ಗೋಮಾಳದಲ್ಲಿದ್ದ ಶಿಲುಬೆಗಳ ತೆರವು : ಪರಿಸ್ಥಿತಿ ಉದ್ವಿಗ್ನ, ಶಾಂತ
ಗೋಮಾಳ ಜಾಗದಲ್ಲಿ ಇದ್ದ ಶಿಲುಬೆ ತೆರವುಗೊಳಿಸಿದ ಹಿನ್ನೆಲೆಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಬಳಿಕ ಶಾಂತವಾಗಿದೆ.
ಚಿಕ್ಕಬಳ್ಳಾಪುರ (ಸೆ.24): ಇಲ್ಲಿನ ಹೊರ ವಲಯದ ಸೊಸೇಪಾಳ್ಯದ ಬಳಿಯ ಸರ್ಕಾರಿ ಗೋಮಾಳದಲ್ಲಿ ಅಕ್ರಮವಾಗಿ ಸ್ಥಾಪಿಸಿದ್ದ ಯೇಸು ಶಿಲುಬೆಗಳನ್ನು ಬುಧವಾರ ಬೆಳ್ಳಂಬೆಳಗ್ಗೆ ಜಿಲ್ಲಾಡಳಿತ ಭದ್ರತೆಯಲ್ಲಿ ತೆರವುಗೊಳಿಸಿದ್ದು, ಈ ವೇಳೆ ಸ್ಥಳೀಯರು ತೆರವು ಕಾರ್ಯಕ್ಕೆ ಅಡ್ಡಿಪಡಿಸಿ ಪ್ರತಿಭಟನೆ ನಡೆಸಿದ್ದರಿಂದ ಕೆಲಕಾಲ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
ಅರಿಕೆರೆ ಗ್ರಾಮದ ಸ.ನ.10ರ ಸರ್ಕಾರಿ ಗೋಮಾಳದಲ್ಲಿ ಹಲವು ವರ್ಷಗಳ ಹಿಂದೆ ಅನಧಿಕೃವಾಗಿ ಕೆಲವರು ನಿರ್ಮಿಸಿದ್ದ ಯೇಸುವಿನ ಶಿಲುಬೆಗಳ ತೆರವುಗೊಳಿಸುವಂತೆ ಕೋರಿ ಕೆಲ ಸಾರ್ವಜನಿಕರು ಇತ್ತೀಚೆಗೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ಹೈಕೋರ್ಟ್ ಜಿಲ್ಲಾಡಳಿತಕ್ಕೆ ಹಾಗೂ ಉಪ ವಿಭಾಗಾಧಿಕಾರಿಗಳಿಗೆ ನೋಟಿಸ್ ನೀಡಿ ಕೂಡಲೇ ಕ್ರಮ ವಹಿಸಿ ವರದಿ ನೀಡುವಂತೆ ಸೂಚಿಸಿತ್ತು.
ಏಕಾಏಕಿ ಪ್ರತ್ಯಕ್ಷವಾಯ್ತು ಶಿಲುಬೆ! ಚರ್ಚ್ ನಿರ್ಮಾಣಕ್ಕೆ ಸರ್ಕಾರಿ ಜಾಗದ ಮೇಲೆ ಕಣ್ಣು ..
ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಭದ್ರತೆಯೊಂದಿಗೆ ಗ್ರಾಮಕ್ಕೆ ತೆರಳಿ ಅಲ್ಲಿನ ಅನಧಿಕೃತವಾಗಿ ಸ್ಥಾಪಿಸಿದ್ದ ಯೇಸುವಿನ ಶಿಲುಬೆಯೊಂದನ್ನು ತೆರವುಗೊಳಿಸಿತು. ಈ ವೇಳೆ ಕೆಲ ಕ್ರೈಸ್ತ ಸಮುದಾಯದವರು ಶಿಲುಬೆ ತೆರವುಗೊಳಿಸುವುದಕ್ಕೆ ವಿರೋಧ ವ್ಯಕ್ತಪಡಿಸಿ ಪ್ರತಿಭಟಿಸಿದಾಗ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.