ಚಿಕ್ಕಮಗಳೂರು ಸರ್ಕಾರಿ ಮೆಡಿಕಲ್ ಕಾಲೇಜಿನ ಹುಡುಗಿಯರ ಹಾಸ್ಟೆಲ್‌ಗೆ ಮಧ್ಯರಾತ್ರಿ ನುಗ್ಗಿದ್ದ ಯುವಕನನ್ನು ವಿದ್ಯಾರ್ಥಿನಿಯರೇ ಧೈರ್ಯದಿಂದ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಕಳ್ಳತನದ ಉದ್ದೇಶದಿಂದ ಬಂದಿದ್ದ ಆರೋಪಿ ಈ ಹಿಂದೆಯೂ ಇದೇ ರೀತಿ ಮಾಡಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದ್ದು, ಈ ಘಟನೆಯು ಹಾಸ್ಟೆಲ್ ಭದ್ರತೆಯ ಬಗ್ಗೆ ಗಂಭೀರ ಚರ್ಚೆಗಳನ್ನು ಹುಟ್ಟುಹಾಕಿದೆ.

ಚಿಕ್ಕಮಗಳೂರು: ಮಧ್ಯರಾತ್ರಿ ಹುಡುಗಿಯರ ಹಾಸ್ಟಲ್‌ಗೆ ನುಗ್ಗಿದ ಯುವಕನ್ನು ಹಾಸ್ಟಲ್‌ ಹುಡುಗಿಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಚಿಕ್ಕಮಗಳೂರು ಹೊರ ವಲಯದ ಸರ್ಕಾರಿ ಮೆಡಿಕಲ್ ಕಾಲೇಜಿನ ಹುಡುಗಿಯರ ಹಾಸ್ಟೆಲ್‌ನಲ್ಲಿ ನಡೆದಿದೆ. ಉತ್ತರ ಪ್ರದೇಶ ಮೂಲದ ರಾಕೇಶ್ (30) ಬಂಧಿತ ಆರೋಪಿ.

112ಕ್ಕೆ ಕರೆ ಮಾಡಿದ ಯುವತಿಯರು

ಕಳೆದ ಭಾನುವಾರ ತಡರಾತ್ರಿ 2.30ರ ಸುಮಾರಿಗೆ ನಗರದ ಹೊರ ವಲಯದ ಸರ್ಕಾರಿ ಮೆಡಿಕಲ್‌ ಕಾಲೇಜಿನ ಹಾಸ್ಟಲ್‌ಗೆ ಅಪರಿಚಿತ ಯುವಕ ನುಗ್ಗಿದ್ದಾನೆ. ಹಾಸ್ಟಲ್‌ ಹುಡುಗಿಯರು ಆ ಯುವಕನ್ನು ಹಿಡಿದು 112ಗೆ ಕೆರೆ ಮಾಡಿ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಪೊಲೀಸ್‌ ಠಾಣೆಗೆ ಒಪ್ಪಿಸಿದ್ದಾರೆ.

ಆರೋಪಿ ರಾಕೇಶ್ ಮೆಡಿಕಲ್ ಕಾಲೇಜು ಕಟ್ಟಡದ ಕಾಮಗಾರಿ ನಡೆಸುತ್ತಿದ್ದ ಕಾರ್ಮಿಕ. ವಿದ್ಯಾರ್ಥಿನಿಯರ ಕೈಯಿಂದ ತಪ್ಪಿಸಿಕೊಳ್ಳಲು ಆರೋಪಿ ಯತ್ನಿಸಿದ್ದ. ಪೊಲೀಸರು ವಿಚಾರಣೆ ನಡೆಸಿದಾಗ ಕಳ್ಳತನ ಮಾಡಲು ಹೋಗಿದ್ದೆ ಎಂದು ರಾಕೇಶ್ ತಪ್ಪೊಪ್ಪಿಕೊಂಡಿದ್ದಾನೆ. ಈ ಹಿಂದೆಯೂ ಆರೋಪಿ ರಾಕೇಶ್ ಹಾಸ್ಟೆಲ್‌ಗೆ ನುಗ್ಗಿದ್ದ. ಮತ್ತೊಮ್ಮೆ ಅಂತಹುದ್ದೇ ಕೆಲಸ ಮಾಡಿದ್ದಾನೆ ಎಂಬುದು ತನಿಖೆ ವೇಳೆ ಬಯಲಾಗಿದೆ.

ಈ ಕುರಿತು ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಡೀನ್‌ ಡಾ. ಹರೀಶ್, ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ.

ಪದೇ ಪದೇ ಇದೇ ಮಾದರಿಯ ಘಟನೆಗಳು

ವಿದ್ಯಾರ್ಥಿನಿಯರು ವಸತಿ ಪಡೆದಿರುವ ಮೆಡಿಕಲ್ ಕಾಲೇಜಿನ ಈ ಹಾಸ್ಟೆಲ್‌ನಲ್ಲಿ ಇಂತಹ ಘಟನೆಗಳು ಹೊಸದೇನೂ ಅಲ್ಲ. ಈ ಹಿಂದೆಯೂ ಇದೇ ಮಾದರಿ ಘಟನೆಗಳು ನಡೆದಿದ್ದವು. ಹೀಗಿದ್ದರೂ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದ ಕಾಲೇಜು ಆಡಳಿತ ಮಂಡಳಿ ವಿರುದ್ಧ ಯುವತಿಯರು ಆಕ್ರೋಶ ಹೊರಹಾಕಿದ್ದಾರೆ. ಇದೀಗ ಮೆಡಿಕಲ್‌ ಕಾಲೇಜು ಹಾಸ್ಟೆಲ್ ಭದ್ರತೆ ಬಗ್ಗೆ ಭಾರಿ ಚರ್ಚೆಗಳು ಶುರುವಾಗಿವೆ.