Sad Reality of Indian Farming: ಹಲವು ತಿಂಗಳ ಕಾಲ ಕಷ್ಟಪಟ್ಟು ಬೆಳೆದ ಈರುಳ್ಳಿಗೆ ರೈತನಿಗೆ ಮಾರುಕಟ್ಟೆಯಲ್ಲಿ ಕೇವಲ 2.50 ರೂಪಾಯಿ ದರ ಸಿಕ್ಕಿದ್ದೆ, ಇದರಿಂದ ದುಃಖವಾದರೂ ತನ್ನ ನೋವನ್ನು ನಗುವಿನ ಹಿಂದೆ ಮರೆಮಾಚಿ ರೈತ ರಶೀದಿ ತೋರಿಸುತ್ತಾ ನಕ್ಕಿದ್ದು ವೀಡಿಯೋ ವೈರಲ್ ಆಗಿದೆ.
ಎಲ್ಲಾ ವಸ್ತುಗಳಿಗೆ ವಸ್ತುಗಳ ನಿರ್ಮಾಣ ವೆಚ್ಚ ಎಂದು ಒಂದಿಷ್ಟು ಹಣವನ್ನು ವಿಧಿಸಲಾಗುತ್ತದೆ. ಆದರೆ ಮನುಷ್ಯರಿಗೆ ಬಹಳ ಅಗತ್ಯವಾಗಿರುವ ಆಹಾರದ ವಿಷಯದಲ್ಲಿ ಅದರಲ್ಲೂ ರೈತರು ಬೆಳೆದಂತಹ ಬೆಳೆಯ ವಿಚಾರದಲ್ಲಿ ನಿರ್ಮಾಣ ವೆಚ್ಚ ನೀಡುವುದಕ್ಕೆ ಯಾರು ಸಿದ್ಧರಿರುವುದಿಲ್ಲ, ಸುಸ್ಥಿರ ಅಥವಾ ಸಮಗ್ರ ಕೃಷಿ ಮಾಡದಿರುವುದು ಇದಕ್ಕೆ ಕಾರಣವಿರಬಹುದು, ಒಬ್ಬ ರೈತ ಈರುಳ್ಳಿ ಬೆಳೆದು ಯಶಸ್ವಿಯಾದರೆ ಅಕ್ಕಪಕ್ಕದವರೂ ಅದೇ ಬೆಳೆಯುತ್ತಾರೆ. ಟೊಮೆಟೋ ಬೆಳೆದರೆ ಉಳಿದವರು ಎಕರೆಗಟ್ಟಲೇ ಅದನ್ನೇ ಬೆಳೆಯುತ್ತಾರೆ. ಎಲ್ಲವನ್ನು ಸ್ವಲ್ಪ ಸ್ವಲ್ಪ ಬೆಳೆದು ಸಮಗ್ರವಾಗಿ ಕೃಷಿ ಮಾಡುವ ಬಗ್ಗೆ ಕೆಲವು ರೈತರಿಗೆ ಅರಿವಿನ ಕೊರತೆಯೋ ಗೊತ್ತಿಲ್ಲ ಅಥವಾ ಪರಿಸರದ ಪ್ರಭಾವದಲ್ಲಿ ಎಲ್ಲವೂ ಬೆಳೆಯನ್ನು ಬೆಳೆಯಲಾಗದೋ ಏನೋ ತಿಳಿಯದು. ಎಲ್ಲರ ಹೊಟ್ಟೆ ತುಂಬಿಸುವ ಅನ್ನದಾತ ಪ್ರತಿ ಬಾರಿಯೂ ಕಣ್ಣೀರಿಡುವಂತಾಗುತ್ತದೆ. ಬರಬಾರದ ಸಮಯದಲ್ಲಿ ಮಳೆ ಅತೀಯಾಗಿ ಸುರಿದರು ರೈತ ಕಂಗಾಲಾಗುತ್ತಾನೆ. ಮಳೆಯೇ ಇಲ್ಲದಿದ್ದರೂ ರೈತ ಸಂಕಷ್ಟಕ್ಕೆ ಸಿಲುಕುತ್ತಾನೆ. ಬೆಳೆಗೆ ಬೆಲೆ ಏರಿದಾಗ ರೈತನ ಬಳಿ ಬೆಳೆಯೇ ಇರುವುದಿಲ್ಲ. ಬೆಳೆ ತುಂಬಿ ತುಳುಕಿದರೆ ಬೆಲೆಯೇ ಇರುವುದಿಲ್ಲ ಅಂತಹ ಸ್ಥಿತಿ ನಮ್ಮ ಬಹುತೇಕ ರೈತರದ್ದಾಗಿದೆ. ಈ ಸಂಕಷ್ಟದ ನಡುವೆಯೂ ರೈತನೋರ್ವ ವಿಷಾದದ ನಗೆ ಬೀರಿ ಒಂದೆರಡು ಮಾತು ಹೇಳಿದ್ದು ಆತನ ವೀಡಿಯೋ ಈಗ ವೈರಲ್ ಆಗಿದೆ. ಹಾಗಿದ್ರೆ ಆತ ಹೇಳಿದ್ದೇನು?
ಕೇವಲ 2.25 ರೂಗೆ ಸೇಲ್ ಆದ ಈರುಳ್ಳಿ: ನೋವಿನಲ್ಲೂ ನಕ್ಕ ರೈತ
ಅಂದಹಾಗೆ ಇದೊಂದು ಮಾರುಕಟ್ಟೆಯಲ್ಲಿ ಸೆರೆಯಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವೀಡಿಯೋ ಆಗಿದೆ. ಈ ವೀಡಿಯೋ ರೈತರ ಬದುಕಿನ ಕಟು ವಾಸ್ತವವನ್ನು ತೆರೆದಿಟ್ಟಿದೆ. india.150crore ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವಿಡಿಯೋ ವೈರಲ್ ಆಗಿದ್ದು, ವೀಡಿಯೋದಲ್ಲಿ ರೈತ ಬೆಳೆದ ಈರುಳ್ಳಿ ಬೆಳೆಯನ್ನು ಈ ಮಾರುಕಟ್ಟೆಯಲ್ಲಿ ಕೇಜಿಗೆ ಕೇವಲ 2 ರೂಪಾಯಿ 50 ಪೈಸೆಗೆ ಖರೀದಿ ಮಾಡಲಾಗಿದೆ. ಖರೀದಿಯ ನಂತರ ಆತನಿಗೆ ರಶೀದಿ ನೀಡಲಾಗಿದ್ದು, ರಶೀದಿಯನ್ನು ಹಿಡಿದ ರೈತ ತನ್ನ ಬೆಳೆಗೆ ಸರಿಯಾದ ಬೆಲೆ ಸಿಗದಿದ್ದರೂ ಆ ನೋವನ್ನು ಹೊರಗೆ ತೋರಿಸದೇ ನಕ್ಕಿದ್ದಾನೆ. ಕ್ಯಾಮರಾ ಮುಂದೆ ತಾನು ಬೆಳೆದ ಈರುಳ್ಳಿಗೆ ಸಿಕ್ಕ ಬೆಲೆಯನ್ನು ಆತ ತೋರಿಸಿ ನಕ್ಕ ರೈತನ ಬಳಿ ಆತನನ್ನು ಕ್ಯಾಮರಾದಲ್ಲಿ ಸೆರೆ ಹಿಡಿದವರು ಹೀಗೆ ಕೇಳಿದ್ದಾರೆ. ನೀವು ಬೆಳೆದ ಬೆಳೆಗೆ ಇಷ್ಟು ಕಡಿಮೆ ಬೆಲೆ ಸಿಕ್ಕರೂ ನಗುತ್ತಿದ್ದೀರಲ್ಲ ಎಂದು ಅವರು ರೈತನನ್ನು ಕೇಳಿದ್ದಾರೆ.
ಆತನ ಮಾತಿಗೆ ಪ್ರತಿಕ್ರಿಯಿಸಿದ ರೈತ ನಗದೇ ಇನ್ನೇನು ಅಳಲೇ ಎಂದು ಕೇಳಿದ್ದಾರೆ. ಈ ಈರುಳ್ಳಿಯನ್ನು ಬೆಳೆಯಲು ಹೊಲದಲ್ಲಿ ಕನಿಷ್ಠ 7 ತಿಂಗಳು ಬೆವರು, ಕಣ್ಣೀರು ಸುರಿಸಿದ್ದೇವೆ. ಈಗ ಇಷ್ಟು ಬೆಲೆ ಸಿಕ್ಕಿದೆ. ಈಗಲೂ ಅಳಬೇಕೆ? ಬೆಲೆಯಂತೂ ಸಿಗಲಿಲ್ಲ, ಕನಿಷ್ಠ ಪಕ್ಷ ನಗುವುದಾದರೂ ನಗೋಣ ಎಂದು ಅವರು ನಗುವಿನ ಹಿಂದೆ ನೋವನ್ನು ಮರೆಮಾಚುತ್ತಾ ವಿಷಾದದಿಂದಲೇ ಹೇಳಿದ್ದಾರೆ. ಈ ವೀಡಿಯೋ ಭಾರತದಲ್ಲಿ ರೈತರ ಶೋಚನೀಯ ಸ್ಥಿತಿಯನ್ನು ತೋರಿಸುತ್ತಿದೆ. ರೈತರು ತಿಂಗಳು ವರ್ಷಗಳ ಕಾಲ ಶ್ರಮಪಟ್ಟು ದುಡಿದ ಬೆಳೆಯನ್ನು ಕೈಗೆ ಸಿಕ್ಕ ಬೆಲೆಗೆ ಮಾರುವಂತಾಗಿದ್ದು ಎಂತಹವರನ್ನು ಭಾವುಕರಾಗಿಸುತ್ತದೆ. ಮಧ್ಯವರ್ತಿಗಳು ರೈತರ ಅಸಹಾಯಕತೆಯ ಲಾಭ ಪಡೆದು ಕ್ಷಣದಲ್ಲಿ ದುಪ್ಪಟ್ಟು ಲಾಭ ಮಾಡುತ್ತಾರೆ. ಇದರಲ್ಲಿ ಬೆಳೆದವನಿಗೂ ಮಾರುವವನಿಗೂ ಕೊಳ್ಳುವವನಿಗೂ ಯಾವುದೇ ಲಾಭ ಸಿಕ್ಕುವುದಿಲ್ಲ. ಎಲ್ಲವೂ ದಲ್ಲಾಳಿಗಳ ಪಾಲಾಗುತ್ತದೆ.
ರೈತನ ಸ್ಥಿತಿ ನೋಡಿ ಭಾವುಕರಾದ ನೆಟ್ಟಿಗರು:
ವೀಡಿಯೋ ನೋಡಿದ ಅನೇಕರು ಭಾವುಕರಾಗಿದ್ದಾರೆ. ನಮಗೆ ಇಲ್ಲಿ 1 ಕೇಜಿ ಈರುಳ್ಳಿ ಕೊಳ್ಳಬೇಕಾದರೆ 60ರಿಂದ 80 ರೂಪಾಯಿ ಕೊಡಬೇಕು ಇಲ್ಲಿ ನೋಡಿದರೆ ರೈತರು ಕೇವಲ ಎರಡೂವರೆ ರೂಪಾಯಿಗೆ ಮಾರ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಈ ರೈತನ ನಗುವಿನಲ್ಲಿ ದುಃಖವೇ ಕಾಣಿಸುತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇಲ್ಲಿ ಜನ ನಾವು ಎಷ್ಟು ಬೆಲೆ ಕೊಟ್ಟು ಈರುಳ್ಳಿ ಖರೀದಿಸಿದೆವು ಎಂದು ಹೇಳುತ್ತಿದ್ದಾರೆ. ಆದರೆ ನಾವಿಲ್ಲಿ, ಈತ ಇದನ್ನು ಬೆಳೆಯುವುದಕ್ಕೆ ಎಷ್ಟು ಶ್ರಮ ಸಮಯ, ಕೂಲಿಗಾಗಿ ವೆಚ್ಚ ಮಾಡಿರುತ್ತಾನೆ. ಸಾಲ ಸೋಲ ಮಾಡಿರುತ್ತಾನೆ ಎಂಬುದನ್ನು ಯೋಚಿಸುತ್ತಿದ್ದೇನೆ. ಆತನಿಗೆ ಲಾಭವಂತೂ ಇಲ್ಲ ಸಾಲದ ಬಡ್ಡಿ, ಕಂತು ಕಟ್ಟುವುದಕ್ಕೂ ಇದರಿಂದ ಸಾಧ್ಯವಾಗದು ಎಂದು ಒಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ. ಈ ರೈತನ ಸ್ಥಿತಿ ನೋಡಿ ನಿಮಗೇನನಿಸಿತು ಕಾಮೆಂಟ್ ಮಾಡಿ...
ಇದನ್ನೂ ಓದಿ: ನೇಪಾಳಕ್ಕೆ ಪ್ರವಾಸ ಹೋಗಿದ್ದ ಭಾರತೀಯ ಮಹಿಳೆ ಜೇನ್ ಝಿ ಹೋರಾಟದ ಕಿಚ್ಚಿಗೆ ಬಲಿ
ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಮಕ್ಕಳ ಆಟಿಕೆ ಜೀಪನ್ನು ರಸ್ತೆಯಲ್ಲಿ ಓಡಿಸಿದವನನ್ನು ಬಂಧಿಸಿದ ಪೊಲೀಸರು
