ಚಿಕ್ಕಬಳ್ಳಾಪುರ(ಜು.27): ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ನೀರಿನ ಸಮಸ್ಯೆ ಎದುರಾದರೂ ಎದೆಗುಂದದೆ ಚಿಕ್ಕಬಳ್ಳಾಪುರ ನಗರದ ನಾಗರಿಕರ ದಾಹ ತೀರಿಸುತ್ತಿದ್ದ ಜಕ್ಕಲಮಡಗು ಜಲಾಶಯ ಬರಿದಾಗಿದ್ದು, ಭಾನುವಾರದಿಂದಲೇ ನಗರಕ್ಕೆ ಜಲಕಂಟಕ ಎದುರಾಗಲಿದೆ.

ಕಳೆದ ಐದು ವರ್ಷಗಳಿಂದ ನಿರಂತರ ಬರ ಇದ್ದರೂ ನಂದಿಗಿರಿಧಾಮದ ಪಶ್ಚಿಮ ಭಾಗದಲ್ಲಿ ಮತ್ತು ದೊಡ್ಡಬಳ್ಳಾಪುರ ಪ್ರದೇಶದಲ್ಲಿ ಉತ್ತಮವಾಗಿ ಮಳೆಯಾಗುತ್ತಿದ್ದ ಕಾರಣ ಜಕ್ಕಲಮಡಗು ಜಲಾಶಯಕ್ಕೆ ಯಥೇಚ್ಛವಾಗಿ ನೀರು ಹರಿದು ಬರುತ್ತಿದ್ದ ಕಾರಣ ನಗರದಲ್ಲಿ ನೀರಿನ ಸಮಸ್ಯೆ ಕಾಣುತ್ತಿರಲಿಲ್ಲ. ಆದರೆ ಪ್ರಸ್ತುತ ವರ್ಷದಲ್ಲಿ ಈ ಭಾಗದಲ್ಲಿಯೂ ಮಳೆಯಾಗದ ಕಾರಣ ಜಲಾಶಯ ಖಾಲಿಯಾಗಿದ್ದು, ಭಾನುವಾರದಿಂದಲೇ ನೀರಿನ ಸಮಸ್ಯೆ ಉದ್ಭವವಾಗಲಿದೆ.

ಜಲಾಶಯದ ನೀರಿನ ಹಂಚಿಕೆ:

ಜಕ್ಕಲಮಡಗು ಜಲಾಶಯವನ್ನು ಸರ್‌.ಎಂ. ವಿಶ್ವೇಶ್ವರಯ್ಯನವರು ನಿರ್ಮಿಸಿದ್ದರು. ಇದಕ್ಕೆ ದೊಡ್ಡಬಳ್ಳಾಪುರ ವ್ಯಾಪ್ತಿಯಿಂದ ನೀರು ಹರಿದು ಬರುತ್ತಿರುವ ಕಾರಣ ದೊಡ್ಡಬಳ್ಳಾಪುರ ನಗರಕ್ಕೂ ನೀರು ನೀಡಬೇಕು ಎಂಬ ವಿವಾದ ಈ ಹಿಂದೆಯೇ ಕೇಳಿಬಂದಿತ್ತು. ಇದರಿಂದಾಗಿ ಉಭಯ ಭಾಗಗಳ ಮುಖಂಡರು ಸೇರಿ 60- 40ರ ಅನುಪಾತದಲ್ಲಿ ನೀರಿನ ಹಂಚಿಕೆ ಮಾಡಿ ಶೇ.60 ರಷ್ಟುನೀರು ಚಿಕ್ಕಬಳ್ಳಾಪುರಕ್ಕೆ ಮತ್ತು ಶೇ.40 ರಷ್ಟುನೀರು ದೊಡ್ಡಬಳ್ಳಾಪುರಕ್ಕೆ ಹಂಚಿಕೆ ಮಾಡಿದ್ದರು.

ತರೀಕೆರೆ: ತಾಲೂಕಿನಾದ್ಯಂತ ಕುಡಿವ ನೀರಿಗೆ ಹಾಹಾಕಾರ

ಗ್ರಾಮಗಳಿಗೂ ನೀರು ಪೂರೈಸಲು ಬೇಡಿಕೆ:

ಬೃಹತ್‌ ಜಲಾಶಯವಾಗಿದ್ದ ಕಾರಣ ಉಭಯ ನಗರಗಳಿಗೆ ಕುಡಿಯುವ ನೀರಿನ ಸಮಸ್ಯೆ ನೀಗಿಸುವಲ್ಲಿ ಯಶಸ್ವಿಯೂ ಆಗಿತ್ತು. ಕಳೆದ ಐದು ವರ್ಷಗಳಿಂದ ನೀರು ಖಾಲಿಯಾಗದ ಕಾರಣ ನಂದಿಗಿರಿಧಾಮಕ್ಕೂ ಇದೇ ನೀರಿನ ಸಂಪರ್ಕ ಕಲ್ಪಿಸಬೇಕು ಎಂಬ ಬೇಡಿಕೆ ವ್ಯಕ್ತವಾಗಿತ್ತು. ಜೊತೆಗೆ ನಗರ ಮಾತ್ರವಲ್ಲದೆ, ಜಲಾಶಯದ ಪೈಪ್‌ಲೈನ್‌ ಸಾಗಿಬರುವ ಮಾರ್ಗದಲ್ಲಿರುವ ಹಳ್ಳಿಗಳಿಗೂ ಈ ಜಲಾಶಯದ ನೀರು ನೀಡಬೇಕು ಎಂಬ ಬೇಡಿಕೆಯೂ ವ್ಯಕ್ತವಾಗಿತ್ತು.

ನಲ್ಲಕದಿರೇನಹಳ್ಳಿ, ತಿಪ್ಪೇನಹಳ್ಳಿ, ಕಣಜೇನಹಳ್ಳಿ ಸೇರಿದಂತೆ ಹಲವು ಗ್ರಾಮಗಳಿಗೆ ಜಕ್ಕಲಮಡಗು ಜಲಾಶಯದ ನೀರು ನೀಡಲು ಆಡಳಿತಾತ್ಮಕ ಅನುಮೋದನೆಯೂ ದೊರೆತು, ಪೈಪ್‌ಲೈನ್‌ ಕಾಮಗಾರಿಯೂ ನಡೆದಿತ್ತು. ನಗರ ಮಾತ್ರವಲ್ಲದೆ ಗ್ರಾಮೀಣ ಪ್ರದೇಶಕ್ಕೆ ಜಲಾಶಯದ ನೀರು ನೀಡುವುದರಿಂದ ಸಮಸ್ಯೆ ಎದುರಾಗಲಿದೆ ಎಂಬ ಆತಂಕದ ನಡುವೆಯೂ ಪೈಪ್‌ಲೈನ್‌ ಕಾಮಗಾರಿ ನಡೆದು ಇನ್ನೇ ನೀರು ಸರಬರಾಜು ಮಾಡುವ ಹಂತಕ್ಕೆ ತಲುಪುವಷ್ಟರಲ್ಲಿ ಜಲಾಶಯ ಖಾಲಿಯಾಗಿದೆ. ಈಗ ನಗರಕ್ಕೇ ಪೂರೈಸಲು ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.

109 ಕೊಳವೆ ಬಾವಿಗಳೇ ಆಧಾರ..!

ಚಿಕ್ಕಬಳ್ಳಾಪುರ ನಗರದ ಜನಸಂಖ್ಯೆ 1 ಲಕ್ಷ ದಾಟಿದ್ದು, ಒಟ್ಟು 31 ವಾರ್ಡುಗಳನ್ನು ಹೊಂದಿದೆ. ಇಷ್ಟುಜನಸಂಖ್ಯೆಗೆ ಪ್ರತಿನಿತ್ಯ 6.5 ಎಂಎಲ್‌ಡಿ ನೀರಿನ ಅಗತ್ಯವಿದ್ದು, ಇದರಲ್ಲಿ ಜಕ್ಕಲಮಡಗು ಜಲಾಶಯದಿಂದ ಪ್ರತಿನಿತ್ಯ 3.5 ಎಂಎಲ್‌ಡಿ ಮತ್ತು ನಗರಸಭೆ ವ್ಯಾಪ್ತಿಯಲ್ಲಿ ಕೊರೆದಿರುವ ಒಟ್ಟು ಕೊಳವೆ ಬಾವಿಗಳಲ್ಲಿ ಪ್ರಸ್ತುತ 109 ಕೊಳವೆ ಬಾವಿಗಳು ಕಾರ್ಯನಿರ್ವಹಿಸುತ್ತಿದ್ದು, ಅಷ್ಟೂಕೊಳವೆ ಬಾವಿಗಳಿಂದ 3 ಎಂಎಲ್‌ಡಿ ನೀರು ನಗರಕ್ಕೆ ಪೂರೈಸಲಾಗುತ್ತಿತ್ತು.

ಟ್ಯಾಂಕರ್ಗಳ ಮೊರೆ ಹೋಗೋದು ಅನಿವಾರ್ಯ:

ಆದರೆ ಭಾನುವಾರದಿಂದ ಜಕ್ಕಲಮಡಗು ಜಲಾಶಯದಿಂದ ಸರಬರಾಜಾಗುತ್ತಿದ್ದ 3.5 ಎಂಎಲ್‌ಡಿ ನೀರು ಇಲ್ಲದ ಕಾರಣ ಪೂರೈಕೆ ಸ್ಥಗಿತಗೊಳ್ಳಲಿದೆ. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ 109 ಕೊಳವೆ ಬಾವಿಗಳಿಂದಲೇ ಇಡೀ ನಗರಕ್ಕೆ ನೀರು ಸರಬರಾಜು ಮಾಡುವುದು ಅಸಾಧ್ಯ. ಇದೇ ಮೊದಲ ಬಾರಿಗೆ ಟ್ಯಾಂಕರ್‌ಗಳ ಮೊರೆ ಹೋಗಬೇಕಾದ ಅನಿವಾರ್ಯತೆ ನಗರಸಭೆಗೆ ಎದುರಾಗಲಿದೆ.

353 ಗ್ರಾಮಗಳಲ್ಲಿ ನೀರಿನ ಸಮಸ್ಯೆ:

ಜಿಲ್ಲೆಯ ಆರೂ ತಾಲೂಕುಗಳ ಒಟ್ಟು 353 ಗ್ರಾಮಗಳೂ ಸೇರಿದಂತೆ ಗೌರಿಬಿದನೂರು, ಶಿಡ್ಲಘಟ್ಟಮತ್ತು ಚಿಂತಾಮಣಿ ನಗರಗಳಲ್ಲಿ ಈಗಾಗಲೇ ನೀರಿನ ಸಮಸ್ಯೆ ಕಾಡುತ್ತಿದೆ. ಇದರಲ್ಲಿ ಅತಿ ಹೆಚ್ಚು ಚಿಂತಾಮಣಿ ತಾಲೂಕಿನಲ್ಲಿದ್ದು, 122 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದ್ದರೆ, ಅತಿ ಕಡಿಮೆ ಗುಡಿಬಂಡೆ ತಾಲೂಕಿನಲ್ಲಿದ್ದು 19 ಗ್ರಾಮಗಳಲ್ಲಿ ನೀರಿ ನಸಮಸ್ಯೆ ಕಾಡುತ್ತಿದೆ. ಉಳಿದಂತೆ ಬಾಗೇಪಲ್ಲಿ ತಾಲೂಕಿನ 76, ಶಿಡ್ಲಘಟ್ಟತಾಲೂಕಿನ 63, ಚಿಕ್ಕಬಳ್ಳಾಪುರ ತಾಲೂಕಿನ 49 ಮತ್ತು ಗೌರಿಬಿದನೂರು ತಾಲೂಕಿನ 24 ಗ್ರಾಮಗಳಲ್ಲಿ ಪ್ರಸ್ತುತ ನೀರಿನ ಸಮಸ್ಯೆ ಇದೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಗರ ಪ್ರದೇಶವನ್ನು ಹೊರತುಪಡಿಸಿ ಆರೂ ತಾಲೂಕುಗಳ ಗ್ರಾಮೀಣ ಪ್ರದೇಶದ 353 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಇದ್ದು, ಇದರಲ್ಲಿ 216 ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಗಳ ಮೂಲಕ ಮತ್ತು 137 ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಇದರ ಜೊತೆಗೆ ಮೂರು ನಗರಗಳಿಗೆ ಟ್ಯಾಂಕರ್‌ ಮೂಲಕ ಈಗಾಗಲೇ ನೀರು ನೀಡುತ್ತಿದ್ದು, ಇದೇ ಸಾಲಿಗೆ ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರ ನಗರ ಸೇರಿರುವುದು ಮುಂದಿನ ದಿನಗಳಲ್ಲಿ ಜೀವಜಲದ ಸಮಸ್ಯೆ ಜಟಿಲಗೊಳ್ಳುವ ಸಾಧ್ಯತೆ ಇದೆ.