18, 19 ರಂದು ಜಗನ್ಮೋಹನ ಅರಮನೆಯಲ್ಲಿ ಮಕ್ಕಳ ದಸರಾ

ಮಹಿಳಾ ಹಾಗೂ ಮಕ್ಕಳ ದಸರಾ ಉಪ ಸಮಿತಿ ವತಿಯಿಂದ ಅ.18 ಮತ್ತು 19 ರಂದು ಜಗನ್ಮೋಹನ ಅರಮನೆಯಲ್ಲಿ ಮಕ್ಕಳ ದಸರಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಹಾಗೂ ಮಹಿಳಾ ಹಾಗೂ ಮಕ್ಕಳ ದಸರಾ ಉಪ ಸಮಿತಿಯ ಕಾರ್ಯದರ್ಶಿ ಎಚ್.ಕೆ. ಪಾಂಡು ತಿಳಿಸಿದರು.

Childrens Dussehra at Jaganmohan Palace on 18th and 19th snr

 ಮೈಸೂರು : ಮಹಿಳಾ ಹಾಗೂ ಮಕ್ಕಳ ದಸರಾ ಉಪ ಸಮಿತಿ ವತಿಯಿಂದ ಅ.18 ಮತ್ತು 19 ರಂದು ಜಗನ್ಮೋಹನ ಅರಮನೆಯಲ್ಲಿ ಮಕ್ಕಳ ದಸರಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಹಾಗೂ ಮಹಿಳಾ ಹಾಗೂ ಮಕ್ಕಳ ದಸರಾ ಉಪ ಸಮಿತಿಯ ಕಾರ್ಯದರ್ಶಿ ಎಚ್.ಕೆ. ಪಾಂಡು ತಿಳಿಸಿದರು.

ಅ.18ರ ಬೆಳಗ್ಗೆ 10.30ಕ್ಕೆ ಮಕ್ಕಳ ದಸರಾವನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಉದ್ಘಾಟಿಸುವರು. ಶಾಸಕ ಕೆ. ಹರೀಶ್ ಗೌಡ ಅಧ್ಯಕ್ಷತೆ ವಹಿಸುವರು. ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು, ಅಧಿಕಾರಿಗಳು ಭಾಗವಹಿಸುವರು ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಹಲವಾರು ಕಾರ್ಯಕ್ರಮಗಳ ಮೂಲಕ ಎರಡು ದಿನಗಳ ಕಾಲ ಶಾಲಾ ಮಕ್ಕಳಿಗೆ ವೇದಿಕೆಯನ್ನು ಕಲ್ಪಿಸಲಾಗುವುದು. ಶಾಲಾ ಮಕ್ಕಳಿಗಾಗಿ ಆಶುಭಾಷಣ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆ, ವಿವಿಧ ವೇಷಭೂಷಣ ಸ್ಪರ್ಧೆ, ಸಾಂಸ್ಕೃತಿಕ ನೃತ್ಯ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಅಲ್ಲದೆ, ಖ್ಯಾತ ಕಲಾವಿದರಿಂದ ಸುಗಮ ಸಂಗೀತ ಕಾರ್ಯಕ್ರಮ, ಮಾತನಾಡುವ ಗೊಂಬೆ, ಶೈಕ್ಷಣಿಕ ನಾಟಕ ಪ್ರದರ್ಶನ, ಯೋಗ ನೃತ್ಯ ಜೊತೆಗೆ ದೇಸಿ ಆಟಗಳನ್ನು ಆಯೋಜಿಸಲಾಗಿದೆ ಎಂದು ಅವರು ವಿವರಿಸಿದರು.

ಶೈಕ್ಷಣಿಕ ವಸ್ತು ಪ್ರದರ್ಶನವನ್ನು ಹಮ್ಮಿಕೊಂಡಿದ್ದು, ಇದರಲ್ಲಿ ಬುಡಕಟ್ಟು ಸಂಸ್ಕೃತಿ ಮತ್ತು ಅರಣ್ಯ ಉತ್ಪನ್ನಗಳು, ಪರಿಸರ ಸಂರಕ್ಷಣೆ, ಮೈಸೂರಿನ ಪ್ರೇಕ್ಷಣೀಯ ಸ್ಥಳಗಳು, ಆರೋಗ್ಯ ಮತ್ತು ಪೌಷ್ಟಿಕಾಂಶ, ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ವಿಶೇಷವಾಗಿ ಚಂದ್ರಯಾನ ಹಾಗೂ ಆದಿತ್ಯಯಾನ ಕುರಿತಾದ ವಿಶೇಷ ಪ್ರದರ್ಶನ, ಶಿಕ್ಷಣದಲ್ಲಿ ರಂಗ ಕಲೆ, ಮೈಸೂರು ದಸರಾ ಪರಂಪರೆಯ ವಿವಿಧ ಪ್ರದರ್ಶನ ಆಯೋಜಿಸಲಾಗಿದೆ ಎಂದರು.

ಮಕ್ಕಳ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಸಂಗೀತ ಹಾಗೂ ಕ್ರೀಡಾ ವಿಭಾಗದಲ್ಲಿ ಹೆಸರು ಮಾಡಿದ ಬೆಸ್ಟ್ ಎಂಟರ್ಟೈನರ್ ಸರಿಗಮಪ ಸೀಸನ್ 19ರ ಸ್ಪರ್ಧಿ ದಿಯಾ ಹೆಗಡೆ ಮತ್ತು ಪ್ರಗತಿ ಬಡಗೇರ್, ರಾಜ್ಯಮಟ್ಟದ ಸೋಲೊ ಡ್ಯಾನ್ಸ್ ವಿಜೇತ ಜಿ.ಎಂ. ಗಂಗಾಧರ್, ಖೋ- ಖೋ ರಾಷ್ಟ್ರೀಯ ಕ್ರೀಡಾಪಟು ಮಾನಸ ಅವರು ಮಕ್ಕಳ ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ಮಹಿಳಾ ಹಾಗೂ ಮಕ್ಕಳ ದಸರಾ ಉಪ ಸಮಿತಿ ಸದಸ್ಯರಾದ ಉದಯಕುಮಾರ್, ದೇವರಾಜು, ಸೋಮೇಗೌಡ ಇದ್ದರು.

ಸಾಂಸ್ಕೃತಿಕ ಕಾರ್ಯಕ್ರಮ

  ಮೈಸೂರು :  ದಸರಾ ಅಂಗವಾಗಿ ಸಾಂಸ್ಕೃತಿಕ ಉಪ ಸಮಿತಿ ವತಿಯಿಂದ ಅ.15 ರಿಂದ 23 ರವರೆಗೆ ಅರಮನೆ ಮುಂಭಾಗದ ವೇದಿಕೆ ಸೇರಿದಂತೆ ನಗರದೆಲ್ಲೆಡೆ 10 ಹಾಗೂ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನ ಆವರಣದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿಪಂ ಸಿಇಒ ಕೆ.ಎಂ. ಗಾಯತ್ರಿ ತಿಳಿಸಿದರು.

ಮೈಸೂರುನ ಅರಮನೆ ಮಂಡಳಿ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.15ರ ಸಂಜೆ 6ಕ್ಕೆ ಅರಮನೆ ಮುಂಭಾಗದ ವೇದಿಕೆಯಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಹೇಳಿದರು.

ಅರಮನೆ ವೇದಿಕೆ ಕಾರ್ಯಕ್ರಮದ ಕಲಾವಿದರನ್ನು ಆಯ್ಕೆ ಮಾಡಲಾಗಿದ್ದು, ಈ ಬಾರಿ ಸಾಕಷ್ಟು ಅರ್ಜಿಗಳು ಬಂದಿರುವ ಕಾರಣ ಉತ್ತಮ ತಂಡಗಳನ್ನು ಆಯ್ಕೆ ಮಾಡಿ ಎರಡು ದಿನಗಳಲ್ಲಿ ಉಳಿದ ವೇದಿಕೆ ಕಾರ್ಯಕ್ರಮಗಳ ಕಲಾವಿದರ ಆಯ್ಕೆ ನಡೆಯಲಿದೆ ಎಂದರು.

ನಾಟಕಕ್ಕೆ 468, ಸಂಗೀತ 920, ಜನಪದ 340, ನೃತ್ಯ 692, ಹರಿಕಥೆ 18, ಸೋಬಾನೆ ಪದ 37, ವಾದ್ಯಸಂಗೀತ 265, ತೊಗಲುಗೊಂಬೆ 10, ಜಾದೂ 5, ನಿರೂಪಣೆ 48 ಸೇರಿದಂತೆ ಒಟ್ಟು 2803 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಅವರು ತಿಳಿಸಿದರು.

252 ಕಲಾತಂಡಗಳಿಗೆ ಅವಕಾಶ

ನವರಾತ್ರಿಯವಲ್ಲಿ 9 ದಿನ ಜಗನ್ಮೋಹನ ಅರಮನೆ, ಕಲಾಮಂದಿರ, ಗಾನಭಾರತಿ, ನಾದಬ್ರಹ್ಮಸಂಗೀತ ಸಭಾ, ಚಿಕ್ಕಗಡಿಯಾರ ಮತ್ತು ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯ ಆವರಣದಲ್ಲಿ ಶಾಸ್ತ್ರೀಯ ಸಂಗೀತ, ಶಾಸ್ತ್ರೀಯ ನೃತ್ಯ, ನೃತ್ಯರೂಪಕ, ಭರತನಾಟ್ಯ, ಸುಗಮ ಸಂಗೀತ, ನಾದಸ್ವರ, ಸ್ಯಾಕ್ಸೋಫೋನ್, ವೀಣಾವಾದನ, ಸೋಬಾನೆ ಪದಗಳು, ಭಕ್ತಿಗೀತೆಗಳು, ಸಾಂಪ್ರದಾಯಿಕ ಗೀತೆಗಳು, ತತ್ತ್ವ ಪದಗಳು, ಹರಿಕಥೆ, ಜನಪದ ಗಾಯನ, ವಾದ್ಯ, ಸೂತ್ರ ಸಲಾಕೆ, ಗೊಂಬೆಯಾಟ, ಯಕ್ಷಗಾನ, ಗೊಂದಳಿ ಪದ, ಡೊಳ್ಳಿನ ಹಾಡು, ಕೋಲಾಟ, ಜಡೆ ಕೋಲಾಟ, ಚಿಟ್ಟಿಮೇಳ, ಕೊಡಗಿನ ಸುಗ್ಗಿ ಕುಣಿತ ಹಾಗೂ ಇತರೆ ಕಾರ್ಯಕ್ರಮಗಳು ಜರುಗಲಿವೆ. ಒಟ್ಟು 252 ಕಲಾತಂಡಗಳ ಸುಮಾರು 4000 ಹೆಚ್ಚು ಕಲಾವಿದರಿಗೆ ಅವಕಾಶ ದೊರೆಯಲಿದೆ ಎಂದು ಅವರು ವಿವರಿಸಿದರು.

Latest Videos
Follow Us:
Download App:
  • android
  • ios