ಚಿತ್ರದುರ್ಗದ ಬಸ್ ನಿಲ್ದಾಣದ ಬಳಿ ಭಾನುವಾರ ಮಧ್ಯಾಹ್ನ ಸಂಭವಿಸಿದ ಭೀಕರ ಅಪಘಾತದಲ್ಲಿ ಖಾಸಗಿ ಬಸ್ ಮತ್ತು ಸರ್ಕಾರಿ ಬಸ್ ನಡುವೆ ಸಿಲುಕಿದ ಆಟೋ ನಜ್ಜುಗುಜ್ಜಾಗಿದೆ. ಐವರು ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಚಿತ್ರದುರ್ಗ (ಆ.05): ನಗರದ ಬಸ್ ನಿಲ್ದಾಣದ ಸಮೀಪ ಭಾನುವಾರ ಮಧ್ಯಾಹ್ನದ ವೇಳೆ ಸಂಭವಿಸಿದ ಅಪಘಾತದಲ್ಲಿ ಐವರು ಗಾಯಗೊಂಡಿರುವ ದುರ್ಘಟನೆ ನಡೆದಿದೆ. ಖಾಸಗಿ ಬಸ್ ಮತ್ತು ಸರ್ಕಾರಿ ಸಾರಿಗೆ ಬಸ್ ನಡುವೆ ಸಿಲುಕಿ ಆಟೋ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಆಟೋದಲ್ಲಿದ್ದ ಐವರು ತೀವ್ರವಾಗಿ ಗಾಯಗೊಂಡಿದ್ದಾರೆ.
ಸಾಮಾನ್ಯವಾಗಿ ಚಿತ್ರದುರ್ಗದ ಬಸ್ ನಿಲ್ದಾಣದ ಮುಂದೆ ಪ್ರತಿದಿನದಂತೆ ಸಂಚಾರ ದಟ್ಟಣೆಯಿತ್ತು. ಈ ವೇಳೆ ಬಸ್ ನಿಲ್ದಾಣದ ಮುಂಭಾಗ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿನ ಹಿಂದೆ ಆಟೋ ಚಾಲಕನೊಬ್ಬ ಪ್ರಯಾಣಿಕರನ್ನು ಕೂರಿಸಿಕೊಂಡು ಹೋಗುತ್ತಿದ್ದನು. ಆದರೆ, ಹಿಂದೆ ಒಂದು ಖಾಸಗಿ ಬಸ್ ಅತಿಯಾದ ವೇಗದಲ್ಲಿ ಬಂದು ಆಟೋಗೆ ಬಸ್ಸಿಗೆ ಡಿಕ್ಕಿಯಾಗಿ ಮುಂದೆ ಸಾಗಿದ ಸಾರಿಗೆ ಬಸ್ಸಿಗೆ ತಾಗುತ್ತದೆ. ಈ ಸಂದರ್ಭ ಆಟೋ ಎರಡು ಬಸ್‌ಗಳ ಮಧ್ಯೆ ಸಿಕ್ಕಿಹಾಕಿಕೊಳ್ಳುತ್ತದೆ. ಅಪಘಾತದ ವಿಡಿಯೋ ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ದಾಖಲಾಗಿದ್ದು, ಇದರ ಆಧಾರದ ಮೇಲೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಐವರು ಕೂಡಲೇ ಸ್ಥಳೀಯರು ಮತ್ತು ಪೊಲೀಸರು ನೆರವಿನಿಂದ ಚಿತ್ರದುರ್ಗದ ಸರ್ಕಾರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಗಾಯಾಳುಗಳಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಸಂಬಂಧ ಚಿತ್ರದುರ್ಗ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಗೆ ಕಾರಣವಾದ ಖಾಸಗಿ ಬಸ್ ಚಾಲಕನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಎರಡೂ ಬಸ್‌ಗಳನ್ನು ವಶಪಡಿಸಿಕೊಂಡು, ಅಪಘಾತದ ಕಾರಣಗಳ ಬಗ್ಗೆ ತನಿಖೆ ಆರಂಭಿಸಿದರು. ಪ್ರಾಥಮಿಕ ತನಿಖೆಯಲ್ಲಿ ಬಸ್‌ಗಳ ಅತಿ ವೇಗ ಮತ್ತು ನಿರ್ಲಕ್ಷ್ಯದಿಂದಾಗಿ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಬಸ್ ನಿಲ್ದಾಣದ ಪ್ರದೇಶದಲ್ಲಿ ವಾಹನಗಳ ನಿರಂತರ ಓಡಾಟ, ನಿಯಂತ್ರಣರಹಿತ ಚಲನೆಯು ಅಪಘಾತಗಳಿಗೆ ಕಾರಣವಾಗುತ್ತಿದ್ದು, ಸ್ಥಳೀಯರು ವಾಹನ ಸಂಚಾರ ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಈ ಭೀಕರ ಡಿಕ್ಕಿಯ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ವೈರಲ್ ಆಗಿವೆ.
