ಮಗ ವೀಲ್ಹಿಂಗ್ ಮಾಡಿದ್ದಕ್ಕೆ ಅಪ್ಪನ ಮೇಲೆ ಕೇಸ್ ಬಿದ್ದಿದ್ದು, ಬೈಕ್ ಸೀಜ್ ಮಾಡಿದ ಪೊಲೀಸರು ಆರ್.ಸಿ. ಬುಕ್ ಕ್ಯಾನ್ಸಲ್ ಮಾಡಿ, ಅಪ್ರಾಪ್ತರಿಗೆ ಬೈಕ್ ಕೊಡುವ ಪೋಷಕರಿಗೆ ಎಚ್ಚರಿಕೆ ನೀಡಿದ್ದಾರೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಜು.16): ಚಿಕ್ಕಮಗಳೂರು ನಗರದ ಹೃದಯ ಭಾಗದ ರಸ್ತೆಯಲ್ಲಿ ಮಗ ವೀಲ್ಹಿಂಗ್ ಮಾಡಿದ್ದಕ್ಕೆ ಅಪ್ಪನ ಮೇಲೆ ಕೇಸ್ ಬಿದ್ದಿದ್ದು, ಬೈಕ್ ಸೀಜ್ ಮಾಡಿದ ಪೊಲೀಸರು ಆರ್.ಸಿ. ಬುಕ್ ಕ್ಯಾನ್ಸಲ್ ಮಾಡಿ, ಅಪ್ರಾಪ್ತರಿಗೆ ಬೈಕ್ ಕೊಡುವ ಪೋಷಕರಿಗೆ ಎಚ್ಚರಿಕೆ ನೀಡಿದ್ದಾರೆ.
ಅಪ್ರಾಪ್ತ ಬಾಲಕರಿಂದ ಸ್ಕೂಟಿಯಲ್ಲಿ ವೀಲ್ಹಿಂಗ್: ಚಿಕ್ಕಮಗಳೂರು ನಗರದ ಡಿಸಿ-ಎಸ್ಪಿ ಕಚೇರಿ, ಕೋರ್ಡ್ ಸುತ್ತಮುತ್ತಲಿನ ಪ್ರದೇಶದಲ್ಲಿ ಇಬ್ಬರು ಅಪ್ರಾಪ್ತ ಬಾಲಕರು ಸ್ಕೂಟಿಯಲ್ಲಿ ವೀಲ್ಹಿಂಗ್ ಮಾಡಿದ್ದರು. ವೀಲ್ಹಿಂಗ್ ವಿಡಿಯೋ ಸುದ್ದಿಯಾಗುತ್ತಿದ್ದಂತೆ ಅಲರ್ಟ್ ಆದ ನಗರ ಸಂಚಾರಿ ಪೊಲೀಸರು ಬೈಕ್ ಓನರ್ ಯಾಸಿನ್ ಮೇಲೆ ಪ್ರಕರಣ ದಾಖಲಿಸಿ ಆರ್.ಸಿ.ಬುಕ್ ಕೂಡ ಕ್ಯಾನ್ಸಲ್ ಮಾಡಿದ್ದಾರೆ.
ನಗರದ ಎಸ್ಪಿ-ಡಿಸಿ ಕಛೇರಿ ಸಮೀಪದಲ್ಲೇ ಹಾಗೂ ಜನದಟ್ಟಣೆ ಜಾಗದಲ್ಲೇ ಯುವಕರು ವೀಲ್ಹಿಂಗ್ ಪುಂಡಾಟ ಮಾಡಿದ್ದರಿಂದ ನಾವು ಸರಿಯಾಗಿ ಡ್ರೈವ್ ಮಾಡಿದ್ರು ಇಂತವರಿಂದ ಅಪಘಾತ ಗ್ಯಾರಂಟಿ ಎಂದು ಸ್ಥಳಿಯರು ಆಕ್ರೋಶ ಹೊರಹಾಕಿದ್ದರು. ಪೊಲೀಸರು ಇಂತವರಿಗೆ ದಂಡ ಹಾಕಿ ಲೈಸನ್ಸ್ ಕ್ಯಾನ್ಸಲ್ ಮಾಡಬೇಕೆಂದು ಸ್ಥಳಿಯರು ಆಗ್ರಹಿಸಿದ್ದರು.
ಪೊಲೀಸರಿಂದ ಪೋಷಕರಿಗೆ ಎಚ್ಚರಿಕೆ: ಅಪ್ರಾಪ್ತರು ನಡು ರಸ್ತೆಯಲ್ಲಿ ವೀಲ್ಹಿಂಗ್ ಮಾಡಿದ್ದರಿಂದ ಪೊಲೀಸಿರು ಆರ್.ಸಿ.ಓನರ್ ಯಾಸಿನ್ ಮೇಲೆ ಪ್ರಕರಣ ದಾಖಲಿಸಿ, ಗಾಡಿ ಸೀಜ್ ಮಾಡಿದ್ದಾರೆ. ಅಪ್ರಾಪ್ತರಿಗೆ ಬೈಕ್ ನೀಡುವ ಪೋಷಕರಿಗೂ ಎಚ್ಚರಿಕೆ ನೀಡಿದ್ದಾರೆ. ಕಳೆದ ಎರಡು ದಿನಗಳ ನಗರದ ಬೈಪಾಸ್ ರಸ್ತೆಯಲ್ಲೂ ಕೂಡ ವಿಪರೀತವಾದ ವೇಗದಲ್ಲಿ ಬೈಕ್ ವೀಲ್ಹಿಂಗ್ ಮಾಡುತ್ತಿದ್ದ ಯುವಕನನ್ನು ಚಿಕ್ಕಮಗಳೂರು ಸಂಚಾರ ಪೊಲೀಸ್ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದರು.
ಐ.ಡಿ.ಎಸ್.ಜಿ. ಕಾಲೇಜು ಬಳಿಯ ರಸ್ತೆಯಲ್ಲಿ ವೀಲ್ಹಿಂಗ್ ಮಾಡುತ್ತಿದ್ದ ಬಾಳೆನಹಳ್ಳಿ ನಿವಾಸಿ ಕಿಶೋರ್ ಎಂಬಾತ ಹೆಲ್ಮೆಟ್ ಧರಿಸದೇ ನಿರ್ಲಕ್ಷತನದಿಂದ ವೀಲ್ಹಿಂಗ್ ಮಾಡುತ್ತಿದ್ದನು. ಪೊಲೀಸರು ತಕ್ಷಣ ಬೈಕ್ ಸಹಿತ ಯುವಕನನ್ನ ವಶಕ್ಕೆ ಪಡೆದು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
