ಮಂಡ್ಯ(ಜ.09): ಚಿರತೆ ದಾಳಿಯಿಂದಾಗಿ ಏಳು ಮೇಕೆಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ದಂಡಿಗನಹಳ್ಳಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಗ್ರಾಮದ ರೈತ ಚಿಕ್ಕಯ್ಯ ಉ. ಚಿಕ್ಕಮಾಯಣ್ಣಗೌಡರಿಗೆ ಸೇರಿದ 7 ಮೇಕೆಗಳನ್ನು ಚಿರತೆ ಕಚ್ಚಿ ಕೊಂದು ಹಾಕಿದೆ.

ಇದರಿಂದ ಸುಮಾರು 40 ಸಾವಿರಕ್ಕೂ ಹೆಚ್ಚು ನಷ್ಟವುಂಟಾಗಿದೆ ಎಂದು ಅಂದಾಜಿಸಲಾಗಿದೆ. ಎಂದಿನಂತೆ ತಮ್ಮ ಮೇಕೆಗಳನ್ನು ಮನೆಯ ಪಕ್ಕದಲ್ಲಿರುವ ಕೊಟ್ಟಿಗೆಯಲ್ಲಿ ಕೂಡಿಹಾಕಿದ್ದರು. ಇದನ್ನೇ ಹೊಂಚು ಹಾಕಿದ್ದ ಚಿರತೆ ಮಂಗಳವಾರ ರಾತ್ರಿ 8 ಗಂಟೆ ಸಮಯದಲ್ಲಿ ಕೊಟ್ಟಿಗೆಗೆ ನುಗ್ಗಿ ಏಳು ಮೇಕೆಗಳನ್ನು ಕಚ್ಚಿ ರಕ್ತ ಹೀರಿ ಸಾಯಿಸಿದೆ.

ಮೈಸೂರು: ಮೇಯರ್, ಉಪಮೇಯರ್ ಎಲೆಕ್ಷನ್‌ಗೆ ಡೇಟ್ ಫಿಕ್ಸ್‌

ಕಳೆದೊಂದು ವಾರದ ಹಿಂದೆ ಇದೇ ಗ್ರಾಮದ ರೈತರೊಬ್ಬರ ಎಮ್ಮೆಕರುವಿನ ಮೇಲೆ ದಾಳಿ ನಡೆಸಿದ್ದ ಚಿರತೆ ಎಮ್ಮೆಕರುವನ್ನು ಗ್ರಾಮದ ಹೊರವಲಯಕ್ಕೆ ಎಳೆದೊಯ್ದು ತಿಂದುಹಾಕಿತ್ತು. ದಂಡಿಗನಹಳ್ಳಿ ಮತ್ತು ಸುತ್ತ ಮುತ್ತಲ ಗ್ರಾಮಗಳಲ್ಲಿ ಆಗಿಂದಾಗ್ಗೆ ಚಿರತೆ ಪ್ರತ್ಯಕ್ಷವಾಗುತ್ತಿದೆ. ಈ ವಿಚಾರವನ್ನು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದರೂ ಸಹ ಚಿರತೆಯನ್ನು ಸೆರೆಹಿಡಿಯುವ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷಿಸಿದ್ದ ಪರಿಣಾಮವೇ ಈ ಘಟನೆಗೆ ಕಾರಣವಾಗಿದೆ ಎಂದು ರೈತ ಚಿಕ್ಕಯ್ಯ ಮತ್ತು ಗ್ರಾಮಸ್ಥರು ಆರೋಪಿಸಿದ್ದಾರೆ.

ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ ಬಳಿಕ ರಾತ್ರಿ ವೇಳೆಯಲ್ಲಿ ಚಿರತೆ ಸಂಚರಿಸುವ ಕುರಿತು ಗ್ರಾಮಸ್ಥರಿಂದ ಮಾಹಿತಿ ಪಡೆದುಕೊಂಡು ಚಿರತೆಯನ್ನು ಶೀಘ್ರದಲ್ಲಿಯೇ ಸೆರೆಹಿಡಿಯುವ ಭರವಸೆ ನೀಡಿದ್ದಾರೆ. ಘಟನೆಯಿಂದ ಭಯಭೀತರಾಗಿರುವ ಗ್ರಾಮಸ್ಥರು ತಮ್ಮ ಹೊಲ ಗದ್ದೆಗಳಿಗೆ ಹೊಗಲು ಆತಂಕ ಪಡುವಂತಹ ಸ್ಥಿತಿ ಎದುರಾಗಿದೆ.

ವಿದೇಶದಿಂದ ಮರಳಿದ ಶಾಸಕ ತನ್ವೀರ್ ಸೇಠ್‌, ಈಗ ಹೇಗಿದ್ದಾರೆ..?

ಇನ್ನಾದರೂ ಅರಣ್ಯ ಇಲಾಖೆ ಅಧಿಕಾರಿಗಳು ಸಾಕು ಪ್ರಾಣಿಗಳನ್ನು ಬಲಿತೆಗೆದುಕೊಳ್ಳುತ್ತಿರುವ ಚಿರತೆಯನ್ನು ಸೆರೆಹಿಡಿದು ಗ್ರಾಮಸ್ಥರಲ್ಲಿ ಮನೆಮಾಡಿರುವ ಆತಂಕವನ್ನು ಹೋಗಲಾಡಿಸುವ ಜೊತೆಗೆ, ಮೇಕೆಗಳನ್ನು ಕಳೆದುಕೊಂಡಿರುವ ರೈತನಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.