Asianet Suvarna News Asianet Suvarna News

ಚಿತ್ರದುರ್ಗ ಸಮಾವೇಶ ಪರಿಶಿಷ್ಟರ ಶಕ್ತಿ ಪ್ರದರ್ಶನಕ್ಕೆ ವೇದಿಕೆ : ಪರಮೇಶ್ವರ್

ಚಿತ್ರದುರ್ಗದಲ್ಲಿ ಜ. 8 ರಂದು ಹಮ್ಮಿಕೊಂಡಿರುವ ಪ.ಜಾತಿ, ಪ.ಪಗಂಡಗಳ ಬೃಹತ್‌ ಐಕ್ಯತಾ ಸಮಾವೇಶ ಪರಿಶಿಷ್ಟರ ಶಕ್ತಿ ಪ್ರದರ್ಶನಕ್ಕೆ ಸೂಕ್ತ ವೇದಿಕೆಯಾಗಿದೆ ಎಂದು ಕೆಪಿಸಿಸಿ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ತಿಳಿಸಿದರು.

Chitradurga Congress Programme organised For Show  Power  Parameshwar snr
Author
First Published Dec 15, 2022, 5:08 AM IST

  ಮೈಸೂರು (ಡಿ. 15):  ಚಿತ್ರದುರ್ಗದಲ್ಲಿ ಜ. 8 ರಂದು ಹಮ್ಮಿಕೊಂಡಿರುವ ಪ.ಜಾತಿ, ಪ.ಪಗಂಡಗಳ ಬೃಹತ್‌ ಐಕ್ಯತಾ ಸಮಾವೇಶ ಪರಿಶಿಷ್ಟರ ಶಕ್ತಿ ಪ್ರದರ್ಶನಕ್ಕೆ ಸೂಕ್ತ ವೇದಿಕೆಯಾಗಿದೆ ಎಂದು ಕೆಪಿಸಿಸಿ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ತಿಳಿಸಿದರು.

ನಗರದ ಕಾಂಗ್ರೆಸ್‌ (Congress) ಕಚೇರಿಯಲ್ಲಿ ಬುಧವಾರ ಐಕ್ಯತಾ ಸಮಾವೇಶದ ಪೂರ್ವಭಾವಿ ಸಭೆಗೆ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ.ಜಾತಿಯ 101, ಪ.ಪಂಗಡದ 52 ಜಾತಿಗಳು (Cast)  ಒಗ್ಗಟ್ಟಿನಿಂದ ತಮ್ಮ ಸಮಸ್ಯೆಯನ್ನು ಕಾನೂನಾತ್ಮಕವಾಗಿ ಬಗೆಹರಿಸಿಕೊಳ್ಳಲು ಈ ಐಕ್ಯತಾ ಸಮಾವೇಶ ಮಾಡಲು ತೀರ್ಮಾನಿಸಿದ್ದೇವೆ. 2011ರ ಜನಗಣತಿ ಅನುಸಾರ ರಾಜ್ಯದಲ್ಲಿ ಪ.ಜಾತಿ, ಪ.ಪಂಗಡದ ಶೇ. 24.1 ಜನರಿದ್ದಾರೆ. 2021ರ ಜನಗಣತಿ ಪ್ರಕಟಗೊಂಡರೆ ಜನಸಂಖ್ಯೆ ಹೆಚ್ಚಾಗಲಿದೆ. ಬೃಹತ್‌ ಪ್ರಮಾಣದ ಜನರ  ಸಮಸ್ಯೆಗಳು ಮುಂದುವರಿದಿವೆ. ಯಾವ ಸಮಸ್ಯೆಗಳು ಬಗೆಹರಿದಿಲ್ಲ ಎಂದರು.

ಈ ಸಮಾವೇಶಕ್ಕೆ 224 ಕ್ಷೇತ್ರಗಳ ಜನರನ್ನು ಆಹ್ವಾನಿಸಿದ್ದೇವೆ. ದಲಿತರ ಸ್ಥಿತಿಗತಿ ಹೇಗಿದೆ? ಸರ್ಕಾರ ಹೇಗೆ ಸ್ಪಂದಿಸುತ್ತಿದೆ ಎಂಬುದನ್ನು ಮನವರಿಕೆ ಮಾಡಿಕೊಡಲಾಗುವುದು. ಸರ್ಕಾರ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‌ ಮಂಡಿಸಬೇಕು. 2018ರ ಕಾಂಗ್ರೆಸ್‌ ಸರ್ಕಾರದ ಕೊನೆಯ ಬಜೆಟ್‌ನಲ್ಲಿ 30 ಸಾವಿರ ಕೋಟಿ ರು. ಅನುದಾನ ನೀಡಲಾಗಿತ್ತು. ಕಳೆದ 3 ವರ್ಷಗಳಿಂದ ಬಜೆಟ್‌ ಅನುದಾನ ಕಡಿತವಾಗಿದೆ. ಬಸವರಾಜ ಬೊಮ್ಮಾಯಿ ಮಂಡಿಸಿದ ಬಜೆಟ್‌ ಗಾತ್ರ . 2.62 ಲಕ್ಷ ಕೋಟಿ. ಈ ಪೈಕಿ ಶೇ. 24.1 ಅಂದರೆ . 42 ಸಾವಿರ ಕೋಟಿ ನೀಡಬೇಕಿತ್ತು. ಆದರೆ . 28 ಸಾವಿರ ಕೋಟಿ ಕಡಿಮೆ ನೀಡಲಾಗಿದೆ ಎಂದು ಅವರು ಹೇಳಿದರು.

ಅಲ್ಲದೇ . 7800 ಕೋಟಿಯನ್ನು ಅನ್ಯ ಉದ್ದೇಶಕ್ಕೆ ಖರ್ಚು ಮಾಡಿದ್ದಾರೆ. ಈ ಅನ್ಯಾಯವನ್ನು ಪ್ರಶ್ನಿಸಿ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗುವುದು.ಎಂದು ಹೇಳಿದರು.

ಕೇಂದ್ರದ ಮಾಜಿ ಸಚಿವ ಕೆ.ಎಚ್‌. ಮುನಿಯಪ್ಪ ಮಾತನಾಡಿ, ಪ.ಜಾತಿ, ಪ.ಪಂಗಡ ಸಮುದಾಯಗಳ ಸಮಾವೇಶ ಐತಿಹಾಸಿಕವಾಗಿ ಹೊರ ಹೊಮ್ಮಲಿದೆ. ಪ.ಜಾತಿಯ ಎಡ, ಬಲ, ಲಂಬಾಣಿ, ಬೋವಿ, ಕೊರಮ ಮೊದಲಾದ ಉಪ ಜಾತಿಗಳ ಜನರು ಭಾಗವಹಿಸುವರು ಎಂದು ಹೇಳಿದರು.

ಮಾಜಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಮಾತನಾಡಿ, ಎಸ್ಸಿ, ಎಸ್ಟಿಸಮುದಾಯಗಳ ಸಮಾವೇಶ ಜಾತಿ ಸಮಾವೇಶ ಅಲ್ಲ. ಬಿಜೆಪಿ ಸರ್ಕಾರಗಳು ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ನಾಶ ಮಾಡಲು ಹೊರಟಿವೆ. ನೂತನ ಶಿಕ್ಷಣ ನೀತಿ ಶೋಷಿತ ಸಮುದಾಯಗಳ ಪಾಲಿಗೆ ನೇಣು ಕುಣಿಕೆಯಾಗಿದೆ ಎಂದು ಆರೋಪಿಸಿದರು.

ಪರಿಶಿಷ್ಟಜಾತಿ, ಪಂಗಡದ ಸಮಾವೇಶದ ಅಧ್ಯಕ್ಷರಾಗಿ ಡಾ.ಜಿ. ಪರಮೇಶ್ವರ್‌, ಸಹ ಅಧ್ಯಕ್ಷರಾಗಿ ಕೆ.ಎಚ್‌. ಮುನಿಯಪ್ಪ, ಸತೀಶ್‌ ಜಾರಕಿಹೊಳಿ, ಆರ್‌. ಧ್ರುವನಾರಾಯಣ, ಪರಮೇಶ್ವರ ನಾಯಕ, ಸ್ವಾಗತ ಸಮಿತಿ ಅಧ್ಯಕ್ಷರಾಗಿ ಡಾ.ಎಚ್‌.ಸಿ. ಮಹದೇವಪ್ಪ, ಸಾರಿಗೆ ಸಮಿತಿ ಶಿವರಾಜ ತಂಗಡಗಿ, ಆಹಾರ ಸಮಿತಿ ಈ. ತುಕಾರಾಂ, ಪ್ರಚಾರ ಸಮಿತಿ ಪರಮೇಶ್ವರನಾಯ್ಕ, ವೇದಿಕೆ ಸಮಿತಿ ಎಚ್‌. ಆಂಜನೇಯ, ಹಣಕಾಸು ಸಮಿತಿ ಅಧ್ಯಕ್ಷರಾಗಿ ಪ್ರಿಯಾಂಕ್‌ ಖರ್ಗೆ ಅವರನ್ನು ನೇಮಿಸಲಾಗಿದೆ. ಈ ಸಮಿತಿಗಳಿಗೆ ಪಕ್ಷದ ಎಲ್ಲ ಮುಖಂಡರನ್ನು ನಿಯೋಜಿಸಲಾಗುತ್ತದೆ ಎಂದು ಅವರು ಹೇಳಿದರು.

ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌. ಧ್ರುವನಾರಾಯಣ, ಶಾಸಕರಾದ ಎಚ್‌.ಪಿ. ಮಂಜುನಾಥ್‌, ಸಿ. ಪುಟ್ಟರಂಗಶೆಟ್ಟಿ, ಡಾ. ಯತೀಂದ್ರ ಸಿದ್ದರಾಮಯ್ಯ, ಅನಿಲ್‌ ಚಿಕ್ಕಮಾದು, ಆರ್‌. ನರೇಂದ್ರ, ಮಾಜಿ ಶಾಸಕಿ ಮಲ್ಲಾಜಮ್ಮ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ. ಪುಷ್ಪಾವತಿ ಅಮರನಾಥ್‌, ಮಾಜಿ ಸಂಸದರಾದ ಚಂದ್ರಪ್ಪ, ಕಾಗಲವಾಡಿ ಶಿವಣ್ಣ, ಮಾಜಿ ಶಾಸಕರಾದ ಎಂ.ಕೆ.ಸೋಮಶೇಖರ್‌, ಕಳಲೆ ಕೇಶವಮೂರ್ತಿ, ಎಸ್‌. ಬಾಲರಾಜು, ಎ.ಆರ್‌. ಕೃಷ್ಣಮೂರ್ತಿ, ಮುಖಂಡರಾದ ಡಿ. ರವಿಶಂಕರ್‌, ಮರಿಸ್ವಾಮಿ, ಚಂದ್ರಮೌಳಿ, ಕೆ. ಮರೀಗೌಡ, ಕೆ. ಹರೀಶ್‌ಗೌಡ, ನಗರ ಕಾಂಗ್ರೆಸ್‌ ಅಧ್ಯಕ್ಷ ಆರ್‌. ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್‌ಕುಮಾರ್‌, ಆರ್‌. ನರೇಂದ್ರ, ಈಶ್ವರ್‌ ಚಕ್ಕಡಿ ಮೊದಲಾದವರು ಇದ್ದರು.

Follow Us:
Download App:
  • android
  • ios