ಪ್ರವಾಹ ಪರಿಹಾರಕ್ಕೆ ನೂರಾರು ವಿಘ್ನ: ಸರ್ಕಾರದ ಕಣ್ಣಾಮುಚ್ಚಾಲೆ ಆಟ RTI ಮಾಹಿತಿಯಲ್ಲಿ ಬಹಿರಂಗ

ಮಳೆ ಹಾಗೂ ಪ್ರವಾಹದಿಂದಾಗಿ 2021ರಲ್ಲಿ  ಮನೆ ಕಳೆದುಕೊಂಡಿದ್ದ ಚಿಕ್ಕಮಗಳೂರಿನ ಅನೇಕ ಗ್ರಾಮಗಳ ನಿವಾಸಿಗಳಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಈ ಬಗ್ಗೆ ಆರ್‌ಟಿಐ ಮೂಲಕ ಮಾಹಿತಿ ಹೊರತೆಗೆಯಲಾಗಿದ್ದು, ಸರ್ಕಾರದ ಕಣ್ಣಾಮುಚ್ಚಾಲೆಯಾಟ ಬಯಲಾಗಿದೆ.

chikkamagluru flood victim trouble to get compansation by govt, RTI reveals some back game akb

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 
ಚಿಕ್ಕಮಗಳೂರು : ಅದು 2021ರ ಆಗಸ್ಟ್ ತಿಂಗಳು. ಸುರಿದ ಮಳೆ-ಬಿದ್ದ ಮನೆ ಎರಡಕ್ಕೂ ಲೆಕ್ಕವಿಲ್ಲ. ಅಂದು ಮಳೆಯಿಂದ ಮನೆ ಕಳೆದುಕೊಂಡವರು ಪರಿಹಾರಕ್ಕಾಗಿ ಇಂದಿಗೂ ಸರ್ಕಾರದ ದಾರಿ ಎದುರು ನೋಡುತ್ತಿದ್ದಾರೆ. ಅವರ ಬಳಿ ಎಲ್ಲಾ ದಾಖಲೆಗಳಿವೆ. ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪಾನ್ ಕಾರ್ಡ್. ಅವರು ಅಲ್ಲೆ ವಾಸವಿದ್ರು ಅನ್ನೋದಕ್ಕೂ ದಾಖಲೆಗಳಿವೆ. ಆದ್ರೆ, ಆನ್ಲೈನ್‌ನಲ್ಲಿ ಮಾತ್ರ ದಾಖಲೆಗಳಿಲ್ಲ ಅಂತ ಅವರ ದತ್ತಾಂಶಗಳು ಅಪ್ಲೋಡ್ ಆಗ್ತಿಲ್ಲ. ಅಂದು ಮನೆ-ಮಠ ಕಳೆದುಕೊಂಡವರು ಇರೋಕೆ ಸೂರಿಲ್ಲದೆ  ಇಂದೂ ಕೂಡ ಸಂಕಷ್ಟದಲ್ಲಿದ್ದಾರೆ.


ಮಳೆಯಿಂದ ಮನೆ ಕಳೆದುಕೊಂಡವರಿಗೆ ಇನ್ನು ಬಂದಿಲ್ಲ ಪರಿಹಾರ

ಕಳೆದ ಐದು ವರ್ಷಗಳಿಂದಲೂ ಕಾಫಿನಾಡಿನ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಮಳೆ-ಗಾಳಿಗೆ ಮನೆಗಳು ಕೂಡ ಅಷ್ಟೆ ಪ್ರಮಾಣದಲ್ಲಿ ಕುಸಿದಿವೆ. ಆದ್ರೆ, ಎಲ್ಲರಿಗೂ ಪರಿಹಾರ ಸಿಕ್ಕಿದ್ಯಾ ಎಂಬ ಪ್ರಶ್ನೆ ಈಗ ಬಲವಾಗಿ ಮೂಡಿದೆ. ಯಾಕಂದ್ರೆ, 2021 ರ ಮಳೆಗಾಲದಲ್ಲಿ ಜಿಲ್ಲೆಯಲ್ಲಿ ಮನೆ ಕಳೆದುಕೊಂಡ 148 ಕುಟುಂಬಗಳಿಗೆ ಪರಿಹಾರ ಸಿಕ್ಕಿಲ್ಲ. ಆನ್ಲೈನ್‌ನಲ್ಲಿ ಅಪ್ಡೇಟ್ ಆಗಿಲ್ಲ. ಕಾರಣ ಕೇಳಿದ್ರೆ, ಅಧಿಕಾರಿಗಳು ನಿಮ್ಮ ದಾಖಲೆ ಸರಿ ಇಲ್ಲ ಎಂದಿದ್ದಾರೆ. ಅಧಿಕಾರಿಗಳ ಮಾತು ಕೇಳಿ ಮನೆ ಕಳೆದುಕೊಂಡವರು ಕಂಗಾಲಾಗಿದ್ದಾರೆ. ಮನೆ ಕಳೆದುಕೊಂಡವರೆಲ್ಲಾ ಬಹುತೇಕ ಕೂಲಿಕಾರ್ಮಿಕರೆ. ಅಂದೇ ದುಡಿದು ಅಂದೇ ತಿನ್ನುವವರು. ಅಂದು ಮನೆ ಕಳೆದುಕೊಂಡವರು ಇಂದಿಗೂ ನಿರ್ಗತಿಕರಂತೆ ಬದುಕುತ್ತಿದ್ದಾರೆ. ಈ ಬಗ್ಗೆ ಮನವಿ ಮಾಡಿದ್ದಾರೆ. ದಾಖಲೆಯನ್ನೂ ಕೊಟ್ಟಿದ್ದಾರೆ. ಸರ್ಕಾರ ಮಾತ್ರ ಎಲ್ಲರಿಗೂ ಪರಿಹಾರ ಕೊಟ್ಟಿದ್ದೇವೆ ಎಂದು ಹೇಳುತ್ತೆ. ಆದರೆ, ಆನ್ಲೈನ್‌ನಲ್ಲಿ ಇವರ ಮಾಹಿತಿ ಅಪ್ಡೇಟ್ ಆಗಿಲ್ಲ. ಎರಡು ವರ್ಷದಿಂದ ಪರಿಹಾರವೂ ಬಂದಿಲ್ಲ. ಸರ್ಕಾರದ ಈ ಕಣ್ಣಾಮುಚ್ಚಾಲೆ ಆಟ ಆರ್.ಟಿ.ಐ. ಅರ್ಜಿಯಿಂದ ಬಹಿರಂಗಗೊಂಡಿದೆ.

 
ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸುವ ಎಚ್ಚರಿಕೆ 

148 ಪ್ರಕರಣದಲ್ಲಿ ಹಲವರ ಬಳಿ ಎಲ್ಲಾ ದಾಖಲೆಗಳು ಸರಿ ಇವೆ. ಎಲ್ಲಾ ದಾಖಲೆಗಳನ್ನ ನೀಡಿದ್ದಾರೆ. ಆದರೂ, ದಾಖಲೆಗಳು ಆನ್ಲೈನ್‌ನಲ್ಲಿ ಅಪ್ಡೇಟ್ ಆಗಿಲ್ಲ. ರೇಷನ್ ಕಾರ್ಡ್ ನಂಬರ್, ಆಧಾರ್ ಕಾರ್ಡ್ ನಂಬರ್ ಎಲ್ಲವೂ ನೀಡಿದ್ದಾರೆ. ಸ್ಥಳಕ್ಕೆ ಪಿಡಿಓ, ತಹಶೀಲ್ದಾರ್, ಗ್ರಾಮ ಲೆಕ್ಕಾಧಿಕಾರಿ ಎಲ್ಲರೂ ಭೇಟಿ ನೀಡಿದ್ದಾರೆ. ಅನಾಹುತಗಳ ಬಗ್ಗೆ ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ. ಆದರೂ, ದಾಖಲೆಗಳು ಏಕೆ ಅಪ್ಲೋಡ್ ಆಗ್ತಿಲ್ಲ ಅನ್ನೋದು ಮನೆ ಕಳೆದುಕೊಂಡವರ ಪ್ರಶ್ನೆಯಾಗಿದೆ. ಆರ್.ಟಿ.ಐ. ಕಾರ್ಯಕರ್ತ ಎಲ್ಲಾ ಮಾಹಿತಿ ಕಲೆ ಹಾಕಿದ್ದು ಎಲ್ಲಾ ದಾಖಲೆಗಳಿದ್ದವರದ್ದು ಆನ್ಲೈನ್‌ನಲ್ಲಿ ಅಪ್ಡೇಟ್ ಆಗದಿರೋದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಸರ್ಕಾರ ನೊಂದವರಿಗೆ ನೀಡುವ ನೆರವಿನ ವಿಚಾರದಲ್ಲೂ ಕಣ್ಣಾಮುಚ್ಚಾಲೆ ಆಟ ಆಡ್ತಿದ್ಯಾ ಎಂಬ ಪ್ರಶ್ನೆ ಮೂಡಿದೆ. ಸರ್ಕಾರ ಕೂಡಲೇ ಎಲ್ಲರಿಗೂ ಪರಿಹಾರ ನೀಡಬೇಕು. ಇಲ್ಲವಾದರೆ, ಎಲ್ಲರೂ ಬೆಂಗಳೂರಿನ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸೋದಾಗಿ ಸರ್ಕಾರಕ್ಕೆ  ಸಂತ್ರಸ್ಥರು ಎಚ್ಚರಿಕೆ ನೀಡಿದ್ದಾರೆ. ಒಟ್ಟಾರೆ, ಸರ್ಕಾರ ಮನೆ ಕಳೆದುಕೊಂಡ ಎಲ್ಲರಿಗೂ ಮನೆ ನೀಡಿದ್ದೇವೆ ಅನ್ನುತ್ತೆ. ಕೆಲವರಿಗೆ ಸಿಕ್ಕಿದೆ ನಿಜ. ಮತ್ತೆ ಹಲವರಿಗೆ ಎಲ್ಲಾ ದಾಖಲೆಗಳಿದ್ದರೂ ಸಿಕ್ಕಿಲ್ಲ. ಇದು ಅಧಿಕಾರಿಗಳ ಸಮಸ್ಯೆಯೋ. ಆನ್ಲೈನ್ ಸಮಸ್ಯೆಯೋ ಅಥವ ಸರ್ಕಾರದ್ದೋ ಗೊತ್ತಿಲ್ಲ. ಆದರೆ, ಪರಿಹಾರ ಬರದಿರೋದಂತು ಸತ್ಯ. ಹಾಗಾಗಿ, ಇದು ಉದ್ದೇಶಪೂರ್ವಕವಾಗಿ ಆದ ಸಮಸ್ಯೆಯೋ ಅಥವ ಅರಿವಿಗೆ ಬಾರದೆ ಆದ ಸಮಸ್ಯೆಯೋ ಗೊತ್ತಿಲ್ಲ. ಆದರೆ, ಪರಿಹಾರ ಮಾತ್ರ ಬಂದಿಲ್ಲ. ಹಾಗಾಗಿ, ಸರ್ಕಾರ ಹಾಗೂ ಅಧಿಕಾರಿಗಳು ಕೂಡಲೇ ಇತ್ತ ಗಮನ ಹರಿಸಿ ನೊಂದವರ ನೆರವಿಗೆ ನಿಲ್ಲಬೇಕಾಗಿದೆ.
 

Latest Videos
Follow Us:
Download App:
  • android
  • ios