ಮಣ್ಣು ಪರೀಕ್ಷಾ ಕೇಂದ್ರ ತೆರೆಯಲು ನಿರ್ಲಕ್ಷ್ಯ : ರೈತರ ಪರದಾಟ
- ಜಿಲ್ಲಾದ್ಯಂತ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳು ಸದ್ದಿಲ್ಲದೇ ಚುರುಕುಗೊಂಡಿವೆ.
- ಜಿಲ್ಲೆಯಾಗಿ 13 ವರ್ಷಗಳಿಂದಲೂ ಚಿಕ್ಕಬಳ್ಳಾಪುರದಿಂದಲೂ ಬೇಡಿಕೆ
- ಮಣ್ಣು ಪರೀಕ್ಷಾ ಕೇಂದ್ರ ತೆರೆಯಬೇಕೆಂಬ ಕೃಷಿ ಇಲಾಖೆ ಪ್ರಸ್ತಾವನೆ ಕಡತ ದೂಳು ತಿನ್ನುತ್ತಿದೆ.
ವರದಿ : ಕಾಗತಿ ನಾಗರಾಜಪ್ಪ.
ಚಿಕ್ಕಬಳ್ಳಾಪುರ (ಜು.13): ಜಿಲ್ಲಾದ್ಯಂತ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳು ಸದ್ದಿಲ್ಲದೇ ಚುರುಕುಗೊಂಡಿವೆ. ಆದರೆ ಜಿಲ್ಲೆಯಾಗಿ 13 ವರ್ಷಗಳಿಂದಲೂ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಮಣ್ಣು ಪರೀಕ್ಷಾ ಕೇಂದ್ರಕ್ಕಾಗಿ ರೈತರು ಚಾತಕ ಪಕ್ಷಿಗಳಂತೆ ಎದುರು ನೋಡುತ್ತಿದ್ದು ಮಣ್ಣು ಪರೀಕ್ಷಾ ಕೇಂದ್ರ ತೆರೆಯಬೇಕೆಂಬ ಕೃಷಿ ಇಲಾಖೆ ಪ್ರಸ್ತಾವನೆ ಕಡತ ದೂಳು ತಿನ್ನುತ್ತಿದೆ.
ಜಿಲ್ಲೆಯಲ್ಲಿ ಇರುವುದೊಂದೇ ಕೇಂದ್ರ
ಯಾವುದೇ ಬೆಳೆ ಇಡುವುದಕ್ಕೂ ಮೊದಲು ರೈತರು ಕಡ್ಡಾಯವಾಗಿ ಮಣ್ಣು ಪರೀಕ್ಷೆ ನಡೆಸಬೇಕು ಎಂಬುದು ಕೃಷಿ ತಜ್ಞರ ಸಲಹೆ. ವೈಜ್ಞಾನಿಕಯು ಮಣ್ಣು ಪರೀಕ್ಷೆ ನಡೆಸುವುದು ತೀರಾ ಅವಶ್ಯಕ. ಆದರೆ ಜಿಲ್ಲೆಯಲ್ಲಿ ಚಿಂತಾಮಣಿ ಹೊರತುಪಡಿಸಿ ಉಳಿದ ಯಾವುದೇ ತಾಲೂಕಿನಲ್ಲಿ ಮಣ್ಣು ಪರೀಕ್ಷಾ ಕೇಂದ್ರ ಇಲ್ಲದ ಕಾರಣಕ್ಕೆ ರೈತರು ಮಣ್ಣು ಪರೀಕ್ಷೆಗಾಗಿ ಪ್ರತಿ ವರ್ಷ ಖಾಸಗಿ ಪ್ರಯೋಗಾಲಯಗಳ ಮೊರೆ ಹೋಗಿ ಸಾವಿರಾರು ರುಪಾಯಿ ಪಾವತಿಸುವ ದುಸ್ಥಿತಿ ನಿರ್ಮಾಣವಾಗಿದೆ.
ಬೆಳೆ ಸಮೀಕ್ಷೆಗೆ ಈಗಲೂ ರೈತರ ಹಿಂಜರಿಕೆ..!
ವೈಜ್ಞಾನಿಕವಾದ ಸಂಶೋಧನೆ ಪ್ರಕಾರ ಮಣ್ಣಿನಲ್ಲಿರುವ ಪೋಷಕಾಂಶಗಳ ಲಭ್ಯತೆ, ಪ್ರಮಾಣ, ಸೂಕ್ತ ಬೆಳೆ ನಿರ್ಧರಿಸಲು ಹಾಗೂ ಬೆಳೆಗಳಿಗೆ ಹಾಕುವ ರಸಗೊಬ್ಬರಗಳ ಪ್ರಮಾಣವನ್ನು ನಿರ್ಧರಿಸಲು ಮಣ್ಣಿ ಪರೀಕ್ಷೆ ಅತ್ಯವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಕೃಷಿ ಪ್ರಧಾನವಾದ ಜಿಲ್ಲೆಯಲ್ಲಿ ಲಕ್ಷಾಂತರ ಕುಟುಂಬಗಳು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿವೆ. ಪ್ರತಿ ವರ್ಷ 1.50 ಲಕ್ಷಕ್ಕಿಂತ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳು ನಡೆದ ಬಿತ್ತನೆ ಕಾರ್ಯ ನಡೆಯುತ್ತದೆ.
ಸೂಕ್ತ ಬೆಳೆ ನಿರ್ಧರಿಸಲು ಅನುಕೂಲ
ಇಲ್ಲದೇ ಸುಮಾರು 1 ಲಕ್ಷಕ್ಕಿಂತ ಹೆಚ್ಚಿನ ಪ್ರದೇಶದಲ್ಲಿ ನೀರಾವರಿ ಅಶ್ರಯದಿಂದ ವಾಣಿಜ್ಯ ಬೆಳೆಗಳು ಬೆಳೆಯಲಾಗುತ್ತದೆ. ಆದರೆ ಪ್ರತಿ ವರ್ಷ ಅಥವಾ ಬೆಳೆ ಇಡುವ ಮುನ್ನ ರೈತರು ಕಡ್ಡಾಯವಾಗಿ ಮಣ್ಣು ಪರೀಕ್ಷೆ ನಡೆಸುವುದರಿಂದ ಸಾಕಷ್ಟುಅನುಕೂಲವಾಗುತ್ತದೆ. ಮಣ್ಣಿನ ಪರೀಕ್ಷೆಯ ಫಲಿತಾಂಶ ಆಧರಿಸಿ ಕೆಲವೊಮ್ಮೆ ಸೂಕ್ತ ಬೆಳೆ ಇಡುವುದನ್ನು ನಿರ್ಧರಿಸಲಾಗುತ್ತದೆ. ರಸಗೊಬ್ಬರಗಳ ಪ್ರಮಾಣ ನಿರ್ಧಾರವಾಗುತ್ತದೆ. ಆದರೆ ಜಿಲ್ಲಾ ಕೇಂದ್ರದಲ್ಲಿ ಕೃಷಿ ಇಲಾಖೆಗೆ ಸೇರಿದ ಮಣ್ಣು ಪರೀಕ್ಷಾ ಕೇಂದ್ರ ಇಲ್ಲದೇ ಜಿಲ್ಲೆಯ ಐದು ತಾಲೂಕುಗಳ ಲಕ್ಷಾಂತರ ರೈತರು ಮಣ್ಣು ಪರೀಕ್ಷೆಗಾಗಿ ಪರದಾಟ ನಡೆಸಿ ಬೆಂಗಳೂರು ಮತ್ತಿತರ ಕಡೆಗಳಿಗೆ ತೆರಬೇಕಾದ ಅನಿರ್ವಾಯತೆ ಉಂಟಾಗಿದೆ.
ಚಿಕ್ಕಬಳ್ಳಾಪುರ : ಆನ್‌ಲೈನ್ ಮೂಲಕ 1 ಕೋಟಿ ಮೌಲ್ಯದ ಮಾವು ಮಾರಾಟ
ಮಣ್ಣು ಚೀಟಿ ವಿತರಣೆ: ಜಿಲ್ಲೆಯಲ್ಲಿ ಕೃಷಿ ಇಲಾಖೆ ಮೂಲಕ ಸಾವಿರಾರು ರೈತರಿಗೆ ಮಣ್ಣೂ ಪರೀಕ್ಷಾ ಚೀಟಿಗಳನ್ನು ವಿತರಿಸಲಾಗಿದೆ. ಆದರೆ ಅವು ಈಗ ಲೆಕ್ಕಕ್ಕುಂಟು ಆಟಕ್ಕಿಲ್ಲ ಎಂಬಂತಾಗಿದೆ. ಜಿಲ್ಲಾ ಕೇಂದ್ರದಲ್ಲಿ ಸರ್ಕಾರಿ ಮಣ್ಣು ಪರೀಕ್ಷಾ ಕೇಂದ್ರ ಇಲ್ಲದೇ ಅನ್ನದಾತರು ಇನ್ನಿಲ್ಲದ ಪಡಿಪಾಟಲು ಅನುಭವಿಸುವಂತಾಗಿದ್ದು ಜಿಲ್ಲೆಯ ಜಿಲ್ಲಾಡಳಿತ, ಜನಪ್ರತಿನಿಧಿಗಳು ಇತ್ತ ಕಡೆ ಗಮನ ಹರಿಸಬೇಕಿದೆ.
ಮಣ್ಣು ಪರೀಕ್ಷಾ ಕೇಂದ್ರ ಜಿಲ್ಲೆಗೆ ಒಂದೇ ಇರುವುದು. ಚಿಕ್ಕಬಳ್ಳಾಪುರ ಕೇಂದ್ರ ಸ್ಥಾನವಾಗಿ ಇರಿಸಿಕೊಂಡು ಮಣ್ಣು ಪರೀಕ್ಷಾ ಕೇಂದ್ರ ತೆರೆಯಬೇಕೆಂದು ಈಗಾಗಲೇ ಸರ್ಕಾರಕ್ಕೆ ಕೃಷಿ ಇಲಾಖೆಯಿಂದ ಪ್ರಸ್ತಾವನೆ ಕಳಿಸಲಾಗಿದೆ. ಸರ್ಕಾರ ಮಂಜೂರಾತಿ ಕೊಟ್ಟತಕ್ಷಣವೇ ಚಿಕ್ಕಬಳ್ಳಾಪುರದಲ್ಲಿ ಮಣ್ಣು ಪರೀಕ್ಷಾ ಕೇಂದ್ರ ತೆರೆಯಲಾಗುವುದು.
ಎಲ್.ರೂಪ, ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ, ಚಿಕ್ಕಬಳ್ಳಾಪುರ.
ಮಣ್ಣು ಪರೀಕ್ಷಾ ಕೇಂದ್ರ ದೂರ
ಜಿಲ್ಲೆಯಲ್ಲಿ ಕೃಷಿ ಇಲಾಖೆಯಡಿ ಕೇವಲ ಒಂದೇ ಒಂದು ಮಣ್ಣು ಪರೀಕ್ಷಾ ಕೇಂದ್ರ ಇದ್ದು ಅದು ಜಿಲ್ಲೆಯ ಚಿಂತಾಮಣಿ ತಾಲೂಕಿನ ಕಾಗತಿಯಲ್ಲಿರುವ ಕೃಷಿ ತರಬೇತಿ ಕೇಂದ್ರದ ಆವರಣದಲ್ಲಿ ಇದೆ. ಜಿಲ್ಲೆಯ ಗೌರಿಬಿದನೂರು, ಗುಡಿಬಂಡೆ, ಬಾಗೇಪಲ್ಲಿ ತಾಲೂಕುಗಳ ರೈತರು ಮಣ್ಣು ಪರೀಕ್ಷಾ ಕೇಂದ್ರಕ್ಕೆ ಹೋಗಬೇಕಾದರೆ 80 ಕಿ.ಮೀ ದೂರ ಬರಬೇಕು.. ಹೀಗಾಗಿ ಬಹಳಷ್ಟುರೈತರ ಮಣ್ಣು ಪರೀಕ್ಷೆಗಾಗಿ ಸೂಕ್ತ ವ್ಯವಸ್ಥೆ ಇಲ್ಲದೇ ಪರದಾಡುವಂತಾಗಿದೆ.