ಏಪ್ರಿಲ್‌, ಮೇ ತಿಂಗಳಲ್ಲಿ ಅವಧಿ ಮುಗಿಯಲಿರುವ ತಾಪಂ ಹಾಗೂ ಜಿಪಂ ಚುನಾವಣೆ ನಡೆಸಲು ಸಿದ್ಧತೆ ಆರಂಭಿಸಿರುವ ರಾಜ್ಯ ಚುನಾವಣಾ ಆಯೋಗ, ತಾಪಂ ಹಾಗೂ ಜಿಪಂ ಸಾರ್ವತ್ರಿಕ ಚುನಾವಣೆ-2021 ಹಿನ್ನೆಲೆಯಲ್ಲಿ ಕ್ಷೇತ್ರಗಳ ಪುನರ್‌ ವಿಗಂಡನೆಗೆ ಮುಂದಾಗಿದೆ. 

 ಚಿಕ್ಕಬಳ್ಳಾಪುರ (ಫೆ.12): ಗ್ರಾಪಂ ಚುನಾವಣೆಗಳು ಶಾಂತಿಯುತವಾಗಿ ಮುಗಿದ ಬೆನ್ನಲೇ ಏಪ್ರಿಲ್‌, ಮೇ ತಿಂಗಳಲ್ಲಿ ಅವಧಿ ಮುಗಿಯಲಿರುವ ತಾಪಂ ಹಾಗೂ ಜಿಪಂ ಚುನಾವಣೆ ನಡೆಸಲು ಸಿದ್ಧತೆ ಆರಂಭಿಸಿರುವ ರಾಜ್ಯ ಚುನಾವಣಾ ಆಯೋಗ, ತಾಪಂ ಹಾಗೂ ಜಿಪಂ ಸಾರ್ವತ್ರಿಕ ಚುನಾವಣೆ-2021 ಹಿನ್ನೆಲೆಯಲ್ಲಿ ಕ್ಷೇತ್ರಗಳ ಪುನರ್‌ ವಿಗಂಡನೆಗೆ ಮುಂದಾಗಿದೆ. ಇದು ಚುನಾವಣೆಗೆ ಸ್ಪರ್ಧಿಸಲು ತುದಿಗಾಲಲ್ಲಿ ನಿಂತಿರುವ ಆಕಾಂಕ್ಷಿಗಳ ನಿದ್ದೆಗೆಡಿಸಿದೆ.

ಕರ್ನಾಟಕ ಪಂಚಾಯತ್‌ ರಾಜ್‌ ಅಧಿನಿಯಮ (2015), ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಅಧಿನಿಯ (2020) ತಿದ್ದುಪಡಿಯಂತೆ ರಾಜ್ಯದ ತಾಪಂ ಹಾಗೂ ಜಿಪಂ ಕ್ಷೇತ್ರಗಳ ಪುನರ್‌ ವಿಗಂಡನೆಗೆ ಆದೇಶಿಸಿರುವ ರಾಜ್ಯ ಚುನಾವಣಾ ಆಯೋಗ ಜಿಲ್ಲೆಯ ಪುನರ್‌ ವಿಗಂಡನೆಯ ಸಮಗ್ರ ಮಾಹಿತಿಯನ್ನು ಫೆಬ್ರವರಿ 22 ರ ಒಳಗೆ ಆಯೋಗಕ್ಕೆ ಸಲ್ಲಿಸುವಂತೆ ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

ತಾಲೂಕುವಾರು ಮಾಹಿತಿ:

ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿ 23 ತಾಪಂ ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳು ಕ್ಷೇತ್ರ ಪುನರ್‌ ವಿಗಂಡನೆ ಬಳಿಕ 5 ಕ್ಷೇತ್ರಗಳು ರದ್ದಾಗಲಿದ್ದು ಒಟ್ಟು ತಾಪಂ ಕ್ಷೇತ್ರಗಳ ಸಂಖ್ಯೆ 18ಕ್ಕೆ ಕುಸಿಯಲಿದೆ. ಅದೇ ರೀತಿ 6 ಇರುವ ಜಿಪಂ ಕ್ಷೇತ್ರಗಳು ಕ್ಷೇತ್ರ ಪುನರ್‌ ವಿಗಂಡನೆ ವೇಳೆ 1 ಹೆಚ್ಚಾಗಿ ಒಟ್ಟು 7 ಜಿಪಂ ಕ್ಷೇತ್ರಗಳಾಗಲಿವೆ. ಬಾಗೇಪಲ್ಲಿ ತಾಲೂಕಿನಲ್ಲಿ ಇರುವ 4 ಜಿಪಂ ಕ್ಷೇತ್ರಗಳ ಜೊತೆಗೆ 1 ಜಿಪಂ ಕ್ಷೇತ್ರ ಸೃಷ್ಠಿಯಾಗಿ ಒಟ್ಟು 5ಕ್ಕೆ ಏರಲಿದ್ದು ಒಟ್ಟು 16 ಇರುವ ತಾಪಂ ಕ್ಷೇತ್ರಗಳ ಪೈಕಿ 3 ರದ್ದಾಗಿ 13 ತಾಪಂ ಕ್ಷೇತ್ರಗಳಾಗಲಿವೆ. ಗೌರಿಬಿದನೂರಲ್ಲಿ ಇರುವ 7 ಜಿಪಂ ಕ್ಷೇತ್ರಗಳು ಹಾಗೆ ಉಳಿದುಕೊಳ್ಳಲಿದ್ದು ಒಟ್ಟು 26 ತಾಪಂ ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳು ವಿಗಂಡನೆ ವೇಳೆ ರದ್ದಾಗಿ ಕೇವಲ 20 ತಾಪಂ ಕ್ಷೇತ್ರಗಳಿಗೆ ಗೌರಿಬಿದನೂರು ತಾಪಂ ಸೀಮಿತವಾಗಲಿದೆ. ಅದೇ ರೀತಿ ಶಿಡ್ಲಘಟ್ಟತಾಲೂಕಿನಲ್ಲಿರುವ ಒಟ್ಟು ಇರುವ 5 ಜಿಪಂ ಕ್ಷೇತ್ರಗಳು ಹಾಗೆ ಇರಲಿದ್ದು 17 ತಾಪಂ ಕ್ಷೇತ್ರಗಳ ಪೈಕಿ 3 ಅಸ್ತಿತ್ವ ಕಳೆದುಕೊಂಡು ತಾಪಂ ಕ್ಷೇತ್ರಗಳ ಸಂಖ್ಯೆ 14ಕ್ಕೆ ಕುಸಿಯಲಿದೆ. ಗುಡಿಬಂಡೆಯಲ್ಲಿ 2 ಜಿಪಂ ಕ್ಷೇತ್ರ ಹಾಗೂ 11 ತಾಪಂ ಕ್ಷೇತ್ರಗಳಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಒಟ್ಟು 15 ತಾಪಂ ಕ್ಷೇತ್ರಗಳಿದ್ದು ಆ ಪೈಕಿ 3 ತಾಪಂ ಕ್ಷೇತ್ರಗಳು ರದ್ದಾಗಿ 12ಕ್ಕೆ ತಾಪಂ ಕ್ಷೇತ್ರಗಳಿಗೆ ಮಾತ್ರ ಸೀಮಿತವಾಗಲಿದ್ದು 4 ಜಿಪಂ ಕ್ಷೇತ್ರಗಳು ಇರುವ ಚಿಕ್ಕಬಳ್ಳಾಪುರಕ್ಕೆ ಮತ್ತೊಂದು ಜಿಪಂ ಕ್ಷೇತ್ರ ಸೃಷ್ಠಿಯಾಗಿ ಒಟ್ಟು ಜಿಪಂ ಕ್ಷೇತ್ರಗಳ ಸಂಖ್ಯೆ 5ಕ್ಕೆ ಏರಲಿದೆ.

ರಾಜ್ಯದಲ್ಲಿ ತಾಲೂಕು ಪಂಚಾಯತ್ ರದ್ಧತಿ : ಸಚಿವರಿಂದ ಸ್ಪಷ್ಟನೆ

108 ತಾಪಂ ಕ್ಷೇತ್ರ, 31 ಜಿಪಂ ಕ್ಷೇತ್ರ

ಜಿಲ್ಲೆಯ ಚಿಂತಾಮಣಿ, ಚಿಕ್ಕಬಳ್ಳಾಪುರ, ಗುಡಿಬಂಡೆ, ಗೌರಿಬಿದನೂರು, ಬಾಗೇಪಲ್ಲಿ ಹಾಗೂ ಶಿಡ್ಲಘಟ್ಟಸೇರಿ ಆರು ತಾಲೂಕುಗಳ ಸೇರಿ ಒಟ್ಟು 28 ಜಿಪಂ ಕ್ಷೇತ್ರಗಳು ಹಾಗೂ ಬರೋಬರಿ 108 ತಾಪಂ ಕ್ಷೇತ್ರಗಳು ಇವೆ. ಆದರೆ ರಾಜ್ಯ ಚುನಾವಣಾ ಆಯೋಗ ಹೊರಡಿಸಿರುವ ಕ್ಷೇತ್ರ ಪುನರ್‌ ವಿಗಂಡನೆ ಆದೇಶದ ಪ್ರಕಾರ ಜಿಪಂ ಒಟ್ಟು 28 ಕ್ಷೇತ್ರಗಳಿಂದ 31ಕ್ಕೆ ಏರಿಕೆಯಾಗಲಿದ್ದು 108 ಇರುವ ತಾಪಂ ಕ್ಷೇತ್ರಗಳ ಸಂಖ್ಯೆ ಜಿಲ್ಲೆಯಲ್ಲಿ 88ಕ್ಕೆ ಇಳಿಯಲಿದೆ. ಅಂದಹಾಗೆ ಜಿಪಂ ಕ್ಷೇತ್ರಗಳು ಪುನರ್‌ ವಿಗಂಡನೆ ವೇಳೆ 3 ಜಿಪಂ ಕ್ಷೇತ್ರಗಳು ಹೆಚ್ಚಾಗಲಿದ್ದು ತಾಪಂ 20 ಕ್ಷೇತ್ರಗಳು ಇಡೀ ಜಿಲ್ಲಾದ್ಯಂತ ತಮ್ಮ ಅಸ್ತಿತ್ವ ಕಳೆದುಕೊಂಡು ಒಟ್ಟು 88ಕ್ಕೆ ಕುಸಿಯಲಿದೆ.ಆ ಪೈಕಿ ಚಿಂತಾಮಣಿ, ಬಾಗೇಪಲ್ಲಿ ಹಾಗೂ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ತಲಾ ಒಂದು ಜಿಪಂ ಕ್ಷೇತ್ರ ಹೊಸದಾಗಿ ಅಸ್ತಿತ್ವಕ್ಕೆ ಬರಲಿದೆ.