ಚಿಕ್ಕಮಗಳೂರು: ಮಗನ ಪಬ್‌ಜಿ ಹುಚ್ಚಿಗೆ ಅಮ್ಮ ಬಲಿ
*ಚಿಕ್ಕಮಗಳೂರಿನ ಹಾಗಲಖಾನ್ ಎಸ್ಟೇಟ್‌ನಲ್ಲಿ ಘಟನೆ
*ಪಬ್‌ಜಿ ಆಡುತ್ತಿದ್ದ ಮಗನ ಜೊತೆ ಅಪ್ಪನ ಜಗಳ
*ಪಬ್‌ಜಿಗಾಗಿ ಅಪ್ಪನ ಜೊತೆ ಜಗಳಕ್ಕಿಳಿದಿದ್ದ ಮಗ
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು (ಮೇ 25): ಮಗನಿಗೆ ಅದೊಂದು ಆಟದ ಮೇಲೆ ಮೋಹ. ಅಮ್ಮನಿಗೆ ಮಗನ ಮೇಲೆ ವ್ಯಾಮೋಹ. ಅಪ್ಪನಿಗೆ ಮಗ ದುಡಿಯಬೇಕೆಂಬ ದಾಹ. ಮಗನೋ ಕೈಯಲ್ಲಿ ಮೊಬೈಲ್ ಹಿಡಿದರೆ ಅವನದ್ದೇ ಲೋಕ. ಕೆಲಸಕ್ಕೆ ಹೋದರೂ ಅಲ್ಲಿಯೂ ಆಟದ್ದೇ ಚಿಂತೆ. ಮಗನ ಹಠ-ಚಟಕ್ಕೆ ಅಪ್ಪ ಕೊನೆ ಮೊಳೆ ಹೊಡೆಯಲು ಮುಂದಾದ. ಕೈಯಲ್ಲಿ ಗನ್ ಹಿಡಿದು ಮಗನತ್ತ ಗುರಿ ನೆಟ್ಟಿದ್ದ. ಅಪ್ಪ-ಮಗನ ಕಾದಾಟದಲ್ಲಿ ಬಂದೂಕಿನ ನಳಿಕೆಯಿಂದ ಗುಂಡು ಹಾರಿ ಅಮ್ಮನ ಎದೆ ಸೀಳಿತ್ತು.
ಮಗನ ಪಬ್ ಜೀ ಹುಚ್ಚಿಗೆ ಅಮ್ಮ ಬಲಿ: ಆ ಕುಟುಂಬ ಕಾಫಿ ಎಸ್ಟೇಟ್ನಲ್ಲಿ 20 ವರ್ಷದಿಂದ ನೆಲೆಸಿದೆ. ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಆ ದಂಪತಿಗೆ ಇಬ್ಬರು ಗಂಡು ಮಕ್ಕಳು, ಕಿರಿಯವನಿಗಂತೂ ಯಾವಾಗ್ಲೂ ಪಬ್ಜಿ (PUBG) ಆಟದ ಹುಚ್ಚು. ಕೂತ್ರೂ ನಿತ್ರೂ ಪಬ್ಜಿ ಆಟದಲ್ಲಿ ತಲ್ಲೀನನಾಗುತ್ತಿದ್ದ. ಇದೇ ವಿಚಾರಕ್ಕೆ ತಂದೆಗೂ-ಮಗನಿಗೂ ಆಗಾಗ ಗಲಾಟೆ ಆಗ್ತಿತ್ತು. ನಿನ್ನೆ ರಾತ್ರಿ ಕೂಡ ಕಿರಿ ಮಗ ಮೊಬೈಲ್ನಲ್ಲಿ ಪಬ್ಜಿ ಆಡೋದ್ನ ನೋಡಿದ ತಂದೆಗೆ ಪಿತ್ತ ನೆತ್ತಿಗೇರಿತು, ತೆಗ್ದ್ ಇಡೋ ಮೊಬೈಲ್ನ ಅಂತಾ ಹೇಳಿದ್ರೂ ಕೇಳದಿದ್ದಾಗ ಕೋವಿ ತಗೊಂಡು ಗುಂಡು ಹಾರಿಸಿದ್ದಾನೆ. ಆದ್ರೆ ಆ ಗುಂಡು ತಗುಲಿದ್ದು ಮಗನಿಗಲ್ಲ, ಆತನ ತಾಯಿಗೆ.
ಇದನ್ನೂ ಓದಿ: ಪಬ್‌ಜಿ, ಫ್ರೀ ಫೈರ್ ಗೇಮಿಂಗ್ ಐಡಿ ಖರೀದಿಸಲು ಮನೆಯಿಂದಲೇ ₹17ಲಕ್ಷ ಕದ್ದ ಯುವಕ!
ಚಿಕ್ಕಮಗಳೂರು ತಾಲೂಕಿನ ಹಾಗಲಖಾನ್ ಕಾಫಿ ತೋಟದಲ್ಲಿ ಇಂದು ರ್ದುಘಟನೆಯೊಂದು ನಡೆದು ಹೋಗಿದೆ. ಇಮ್ತಿಯಾಜ್ ಮತ್ತು ಮೃತ ಮೈಮುನಾ ಇಬ್ಬರು ಮಕ್ಕಳೊಂದಿಗೆ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಬಡಪಾಯಿ ಕುಟುಂಬ. ಇಬ್ಬರು ಮಕ್ಕಳಲ್ಲಿ ಕಿರಿಯವನ ಹುಚ್ಚಾಟದಿಂದ ಇಂದು ಇಹಲೋಹ ತ್ಯಜಿಸುವಂತಾಗಿದೆ. ಕಾಫಿತೋಟದ ಲೈನ್ ಮನೆಯೊಂದರಲ್ಲಿ ಕಷ್ಟದಲ್ಲೇ ವಾಸ ಮಾಡುತ್ತಿದ್ದ ಇವರಿಗೆ ಈ ಕಿರಿ ಮಗ ಒಂದು ರೀತಿ ಮಗ್ಗುಲ ಮುಳ್ಳಾಗಿದ್ದ.
ಮನೆಯಲ್ಲಿ ಎಲ್ಲರೂ ದುಡಿತ್ತಿದ್ರೂ ಈ ಶೋಕಿಲಾಲ ಮಾತ್ರ ಶಾಲೆಗೂ ಹೋಗದೇ ಯಾವಾಗಲೂ ಪಬ್ಜಿ-ಪಬ್ಜಿ ಅಂತಾ ಪಬ್ಜಿ ಆಟದ ಘೀಳಿಗೆ ಬಿದ್ದಿದ್ದ. ಯಾವಾಗಲೂ ಮೊಬೈಲ್ ಇಟ್ಕೊಂಡು ಪಬ್ಜಿ ಆಟದಲ್ಲೇ ತಲ್ಲೀನವಾಗುತ್ತಿದ್ದ. ಮಗನಿಗೆ ತಂದೆ ಇಮ್ತಿಯಾಜ್ ಬಿಟ್ಬಿಡೋ. ಇದರಿಂದ ನೀನು ಹಾಳಾಗಾದಲ್ದೇ, ನಮ್ಮ ಮನಸ್ಸನ್ನೂ ಹಾಳು ಮಾಡ್ತೀಯಾ ಅಂತಾ ಅನೇಕ ಬಾರಿ ಬುದ್ದಿವಾದ ಹೇಳಿದ್ದ. ಆದ್ರೆ ಅಪ್ಪನ ಮಾತನ್ನ ಕಿವಿಗೆ ಹಾಕಿಕೊಳ್ಳದ ಈ ಪುಡಾರಿ, ನಿನ್ನೆ ಕೂಡ ತಂದೆ ಕೆಲಸದಿಂದ ಬಂದಾಗ ಪಬ್ಜಿ ಆಟ ಆಡುತ್ತಿದ್ದ. ಇದನ್ನ ನೋಡಿದ ತಂದೆ ಮೊಬೈಲ್ ತೆಗೆದಿಡು ಅಂತಾ ಗದರಿದ್ದಾನೆ.
ನಾನು ನನ್ನ ಮೊಬೈಲ್ನಲ್ಲಿ ಆಟ ಆಡ್ತಿದ್ದೇನೆ ನಿಂಗೇನು ಕಷ್ಟ ಅಂತಾ ತಂದೆಗೆ ಎದುರುತ್ತರ ನೀಡಿದ್ದಾನೆ ಈ ಪಾಪಿ ಮಗ. ಸ್ವಲ್ಪ ಎಣ್ಣೆ ಏರಿಸಿಕೊಂಡು ಬಂದಿದ್ದ ಇಮ್ತಿಯಾಜ್ ಮಗನ ಮಾತಿನಿಂದ ಕೋಪಕೊಂಡು ಮನೆಯಲ್ಲಿ ಮಂಗನ ಹೆದರಿಸಲು ಇಟ್ಟಿದ್ದ ಸಿಂಗಲ್ ಬ್ಯಾರೆಲ್ ಕೋವಿಯನ್ನ ತೆಗೆದುಕೊಂಡಿದ್ದಾನೆ. ಅಯ್ಯೋ. ಹೊಡೆಯಬೇಡಿ, ಅಂತಾ ತಾಯಿ ಮೈಮುನಾ ಮಗನನ್ನ ಕಾಪಾಡಲು ಬಂದಿದ್ದಾಳೆ, ಅಷ್ಟೇ,, ಮಗನಿಗೆ ತಗುಲಬೇಕಿದ್ದ ಗುಂಡು ಅಮ್ಮನ ಎದೆಯನ್ನ ಸೀಳಿದೆ..
ಕುಡಿದ ನಶೆಯಲ್ಲಿ ನಡೆದ ಘಟನೆ: ಬಂದೂಕಿನಿಂದ ಗುಂಡು ಹಾರಿದ ಕೂಡಲೇ ಇಮ್ತಿಯಾಜ್ಗೆ ಕುಡಿದ ನಶೆ ಫುಲ್ ಇಳಿದು ಹೋಗಿದೆ. ಏ ಅಲ್ಲಾ. ಅಂತ ತಲೆ ಮೇಲೆ ಕೈಹೋದ್ದು ಕೂತಿದ್ದಾನೆ. ಪ್ರಕರಣ ಮುಚ್ಚಿ ಹಾಕಲು ತಲೆಗೂ ಸ್ವಲ್ಪ ಬುದ್ದಿ ಕೊಟ್ಟಿದ್ದಾನೆ. ಅವಳು ಮನೆ ಬಾಗಿಲಿಗೆ ಬಂದಳು, ಎಲ್ಲಿಂದಲೋ ಗುಂಡು ಬಂತು ಅಂತ ಪೊಲೀಸರಿಗೂ ದಾರಿ ತಪ್ಪಿಸಲು ಮುಂದಾಗಿದ್ದಾನೆ. ಖಾಕಿಗಳು ಇಂತಹಾ ಎಷ್ಟು ಕೇಸ್ ನೋಡಿರಲ್ಲ. ಪಬ್ಜಿ ಹೀರೋನನ್ನೂ ಕೇಳಿದ್ದಾರೆ.
ಇದನ್ನೂ ಓದಿ: ಪಬ್‌ಜಿ ಆಡಲು ಅಪ್ರಾಪ್ತ ಬಾಲಕನಿಂದ ಹುಸಿ ಬಾಂಬ್ ಕರೆ, 90 ನಿಮಿಷ ರೈಲು ಪರಿಶೀಲಿಸಿದ ಖಾಕಿ
ಅಪ್ಪನಿಗೆ ಪೊಲೀಸ್ ಭಾಷೆಯಲ್ಲಿ ಕೇಳಿದ ಕೂಡಲೇ ಹೌದು ಸ್ವಾಮಿ.. ಘಟನೆಯ ಬಗ್ಗೆ ಪಟಪಟಾ ಅಂತಾ ವಿವರಿಸಿದ್ದಾನೆ. ವಿಷಯ ತಿಳಿದ ಹಿರಿಮಗ ಕೂಡಲೇ ಅಮ್ಮನನ್ನ ಆಸ್ಪತ್ರೆಗೆ ಕರೆತಂದರೂ 10 ಅಡಿ ದೂರದಿಂದ ಸಿಡಿದಿದ್ದ ಚೆರ್ರಿ ಗುಂಡಿಗಳು ಅಮ್ಮನ ಎದೆ ಹೊಕ್ಕಿ ಜೀವ ತೆಗೆದಿದ್ದವು. ಈ ತಂದೆಗೂ ಮಗನನ್ನ ಕೊಲ್ಲುವ ಉದ್ದೇಶ ಇರಲಿಲ್ಲ, ಆದ್ರೆ ಕುಡಿತದ ನಶೆ ಆತನನ್ನ ಕೋಪದ ಕೈಗೆ ಬುದ್ದಿಯನ್ನ ಕೊಡುವ ಹಾಗೆ ಮಾಡಿತ್ತು.
ಒಂದು ಕಡೆ ತಂದೆ ಕುಡಿತದ ಕಿಕ್ ನಿಂದಾಗಿ ಕೊಲೆ ಮಾಡಲು ಮುಂದಾದ್ರೆ, ಇನ್ನೊಂದೆಡೆ ಈ ಪಾಪಿ ಮಗನಿಗೆ ತಂದೆ-ತಾಯಿ ದುಡಿದು ತಂದು ಹಾಕುತ್ತಿದ್ರೂ ಅದರ ಬಗ್ಗೆ ಕಿಂಚಿತ್ತೂ ನೋವಿರಲಿಲ್ಲ. ತಂದೆ-ತಾಯಿ ಇರೋದೇ ನನ್ನ ಸಾಕುವುದಕ್ಕೆ, ನಾನು ಪಬ್ಜಿ ಅಲ್ಲ ಏನೇ ಆಟ ಆಡಿದ್ರೂ ಇವರು ನನ್ನ ರಾಜಕುಮಾರನಂತೆ ಸಾಕಬೇಕು ಅನ್ನೋ ಹುಂಬತನವಿತ್ತು. ಒಟ್ಟಿನಲ್ಲಿ ಪಾಪಿ ಮಗನ ಪಬ್ಜಿಯ ಘೀಳಿಗೆ ಹೆತ್ತಮ್ಮ ಬಲಿಯಾಗಿದ್ದು ಮಾತ್ರ ನಿಜಕ್ಕೂ ದುರಂತ.