ಚಿತ್ರದುರ್ಗ(ಏ.20): ಕೋವಿಡ್‌ 19 ವೈರಸ್‌ ಸೋಂಕು ಪೀಡಿತ ರಾಜ್ಯಗಳು ಹಾಗೂ ಜಿಲ್ಲೆಗಳಲ್ಲಿ ಲಾರಿಗಳ ಚಾಲನೆ ಮಾಡುವಾಗ ಎಚ್ಚರವಿರಲಿ. ತುಸು ಯಾಮಾರಿದರೆ ಚಾಲಕರು, ಕ್ಲೀನರ್‌ಗಳ ಕುಟುಂಬಗಳು ತೊಂದರೆಗೆ ಸಿಲುಕುವ ಸಾಧ್ಯತೆಗಳಿವೆ ಎಂದು ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಎಚ್ಚರಿಕೆ ನೀಡಿದ್ದಾರೆ.

ಸೋಂಕು ಹರಡದಂತೆ ತಡೆಗಟ್ಟುವ ಸಲುವಾಗಿ ಎಲ್ಲೆಡೆ ಲಾಕ್‌ಡೌನ್‌ ಜಾರಿಯಲ್ಲಿದೆ. ಎಲ್ಲ ಸರಕು ಸಾಗಾಣಿಕೆ ವಾಹನಗಳು, ಕೃಷಿ ಉತ್ಪನ್ನಗಳು, ತರಕಾರಿ, ಹಣ್ಣುಗಳ ಸಾಗಾಟ ವಾಹನಗಳ ಸಂಚಾರಕ್ಕೆ ಸದ್ಯ ಯಾವುದೇ ಅಡೆ ತಡೆ ಇಲ್ಲ. ಆದರೆ ವೈದ್ಯಕೀಯ ಕಾರಣಗಳೂ ಸೇರಿದಂತೆ ತುರ್ತು ಸಂದರ್ಭಗಳಿಗಾಗಿ ವಾಹನಗಳ ಸಂಚಾರಕ್ಕೆ ಅನುಮತಿಯೊಂದಿಗೆ ಅವಕಾಶ ಮಾಡಿಕೊಡಲಾಗಿದೆ. ನೆರೆ ಹೊರೆಯ ರಾಜ್ಯಗಳು ಹಾಗೂ ಹಲವು ಜಿಲ್ಲೆಗಳಲ್ಲಿ ಕೋವಿಡ್‌ 19 ವೈರಸ್‌ ಸೋಂಕು ವ್ಯಾಪಕವಾಗಿದೆ.

ಚಿತ್ರದುರ್ಗದ ವಿದ್ಯಾರ್ಥಿಗಳು ಮಧ್ಯಪ್ರದೇಶದಲ್ಲಿ ಲಾಕ್..!

ಉದ್ಯೋಗ ಹಾಗೂ ಆದಾಯಕ್ಕಾಗಿ ವಾಹನ ಚಾಲಕರು, ಕ್ಲೀನರ್‌ಗಳು ಸೋಂಕು ಪೀಡಿತ ರಾಜ್ಯ ಅಥವಾ ಜಿಲ್ಲೆಗಳಿಗೆ ಸಂಚರಿಸುವುದು ಅನಿವಾರ್ಯವಿರುತ್ತದೆ. ಕೆಲವೊಮ್ಮೆ ವೈದ್ಯಕೀಯ ಕಾರಣಗಳಿಗಾಗಿ ಅಥವಾ ಅನುಮತಿಯೊಂದಿಗೆ ವ್ಯಕ್ತಿಗಳನ್ನು ವಾಹನದಲ್ಲಿ ಕರೆದುಕೊಂಡು ಹೋಗುವ ಪರಿಸ್ಥಿತಿ ಇರುತ್ತದೆ. ಹೀಗಾಗಿ ವಾಹನ ಚಾಲಕರು, ಕ್ಲೀನರ್‌ಗಳು ವೈಯಕ್ತಿಕ ಸ್ವಚ್ಛತೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್‌ ಧರಿಸುವಂತಹ ಸುರಕ್ಷತಾ ಕ್ರಮಗಳನ್ನು ತಪ್ಪದೆ ಕೈಗೊಳ್ಳಬೇಕು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇತ್ತೀಚೆಗೆ ವಿಜಯಪುರ ಜಿಲ್ಲೆಯ ಕಾರು ಚಾಲಕನೋರ್ವ ಇಬ್ಬರು ವ್ಯಕ್ತಿಗಳನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ ಬಂದ ಬಳಿಕವೇ ತಾನು ಕರೆದುಕೊಂಡು ಹೋಗಿಬಂದ ವ್ಯಕ್ತಿಗಳಿಗೆ ಸೋಂಕು ದೃಢಪಟ್ಟಿದೆ ಎಂಬುದು ಅರಿವಾಗಿದೆ. ಹೀಗಾಗಿ ತೀವ್ರ ಆತಂಕಕ್ಕೆ ಒಳಗಾಗಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ನಂತರ ಬಂದ ವರದಿಯಲ್ಲಿ ವಾಹನ ಚಾಲಕನಿಗೂ ಸೋಂಕು ಹರಡಿರುವುದು ದೃಢಪಟ್ಟಿದೆ.

ವಾಹನ ಚಾಲಕರು ಸುರಕ್ಷತಾ ಕ್ರಮಗಳ ಜೊತೆಗೆ ಹಿಂಬದಿ ಸೀಟಿನಲ್ಲಿ ಕುಳಿತುಕೊಳ್ಳುವ ವ್ಯಕ್ತಿಗಳ ಸಂಪರ್ಕ ಆಗದ ರೀತಿ ಬಟ್ಟೆಪರದೆ, ಸ್ಕ್ರೀನ್‌ ನೊಂದಿಗೆ ಮುಚ್ಚುವ ವ್ಯವಸ್ಥೆ ಮಾಡಿಕೊಳ್ಳುವುದು ಸೂಕ್ತ. ಪದೇ ಪದೇ ಸೋಪಿನಿಂದ ಕೈ ತೊಳೆದುಕೊಳ್ಳುವುದು, ವಾಹನದ ಡೋರ್‌ ಹ್ಯಾಂಡಲ್‌, ಕಿಟಕಿ ಗ್ಲಾಸ್‌ ಹಾಗೂ ಸಂಪೂರ್ಣ ವಾಹನವನ್ನು ಸೋಂಕು ನಿವಾರಕದಿಂದ ತೊಳೆಯಬೇಕು. ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯದೇ ಇರುವ ಯಾವುದೇ ವ್ಯಕ್ತಿಗಳನ್ನು ವಾಹನದಲ್ಲಿ ಕರೆದುಕೊಂಡು ಹೋಗುವ ಪ್ರಯತ್ನ ಮಾಡಬಾರದು. ಹೆದ್ದಾರಿಗಳ ಅಕ್ಕಪಕ್ಕದಲ್ಲಿ ಡಾಬಾ, ಹೋಟೆಲ್‌ಗಳಲ್ಲಿ ಪಡೆಯುವ ಊಟ, ಉಪಹಾರ, ಕುಡಿಯುವ ನೀರಿನ ಶುದ್ಧತೆ ಹಾಗೂ ಸ್ವಚ್ಛತೆ ಬಗ್ಗೆ ಪರಿಶೀಲಿಸಿಯೇ ಸೇವಿಸಬೇಕು ಎಂದು ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಮನವಿ ಮಾಡಿದ್ದಾರೆ.