ಧಾರವಾಡ: ತಾಲೂಕಾಡಳಿತ ನಿರ್ಲಕ್ಷ, ಬೀದಿಯಲ್ಲಿ ಹಣ್ಣು, ತರಕಾರಿ ಮಾರುವ ಮಕ್ಕಳು..!
* ಮೂಕಪ್ರೇಕ್ಷಕರಂತೆ ನೋಡುತ್ತಿರುವ ಆಡಳಿತ ವ್ಯವಸ್ಥೆ
* ಧಾರವಾಡ ಜಿಲ್ಲೆಯ ಅಳ್ನಾವರ ಪಟ್ಟಣದಲ್ಲಿ ನಡೆದ ಘಟನೆ
* ಹ್ಯಾಂಡ್‌ಗ್ಲೌಸ್, ಮಾಸ್ಕ್ ಇಲ್ಲದೆ ವ್ಯಾಪಾರ, ವಹಿವಾಟು ನಡೆಸುತ್ತಿರುವ ವ್ಯಾಪಾರಸ್ಥರು
ಶಶಿಕುಮಾರ ಪತಂಗೆ
ಅಳ್ನಾವರ(ಜೂ.05): ಕೋವಿಡ್-19 3ನೇ ಅಲೆಯು 18 ವರ್ಷದೊಳಗಿನ ಮಕ್ಕಳ ಮೇಲೆಯೇ ಹೆಚ್ಚಿನ ಪರಿಣಾಮ ಬೀರಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದು, ಎಚ್ಚರಿಕೆ ವಹಿಸಲು ಸೂಚಿಸಿದ್ದಾರೆ. ಆದರೆ, ಅಳ್ನಾವರ ತಾಲೂಕು ಆಡಳಿತ ಮಾತ್ರ ಮಕ್ಕಳನ್ನು ನಿರ್ಲಕ್ಷಿಸಿದೆ.
ನಿತ್ಯವೂ ಕಣ್ಣೆದುರೆ ಮಕ್ಕಳು ಅಸುರಕ್ಷತೆಯಿಂದ ತರಕಾರಿ, ಹಣ್ಣು ಹಾಗೂ ಇತರೆ ವಸ್ತುಗಳ ವ್ಯಾಪಾರ ಮಾಡುತ್ತಿದ್ದಾರೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಶಾಲೆ- ಕಾಲೇಜುಗಳಿಗೆ ರಜೆ ಇದ್ದು ಯಾವುದೇ ಕೋವಿಡ್ ನಿಯಮ ಪಾಲಿಸದೇ ಪಾಲಕರ ಜೊತೆಗೆ ಮಕ್ಕಳು ವ್ಯಾಪಾರ- ವಹಿವಾಟಿಗೆ ನಿಂತಿದ್ದಾರೆ. ಇದೆಲ್ಲವನ್ನು ಮೂಕಪ್ರೇಕ್ಷಕರಂತೆ ನೋಡುತ್ತಿದೆ ಆಡಳಿತ ವ್ಯವಸ್ಥೆ.
ಇಷ್ಟಕ್ಕೂ ಈ ಚಿಕ್ಕ ವ್ಯಾಪಾರಸ್ಥರು ಬೆಳಗಿನ ಜಾವ ತಹಸೀಲ್ದಾರ್ ಕಚೇರಿ ಎದುರಿನಲ್ಲಿಯೇ ತಿರುಗಾಡುತ್ತಾರೆ. ತಾಲೂಕಿನಾದ್ಯಂತ 18 ವರ್ಷದ ಒಳಗಿನ ಒಟ್ಟು 4 ಮಕ್ಕಳಿಗೆ ಪಾಸಿಟಿವ್ ಬಂದಿದ್ದು, ಅದರಲ್ಲಿಯೂ 4 ವರ್ಷದ ಮಗುವಿಗೂ ಕೊರೋನಾ ಸೋಂಕು ತಗಲಿರುವ ಸುದ್ದಿ ಕೇಳಿ ಇಲ್ಲಿನ ಜನರು ಭಯಬೀತರಾಗಿದ್ದಾರೆ.
ಹುಬ್ಬಳ್ಳಿ: ಒಂದೇ ಕುಟುಂಬದ ನಾಲ್ವರು ಕೊರೋನಾಗೆ ಬಲಿ
ಯಾವುದೇ ಸುರಕ್ಷತೆ ಇಲ್ಲ:
ವ್ಯಾಪಾರಸ್ಥರು ಹ್ಯಾಂಡ್‌ಗ್ಲೌಸ್, ಮಾಸ್ಕ್ ಇಲ್ಲದೆಯೇ ವ್ಯಾಪಾರ, ವಹಿವಾಟು ನಡೆಸುತ್ತಿದ್ದಾರೆ. ಜನರು ತಮ್ಮ ಬಗ್ಗೆ ಅಷ್ಟೇ ಅಲ್ಲದೇ ಮಕ್ಕಳ ಬಗ್ಗೆ ವಿಶೇಷ ಕಾಳಜಿ ತೆಗೆದುಕೊಳ್ಳಬೇಕು ಹಾಗೂ ಸುರಕ್ಷತೆಯನ್ನು ಕಾಪಾಡಿಕೊಳ್ಳಬೇಕು. ತಾಲೂಕು ಆಡಳಿತವು ಕೂಡಲೇ ತರಕಾರಿ, ಹಣ್ಣು ಮಾರಾಟ ಮಾಡುತ್ತಿರುವ ಮಕ್ಕಳ ಮೇಲೆ ಗಮನ ಇಡಬೇಕು. ಈ ಬಗ್ಗೆ ಪಾಲಕರಿಗೆ ಎಚ್ಚರಿಕೆ ನೀಡಬೇಕು ಎಂದು ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ನದೀಮ್ ಕಂಟ್ರ್ಯಾಕ್ಟರ್ ಆಗ್ರಹಿಸಿದರು.
ಮಕ್ಕಳನ್ನು ಹೊರಗಡೆ ಬಿಡದ ಹಾಗೆ ನೋಡಿಕೊಳ್ಳುವುದು ತಂದೆ- ತಾಯಿಗಳ ಜವಾಬ್ದಾರಿ. ಮಕ್ಕಳನ್ನು ಕೆಲಸಕ್ಕೆ ಹಚ್ಚುವುದು ಕಾನೂನು ರೀತಿಯ ಅಪರಾಧವೂ ಹೌದು. ಕೋವಿಡ್ ಸಂಕಷ್ಟದಲ್ಲಿಯೂ ಮಕ್ಕಳನ್ನು ರಕ್ಷಿಸಲು ನಮ್ಮ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರಾಜೇಶ್ವರಿ ಸಾಲಗಟ್ಟಿ ತಿಳಿಸಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona