ಚಿಕ್ಕಮಗಳೂರು(ಜೂ.25): ಕೊರೋನಾ ಭೀತಿ, ಹಲವು ಚರ್ಚೆ, ಶಿಕ್ಷಣ ತಜ್ಞರ ಸಲಹೆ, ಪರ ವಿರೋಧದ ನಡುವೆ ಗುರುವಾರದಿಂದ ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಲಿದೆ.

"

ವಿದ್ಯಾರ್ಥಿಗಳ ಕೊರೋನಾ ಭೀತಿಯ ಆತಂಕ ದೂರ ಮಾಡುವ ಜತೆಗೆ ಪರೀಕ್ಷಾ ಕೇಂದ್ರಗಳಲ್ಲಿ ಹಲವು ಮುಂಜಾಗ್ರತಾ ಕ್ರಮಗಳನ್ನು ಜಿಲ್ಲೆಯಲ್ಲಿ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ ತೆಗೆದುಕೊಂಡಿವೆ. ಆದ್ದರಿಂದ ವಿದ್ಯಾರ್ಥಿಗಳು ಯಾವುದೇ ಆತಂಕಕ್ಕೆ ಒಳಗಾಗಬಾರದೆಂದು ಜಿಲ್ಲಾಡಳಿತ ಭರವಸೆ ನೀಡಿದೆ.

ಪರೀಕ್ಷಾ ಕೇಂದ್ರದ ಕೊಠಡಿಗಳಷ್ಟೇ ಅಲ್ಲ, ಇಡೀ ಕಟ್ಟಡ ಹಾಗೂ ನೆಲಹಾಸು, ಕಾಂಪೌಂಡ್‌ಗಳಿಗೆ ಸ್ಯಾನಿಟೈಸರ್‌ ಸಿಂಪರಣೆ ಮಾಡಲಾಗಿದೆ. ಪರೀಕ್ಷಾ ಕೇಂದ್ರದೊಳಗೆ ಬರುವ ವಿದ್ಯಾರ್ಥಿಗಳಿಗೆ ಥರ್ಮಲ್‌  ಸ್ಕ್ಯಾನಿಂಗ್‌ ಮಾಡಲು 3 ಅಡಿ ಅಂತರದಲ್ಲಿ ಬಣ್ಣದ ವೃತ್ತಕಾರಗಳನ್ನು ಮಾಡಲಾಗಿದೆ. ಅಲ್ಲಿ ಸರದಿ ಸಾಲಿನಲ್ಲಿ ನಿಂತು ವಿದ್ಯಾರ್ಥಿಗಳು ಸ್ಕ್ಯಾನಿಂಗ್‌ ಮಾಡಿಸಿಕೊಂಡು ಮುಂದೆ ಹೋಗಿ ಕೈಗಳಿಗೆ ಸ್ಯಾನಿಟೈಸರ್‌ಗಳನ್ನು ಹಚ್ಚಿಕೊಂಡು ಕೊಠಡಿಯೊಳಗೆ ಪ್ರವೇಶಿಸಬೇಕು.

ನೋಂದಣಿ ಸಂಖ್ಯೆ ಯಾವ ಕೊಠಡಿಯಲ್ಲಿದೆ ಎಂದು ಹುಡುಕಾಡುವಂತಹ ಪರಿಸ್ಥಿತಿ ವಿದ್ಯಾರ್ಥಿಗಳಿಗೆ ಬರಬಾರದು ಎಂಬ ಉದ್ದೇಶದಿಂದ ಈಗಾಗಲೇ ವಿದ್ಯಾರ್ಥಿಗಳು ತಮ್ಮ ಕೊಠಡಿ ಸಂಖ್ಯೆ ಮತ್ತು ಕುಳಿತುಕೊಳ್ಳುವ ಜಾಗವನ್ನು ಖಾತ್ರಿಪಡಿಸಿಕೊಂಡಿದ್ದಾರೆ. ಆದರೂ, ವಿದ್ಯಾರ್ಥಿಗಳಿಗೆ ಕೊಠಡಿ ಸಂಖ್ಯೆ ತೋರಿಸಲು ಸ್ಥಳಗಳಲ್ಲಿ ಶಿಕ್ಷಕರನ್ನು ನಿಯೋಜನೆ ಮಾಡಲಾಗಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆ: ವಿದ್ಯಾರ್ಥಿಗಳಿಗೆ ಬಸ್‌ ಸೌಲಭ್ಯ

ಪರೀಕ್ಷೆಯನ್ನು ಹೇಗೆ ನಡೆಸಬೇಕೆಂದು ಶಿಕ್ಷಕರಿಗೆ ಹಾಗೂ ಹೇಗೆ ನಡೆಸಲಾಗುತ್ತದೆ ಎಂಬ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ (ಮಾಕ್‌ಡ್ರಿಲ್‌) ಬುಧವಾರ ನೀಡಲಾಯಿತು. ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ನಂಜಯ್ಯ ಅವರು ಚಿಕ್ಕಮಗಳೂರು ಹಾಗೂ ಮೂಡಿಗೆರೆ ತಾಲೂಕುಗಳ ಕೇಂದ್ರಗಳಿಗೆ ಭೇಟಿ ನೀಡಿ ಮಾಹಿತಿ ನೀಡಿದರು.

"

ಮುನ್ನೆಚ್ಚರಿಕೆ:

ಜಿಲ್ಲೆಯಲ್ಲಿ ಈ ಬಾರಿ 13,924 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ತೆಗೆದುಕೊಂಡಿದ್ದಾರೆ. ಇವರಲ್ಲಿ 6998 ಬಾಲಕರು, 6926 ಬಾಲಕಿಯರು ಇದ್ದಾರೆ. ಪರೀಕ್ಷೆ ನಡೆಸಲು 58 ಕೇಂದ್ರಗಳನ್ನು ಗುರುತು ಮಾಡಲಾಗಿದೆ. ಹೆಚ್ಚುವರಿ ವಿದ್ಯಾರ್ಥಿಗಳು ಇರುವ ಕಡೆಗಳಲ್ಲಿ 2 ಕೇಂದ್ರಗಳನ್ನು ತೆರೆಯಲಾಗಿದೆ. ಪರೀಕ್ಷಾ ಕೇಂದ್ರಗಳ ಆಸುಪಾಸಿನ ಜನವಸತಿ ಪ್ರದೇಶದಲ್ಲಿ ಕೊರೋನಾ ಸೋಂಕಿತರು ಪತ್ತೆಯಾದಲ್ಲಿ ಪರೀಕ್ಷಾ ಕೇಂದ್ರವನ್ನು ಬೇರೆಡೆಗೆ ಸ್ಥಳಾಂತರಿಸಗುವುದು. ಈ ಕಾರಣಕ್ಕಾಗಿ ಈಗಾಗಲೇ ಜಿಲ್ಲೆಯ ಎಲ್ಲ 8 ವಲಯಗಳಲ್ಲಿ 17 ಪರೀಕ್ಷಾ ಕೇಂದ್ರಗಳನ್ನು ಗುರುತು ಮಾಡಲಾಗಿದೆ ಎಂದು ಹೇಳಿದರು.

ಗ್ರಾಮೀಣ ಪ್ರದೇಶಗಳಿಂದ ನಗರ ಪ್ರದೇಶಕ್ಕೆ ಬರುವ ಪರೀಕ್ಷಾರ್ಥಿಗಳಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ವಿದ್ಯಾರ್ಥಿಗಳು ಬರುವ ಮಾರ್ಗಗಳಲ್ಲಿ 60 ಕೆಎಸ್‌ಆರ್‌ಟಿಸಿ ಹಾಗೂ 70 ಖಾಸಗಿ ಬಸ್‌ಗಳನ್ನು ಬಿಡಲಾಗಿದೆ. ಇವುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ. ಈ ಬಾರಿ ಜಿಲ್ಲಾಡಳಿತ ಪರೀಕ್ಷೆ ಎದುರಿಸಲು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದು, ಅದೇ ರೀತಿ ವಿದ್ಯಾರ್ಥಿಗಳು ಮತ್ತು ಪೋಷಕರು ಪಾಲನೆ ಮಾಡಬೇಕು.

ವಿದ್ಯಾರ್ಥಿಗಳೇ ಈ ನಿಯಮ ಪಾಲಿಸಿ

- ಮೊದಲು, ಕೊರೋನಾ ಭೀತಿಯ ಆತಂಕ ಬಿಟ್ಟು ಬಿಡಿ.

- ಮನೆಯಿಂದ ಹೊರಡುವಾಗ ಪ್ರವೇಶ ಪತ್ರ ತೆಗೆದುಕೊಂಡು ಹೋಗುವುದನ್ನು ಮರೆಯಬೇಡಿ.

- ಮನೆಯಿಂದಲೇ ಮಾಸ್ಕ್‌ ಧರಿಸಿ ಹೊರಡಿ. ಕೈಯಲ್ಲಿ ಕುಡಿಯಲು ಬಿಸಿ ನೀರಿನ ಬಾಟಲಿ ತೆಗೆದುಕೊಂಡು ಹೋಗಬೇಕು.

- ಪರೀಕ್ಷೆ ಆರಂಭವಾಗುವ ಸಮಯ ಬೆಳಗ್ಗೆ 10.30 ಇದ್ದು, 9.30ಕ್ಕೂ ಮೊದಲೇ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು. ಏಕೆಂದರೆ, ಪ್ರಾಥಮಿಕ ತಪಾಸಣೆ ಮಾಡಿಸಿಕೊಳ್ಳಲು.

- ಪರೀಕ್ಷಾ ಕೇಂದ್ರಕ್ಕೆ ಬರುತ್ತಿದ್ದಂತೆ ಸ್ನೇಹಿತರೊಂದಿಗೆ ಗುಂಪು ಗುಂಪಾಗಿ ನಿಂತುಕೊಳ್ಳಬೇಡಿ. ಆ ಸಂದರ್ಭದಲ್ಲಿ ಅಂತರ ಕಾಯ್ದುಕೊಳ್ಳಿ.

- ಪರೀಕ್ಷಾ ಕೊಠಡಿಯೊಳಗೆ ಹೋದ್ರೆ, ಮತ್ತೆ ವಾಪಸ್‌ ಬರುವಂತಿಲ್ಲ.

- ಪರೀಕ್ಷಾ ಕೇಂದ್ರದಿಂದ ಹೊರಗೆ ಬರುವವರೆಗೆ ಮಾಸ್ಕ್‌ ತೆಗೆಯಬೇಡಿ.

- ಜತೆಗೆ ಚಿಕ್ಕದೊಂದು ಸ್ಯಾನಿಟೇಜರ್‌ ಇಟ್ಟುಕೊಳ್ಳಿ.

- ಪರೀಕ್ಷಾ ಕೊಠಡಿಯೊಳಗೆ ಗೋಡೆ ಅಥವಾ ಇತರೆ ಯಾವುದೇ ವಸ್ತುಗಳನ್ನು ಮುಟ್ಟಬೇಡಿ.

ವಿದ್ಯಾರ್ಥಿಗಳು, ನಿರ್ಭಯಾವಾಗಿ ಪರೀಕ್ಷೆ ಬರೆಯಬೇಕು. ಕೊರೋನಾ ವೈರಸ್‌ ನಿಯಂತ್ರಣಕ್ಕಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಆದರೂ, ವಿದ್ಯಾರ್ಥಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಪರೀಕ್ಷಾ ಕೇಂದ್ರಕ್ಕೆ ಬರುವ ಪೋಷಕರೂ ಈ ನಿಯಮ ಪಾಲನೆ ಮಾಡಬೇಕು. - ಸಿ.ನಂಜಯ್ಯ, ಡಿಡಿಪಿಐ

"