ಚಿತ್ರದುರ್ಗದ ಹಿರಿಯೂರು ಬಳಿ ನಡೆದ ಭೀಕರ ಬಸ್ ಅಗ್ನಿ ದುರಂತದಲ್ಲಿ, ಚಾಲಕ ಸಚಿನ್ ತನ್ನ ಪ್ರಾಣದ ಹಂಗು ತೊರೆದು 45 ಶಾಲಾ ಮಕ್ಕಳನ್ನು ರಕ್ಷಿಸಿದ್ದಾರೆ. ತಲೆಗೆ ಗಾಯವಾದರೂ ಲೆಕ್ಕಿಸದೆ, ಹೊತ್ತಿ ಉರಿಯುತ್ತಿದ್ದ ಇನ್ನೊಂದು ಬಸ್‌ನಲ್ಲಿದ್ದ ಹಲವು ಪ್ರಯಾಣಿಕರನ್ನು ಸಹ ಅವರು ಸಾವಿನ ದವಡೆಯಿಂದ ಪಾರುಮಾಡಿದ್ದಾರೆ.

ಚಿತ್ರದುರ್ಗ (ಡಿ.24): ಚಿತ್ರದುರ್ಗದ ಹಿರಿಯೂರು ಬಳಿ ನಡೆದ ಭೀಕರ ಬಸ್ ಅಗ್ನಿ ದುರಂತದಲ್ಲಿ ಹತ್ತಾರು ಜೀವಗಳು ಬಲಿಯಾಗುತ್ತಿದ್ದಾಗ, ತನ್ನ ಪ್ರಾಣದ ಹಂಗು ತೊರೆದು 45 ಶಾಲಾ ಮಕ್ಕಳು ಸೇರಿದಂತೆ ಹಲವು ಪ್ರಯಾಣಿಕರನ್ನು ರಕ್ಷಿಸಿದ ಸಾಹಸಿ ಚಾಲಕನೊಬ್ಬ 'ರಿಯಲ್ ಹೀರೋ' ಆಗಿ ಹೊರಹೊಮ್ಮಿದ್ದಾರೆ. ಹಾಸನ ಮೂಲದ ಸಚಿನ್ ಎಂಬುವವರೇ ಈ ಭೀಕರ ಕ್ಷಣದಲ್ಲಿ ದೇವರಂತೆ ಬಂದು ನೂರಾರು ಜನರ ಪ್ರಾಣ ಉಳಿಸಿದ ಸಾಹಸಿ.

ನಡೆದಿದ್ದೇನು?

ಬೆಂಗಳೂರಿನ ಟಿ. ದಾಸರಹಳ್ಳಿಯ ಶಾಲೆಯೊಂದರ 45 ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ಯುತ್ತಿದ್ದ ಖಾಸಗಿ ಬಸ್ (KA-51 B-3791) ಅನ್ನು ಸಚಿನ್ ಓಡಿಸುತ್ತಿದ್ದರು. ಚಿತ್ರದುರ್ಗದ ಗೋರ್ಲತ್ತು ಬಳಿ ಸಚಿನ್ ಅವರ ಬಸ್ ಅನ್ನು ಸೀ ಬರ್ಡ್ ಟ್ರಾವೆಲ್ಸ್ ಬಸ್ ಓವರ್ ಟೇಕ್ ಮಾಡಿ ಮುಂದೆ ಸಾಗಿತ್ತು. ಕೆಲವೇ ಕ್ಷಣಗಳಲ್ಲಿ ಎದುರಿನಿಂದ ಬಂದ ಲಾರಿ ಸೀ ಬರ್ಡ್ ಬಸ್‌ಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ. ಇದಾದ ಬಳಿಕ ಸುಮಾರು 50ರಿಂದ 100 ಮೀಟರ್ ದೂರದಲ್ಲಿದ್ದ ಈ ಮಕ್ಕಳನ್ನು ತುಂಬಿದ ಬಸ್ಸನ್ನು ಕೂಡಲೇ ಬೇರೆಡಗೆ ಚಲಾಯಿಸಿಕೊಂಡು ಹೋಗಿದ್ದಾನೆ.

ಸಮಯಪ್ರಜ್ಞೆ ಮೆರೆದ ಸಚಿನ್

ಗೋಕರ್ಣಕ್ಕೆ ಹೊರಟಿದ್ದ ಸೀ ಬರ್ಡ್ ಬಸ್ ಡಿಕ್ಕಿಯಾಗಿ ಹೊತ್ತಿ ಉರಿಯಲು ಪ್ರಾರಂಭಿಸಿದಾಗ, ಅದರ ಬೆನ್ನ ಹಿಂದೆಯೇ ಇದ್ದ ಸಚಿನ್ ಕೂಡಲೇ ತಮ್ಮ ಬಸ್‌ನ ವೇಗವನ್ನು ನಿಯಂತ್ರಿಸಿದರು. ಆದರೂ ನಿಯಂತ್ರಣ ತಪ್ಪಿ ಸಚಿನ್ ಅವರ ಬಸ್ ಸೀ ಬರ್ಡ್ ಬಸ್‌ನ ಹಿಂಭಾಗಕ್ಕೆ ಲಘುವಾಗಿ ಡಿಕ್ಕಿಯಾಯಿತು. ಆ ಕ್ಷಣದಲ್ಲಿ ಸಚಿನ್ ತಾಳ್ಮೆ ಕಳೆದುಕೊಳ್ಳಲಿಲ್ಲ. ಕೂಡಲೇ ತಮ್ಮ ಬಸ್ ಅನ್ನು ರಸ್ತೆ ಬದಿಗೆ ಸುರಕ್ಷಿತವಾಗಿ ನಿಲ್ಲಿಸಿ, ಮೊದಲು ತಮ್ಮ ಬಸ್‌ನಲ್ಲಿದ್ದ 45 ಶಾಲಾ ಮಕ್ಕಳು ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಂಡರು.

ಗಾಯಗೊಂಡಿದ್ದರೂ ರಕ್ಷಣೆಗೆ ಧಾವಿಸಿದ ಸಾಹಸಿ

ಅಪಘಾತದ ರಭಸಕ್ಕೆ ಸಚಿನ್ ಅವರ ತಲೆಗೂ ಗಂಭೀರ ಗಾಯವಾಗಿ ರಕ್ತ ಸುರಿಯುತ್ತಿತ್ತು. ಆದರೆ ಅವರು ತಮ್ಮ ಗಾಯವನ್ನು ಲೆಕ್ಕಿಸದೆ, ಉರಿಯುತ್ತಿದ್ದ ಸೀ ಬರ್ಡ್ ಬಸ್‌ನತ್ತ ಓಡಿ ಹೋದರು. ಬೆಂಕಿಯ ಕೆನ್ನಾಲಿಗೆಯ ನಡುವೆಯೂ ಹಲವು ಪ್ರಯಾಣಿಕರನ್ನು ಬಸ್‌ನಿಂದ ಹೊರತೆಗೆದು ಸಾವಿನ ದವಡೆಯಿಂದ ರಕ್ಷಿಸಿದರು. ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಅವರು, 'ಆ ಕ್ಷಣದಲ್ಲಿ ಕಣ್ಣೆದುರು ಬೆಂಕಿ ಮಾತ್ರ ಕಾಣುತ್ತಿತ್ತು, ಮಕ್ಕಳನ್ನು ಉಳಿಸುವುದಷ್ಟೇ ನನ್ನ ಗುರಿಯಾಗಿತ್ತು' ಎಂದು ಭೀಕರ ಅನುಭವ ಹಂಚಿಕೊಂಡಿದ್ದಾರೆ. ಸಚಿನ್ ಅವರ ಈ ಅದ್ಭುತ ಸಮಯಪ್ರಜ್ಞೆ ಮತ್ತು ಧೈರ್ಯದಿಂದಾಗಿ 45 ಶಾಲಾ ಮಕ್ಕಳು ಇಂದು ಸುರಕ್ಷಿತವಾಗಿದ್ದಾರೆ.