ತುಮಕೂರು(ನ.30): ಕೆಲವು ದಿನಗಳ ಹಿಂದೆ ತಾಲೂಕಿನ ಗಡಿಭಾಗದ ಬನ್ನಿಕುಪ್ಪೆ ಗ್ರಾಮದ ಲಕ್ಷ್ಮಮ್ಮ (62) ಎಂಬ ಮಹಿಳೆಯೊಬ್ಬರನ್ನು ಕಚ್ಚಿ ಕೊಂದಿದ್ದ ಚಿರತೆ ಮತ್ತೊಬ್ಬ ವ್ಯಕ್ತಿಯನ್ನು ಬಲಿ ತೆಗೆದುಕೊಂಡಿರುವ ಘಟನೆ ಕುಣಿಗಲ್‌ ತಾಲೂಕಿನ ಕೊತ್ತಗೆರೆ ಹೋಬಳಿಯ ದೊಡ್ಡ ಮಳಲವಾಡಿ ಗ್ರಾಮದಲ್ಲಿ ನಡೆದಿದ್ದು, ಆಕ್ರೋಶಗೊಂಡ ಸಾರ್ವಜನಿಕರು ಶಾಸಕ ರಂಗನಾಥ್‌ ನೇತೃತ್ವದಲ್ಲಿ ರಸ್ತೆಗೆ ಇಳಿದು ಪ್ರತಿಭಟನೆ ನಡೆಸಿದರು.

ಕುಣಿಗಲ್‌ ದೊಡ್ಡ ಮಳಲವಾಡಿ ಗ್ರಾಮದ ಆನಂದಯ್ಯ(68) ಚಿರತೆಗೆ ಬಲಿಯಾದ ರೈತ. ಇವರು ತಮ್ಮ ಹಸುಗಳನ್ನು ಮೇಯಿಸಲು ತನ್ನ ಹೊಲದ ಬಳಿ ಹೋದಾಗ ನೀಲಗಿರಿ ಗಿಡದ ಪೊದೆಯಲ್ಲಿ ಅವಿತಿದ್ದ ಚಿರತೆ ರೈತನ ಮೇಲೆ ದಾಳಿ ಮಾಡಿ ರೈತನನ್ನು ಕೊಂದು ಹಾಕಿದೆ.

ಸ್ವಾರ್ಥ, ಅನಾ​ಗ​ರಿ​ಕ​ತೆ​ಯಿಂದ ನದಿ ಅಸ್ತಿ​ತ್ವಕ್ಕೆ ಧಕ್ಕೆ: ಸೂಲಿ​ಬೆ​ಲೆ

ಈ ಘಟನೆಯನ್ನು ನೋಡುತ್ತಿದ್ದ ಸುತ್ತಮುತ್ತಲಿನ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದ ರೈತರು ಕೂಗಾಡುತ್ತಾ ದಾಳಿ ಮಾಡಿದ ಚಿರತೆಯನ್ನು ಅಲ್ಲಿಂದ ಓಡಿಸಿದ್ದು, ಗಾಯಾಳು ರೈತ ಆನಂದಯ್ಯ ಅವರನ್ನು ಕುಣಿಗಲ್‌ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮರುಕಳಿಸಿದ ಘಟನೆ:

ಕೆಲವು ತಿಂಗಳ ಹಿಂದೆ ಕೊತ್ತಗೆರೆ ಹೋಬಳಿಯ ಗುನ್ನಾಗರೆ ಗ್ರಾಮದಲ್ಲಿ ಮಗುವೊಂದನ್ನು ಮತ್ತು ಕುಣಿಗಲ್‌ ದೊಡ್ಡಕೆರೆ ವ್ಯಾಪ್ತಿಯಲ್ಲಿ ಶಾಲಾ ಬಾಲಕಿಯೊಬ್ಬಳನ್ನು ಚಿರತೆ ಕ್ಚಚಿ ಕೊಂದ ಘಟನೆ ಮಾಸುವ ಮುನ್ನವೇ ಈ ಘಟನೆ ಸಂಭವಿಸಿರುವುದು ರೈತರು ಹಾಗೂ ಸಾರ್ವಜನಿಕರಲ್ಲಿ ಆತಂಕ ಹೆಚ್ಚಿಸಿದ್ದು, ಭಯಭೀತರಾಗಿದ್ದಾರೆ.

ಈ ಘಟನೆಯಿಂದ ಬೇಸತ್ತ ಸುತ್ತಮುತ್ತಲಿನ ಗ್ರಾಮಸ್ಥರು ಶಾಸಕ ರಂಗನಾಥ್‌ ನೇತೃತ್ವದಲ್ಲಿ ಎಸ್‌ಎಚ್‌ 33 ತುಮಕೂರು-ಮದ್ದೂರು ರಸ್ತೆಯನ್ನು ಬಂದ್‌ ಮಾಡಿ ಪ್ರತಿಭಟನೆ ನಡೆಸಿದರು.

ಅರಣ್ಯ ಇಲಾಖೆ ವಿರುದ್ಧ ರಂಗನಾಥ್‌ ಆಕ್ರೋಶ:

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ರಂಗನಾಥ್‌ ಹಲವಾರು ಬಾರಿ ಮನುಷ್ಯರ ಮೇಲೆ ದಾಳಿ ಮಾಡುತ್ತಿರುವ ಘಟನೆಯಿಂದ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದು ನಿರ್ಭೀತಿಯಿಂದ ಹೊಲಗದ್ದೆಗಳಿಗೆ ಹೋಗುವುದು ಕಷ್ಟವಾಗುತ್ತಿದೆ. ಇಂತಹ ಅಪಾಯಕಾರಿ ನರಭಕ್ಷಕ ಚಿರತೆಯನ್ನು ಅರಣ್ಯ ಇಲಾಖೆ ಬಂಧಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ್ದು ತಕ್ಷಣ ಚಿರತೆಯನ್ನು ಬಂಧಿಸುವ ತನಕ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

'ಬೈ ಎಲೆಕ್ಷನ್ ರಿಸಲ್ಟ್‌ ದಿನ ಕುಕ್ಕರ್‌ ಶಬ್ದ ರಾಜ್ಯಕ್ಕೆ ಕೇಳಿಸಲಿದೆ'..!