Asianet Suvarna News Asianet Suvarna News

ಸಮಾಜಕ್ಕೆ ಬಾಲ್ಯ ವಿವಾಹ ಕಂಟಕ: ಸಿಇಒ

ಸಾಂಸಾರಿಕ ಜಂಜಾಟಕ್ಕೆ ಕಾರಣವಾಗುವ ಹಾಗೂ ಸಮಾಜಕ್ಕೆ ಕಂಟಕಪ್ರಾಯವಾಗುವ ಬಾಲ್ಯ ವಿವಾಹದ ತಡೆಗೆ ಪ್ರತಿಯೊಬ್ಬರೂ ಮುಂದಾಗಬೇಕಿದೆ ಎಂದು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಕರೆ ನೀಡಿದರು.

Child marriage thorn in society: CEO snr
Author
First Published Feb 25, 2023, 6:15 AM IST

  ತುಮಕೂರು : ಸಾಂಸಾರಿಕ ಜಂಜಾಟಕ್ಕೆ ಕಾರಣವಾಗುವ ಹಾಗೂ ಸಮಾಜಕ್ಕೆ ಕಂಟಕಪ್ರಾಯವಾಗುವ ಬಾಲ್ಯ ವಿವಾಹದ ತಡೆಗೆ ಪ್ರತಿಯೊಬ್ಬರೂ ಮುಂದಾಗಬೇಕಿದೆ ಎಂದು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಕರೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಬಾಲ ಭವನದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಯುವ ಮೇಳ ಹಾಗೂ ಬಾಲ್ಯ ವಿವಾಹ ತಡೆಗಟ್ಟುವ ಕ್ರಮಗಳ ಕುರಿತ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಾಲ್ಯ ವಿವಾಹಗಳು ಇಡೀ ಕುಟುಂಬದ ನೆಮ್ಮದಿ ಕೆಡಿಸುತ್ತವೆ. ಜೊತೆಗೆ ಅನಾರೋಗ್ಯ ಸಂಬಂಧಿ ಸಮಸ್ಯೆಗಳು ಹೆಚ್ಚುತ್ತವೆ. ಯುವ ಪೀಳಿಗೆ ಇದನ್ನೆಲ್ಲಾ ಹೆಚ್ಚು ಅರ್ಥ ಮಾಡಿಕೊಳ್ಳಬೇಕಿದೆ. ದೇವಸ್ಥಾನಗಳಲ್ಲಿ ನಡೆಯುವ ಮದುವೆಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಅಲ್ಲಿ ಯಾವುದನ್ನೂ ಪರಿಶೀಲಿಸದೆ ಕದ್ದುಮುಚ್ಚಿ ವಿವಾಹ ಮಾಡುವ ಸಂದರ್ಭಗಳಿರುತ್ತವೆ. ಯಾರೇ ಆಗಲಿ ಬಾಲ್ಯ ವಿವಾಹಕ್ಕೆ ಪೋ›ತ್ಸಾಹಿಸಿದರೆ ಅವರೆಲ್ಲರಿಗೂ ಶಿಕ್ಷೆಯಾಗಲಿದೆ. ಕೋವಿಡ್‌ ಸಂದರ್ಭದಲ್ಲಿ ತುಮಕೂರು ಜಿಲ್ಲೆಯಲ್ಲಿ 135 ಬಾಲ್ಯ ವಿವಾಹ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಅಧಿಕಾರಿಗಳು ಅಂತಹ ವಿವಾಹಗಳನ್ನು ತಡೆದಿದ್ದಾರೆ. ಆದರೆ ಗಮನಕ್ಕೆ ಬರದ ಇನ್ನೂ ಸಾಕಷ್ಟುವಿವಾಹಗಳಿರಬಹುದು ಎಂದ ಅವರು, ಓದುವ ಕಾಲದಲ್ಲಿ ಓದದೆ ವಿವಾಹಗಳಿಗೆ ಒಳಗಾದರೆ ಬದುಕೇ ಮೊಟಕಾದಂತೆ ಎಂದು ಎಚ್ಚರಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಂ.ಎಸ್‌.ಶ್ರೀಧರ್‌ ಮಾತನಾಡಿ, ಆಸ್ತಿ ಬೇರೆಯವರ ಪಾಲಾಗುತ್ತದೆ. ಮನೆಯಲ್ಲಿ ಹಿರಿಯರು ಮರಣ ಹೊಂದುವ ಮುನ್ನ ಮದುವೆ ಮಾಡಬೇಕು ಎಂಬುದೂ ಸೇರಿದಂತೆ ಕೆಲವು ಕಾರಣಗಳಿಂದ ಚಿಕ್ಕಮಕ್ಕಳಿಗೆ ವಿವಾಹ ಮಾಡಲಾಗುತ್ತದೆ. ಆದರೆ ಇದರ ದುಷ್ಪರಿಣಾಮಗಳ ಬಗ್ಗೆ ಅರಿವು ಇರುವುದಿಲ್ಲ. ಇಂತಹ ಅರಿವನ್ನು ಶಾಲಾ ಕಾಲೇಜು ವಿದ್ಯಾರ್ಥಿಗಳು ಮೂಡಿಸಬೇಕಿದೆ ಎಂದರು.

ಬೆಂಗಳೂರಿನ ವಕೀಲರು ಹಾಗೂ ಮಕ್ಕಳ ಕಲ್ಯಾಣ ಸಮಿತಿ ಮಾಜಿ ಅಧ್ಯಕ್ಷ ಅಂಜಲಿ ರಾಮಣ್ಣ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿ, ವಿವಾಹ ತಡೆಯುವ ಹಾಗೂ ಆ ಬಗ್ಗೆ ಮಾಹಿತಿ ನೀಡುವ ಧೈರ್ಯವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಬಾಲ್ಯ ವಿವಾಹಗಳನ್ನು ಪ್ರತಿಭಟಿಸಬೇಕು. ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಇದಕ್ಕಾಗಿಯೇ ಇಲಾಖೆಗಳು, ಅಧಿಕಾರಿಗಳಿದ್ದು, ಅವರ ಗಮನಕ್ಕೆ ತರಬೇಕು ಎಂದರು.

ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಕೇಶವರಾಜು ಮಾತನಾಡಿ, ನಮ್ಮ ಜನಸಂಖ್ಯೆಯಲ್ಲಿ ಶೇ.22ರಷ್ಟುಹದಿಹರೆಯದವರಿದ್ದಾರೆ. ಮೌಢ್ಯತೆಯನ್ನು ಆಚರಿಸುವವರು ಹೆಚ್ಚು. ಇತ್ತೀಚಿನ ವರದಿಗಳನ್ನು ಗಮನಿಸಿದಾಗ ಶೇ.15ರಷ್ಟು18ವರ್ಷದ ಒಳಗಿನ ಮಕ್ಕಳಿಗೂ ಎಚ್‌ಐವಿ ಕಾಣಿಸಿಕೊಳ್ಳುತ್ತಿರುವುದು ಅತ್ಯಂತ ಅಪಾಯಕಾರಿ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದರು.

ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗೂ ತಡೆಗಟ್ಟುವ ಕ್ರಮಗಳು ಕುರಿತು ವರದಕ್ಷಿಣೆ ವಿರೋಧಿ ವೇದಿಕೆ ಪ್ರಧಾನ ಕಾರ್ಯದರ್ಶಿ, ವಕೀಲರಾದ ಸಾ.ಚಿ.ರಾಜಕುಮಾರ ಉಪನ್ಯಾಸ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಆರ್‌.ಜೆ.ಪವಿತ್ರ, ಮಹಿಳಾ ಇಲಾಖೆ ನಿರೂಪಣಾಧಿಕಾರಿ ಓಂಕಾರಪ್ಪ, ಮಹಿಳಾ ಠಾಣೆ ಸಬ್‌ ಇನ್ಸ್‌ಪೆಕ್ಟರ್‌ ಸರಸ್ವತಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಯುವ ಮೇಳದ ಅಂಗವಾಗಿ ಬಾಲ ಭವನದ ಆವರಣದಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ಸಂಬಂಧಿಸಿದ ಕಾನೂನು, ರಕ್ಷಣೆ ಕುರಿತ ವಿವಿಧ ಇಲಾಖೆಗಳಿಂದ ಮಳಿಗೆಗಳನ್ನು ತೆರೆಯಲಾಗಿತ್ತು. ಕಾನೂನು ವಿದ್ಯಾರ್ಥಿಗಳು, ವಿವಿಧ ಶಾಲೆಗಳ ವಿದ್ಯಾರ್ಥಿಗಳು ಈ ಮಳಿಗೆಗಳನ್ನು ವೀಕ್ಷಿಸಿ ಮಾಹಿತಿ ಪಡೆದುಕೊಂಡರು.

ಬಾಲ್ಯ ವಿವಾಹ ಪಡೆಗಟ್ಟಿ: ನ್ಯಾ.ನೂರುನ್ನೀಸಾ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶರಾದ ನೂರುನ್ನೀಸಾ ಮಾತನಾಡಿ, ಸಮಾಜದ ಕೆಲವು ವರ್ಗಗಳಲ್ಲಿ ಬಾಲ್ಯ ವಿವಾಹ ಇನ್ನೂ ಅಸ್ತಿತ್ವದಲ್ಲಿದೆ. ಕೆಲವು ಬುಡಕಟ್ಟು ನಿವಾಸಿಗಳು ತಮ್ಮ ಸಂಪ್ರದಾಯವನ್ನು ಉಳಿಸಿಕೊಳ್ಳಲು ಈ ಆಚರಣೆಗಳಿಗೆ ಮುಂದಾಗುತ್ತಾರೆ. ಆದರೆ ಯಾವುದೇ ಸಂಪ್ರದಾಯ ಕಟ್ಟುಪಾಡುಗಳು ಕಾನೂನಿನ ಅಂಕಿತವನ್ನು ಮೀರುವಂತಿಲ್ಲ ಎಂಬುದನ್ನು ಗಮನಿಸಬೇಕಿದೆ. ಮಕ್ಕಳಿಗೆ ತಮ್ಮದೇ ಆದ ಹಕ್ಕುಗಳಿರುತ್ತವೆ. ಬಾಲ್ಯಾವಸ್ಥೆಯಲ್ಲಿ ಆಡಿಕೊಂಡು ಓದುವುದಕ್ಕೆ ಪೋ›ತ್ಸಾಹ ನೀಡಬೇಕು. ಇದಕ್ಕೆ ಬದಲು ಯಾವುದೋ ಕಾರಣ ನೀಡಿ ವಿವಾಹ ಮಾಡಿದರೆ ಗರ್ಭಕೋಶದ ಸಮಸ್ಯೆ ಸೇರಿದಂತೆ ಹಲವು ಅನಾರೋಗ್ಯಗಳು ಎದುರಾಗುತ್ತವೆ. ಹೆಣ್ಣು ಮಕ್ಕಳು ಜೀವನ ಪರ್ಯಂತ ನರಳಬೇಕಾಗುತ್ತದೆ ಎಂದರು.

Follow Us:
Download App:
  • android
  • ios