ತುಮಕೂರು(ಜ.10): ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ಕೋಳಿ ಸಾಕಾಣಿಕೆ ಮಾಡುತ್ತಿರುವ ಕಾಮಾಕ್ಷಮ್ಮನವರ ಮನೆಯಲ್ಲಿ ನಾಲ್ಕು ಕಾಲುಗಳುಳ್ಳ ಕೋಳಿ ಮರಿ ಜನ್ಮತಾಳಿದೆ.

ಪಟ್ಟಣದ ಕಾಳಮ್ಮನಗುಡಿ ಬೀದಿಯಲ್ಲಿನ ಹುಲ್ಲೆಗೆರೆ ಬಾವಿ ಬಳಿ ವಾಸಿಸುವ ಕಾಮಾಕ್ಷಮ್ಮನವರು ತಮ್ಮ ಮನೆಯಲ್ಲಿ ಕೋಳಿ ಸಾಕಾಣಿಕೆ ಹಾಗೂ ಕೋಳಿಪಿಳ್ಳೆಗಳನ್ನು ಮಾರುವ ವೃತ್ತಿಯನ್ನು ಮಾಡುತ್ತಿದ್ದರು. ಎಂದಿನಂತೆ ಸಾಕಿದ ಕೋಳಿಯೊಂದರ ಆರು ಮೊಟ್ಟೆಗಳನ್ನು ಮರಿ ಮಾಡುವ ಉದ್ದೇಶದಿಂದ ಕಾವು ನೀಡಲಾಗುತ್ತಿತ್ತು. ಗುರುವಾರದಂದು ಈ ಮೊಟ್ಟೆಗಳೊಡೆದು ಮರಿಗಳು ಆಚೆ ಬಂದ ಸಂದರ್ಭದಲ್ಲಿ ಒಂದು ಕೋಳಿ ಮರಿಗೆ ನಾಲ್ಕುಕಾಲುಗಳಿರುವುದು ಕಂಡುಬಂದಿದೆ.

ಈ ಅಪರೂಪದ ವಿಚಿತ್ರಹುಟ್ಟನ್ನು ಎಂದೂ ಕಂಡರಿಯದ ಕಾಮಾಕ್ಷಮ್ಮ ಸ್ವಲ್ಪ ಗಾಬರಿಯಾಗಿ ವಿಷಯವನ್ನು ಸುತ್ತಮುತ್ತಲಿನವರಿಗೆ ತಿಳಿಸಿದ್ದಾರೆ. ಎಲ್ಲ ಏಳೂ ಮರಿಗಳು ತಾಯಿ ಕೋಳಿಯ ಜೊತೆ ಓಡಾಡಿಕೊಂಡು ಕಾಳನ್ನು ತಿನ್ನುತ್ತಿದ್ದರೆ, ಈ ನಾಲ್ಕು ಕಾಲಿನ ಕೋಳಿ ಮರಿ ನಡೆಯಲಾರದೆ ಅಸಹಾಯಕ ಸ್ಥಿತಿಯಲ್ಲಿದೆ.

ಹುಂಡಿಗೆ ಕನ್ನ ಹಾಕಲು ಬಂದವನಿಗೆ ಕಾಲು ಮುರಿತ

ತಾಯಿ ಕೋಳಿಯ ಕಾಲಿಗೆ ಸಿಕ್ಕುತ್ತಾ ಚಡಪಡಿಸುತ್ತಿತ್ತು. ಇದನ್ನು ಕಂಡು ಕಾಮಾಕ್ಷಮ್ಮ ಪಿಳ್ಳೆಯನ್ನು ಜೋಪಾನವಾಗಿ ಪ್ರತ್ಯೇಕವಾಗಿ ಆರೈಕೆ ಮಾಡುತ್ತಿದ್ದಾರೆ. ಆದರೂ ಐದು ದಿನ ಕಳೆದರೂ ಕೋಳಿ ಮರಿ ಚೇತರಿಕೆ ಕಂಡಿಲ್ಲ. ನಿಧಾನವಾಗಿ ಚೇತರಿಸಿಕೊಳ್ಳಬಹುದೆಂಬ ಆಸೆಯಲ್ಲಿ ನಾಲ್ಕು ಕಾಲಿನ ಮರಿಯನ್ನು ಜೋಪಾನವಾಗಿ ಆರೈಕೆ ಮಾಡುತ್ತಿದ್ದಾರೆ.