ಚಿತ್ರದುರ್ಗ [ಜ.18]:  ಜಿಲ್ಲಾ ಆಸ್ಪತ್ರೆಗೆ ಹೆರಿಗೆಗೆಂದು ಬರುವ ಗರ್ಭಿಣಿಯರಿಗೆ ಶುಶ್ರೂಷಕಿಯರು ಅವಾಚ್ಯ ಶಬ್ದಗಳಿಂದ ನಿಂದಿಸುವ ಜೊತೆಗೆ ಚುಚ್ಚು ಮಾತುಗಳಿಂದ ಟೀಕಿಸುತ್ತಾರೆಂಬ ದೂರುಗಳು ಬಂದಿದ್ದು, ಸಿಬ್ಬಂದಿಯು ರೋಗಿಗಳೊಂದಿಗೆ ಗೌರವದಿಂದ ನಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ತಾಕೀತು ಮಾಡಿದರು.

ಜಿಲ್ಲಾ ಆಸ್ಪತ್ರೆಗೆ  ಭೇಟಿ ನೀಡಿ ರೋಗಿಗಳ ಅಹವಾಲು ಆಲಿಸಿದ ಅವರು, ಶುಶ್ರೂಶಕಿಯರು ಗರ್ಭಿಣಿಯರನ್ನು ತಮ್ಮಂತೆ ಅವರು ಮಹಿಳೆಯರೆಂದು ಭಾವಿಸಬೇಕು. ನೋವಿನಲ್ಲಿರುವ ಅವರಿಗೆ ಚುಚ್ಚು ಮಾತುಗಳನ್ನು ಆಡುವುದನ್ನು ಬಿಡಬೇಕು. ಇದೇ ನಡವಳಿಕೆಗಳು ಪುನರಾವರ್ತನೆ ಆದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಬಿಪಿಎಲ್‌ ಕಾರ್ಡ್‌ ತೋರಿಸಿದರೂ, ವಿವಿಧ ತಪಾಸಣಾ ಪರೀಕ್ಷೆಗೆ ಶುಲ್ಕ ವಸೂಲಿ ಮಾಡುತ್ತಿದ್ದಾರೆ ಎಂದು ಮಹಿಳೆಯೊಬ್ಬರು ಶುಲ್ಕ ಪಾವತಿ ರಸೀದಿ, ಬಿಪಿಎಲ್‌ ಕಾರ್ಡ್‌ ಜೆರಾಕ್ಸ್‌ ಸೇರಿ ವಿವಿಧ ದಾಖಲೆಯೊಂದಿಗೆ ದೂರು ನೀಡಿದ್ದನ್ನು ಕಂಡು ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಅವರು ಜಿಲ್ಲಾ ಆಸ್ಪತ್ರೆಯ ಅಧಿಕಾರಿ, ಸಿಬ್ಬಂದಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರಲ್ಲದೆ, ಆ ಮಹಿಳೆಗೆ ಶುಲ್ಕ ಮರುಪಾವತಿಸುವಂತೆ ನಿರ್ದೇಶನ ನೀಡಿದರು.

ನಗರದ ಪರಮೇಶ್ವರಪ್ಪ ಕಳೆದ ಕೆಲವು ದಿನಗಳ ಹಿಂದೆ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದು, ಈ ವೇಳೆ ಸಕ್ಕರೆ ಪ್ರಮಾಣ ಏರುಪೇರಾಗುತ್ತಿರುವುದಕ್ಕೆ ಆಸ್ಪತ್ರೆಯ ವೈದ್ಯರ ಸಲಹೆಯಂತೆ ದಿನಕ್ಕೆ ನಾಲ್ಕೈದು ಬಾರಿ ರಕ್ತ ಪರೀಕ್ಷಿಸಬೇಕಿದೆ. ಬಿಪಿಎಲ್‌ ಕಾರ್ಡ್‌ ಹೊಂದಿದವರಿಗೆ ಉಚಿತ ಪರೀಕ್ಷೆ ಮಾಡಬೇಕು. ಆದರೆ, ಇದನ್ನು ಲೆಕ್ಕಿಸದೇ ನಮ್ಮಿಂದ ಪ್ರತಿ ರಕ್ತ ಪರೀಕ್ಷೆಗೆ ರು.50 ಪಾವತಿಸಿಕೊಂಡಿದ್ದಾರೆ. ನಾವು ಬಡವರಿದ್ದು, ಪ್ರತಿ ಬಾರಿ ಪರೀಕ್ಷೆಗೆ ಹಣ ಖರ್ಚು ಮಾಡುತ್ತಿದ್ದೇವೆ. ಹೀಗಾದರೆ, ಬಡವರ ಗತಿ ಏನು? ಬಿಪಿಎಲ್‌ ಕುಟುಂಬಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಸೌಲಭ್ಯ ನೀಡಬೇಕು. ಆದರೆ, ಆಸ್ಪತ್ರೆಯಲ್ಲಿ ಶುಲ್ಕ ಪಡೆಯುತ್ತಿದ್ದಾರೆ ಎಂದು ಪರಮೇಶ್ವರ ಅವರ ಪತ್ನಿ ಶೋಭಾ ಜಿಲ್ಲಾಧಿಕಾರಿಗಳ ಮುಂದೆ ತಮ್ಮ ಅಳಲನ್ನು ತೋಡಿಕೊಂಡರು.

ನಿಮ್ಮ ಕೈಲಿ ಬಡವರ ಕೆಲ್ಸ ಮಾಡಲು ಆಗುತ್ತಾ, ಇಲ್ಲ ನಾನೇ ಮಾಡ್ಲಾ : ಡಿಸಿ ಗರಂ...

ರಸೀದಿ ಹಾಗೂ ದಾಖಲೆಯನ್ನು ಗಮನಿಸಿದ ಜಿಲ್ಲಾಧಿಕಾರಿಗಳು, ರಕ್ತಪರೀಕ್ಷೆಗೆ ಪಾವತಿಸಿಕೊಂಡ ನಗದು ರಸೀದಿಯಲ್ಲಿ ಪಾವತಿಸಕೊಂಡಿರುವವರ ಸಹಿ ಇಲ್ಲದೆ, ಹಾಗೆಯೇ ಕಟ್ಟಿಸಿಕೊಂಡಿರುವುದಕ್ಕೆ ಜಿಲ್ಲಾ ಸರ್ಜನ್‌ ವಿರುದ್ಧ ತೀವ್ರ ಬೇಸರ ವ್ಯಕ್ತಪಡಿಸಿದರು. ಜೊತೆಗೆ ಬಿಪಿಎಲ್‌ ಕಾರ್ಡ್‌ದಾರರಿಗೆ ಉಚಿತವಾಗಿ ರಕ್ತಪರೀಕ್ಷೆ ಮಾಡಿಕೊಡಬೇಕು. ಆದರೆ, ಹಣ ಏಕೆ ಪಡೆದುಕೊಳ್ಳುತ್ತೀರಿ, ದಾಖಲಾತಿ ಪತ್ರದಲ್ಲೇ ಬಿಪಿಎಲ್‌ ಕಾರ್ಡ್‌ ಎಂದು ನಮೂದಿಸಿ ಜೊತೆಗೆ ಬಿಪಿಎಲ್‌ ಕಾರ್ಡ್‌ದಾರರಿಗೆ ರಕ್ತಪರೀಕ್ಷೆ ಉಚಿತ ಎಂದು ನಾಮಫಲಕವನ್ನು ಕಡ್ಡಾಯವಾಗಿ ಅಂಟಿಸಿ ಎಂದು ಸೂಚನೆ ನೀಡಿದರು.

ನಾವಿರೋದೆ ಹೀಗೆ ಕಣ್ರಿ: ಬೇಡಿಕೆ-ಬೆದರಿಕೆಯ ಹಿಂದಿನ ಸೀಕ್ರೆಟ್ ಬಿಚ್ಚಿಟ್ಟ ವಚನಾನಂದ ಸ್ವಾಮಿ..

ಕೈ-ಕಾಲು ಮುರಿತ, ಸೇರಿ ಸಣ್ಣಪುಟ್ಟಸಮಸ್ಯೆಗಳಿಗೂ ಮಣಿಪಾಲ್‌ ಆಸ್ಪತ್ರೆಗೆ ತೆರಳುವಂತೆ ಸಲಹೆ ನೀಡುತ್ತಿರುವ ಜಿಲ್ಲಾಸ್ಪತ್ರೆ ವೈದ್ಯರ ವರ್ತನೆಗೆ ಜಿಲ್ಲಾಧಿಕಾರಿಗಳು ಒಂದು ಹಂತದಲ್ಲಿ ಸಿಟ್ಟಿಗೆದ್ದರು. ನಾಯಕನಹಟ್ಟಿಹೋಬಳಿ ಮಲ್ಲೂರಹಳ್ಳಿಯ ಮೌರ್ಯ ಎಂಬುವರು ಕಳೆದ 15 ದಿನಗಳ ಹಿಂದೆ ಆಟ ಆಡುವಾಗ ಆಯತಪ್ಪಿ ಕೆಳಗೆ ಬಿದ್ದಿದ್ದರಿಂದ ಬಲಗಾಲು ಬಾವು ಬಂದಿದ್ದಕ್ಕೆ ಚಿಕಿತ್ಸೆಗೆಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಎಕ್ಸ್‌-ರೇಯಲ್ಲಿ ಯಾವುದೇ ದೋಷವಿಲ್ಲ ಎಂದು ವೈದ್ಯರು ಮಾತ್ರೆ ನೀಡಿ ಕಳಿಸಿದ್ದರು. ಆದರೆ, 15 ದಿನಗಳಾದರೂ ಕಾಲಿನ ಬಾವು ಕಡಿಮೆ ಆಗದ್ದಕ್ಕೆ ಶುಕ್ರವಾರ ಮತ್ತೆ ಜಿಲ್ಲಾಸ್ಪತ್ರೆಗೆ ಆಗಮಿಸಿ ವೈದ್ಯರ ಬಳಿ ವಿಚಾರಿಸಿದಾಗ ಇಲ್ಲಿ ಆಗುವುದಿಲ್ಲ. ದಾವಣಗೆರೆ, ಇಲ್ಲವೇ ಮಣಿಪಾಲ ಆಸ್ಪತ್ರೆ ಹೋಗಿ ಎಂದು ಸೂಚಿಸಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಬಳಿ ಮೌರ್ಯ ತಂದೆ ದುರುಗೇಶ ಅಲವತ್ತುಗೊಂಡರು. ವೈದ್ಯರ ಕರೆಯಿಸಿದ ಜಿಲ್ಲಾಧಿಕಾರಿಗಳು, ಮತ್ತೊಮ್ಮೆ ಪೂರ್ಣ ಪ್ರಮಾಣದಲ್ಲಿ ಪರೀಕ್ಷಿಸಿ ಸಲಹೆ, ಸೂಚನೆ ನೀಡಬೇಕೆಂದು ತಾಕೀತು ಮಾಡಿದರು.

ಕೇವಲ ಕೈ, ಕಾಲು ಮುರಿದರೆ ಮಣಿಪಾಲಕ್ಕೆ ತೆರಳಿ ಎಂದು ಹೇಳುವುದು ಸರಿಯಲ್ಲ. ಜಿಲ್ಲಾಸ್ಪತ್ರೆಯಲ್ಲೇ ತಜ್ಞ ವೈದ್ಯರಿದ್ದಾರೆ. ಆದರೆ, ಅವರ ಕಾರ್ಯವೈಖರಿ ಸರಿ ಇಲ್ಲ. ರೋಗಿಗಳೊಂದಿಗೆ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಸೌಜನ್ಯದಿಂದ ವರ್ತಿಸಬೇಕು. ಅವರ ಕಷ್ಟಗಳಿಗೆ ಸ್ಪಂದಿಸಬೇಕು. ಮತ್ತೊಮ್ಮೆ ಇಂತಹ ಘಟನೆ ಮರುಕಳಿಸಬಾರದು ಎಂದು ಎಚ್ಚರಿಸಿದರು.

ಜಿಲ್ಲಾಸ್ಪತ್ರೆಯಲ್ಲಿ ಸಾಕಷ್ಟುಉತ್ತಮ ಸೌಲಭ್ಯವಿದೆ. ಆದರೆ, ಅದರ ಸದ್ಬಳಕೆಯಾಗಬೇಕಿದೆ. ರೇಡಿಯಾಲಜಿಸ್ಟ್‌, ಸಿಟಿಸ್ಕಾ್ಯನ್‌ ಉಪಕರಣಗಳ ಬಳಕೆಗೆ ತಜ್ಞರ ಕೊರತೆ ಇದೆ. ಶೀಘ್ರದಲ್ಲೇ ಮತ್ತೊಮ್ಮೆ ಹೆಚ್ಚಿನ ಪ್ರಚಾರ ನೀಡಿ, ಜಿಲ್ಲಾಸ್ಪತ್ರೆಯಲ್ಲಿ ಸಾರ್ವಜನಿಕರ ಕುಂದು, ಕೊರತೆ ಆಲಿಸಲಾಗುವುದು ಎಂದ ಜಿಲ್ಲಾಧಿಕಾರಿಗಳು, ಸರ್ಕಾರಿ ಯೋಜನೆಯಲ್ಲಿ ಎಂಒಯುು ಆಧಾರದಲ್ಲಿ ಖಾಸಗಿಯವರಿಂದ ಸೇವೆ ಪಡೆಯಲು ಅವಕಾಶವಿದೆ. ಇದರ ಬಗ್ಗೆ ಜಿಲ್ಲಾ ಶಸ್ತ್ರಚಿಕಿತ್ಸಕರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಜಿಲ್ಲಾ ಸರ್ಜನ್‌ ಡಾ.ಎಚ್‌.ಜೆ.ಬಸವರಾಜಪ್ಪ, ಡಿಎಚ್‌ಒ ಡಾ.ಸಿ.ಎಲ್‌.ಪಾಲಾಕ್ಷ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.