ಕೆಜಿಗೆ 60 ರೂಪಾಯಿಗಿಳಿದ ಕೋಳಿ ಬೆಲೆ, ಕುರಿ ಮಾಂಸಕ್ಕೆ ಭಾರೀ ಬೇಡಿಕೆ
ಜಿಲ್ಲೆಯಲ್ಲಿ ಕೋಳಿ ಮಾಂಸದ ಬೆಲೆ ತೀವ್ರ ರೂಪದಲ್ಲಿ ಇಳಿಮುಖವಾಗಿದ್ದು, ಕೋಳಿಮಾಂಸ ಸೇವಿಸುವುದರಿಂದಲೇ ಕೊರೋನ ಬರುತ್ತದೆ ಎಂಬ ವದಂತಿಗಳನ್ನು ಹಬ್ಬಿಸಲಾಗಿದ್ದು, ಇದರಿಂದ ಕೋಳಿ ಮಾಂಸ ಖರೀದಿಸುವವರ ಸಂಖ್ಯೆಯೇ ಕಡಿಮೆಯಾಗಿದೆ. ಹಾಗಾಗಿ ಸಹಜವಾಗಿಯೇ ಬೇಡಿಕೆ ಕುಸಿದಿದ್ದು, ಬೆಲೆಯಲ್ಲಿಯೂ ಬಾರೀ ಇಳಿಕೆಯಾಗಿದೆ.
ಚಿಕ್ಕಬಳ್ಳಾಪುರ(ಮಾ.10): ಮಾಸ್ಕ್, ಸ್ಯಾನಿಟೈಜರ್ ಸೇರಿದಂತೆ ಹಲವು ವಸ್ತುಗಳ ಬೇಡಿಕೆ ಜೊತೆಗೆ ಬೆಲೆಯನ್ನೂ ಹೆಚ್ಚಿಸಿರುವ ಮಾರಕ ರೋಗ ಕೊರೋನ ಹಲವು ಪದಾರ್ಥಗಳ ಬೆಲೆ ಕುಸಿತಕ್ಕೂ ಕಾರಣವಾಗಿದ್ದು, ಬೆಳೆಗಾರರು ತೀವ್ರ ನಷ್ಟದ ಜೊತೆಗೆ ಆತಂಕ ಎದುರಿಸುವಂತಾಗಿದೆ.
ಜಿಲ್ಲೆಯಾದ್ಯಂತ ಔಷಧಿ ಅಂಗಡಿಗಳಲ್ಲಿ ಸಿಗುವ ಮಾಸ್ಕ್, ಸ್ಯಾನಿಟೈಜರ್‌ಗಳ ಬೇಡಿಕೆ ಹೆಚ್ಚಾಗಿದ್ದು, ಹಲವು ಶಾಲೆಗಳು, ವೈದ್ಯರು, ಸೇರಿದಂತೆ ಹಲವು ಕಡ್ಡಾಯವಾಗಿ ಮಾಸ್ಕ್ ಧರಿಸುತ್ತಿದ್ದಾರೆ. ಇದರಿಂದಾಗಿ ಏಕಾಏಕಿ ಮಾಸ್ಕ್ ಬೆಲೆಯಲ್ಲಿಯೂ ಹೆಚ್ಚಳ ಮಾಡಲಾಗಿದ್ದು, ಬೆಲೆ ಹೆಚ್ಚಾದರೂ ಹಿಂದೇಟು ಹಾಕದ ಗ್ರಾಹಕರು ಕೊರೋನ ಭೀತಿಯಲ್ಲಿ ಖರೀದಿಸುತ್ತಿದ್ದಾರೆ.
ಕುಸಿದ ಕೋಳಿಮಾಂಸದ ಬೆಲೆ
ಜಿಲ್ಲೆಯಲ್ಲಿ ಕೋಳಿ ಮಾಂಸದ ಬೆಲೆ ತೀವ್ರ ರೂಪದಲ್ಲಿ ಇಳಿಮುಖವಾಗಿದ್ದು, ಕೋಳಿಮಾಂಸ ಸೇವಿಸುವುದರಿಂದಲೇ ಕೊರೋನ ಬರುತ್ತದೆ ಎಂಬ ವದಂತಿಗಳನ್ನು ಹಬ್ಬಿಸಲಾಗಿದ್ದು, ಇದರಿಂದ ಕೋಳಿ ಮಾಂಸ ಖರೀದಿಸುವವರ ಸಂಖ್ಯೆಯೇ ಕಡಿಮೆಯಾಗಿದೆ. ಹಾಗಾಗಿ ಸಹಜವಾಗಿಯೇ ಬೇಡಿಕೆ ಕುಸಿದಿದ್ದು, ಬೆಲೆಯಲ್ಲಿಯೂ ಬಾರೀ ಇಳಿಕೆಯಾಗಿದೆ.
ಕೋಳಿಗೆ 60 ರಿಂದ 65 ರೂಪಾಯಿ ಇಳಿತ..!
ಈವರೆಗೆ ಪ್ರತಿ ಕೆಜಿ ಕೋಳಿಮಾಂಸ 200 ರುಪಾಯಿವರೆಗೂ ಮಾರಾಟವಾಗುತ್ತಿದ್ದು, ಪ್ರಸ್ತುತ ಕೊರೋನ ಭೀತಿಯಿಂದಾಗಿ ಇದನ್ನು ಕೇವಲ 60 ರುಪಾಯಿಗೆ ಮಾರಾಟ ಮಾಡಲಾಗುತ್ತಿದೆ. 60 ರುಪಾಯಿಗೆ ಮಾರಾಟ ಮಾಡಿದರೂ ಖರೀದಿಸುವ ಗ್ರಾಹಕರಿಲ್ಲದೆ ಪರದಾಡುವಂತಾಗಿದೆ.
ಮಾಲೀಕರಲ್ಲಿ ಆತಂಕ
ಪ್ರಸ್ತುತ ಏಕಾಏಕಿ ಕೋಳಿಮಾಂಸದ ಬೆಲೆ ಕುಸಿತ ಕಂಡಿದ್ದು, ಪೋಲ್ಟಿ್ರ ಫಾರಂ ಮಾಲೀಕರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಅಲ್ಲದೆ ಫಾರಂಗಳಲ್ಲಿಯೇ ಕೋಳಿಗಳು ಮಾರಾಟವಾಗದೆ ಉಳಿದಿದ್ದು, ಅವುಗಳಿಗೆ ಮೇವು ಹಾಕಿ ಸಾಕಲು ಹೆಚ್ಚಿನ ವೆಚ್ಚವಾಗುತ್ತಿರುವ ಬಗ್ಗೆ ತೀವ್ರ ಆತಂಕ ಎದುರಿಸುತ್ತಿದ್ದಾರೆ.
ಕುರಿ ಮಾಂಸದ ಬೆಲೆ ಏರಿಕೆ
ಕೋಳಿಮಾಂಸದ ಬೆಲೆ ಏಕಾಏಕಿ ಕುಸಿತ ಕಂಡಿದ್ದರೆ, ಕುರಿ ಮಾಂಸದ ಬೆಲೆ ಅಷ್ಟೇವೇಗದಲ್ಲಿ ಏರಿಕೆ ಕಂಡಿದೆ. ಈವರೆಗೆ ಕೋಳಿ ಮಾಂಸ ಸೇವಿಸುತ್ತಿದ್ದ ಜನರು ಕೊರೋನ ಭೀತಿಯಿಂದ ಕುರಿ ಮಾಂಸದತ್ತ ಮುಖ ಮಾಡಿದ್ದು, ಈವರೆಗೆ 450 ರುಪಾಯಿ ಇದ್ದ ಕುರಿ ಮಾಂಸ ಏಕಾಏಕಿ 600 ರುಪಾಯಿಗೆ ಏರಿಕೆಯಾಗಿದೆ.
ನಂದಿಬೆಟ್ಟಕ್ಕೂ ಕೊರೋನ ಭೀತಿ!
ವಾರದ ಕೊನೆಯ ದಿನಗಳಲ್ಲಿ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ವಿಶ್ವ ಪ್ರಸಿದ್ಧ ನಂದಿಗಿರಿಧಾಮ ಕೊರೋನ ಭೀತಿ ಎದುರಾದ ದಿನದಿಂದ ಪ್ರವಾಸಿಗರ ಬರ ಎದುರಿಸುವಂತಾಗಿದೆ. ನಂದಿಗಿರಿಧಾಮಕ್ಕೆ ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯ ಮತ್ತು ಹೊರ ದೇಶಗಳಿಂದಲೂ ಪ್ರವಾಸಿಗರು ಬರುವುದು ಸಾಮಾನ್ಯವಾಗಿದ್ದು, ಇದರಿಂದ ಕೊರೋನ ಭೀತಿ ಎದುರಾಗಿರುವ ಪರಿಣಾಮ ಪ್ರವಾಸಿಗರ ಸಂಖ್ಯೆಯಲ್ಲಿ ಕುಸಿತ ಕಂಡಿದೆ.
ಬಣಗೊಡುತ್ತಿರುವ ಹೊಟೇಲ್
ನಂದಿಗಿರಿಧಾಮದ ಮೇಲೆ ಪ್ರವಾಸೋದ್ಯಮ ಇಲಾಖೆ, ತೋಟಗಾರಿಕಾ ಇಲಾಖೆಗಳಿಂದ ಹೋಟೆಲ್‌ಗಳನ್ನು ತೆರೆಯಲಾಗಿದ್ದು, ವಾರದ ಕೊನೆಯದಿನಗಳಲ್ಲಿ ಹೆಚ್ಚಾಗಿ ಬರುತ್ತಿದ್ದ ಪ್ರವಾಸಿಗರಿಂದಾಗಿ ಹೋಟೆಲ್‌ಗಳು ತುಂಬಿ ತುಳುಕುತ್ತಿದ್ದವು. ಆದರೆ ಕಳೆದ ಎರಡು ವಾರಗಳಿಂದ ನಂದಿಬೆಟ್ಟಕ್ಕೆ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖವಾಗಿ ಗ್ರಾಹಕರಿಲ್ಲದೆ ಹೋಟೆಲ್‌ಗಳು ಬಣಗೊಡುವಂತಾಗಿದೆ.
ಇನ್ನು ತಿಂಡಿ ತಿನಿಸುಗಳನ್ನು ಮಾರಾಟ ಮಾಡುತ್ತಿದ್ದ ತಳ್ಳುವ ಗಾಡಿಗಳೂ ಸೇರಿದಂತೆ ಇತರೆ ವ್ಯಾಪಾರಿಗಳು ಗ್ರಾಹಕರಿಲ್ಲದೆ ವ್ಯಾಪಾರವೂ ಆಗದೆ ತೀವ್ರ ನಷ್ಟಅನುಭವಿಸುವಂತಾಗಿದೆ. ಇನ್ನೂ ಎಷ್ಟುದಿನ ಈ ಸಮಸ್ಯೆ ಎಂಬ ಆತಂಕದಲ್ಲಿಯೇ ಜೀವನ ನಡೆಸುವಂತಾಗಿದೆ.
ಡಾಬಾಗಳಲ್ಲಿ ಮಾಂಸದೂಟ ಜೋರು
ಮಾಂಸಹಾರಕ್ಕಾಗಿಯೇ ಪ್ರಸಿದ್ಧಿ ಪಡೆದಿರುವ ಡಾಬಾಗಳಲ್ಲಿ ಮಾಂಸಾಹಾರ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗದಿರುವುದು ವಿಶೇಷ. ಮಾರುಕಟ್ಟೆಯಲ್ಲಿ ಕೋಳಿ ಮಾಂಸದ ಬೆಲೆ ತೀವ್ರ ಗತಿಯಲ್ಲಿ ಇಳಿಕೆಯಾಗಿದ್ದರೂ ಡಾಬಾಗಳಲ್ಲಿ ನೀಡುವ ಕೋಳಿಮಾಂಸದ ಪದಾರ್ಥಗಳಲ್ಲಿ ಯಾವುದೇ ಬೆಲೆ ಇಳಿಕೆಯಾಗಿಲ್ಲ.
ಕೊರೋನಾ ಭೀತಿ: ಪಾತಾಳಕ್ಕೆ ಕುಸಿದ ತರಕಾರಿ ಬೆಲೆ
ನಿರ್ವಹಣೆಗೆ ಹೆಚ್ಚು ವೆಚ್ಚ ತಗಲುತ್ತಿದ್ದ ಕಾರಣ ಮೊದಲೇ ಫೌಲ್ಟಿ್ರೕ ಉದ್ದಿಮೆ ಸಂಕಷ್ಟದಲ್ಲಿತ್ತು. ಆದರೆ ಪ್ರಸ್ತುತ ಕೊರೋನ ಭೀತಿ ಹಬ್ಬಿರುವ ಕಾರಣ ಕೋಳಿ ಮಾಂಸದ ಬೆಲೆಯಲ್ಲಿ ತೀವ್ರ ಕುಸಿತ ಕಂಡಿದ್ದು, ಕೋಳಿಗಳನ್ನು ಖರೀದಿಸುವವರೇ ಇಲ್ಲವಾಗಿದ್ದಾರೆ. 190 ರುಪಾಯಿಗೂ ಹೆಚ್ಚಿದ್ದ ಕೋಳಿ ಮಾಂಸ ಪ್ರಸ್ತುತ 60 ರುಪಾಯಿಗೆ ಇಳಿದಿದೆ. ಇದರಿಂದ ಕೋಳಿಫಾರಂ ಮಾಲೀಕರು ತೀವ್ರ ನಷ್ಟಅನುಭವಿಸಬೇಕಾಗಿದೆ ಎಂದು ಬಾಗೇಪಲ್ಲಿ ಫೌಲ್ಟ್ರೀ ಫಾರಂ ಮಾಲೀಕ ಶ್ರೀನಿವಾಸ್ ತಿಳಿಸಿದ್ದಾರೆ.
-ಅಶ್ವತ್ಥನಾರಾಯಣ ಎಲ್.