ಬೆಂಗಳೂರು (ನ.04):  ಕೊರೋನಾ ವಾರಿಯರ್‌ ಆಗಿ ಕಾರ್ಯನಿರ್ವಹಿಸಿ ಕೊರೊನಾ ಸೋಂಕಿಗೊಳಗಾಗಿ ಗಂಭೀರ ಸ್ಥಿತಿಯಲ್ಲಿರುವ ಮೂತ್ರಪಿಂಡ ತಜ್ಞ ಡಾ.ಬಾಲಾಜಿ ಪ್ರಸಾದ್‌ ಅವರ ಚಿಕಿತ್ಸೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 25 ಲಕ್ಷ ನೀಡಲು ನಿರ್ಧರಿಸಲಾಗಿದೆ.

ಬೆಂಗಳೂರಿನ ಮೂತ್ರಪಿಂಡ ತಜ್ಞ ಡಾ.ಬಾಲಾಜಿ ಪ್ರಸಾದ್‌ ಅವರು 100ಕ್ಕೂ ಅಧಿಕ ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡಿ ಕೊರೋನಾ ವಾರಿಯರ್‌ ಹೀರೋ ಎಂದು ಹೆಸರು ಪಡೆದಿದ್ದರು. ಅವರ ಸೇವೆಯ ಕುರಿತು ಮಾಧ್ಯಮಗಳಲ್ಲೂ ಸುದ್ದಿ ಪ್ರಸಾರವಾಗಿತ್ತು. ಬಳಿಕ ಬಾಲಾಜಿ ಪ್ರಸಾದ್‌ ಅವರಿಗೂ ಸೋಂಕು ತಗುಲಿದ್ದು, ಶೇಷಾದ್ರಿಪುರ ಅಪೋಲೊ ಆಸ್ಪತ್ರೆಯಲ್ಲಿ ಕಳೆದ 37 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾಲಾಜಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, 26 ದಿನಗಳಿಂದ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದೇಶದ ಪ್ರತಿ ಪ್ರಜೆಗೂ ಕೊರೊನಾ ಲಸಿಕೆ: ಪ್ರಧಾನಿ ಮೋದಿ ವಾಗ್ದಾನ

ವೈದ್ಯರ ಶ್ವಾಸಕೋಶಕ್ಕೆ ಹಾನಿಯಾಗಿರುವುದರಿಂದ ಶ್ವಾಸಕೋಶ ಕಸಿ ಶಸ್ತ್ರಚಿಕಿತ್ಸೆ ಮಾಡಬೇಕಿದೆ. ಇದಕ್ಕೆ ಲಕ್ಷಾಂತರ ರುಪಾಯಿ ವೆಚ್ಚವಾಗಲಿದ್ದು, ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಹಣ ಸಹಾಯ ಮಾಡಬೇಕು ಎಂದು ಕೋರಲಾಗಿತ್ತು.

ಸಚಿವ ಡಾ.ಕೆ.ಸುಧಾಕರ್‌ ಅವರು ಈ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದು, ಶೀಘ್ರದಲ್ಲೇ ಹಣ ಬಿಡುಗಡೆ ತೀರ್ಮಾನ ಕೈಗೊಳ್ಳಲು ಪ್ರಯತ್ನ ಮಾಡಿದ್ದರು. ಸಚಿವರ ಪ್ರಯತ್ನದ ಫಲವಾಗಿ ಸಿಎಂ ಪರಿಹಾರ ನಿಧಿಯಿಂದ .25 ಲಕ್ಷ ನೀಡುವುದಾಗಿ ಸಿಎಂಆರ್‌ಎಫ್‌ ಹಿರಿಯ ಅಧಿಕಾರಿ ತಿಳಿಸಿದ್ದಾರೆ.