ಬೆಳೆ ಸಮೀಕ್ಷೆ ರಾಜ್ಯಕ್ಕೆ ಚಿಕ್ಕಬಳ್ಳಾಪುರ ಪ್ರಥಮ
ಮುಂಗಾರು ಹಂಗಾಮಿನಲ್ಲಿ ರಾಜ್ಯಾದ್ಯಂತ ಸರ್ಕಾರ ನಡೆಸಿದ ಬೆಳೆ ಸಮೀಕ್ಷೆಯಲ್ಲಿ ಇಡೀ ರಾಜ್ಯಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದರೆ ಎರಡನೇ ಸ್ಥಾನದಲ್ಲಿ ಉಡುಪಿ ಜಿಲ್ಲೆ, ಮೂರನೇ ಸ್ಥಾನದಲ್ಲಿ ಮಂಡ್ಯ ಜಿಲ್ಲೆ ಇದ್ದು ಕೊನೆ ಸ್ಥಾನದಲ್ಲಿ ಹಾಸನ ಜಿಲ್ಲೆ ಇದೆ.
ಕಾಗತಿ ನಾಗರಾಜಪ್ಪ.
ಚಿಕ್ಕಬಳ್ಳಾಪುರ (ನ.04): ಮುಂಗಾರು ಹಂಗಾಮಿನಲ್ಲಿ ರಾಜ್ಯಾದ್ಯಂತ ಸರ್ಕಾರ ನಡೆಸಿದ ಬೆಳೆ ಸಮೀಕ್ಷೆಯಲ್ಲಿ ಇಡೀ ರಾಜ್ಯಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದರೆ ಎರಡನೇ ಸ್ಥಾನದಲ್ಲಿ ಉಡುಪಿ ಜಿಲ್ಲೆ, ಮೂರನೇ ಸ್ಥಾನದಲ್ಲಿ ಮಂಡ್ಯ ಜಿಲ್ಲೆ ಇದ್ದು ಕೊನೆ ಸ್ಥಾನದಲ್ಲಿ ಹಾಸನ ಜಿಲ್ಲೆ ಇದೆ.
ಪ್ರತಿ ವರ್ಷ ಮುಂಗಾರು (Monsoon) ಹಂಗಾಮಿನಲ್ಲಿ ನಡೆಸುವ ರೈತರ (Farmers) ಬೆಳೆ ಸಮೀಕ್ಷೆಯನ್ನು ಇದೇ ಮೊದಲ ಬಾರಿಗೆ ಕಾಲಮಿತಿಯೊಳಗೆ ಚಿಕ್ಕಬಳ್ಳಾಪುರ ಜಿಲ್ಲೆಯು ಶೇ.100 ರಷ್ಟುಪ್ರಗತಿ ಸಾಧಿಸುವ ಮೂಲಕ ಪ್ರಥಮ ಸ್ಥಾನಕ್ಕೇರಿ ರಾಜ್ಯದ ಗಮನ ಸೆಳೆದಿದೆ.
ಶೇ.100 ರಷ್ಟುಪ್ರಗತಿ:
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಟ್ಟು 6,51,133 ತಾಕುಗಳಿದ್ದು ಆ ಪೈಕಿ ನೀರಿನಿಂದ ಮುಳಗಡೆ ಆಗಿರುವ ಪ್ರದೇಶವನ್ನು ಹೊರತುಪಡಿಸಿ ಉಳಿದಂತೆ ಇಡೀ ಜಿಲ್ಲಾದ್ಯಂತ ಒಟ್ಟು 5,51,133 ತಾಕುಗಳಲ್ಲಿ ಬೆಳೆ ಸಮೀಕ್ಷೆಯನ್ನು ಜಿಲ್ಲೆಯಲ್ಲಿ ಪೂರ್ಣಗೊಳಿಸಲಾಗಿದೆ. ಬೆಳೆ ಸಮೀಕ್ಷೆಗಾಗಿ ಬರೋಬರಿ 751 ಖಾಸಗಿ ನಿವಾಸಿಗಳನ್ನು ನಿಯೋಜಿಸಲಾಗಿತ್ತು. ಕೃಷಿ ಇಲಾಖೆ, ಕಂದಾಯ, ತೋಟಗಾರಿಕೆ ಇಲಾಖೆ ಹಾಗೂ ರೇಷ್ಮೆ ಮತ್ತು ಸಾಂಖಿಕಿ ಇಲಾಖೆ ನಡೆಸಿ ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನ ಕಾಯ್ದುಕೊಂಡಿದೆ. ಇನ್ನೂ ಜಿಲ್ಲೆಯಲ್ಲಿ ನೀರಿನಲ್ಲಿ ಮುಳಗಿರುವ ಪ್ರದೇಶವು ಸರಿ ಸುಮಾರು 1 ಲಕ್ಷದಷ್ಟುತಾಕುಗಳಿದ್ದು ಅವುನ್ನು ಹೊರತುಪಡಿಸಿ ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆಯನ್ನು ಸರ್ಕಾರದ ಮಾರ್ಗಸೂಚಿಯಂತೆ ಕೃಷಿ ಇಲಾಖೆ ಪೂರ್ಣಗೊಳಿಸಿದೆ.
ಜಿಲ್ಲಾವಾರು ಬೆಳೆ ಸಮೀಕ್ಷೆ ಮಾಹಿತಿ:
ರಾಜ್ಯದಲ್ಲಿ ಮುಂಗಾರು ಹಂಗಾಮಿನಲ್ಲಿ ವಿವಿಧ ಇಲಾಖೆಗಳು ಕೃಷಿ ಇಲಾಖೆ ನೇತೃತ್ವದಲ್ಲಿ ನಡೆಸಿರುವ ಬೆಳೆ ಸಮೀಕ್ಷೆಯಲ್ಲಿ ಚಿಕ್ಕಬಳ್ಳಾಪುರದ ನಂತರ ಉಡುಪಿ ಜಿಲ್ಲೆ ಎರಡನೇ ಸ್ಥಾನದಲ್ಲಿದ್ದು ಶೇ.99.18 ರಷ್ಟುಪ್ರಗತಿ ಸಾಧಿಸಲಾಗಿದೆ. ಮೂರನೇ ಸ್ಥಾನದಲ್ಲಿರುವ ಬಳ್ಳಾರಿ ಜಿಲ್ಲೆ ಇದ್ದು ಶೇ.99.09 ರಷ್ಟುಪ್ರಗತಿ ಸಾಧಿಸಿದೆ. ನಾಲ್ಕನೇ ಸ್ಥಾನದಲ್ಲಿ ಮಂಡ್ಯ ಜಲ್ಲೆ ಶೇ.99.08 ರಷ್ಟುಪ್ರಗತಿ ಸಾಧಿಸಿದೆ. ಐದನೇ ಸ್ಥಾನದಲ್ಲಿ ಚಿತ್ರದುರ್ಗ ಜಿಲ್ಲೆ ಇದ್ದು ಶೇ.98.76 ರಷ್ಟುಬೆಳೆ ಸಮೀಕ್ಷೆ ನಡೆಸಲಾಗಿದೆ. 6ನೇ ಸ್ಥಾನದಲ್ಲಿ ಹೊಸ ಜಿಲ್ಲೆ ವಿಜಯನಗರ ಇದ್ದು ಶೇ.98.36 ರಷ್ಟುಪ್ರಗತಿ ಸಾಧಿಸಲಾಗಿದೆ. 7ನೇ ಸ್ಥಾನದಲ್ಲಿ ಪಕ್ಕದ ಬೆಂಗಳೂರು ಗ್ರಾಮಾಂತರ ಜಿಲ್ಲೆ ಇದ್ದು ಇಲ್ಲಿಯವರೆಗೂ ಶೇ.98.21 ರಷ್ಟುಬೆಳೆ ಸಮೀಕ್ಷೆ ನಡೆಸಲಾಗಿದೆ.
ಬೆಳೆ ಸಮೀಕ್ಷೆಗೆ ರೈತರ ಉತ್ಸಾಹ
ಕಳೆದ ಎರಡು ವರ್ಷಗಳಿಂದ ಜಿಲ್ಲಾದ್ಯಂತ ವ್ಯಾಪಕವಾಗಿ ಬೀಳುತ್ತಿರುವ ಮಳೆಯಿಂದ ಸೃಷ್ಟಿಯಾಗಿರುವ ಅತಿವೃಷ್ಟಿಯ ಪರಿಣಾಮ ರೈತರು ಅಪಾರ ಪ್ರಮಾಣದ ಕೈಗೆ ಬಂದ ಬೆಳೆಗಳನ್ನು ಮಳೆಯಿಂದ ಕಳೆದುಕೊಳ್ಳುತ್ತಿದ್ದು ಮಳೆ ಹಾನಿ ಸೇರಿದಂತೆ ಸರ್ಕಾರದಿಂದ ರೈತರು ಯಾವುದೇ ಬೆಳೆ ಹಾನಿಗೆ ಪರಿಹಾರ ಪಡೆಯಬೇಕಾದರೆ ಬೆಳೆ ಸಮೀಕ್ಷೆ ಕಡ್ಡಾಯಗೊಳಿಸಿರುವ ಪರಿಣಾಮ ಜಿಲ್ಲಾದ್ಯಂತ ಕೃಷಿ ಇಲಾಖೆ ನಡೆಸಿರುವ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಗೆ ರೈತರು ಹಿಂದೆಗಿಂತಲೂ ಈ ವರ್ಷ ಉತ್ತಮ ರೀತಿಯಲ್ಲಿ ಸ್ಪಂದಿಸಿರುವುದೇ ಶೇ.100 ರಷ್ಟುಬೆಳೆ ಸಮೀಕ್ಷೆ ಪೂರ್ಣಗೊಳಿಸಲು ಜಿಲ್ಲೆಯಲ್ಲಿ ಸಾಧ್ಯವಾಗಿದೆ.
ಚಿಕ್ಕಮಗಳೂರು, ಹಾಸನ ಜಿಲ್ಲೆ ಕೊನೆ
ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಯಲ್ಲಿ ರಾಜ್ಯದ ಉತ್ತರ ಕನ್ನಡ, ಚಿಕ್ಕಮಂಗಳೂರು ಹಾಗೂ ಹಾಸನ ಜಿಲ್ಲೆಗಳು ಬೆಳೆ ಸಮೀಕ್ಷೆಯಲ್ಲಿ ಕೊನೆ ಸ್ಥಾನದಲ್ಲಿವೆ.ಹಾಸನದಲ್ಲಿ ಬೆಳೆ ಸಮೀಕ್ಷೆ ಪ್ರಮಾಣ ಶೇ.79.36 ರಷ್ಟಿದೆ. ಇಡೀ ರಾಜ್ಯದಲ್ಲಿ ಬೆಳೆ ಸಮೀಕ್ಷೆ ಶೇ.97.02 ರಷ್ಟುಪ್ರಗತಿ ಸಾಧಿಸಲಾಗಿದೆ.
ಬೆಳೆ ಸಮೀಕ್ಷೆ ರಾಜ್ಯಕ್ಕೆ ಚಿಕ್ಕಬಳ್ಳಾಪುರ ಪ್ರಥಮ
ಶೇ.100 ರಷ್ಟುಪ್ರಗತಿ: 5,51,133 ತಾಕುಗಳ ಸಮೀಕ್ಷೆ ಪೂರ್ಣ
ಸಮೀಕ್ಷೆಯಲ್ಲಿ 751 ವ್ಯಕ್ತಿಗಳು ಭಾಗಿ
ಬೆಳೆ ಹಾನಿಗೆ ಪರಿಹಾರ ಪಡೆಯಬೇಕಾದರೆ ಬೆಳೆ ಸಮೀಕ್ಷೆ ಕಡ್ಡಾಯಗೊಳಿಸಿರುವ ಪರಿಣಾಮ
ಜಿಲ್ಲಾದ್ಯಂತ ಕೃಷಿ ಇಲಾಖೆ ನಡೆಸಿರುವ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ