ಚಿತ್ರದುರ್ಗ- ಆಲಮಟ್ಟಿ ಹೊಸ ರೈಲು ಮಾರ್ಗ ಸಮೀಕ್ಷೆ ವರದಿ ಸಲ್ಲಿಕೆ
ನೈಋುತ್ಯ ರೈಲ್ವೆ ವಲಯದ ಮುಖ್ಯ ಎಂಜಿನಿಯರ್‌ರಿಂದ ರೈಲ್ವೆ ಮಂಡಳಿಗೆ ಸಲ್ಲಿಕೆ
ಕೊಪ್ಪಳ(ಅ.22): ಬೆಂಗಳೂರು ಹಾಗೂ ಸೊಲ್ಲಾಪುರ ರೈಲ್ವೆ ಮಾರ್ಗದ ಅಂತರವನ್ನು ಕಡಿಮೆಗೊಳಿಸುವ ಮಹತ್ವಾಕಾಂಕ್ಷೆಯೊಂದಿಗೆ ರೂಪಿಸಲಾಗುತ್ತಿರುವ ಚಿತ್ರದುರ್ಗ- ಆಲಮಟ್ಟಿ ರೈಲ್ವೆ ಮಾರ್ಗದ ಎಂಜಿನಿಯರಿಂಗ್ ಹಾಗೂ ಪ್ರಾಥಮಿಕ ಸಂಚಾರ ಸಮೀಕ್ಷೆಯ ವರದಿಯನ್ನು ನೈಋುತ್ಯ ರೈಲ್ವೆ ವಲಯದ ಮುಖ್ಯ ಎಂಜಿನಿಯರ್ ಅವರು ರೈಲ್ವೆ ಮಂಡಳಿಗೆ ಸಲ್ಲಿಸಿದ್ದಾರೆ ಎಂದು ಸಂಸದ ಸಂಗಣ್ಣ ಕರಡಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಬೆಂಗಳೂರು ಮತ್ತು ಸೊಲ್ಲಾಪುರ ರೈಲು ಮಾರ್ಗದಲ್ಲಿ ಬಹಳಷ್ಟುಅಂತರವನ್ನು ಕಡಿಮೆ ಮಾಡುವ ಉದ್ದೇಶದಿಂದ 264 ಕಿಮೀ ಉದ್ದದ ಚಿತ್ರದುರ್ಗ- ಆಲಮಟ್ಟಿರೈಲ್ವೆ ಮಾರ್ಗದ ಎಂಜಿನಿಯರಿಂಗ್ ಮತ್ತು ಸಮೀಕ್ಷಾ ಕಾರ್ಯವನ್ನು ನೈಋುತ್ಯ ವಲಯ ಕೈಗೊಂಡಿತ್ತು. ಈಗ ಸಮೀಕ್ಷೆ ಪೂರ್ಣಗೊಂಡಿದ್ದು, ಪ್ರತಿ ಕಿಮೀ ರೈಲು ಮಾರ್ಗ ನಿರ್ಮಾಣಕ್ಕೆ ತಲಾ .30.11 ಕೋಟಿ ವೆಚ್ಚದ ಅಂದಾಜಿನ ಪ್ರಕಾರ ಒಟ್ಟು .8431.44 ಕೋಟಿ ಅಂದಾಜು ವೆಚ್ಚದೊಂದಿಗೆ ರೈಲ್ವೆ ಮಂಡಳಿಗೆ ಸಲ್ಲಿಸಲಾಗಿದೆ.
ಕೆಲವೇ ದಿನಗಳಲ್ಲಿ ಕಾಶಿ ದರ್ಶನ್ ರೈಲು ಆರಂಭ: ಸಚಿವೆ ಶಶಿಕಲಾ ಜೊಲ್ಲೆ
ಹೊಸ ಮಾರ್ಗವು ಚಿತ್ರದುರ್ಗ, ವಿಜಯನಗರ, ಕೊಪ್ಪಳ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳ ಪ್ರಮುಖ ಸ್ಥಳಗಳಾದ ಹೊಸಹಳ್ಳಿ, ಕೂಡ್ಲಿಗಿ, ಕೊಪ್ಪಳ, ಕುಷ್ಟಗಿ, ಹುನಗುಂದ ಹಾಗೂ ಕೂಡಲಸಂಗಮ ಮೂಲಕ ಹಾಯ್ದು ಹೋಗಲಿದೆ. ಪ್ರಸ್ತುತ ಇರುವ 13.5 ಕಿಮೀ ಮಾರ್ಗವನ್ನೂ ಕೂಡ ಬಳಸಿಕೊಳ್ಳಲಿದೆ. 1397 ಹೆಕ್ಟೇರ್ ಒಣಭೂಮಿ, 644.88 ಹೆಕ್ಟೇರ್ ನೀರಾವರಿ ಮತ್ತು 107.48 ಹೆಕ್ಟೇರ್ ನಗರ ಪ್ರದೇಶದ ಭೂಮಿ ಸೇರಿ ಒಟ್ಟು 2149.36 ಹೆಕ್ಟೇರ್ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕಾಗುತ್ತದೆ.
ಭರವಸೆ:
ಬಹುನಿರೀಕ್ಷಿತ ಚಿತ್ರದುರ್ಗ- ಆಲಮಟ್ಟಿರೈಲು ಮಾರ್ಗಕ್ಕೆ ಕೇಂದ್ರ ಸರ್ಕಾರದಿಂದ ಅಗತ್ಯ ನೆರವು ಸಿಗುವ ಭರವಸೆಯನ್ನು ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಖಾತೆ ರಾಜ್ಯ ಸಚಿವ ಎ. ನಾರಾಯಣಸ್ವಾಮಿ, ಸಂಸದರಾದ ವೈ. ದೇವೇಂದ್ರಪ್ಪ, ಪಿ.ಸಿ. ಗದ್ದಿಗೌಡರ, ರಮೇಶ ಜಿಗಜಿಣಗಿ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಜನರ ಮಹತ್ವದ ಬೇಡಿಕೆಯಾಗಿರುವ ಈ ರೈಲು ಮಾರ್ಗ ನಿರ್ಮಾಣದಿಂದ ಸಾರಿಗೆ, ಸಂಪರ್ಕ ಕ್ಷೇತ್ರದಲ್ಲಿ ದೊಡ್ಡ ಸುಧಾರಣೆಯಾಗಲಿದೆ. ಮುಂಬರುವ ಕೇಂದ್ರ ಬಜೆಟ್‌ನಲ್ಲಿ ಅಗತ್ಯ ಅನುದಾನ ಲಭ್ಯವಾಗಲಿ ಎಂಬುದು ಈ ಭಾಗದ ಜನರ ಆಶಯವಾಗಿದೆ.