ಚಿಕ್ಕಬಳ್ಳಾಪುರ(ಜ.02]  ಉತ್ತಮ ಕರ್ತವ್ಯ ನಿರ್ವಹಿಸಿದ ಸಂಚಾರಿ ಎಎಸ್‌ಐ ಅವರಿಗೆ ನಗದು ಬಹುಮಾನ ನೀಡುವ ಜೊತೆಗೆ ಸೇವಾ ಪುಸ್ತಕದಲ್ಲಿ ಉತ್ತಮ ಕರ್ತವ್ಯ ನಿರ್ವಹಣೆ ನಮೂದಿಸುವಂತೆ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು ಮತ್ತು ಸಂಚಾರ ಮತ್ತು ರಸ್ತೆ ಸುರಕ್ಷತೆ ಆಯುಕ್ತರಾದ ಪಿ.ಎಸ್. ಸಂಧು ಅವರು ಇಲ್ಲಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆದಿದ್ದಾರೆ.

ನಗರದ ಸಂಚಾರಿ ಠಾಣೆಯಲ್ಲಿ ಎಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಎಂ. ವೇಣುಗೋಪಾಲ್ ಅವರು, ಕಳೆದ ಡಿ.22ರಂದು ನಗರದ ಹೊರವಲಯದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಕರ್ತವ್ಯ ನಿರತರಾಗಿದ್ದ ವೇಳೆ 150 ಕಿಲೋಮೀಟರ್ ವೇಗದಲ್ಲಿ ಸಾಗುತ್ತಿದ್ದ ಕ್ರೂಸರ್ ಕಂಡು ತಡೆದಿದ್ದಾರೆ. ಅಲ್ಲದೆ ಅತಿ ವೇಗಕ್ಕಾಗಿ ದಂಡ ಪಾವತಿಸುವಂತೆ ಸೂಚಿಸಿದ್ದಾರೆ.

ಆದೇಶ ಸಂಕಷ್ಟ: ಕರುನಾಡ ಮಹಿಳಾ ಪೊಲೀಸರ ಮನಮಿಡಿಯುವ ಕಥೆ..!

ಆದರೆ ಕ್ರೂಸರ್‌ನಲ್ಲಿದ್ದ ವ್ಯಕ್ತಿ ತಾವು ಎಡಿಜಿಪಿ ಅವರ ಆಪ್ತರು ಎಂದು ಹೇಳಿದ್ದು, ಯಾರೇ ಆಗಿರಲ್ಲಿ, ಕಾನೂನು ಉಲ್ಲಂಘನೆಗೆ ದಂಡ ಪಾವತಿಸುವಂತೆ ಸೂಚಿಸಿದ್ದಾರೆ. ಈ ವಿಚಾರ ಎಡಿಜಿಪಿ ಅವರ ಗಮನಕ್ಕೆ ಬಂದಿದ್ದು, ಕರ್ತವ್ಯ ಪಾಲನೆಯಲ್ಲಿ ಯಾವುದೇ ಮುಲಾಜಿಗೆ ಒಳಗಾಗದ ಅಧಿಕಾರಿಯನ್ನು ಅಭಿನಂದಿಸುವಂತೆ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ ಅವರಿಗೆ ಪತ್ರ ಬರೆದು ನಗದು ಬಹುಮಾನ ಮತ್ತು ಉತ್ತಮ ಕರ್ತವ್ಯ ಪಾಲನೆ ನಮೂದಿಸುವಂತೆ ಸೂಚಿಸಿದ್ದಾರೆ.