಕಳೆದ ವರ್ಷಗಳಲ್ಲಿ ಬ್ಯಾಂಕುಗಳಲ್ಲಿ ಸರ್ಕಾರದಿಂದ ಇರಿಸಿದ ಠೇವಣಿ ಹಣವೇ ಬಳಕೆಯಾಗಿಲ್ಲ. ಇದು ವಿಪರ್ಯಾಸದ ಸಂಗತಿ. ಬ್ಯಾಂಕುಗಳು ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ನಿರ್ಲಕ್ಷ್ಯ ಧೋರಣೆ ತೋರಿಸುತ್ತಿವೆ. ಯೋಜನೆಗಳನ್ನು ಬ್ಯಾಂಕುಗಳು ಜನರಿಗೆ ತಲುಪಿಸದಿದ್ದರೆ, ನಿಗಮಗಳಿಂದ ಇರಿಸಿದ ಠೇವಣಿ ಹಣವನ್ನು ಹಿಂಪಡೆದು ಬೇರೆ ಮಾರ್ಗವಾಗಿ ಜನರಿಗೆ ತಲುಪಿಸುವ ಬಗ್ಗೆ ಚಿಂತಿಸಬೇಕಾಗುವುದು ಎಂದು ಎಚ್ಚರಿಸಿದರು.

ಪಿಎಂ ವಿಶ್ವಕರ್ಮ ಯೋಜನೆಯಡಿ ಚಿತ್ರದುರ್ಗ ಜಿಲ್ಲೆಯಲ್ಲಿ 2,543 ಹಾಗೂ ತುಮಕೂರು ಜಿಲ್ಲೆಯಲ್ಲಿ 4,500ಕ್ಕೂ ಹೆಚ್ಚು ನೋದಣಿಯಾಗಿವೆ. ಆಂದೋಲನದ ರೀತಿಯಲ್ಲಿ ಗ್ರಾ.ಪಂ. ಮಟ್ಟದಲ್ಲಿ ನೋಂದಣಿ ಕಾರ್ಯ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಸಭೆಯಲ್ಲಿ ತಿಳಿಸಿದರು.

ಚಿತ್ರದುರ್ಗ ಜಿಲ್ಲಾಧಿಕಾರಿ ದಿವ್ಯಾಪ್ರಭು, ತುಮಕೂರು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ, ಜಿ.ಪಂ ಸಿಇಒ ಪ್ರಭು.ಜಿ, ದಾವಣಗೆರೆ ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್, ಪರಿಶಿಷ್ಟ ಜಾತಿ ರಾಷ್ಟ್ರೀಯ ಹಣಕಾಸು ಹಾಗೂ ಅಭಿವೃದ್ಧಿ ನಿಗಮದ ರಂಜನೀಶ್ ಕುಮಾರ್ ಜೆನ್ವಾ, ರಾಜ್ಯ ಮಟ್ಟದ ಬ್ಯಾಂಕರ್ ಸಮಿತಿ ಪ್ರಧಾನ ವ್ಯವಸ್ಥಾಪಕ ಪ್ರವೀಣ್ ಕುಮಾರ್, ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಜಿ.ಆರ್.ದಿಲ್ ಬಾಬು, ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಬ್ಯಾಂಕುಗಳು ಪ್ರಧಾನ ವ್ಯವಸ್ಥಾಪಕರು ಉಪಸ್ಥಿತರಿದ್ದರು.

ಸಾಲ ಮಂಜೂರು ತಿರಸ್ಕಾರಕ್ಕೆ ಅಸಮಾಧಾನ

ಸಾಮಾಜಿಕವಾಗಿ ಹಿಂದುಳಿದವರು ಸ್ವಂತ ಉದ್ಯೋಗ ಕೈಗೊಂಡು ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗುವಂತೆ, ಕೇಂದ್ರ ಸರ್ಕಾರ ಹಲವು ನಿಗಮ ಸ್ಥಾಪಿಸಿ, ಬ್ಯಾಂಕುಗಳ ಮೂಲಕ ಫಲಾನುಭವಿಗಳಿಗೆ ರಿಯಾಯಿತಿ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡುವ ಯೋಜನೆ ಜಾರಿಗೊಳಿಸಿದೆ. ಬ್ಯಾಂಕ್‍ಗಳು ಈ ಸೌಲಭ್ಯದ ಕುರಿತು ಸಾರ್ವಜನಿಕರಿಗೆ ಯಾವುದೇ ಮಾಹಿತಿ ಸಮರ್ಪಕವಾಗಿ ನೀಡುತ್ತಿಲ್ಲ ಎಂದು ಕೇಂದ್ರ ಸಚಿವ ನಾರಾಯಣಸ್ವಾಮಿ ಕಿಡಿ ಕಾರಿದರು. ನಿಗಮಗಳು ಬ್ಯಾಂಕ್‍ಗಳಲ್ಲಿ ಠೇವಣಿ ಇರಿಸಿದ ಹಣದ ಬಳಕೆಯೇ ಆಗಿಲ್ಲ. ಸಿಬಿಲ್ ಸ್ಕೋರ್, ಸಾಲ ಮರುಪಾವತಿ ಅರ್ಹತೆ ಮುಂತಾದ ನೆಪ ಹೇಳಿ ಸಾಲ ಸೌಲಭ್ಯಕ್ಕೆ ಸಲ್ಲಿಸಿದ ಅರ್ಜಿಯನ್ನು ಬ್ಯಾಂಕುಗಳಿಂದ ತಿರಸ್ಕರಿಸಲಾಗುತ್ತಿದೆ ಅಸಮಾಧಾನ ವ್ಯಕ್ತ ಪಡಿಸಿದರು.

ಹೈನುಗಾರಿಕೆಗೆ ರಿಯಾಯಿತಿ ಬಡ್ಡಿದರದಲ್ಲಿ ಸಾಲ

ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಯಲ್ಲಿ ಹೈನುಗಾರಿಕೆ ಮುಖ್ಯ ವೃತ್ತಿಯಾಗಿದೆ. ಈ ಭಾಗದಲ್ಲಿನ ಹಾಲು ಉತ್ಪಾದಕ ಸಂಘಗಳ ಸಹಯೋಗದಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಹಸು ಸಾಕಾಣಿಕೆಗೆ ರಿಯಾಯಿತಿ ಬಡ್ಡಿದರದಲ್ಲಿ ಸಾಲ ಸೌಲಭ್ಯ ಮಂಜೂರು ಮಾಡಬೇಕು ಎಂದು ನಾರಾಯಣಸ್ವಾಮಿ ಹೇಳಿದರು.

ನಾಯಕ, ಬೋವಿ, ಗೊಲ್ಲರು ಹಾಗೂ ಕುರುಬ ಸಮುದಾಯಗಳಿಗೆ ಸೇರಿದಂತೆ ಹಲವು ಸಮುದಾಯಗಳು ಸಾಂಪ್ರದಾಯಕವಾಗಿ ಕುರಿ ಸಾಕಾಣಿಕೆ ಮಾಡಿಕೊಂಡು ಬರುತ್ತಿದ್ದಾರೆ. ಹೊಸದಾಗಿ ಕುರಿ, ಮೇಕೆ ಸಾಕಾಣಿಕೆ ಮಾಡಲು ಇಚ್ಛಿಸುವವರಿಗೆ 25 ಅಥವಾ 50 ಕುರಿಗಳ ಘಟಕಕ್ಕೆ ಕುರಿ, ಮೇಕೆ ಸಾಕಾಣಿಕೆ ಸಾಲವನ್ನು ಮಂಜೂರು ಮಾಡಬೇಕು. ಈ ಸಾಲಗಳನ್ನು ಮಂಜೂರು ಮಾಡುವಾಗ ಅಗತ್ಯ ದಾಖಲೆಗಳನ್ನು ಹೊರುತುಪಡಿಸಿ, ಅನಗತ್ಯವಾಗಿ ಹೆಚ್ಚಿನ ದಾಖಲೆಗಳನ್ನು ಕೇಳಬಾರದು. ಪ್ರತಿ ಬ್ಯಾಂಕ್ ಶಾಖೆಗಳಿಗೂ ಗುರಿ ನಿಗದಿಪಡಿಸಿ, ಫಲಾನುಭವಿಗಳನ್ನು ಆಯ್ಕೆ ಮಾಡಿ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು ಎಂದರು.

ಚಿತ್ರದುರ್ಗ ಜಿ.ಪಂ. ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಮಾತನಾಡಿದರು.

Follow Us:
Download App:
  • android
  • ios