Asianet Suvarna News Asianet Suvarna News

ಬೆಳೆ ಸಮೀಕ್ಷೆಗೆ ಈಗಲೂ ರೈತರ ಹಿಂಜರಿಕೆ..!

* ನಮಗೆ ಗೊತ್ತಾಗ್ತಾ ಇಲ್ಲ; ಇಂಟರ್‌ನೆಟ್‌ ಕೂಡ ಸರಿಯಾಗಿ ಸಿಗುತ್ತಿಲ್ಲ
* ಶೇ.60ಕ್ಕೂ ಹೆಚ್ಚು ರೈತರು ಬೆಳೆ ಸಮೀಕ್ಷೆಗೆ ಖಾಸಗಿ ವ್ಯಕ್ತಿಗಳಿಂದ ಪೂರ್ಣ
* ಸಮೀಕ್ಷೆಗಾಗಿ ಧಾರವಾಡ ಜಿಲ್ಲೆಯಲ್ಲಿ ಒಟ್ಟು 409 ಖಾಸಗಿ ವ್ಯಕ್ತಿಗಳ ನೇಮಕ 
 

Still Farmers Hesitation to Crop Survey in Dharwad grg
Author
Bengaluru, First Published Jul 10, 2021, 11:39 AM IST

ಶಿವಾನಂದ ಗೊಂಬಿ

ಹುಬ್ಬಳ್ಳಿ(ಜು.10): ‘ನಮಗ ಈ ಮೊಬೈಲನ್ಯಾಗ ಸಮೀಕ್ಷೆ ಮಾಡಾಕ್‌ ಗೊತ್ತಾಗಂಗಿಲ್ಲ ಬಿಡ್ರಿ.. ಅದು ಏನೇನೋ ಕೇಳತೈತಿ.. ಅದ್ಯಾರೋ ಖಾಸಗಿ ವ್ಯಕ್ತಿಗಳನ್ನು ನೇಮಸ್ಯಾರಂಥ ಅವರ ಬರಲಿ ಅಂತ ಕಾಯಾಕ್ಕತ್ತೇನಿ’..!

ಇಲ್ಲಿನ ಸುಳ್ಳ ಗ್ರಾಮದ ರೈತ ಕಲ್ಮೇಶ ಹೇಳುವ ಮಾತಿದು. ಸರ್ಕಾರ ಬೆಳೆ ಸಮೀಕ್ಷೆಯನ್ನು ರೈತರೇ ಮಾಡಲಿ ಎಂಬ ಉದ್ದೇಶದಿಂದ ಕಳೆದ ವರ್ಷ ಆ್ಯಪ್‌ನ್ನು ಪರಿಚಯಿಸಿದೆ. ಪ್ರಕೃತಿ ವಿಕೋಪ, ಕನಿಷ್ಠ ಬೆಂಬಲ ಬೆಲೆ ಘೋಷಣೆ, ಬೆಳೆವಿಮೆ ಪರಿಹಾರದ ವೇಳೆ ಫಲಾನುಭವಿಗಳ ಪಟ್ಟಿ ತಯಾರಿಸಲು ಬೆಳೆ ಸಮೀಕ್ಷೆ ಬೇಕೆ ಬೇಕು. ಈ ಕಾರಣದಿಂದಲೇ ಈ ಆ್ಯಪ್‌ನ್ನು ಸಿದ್ಧಪಡಿಸಿರುವುದು. ಆದರೆ ರೈತರು ಮಾತ್ರ ಈ ಆ್ಯಪ್‌ ಬಳಕೆ ಮಾಡಲು ಈಗಲೂ ಹಿಂಜರಿಯುತ್ತಿದ್ದಾರೆ. ನಮಗೆ ಆ್ಯಪ್‌ ಬಳಕೆ ಗೊತ್ತಾಗುತ್ತಿಲ್ಲ. ಗೊತ್ತಾದರೂ ನೆಟ್‌ವರ್ಕ್ ಸಮಸ್ಯೆಯಿಂದ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕೃಷಿ ಇಲಾಖೆ ನೇಮಿಸುವ ಖಾಸಗಿ ವ್ಯಕ್ತಿಗಳನ್ನೇ ಬೆಳೆ ಸಮೀಕ್ಷೆಗೆ ರೈತರು ನೆಚ್ಚಿಕೊಳ್ಳುವಂತಾಗಿತ್ತು.

ಕಳೆದ ವರ್ಷ ಆ್ಯಪ್‌ನ್ನು ಮೊದಲ ಬಾರಿಗೆ ಬಳಕೆ ಮಾಡುತ್ತಿದ್ದರಿಂದ ರೈತರಿಗೆ ಸಮಸ್ಯೆಯಾಗದಿರಲಿ ಎಂಬ ಉದ್ದೇಶದಿಂದ ಕೃಷಿ ಇಲಾಖೆ ಖಾಸಗಿ ವ್ಯಕ್ತಿಗಳನ್ನು ನೇಮಿಸಿ ಅವರ ಮೂಲಕ ಬೆಳೆ ಸಮೀಕ್ಷೆ ನಡೆಸಿತ್ತು. ಈ ವರ್ಷ ಕೂಡ ರೈತರು ಆ್ಯಪ್‌ ಬಳಕೆ ಮಾಡಿಕೊಳ್ಳಲು ಹಿಂಜರಿಯುತ್ತಿರುವ ಕಾರಣದಿಂದ ಮತ್ತೆ ಖಾಸಗಿ ವ್ಯಕ್ತಿಗಳನ್ನು ನೇಮಕ ಮಾಡಿಕೊಂಡಿದೆ. ಧಾರವಾಡ ಜಿಲ್ಲೆಯಲ್ಲಿ ಒಟ್ಟು 409 ಖಾಸಗಿ ವ್ಯಕ್ತಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಇವರು ಯಾವ ರೈತರು ತಾವೇ ಸಮೀಕ್ಷೆ ನಡೆಸಲು ಹಿಂಜರಿಯುತ್ತಾರೋ ಅಂಥವರ ಹೊಲಗಳಿಗೆ ತೆರಳಿ ಸಮೀಕ್ಷೆ ನಡೆಸುತ್ತಾರೆ. ಪ್ರತಿ ಪ್ಲಾಟ್‌ಗೆ 10 ರು.ಯಂತೆ ಗೌರವ ಧನ ನೀಡಲಾಗುತ್ತಿದೆ. ಒಂದು ವೇಳೆ ಮಿಶ್ರ ಬೆಳೆಗಳೇನಾದರೂ ಇದ್ದರೆ ಒಂದು ಬೆಳೆಗೆ ಹೆಚ್ಚುವರಿ 5 ರು.ಯಂತೆ ಗೌರವ ಧನ ನೀಡಲಾಗುತ್ತಿದೆ.

ರೈತರ ಬೆಳೆ ಸಮೀಕ್ಷೆಗೆ ಕೃಷಿ ಇಲಾಖೆಯಿಂದ ಆ್ಯಪ್‌ ಬಿಡುಗಡೆ

3 ಲಕ್ಷ ಪ್ಲಾಟ್‌ ಸಮೀಕ್ಷೆ

ಬೆಳೆ ಸಮೀಕ್ಷೆಯನ್ನು ಪ್ಲಾಟ್‌ ಎಂಬ ಆಧಾರದಲ್ಲಿ ಮಾಡಲಾಗುತ್ತಿದೆ. ಒಂದು ಪ್ಲಾಟ್‌ ಎಂದರೆ ಒಬ್ಬ ರೈತನ ಹೆಸರಲ್ಲಿರುವ ಹೊಲ. ಒಂದು ಎಕರೆಯಲ್ಲಿ ಇಬ್ಬರು ಅಥವಾ ಮೂವರ ಹಿಸ್ಸಾ ಇದ್ದರೆ, 2-3 ಪ್ಲಾಟ್‌ ಎಂದೇ ಪರಿಗಣಿಸಲಾಗುತ್ತದೆ. ಇಂತಹ ಒಟ್ಟು 3 ಲಕ್ಷ ಪ್ಲಾಟ್‌ಗಳ ಸಮೀಕ್ಷೆ ನಡೆಸಬೇಕಿದೆ. ಜು. 1ರಿಂದ ಪ್ರಾರಂಭವಾಗಿರುವ ಈ ಬೆಳೆ ಸಮೀಕ್ಷೆಯಲ್ಲಿ ಈವರೆಗೆ ಬರೀ 1270 ರೈತರು ಮಾತ್ರ ಮಾಡಿ ಅಪ್‌ಲೋಡ್‌ ಮಾಡಿರುವುದುಂಟು.

ರೈತರಿಗೇನು ಸಮಸ್ಯೆ?

ಹಳ್ಳಿಗಳಲ್ಲಿ ನೆಟ್‌ವರ್ಕ್ ಸಮಸ್ಯೆ ಇರುತ್ತದೆ. ಊರಲ್ಲಿ ನೆಟ್‌ವರ್ಕ್ ಬಂದರೆ ಹೊಲದಲ್ಲಿ ಬರಲ್ಲ. ಆಧಾರ್‌ ಕಾರ್ಡ್‌ ಸ್ಕ್ಯಾನ್‌ ಮಾಡಲು ಆ್ಯಪ್‌ನಲ್ಲಿ ಸಾಧ್ಯವಾಗಲ್ಲ. ಏನಾದರೂ ಸ್ವಲ್ಪ ಏರುಪೇರಾದರೆ ‘ಮಿಸ್‌ ಮ್ಯಾಚ್‌’ ಎಂಬ ಸಂದೇಶ ಬರುತ್ತದೆ. ಏನಾದರೂ ತಪ್ಪಾದರೆ ಹೇಗೆ ಎಂಬ ಭಯ ಕಾಡುತ್ತದೆ. ಹೀಗಾಗಿ ಶೇ. 60ಕ್ಕೂ ಹೆಚ್ಚು ರೈತರು ಕೃಷಿ ಇಲಾಖೆಯ ಖಾಸಗಿ ವ್ಯಕ್ತಿಗಳನ್ನೇ ನೆಚ್ಚಿಕೊಂಡಿದ್ದಾರೆ. ಶೇ. 40ಕ್ಕಿಂತ ಕಡಿಮೆ ಸಂಖ್ಯೆಯ ಯುವ ರೈತರು, ಸ್ಮಾರ್ಟ್‌ಫೋನ್‌ ಬಳಸುವ ರೈತರು ಮಾತ್ರ ತಾವೇ ಸಮೀಕ್ಷೆ ಮಾಡಿಕೊಳ್ಳುತ್ತಿದ್ದಾರೆ.

ಖಾಸಗಿ ವ್ಯಕ್ತಿಗಳಿಗೆ ಇಂಟರ್‌ನೆಟ್‌ ಸಮಸ್ಯೆ ಎದುರಾಗುವುದಿಲ್ಲವೇ ಎಂಬ ಪ್ರಶ್ನೆ ಸಹಜ. ಈ ಖಾಸಗಿ ವ್ಯಕ್ತಿಗಳು ಎರಡ್ಮೂರು ನೆಟ್‌ವರ್ಕ್‌ಗಳ ಮೊಬೈಲ್‌ ಇಟ್ಟುಕೊಂಡು ಸಮೀಕ್ಷೆ ನಡೆಸಲು ತೆರಳುತ್ತಿದ್ದಾರೆ. ಆ ಹೊಲದಲ್ಲಿ ಯಾವ ನೆಟ್‌ವರ್ಕ್ ಬರುತ್ತದೆಯೋ ಆ ಮೊಬೈಲ್‌ನಿಂದ ಸಮೀಕ್ಷೆ ನಡೆಸಿ ಕೊಡುತ್ತಿದ್ದಾರೆ.

ಆ್ಯಪ್‌ ಬಳಕೆ ಸಲೀಸಾಗಿದೆ. ರೈತರು ಕೊಂಚ ಅರಿತುಕೊಂಡು ತಾವೇ ಸಮೀಕ್ಷೆ ನಡೆಸಲು ಮುಂದಾಗಬೇಕು ಎಂಬ ಮಾತು ಕೃಷಿ ಇಲಾಖೆ ಅಧಿಕಾರಿಗಳದ್ದು. ಒಟ್ಟಿನಲ್ಲಿ ಸರ್ಕಾರ ಆ್ಯಪ್‌ ಪರಿಚಯಿಸಿದರೂ ಈ ವರೆಗೂ ರೈತರು ಮಾತ್ರ ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದು ಮಾತ್ರ ಸತ್ಯ.

ರೈತರು ಸಣ್ಣದಾಗಿ ಕಲಿಯುತ್ತಿದ್ದಾರೆ. ಕೆಲ ರೈತರು ತಾವೇ ಸಮೀಕ್ಷೆ ನಡೆಸುತ್ತಿದ್ದಾರೆ. ಇನ್ನು ಕೆಲ ರೈತರಿಗೆ ಸಾಧ್ಯವಾಗುತ್ತಿಲ್ಲ. ಅಂಥ ರೈತರಿಗಾಗಿ ಖಾಸಗಿ ವ್ಯಕ್ತಿಗಳನ್ನು ನೇಮಿಸಿ ಅವರ ಮೂಲಕ ಸಮೀಕ್ಷೆ ಮಾಡಿಸುತ್ತಿದ್ದೇವೆ ಎಂದು ಜಂಟಿ ಕೃಷಿ ನಿರ್ದೇಶಕ ರಾಜಶೇಖರ ಬಿಜಾಪುರನ ತಿಳಿಸಿದ್ದಾರೆ. 
 

Follow Us:
Download App:
  • android
  • ios