ಚಾರ್ಮಾಡಿ ಘಾಟ್ ರಸ್ತೆ ಮತ್ತೆ ಪುನರಾರಂಭ: ಷರತ್ತುಗಳು ಅನ್ವಯ
ಹೆಚ್ಚು ಮಳೆಯಿಂದಾಗಿ ಗುಡ್ಡ ಕುಸಿತ ಹಿನ್ನೆಲೆಯಲ್ಲಿ ಬಂದ್ ಆಗಿದ್ದ ಚಾರ್ಮಾಡಿ ಘಾಟ್ ರಸ್ತೆ ಮತ್ತೆ ಪುನರಾರಂಭವಾಗಿದೆ. ಆದ್ರೆ ಕೆಲ ಷರತ್ತುಗಳು ಅನ್ವಯ.
ಚಿಕ್ಕಮಗಳೂರು, (ಸೆ.15): ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಷರತ್ತು ವಿಧಿಸಿ ಲಘು ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ.
ಚಿಕ್ಕಮಗಳೂರು ಜಿಲ್ಲಾಧಿಕಾರಿ ಬಗಾದಿ ಗೌತಮ್ ಇಂದು (ಭಾನುವಾರ) ಆದೇಶ ಹೊರಡಿಸಿದ್ದು, ಬೆಳಗ್ಗೆ 6 ಗಂಟೆಯಿಂದ ಸಂಜೆ 6ರವರೆಗೆ ಮಾತ್ರ ಲಘು ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ.
ಇದೀಗ ಬಂದ ಸುದ್ದಿ: ಮತ್ತೆ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧ
ಕಳೆದ ತಿಂಗಳು ಸುರಿದ ಮಹಾಮಳೆಯಿಂದಾಗಿ ಗುಡ್ಡ ಕುಸಿದು, ಹಲವೆಡೆ ರಸ್ತೆಗಳು ಕೊಚ್ಚಿ ಹೋಗಿತ್ತು. ಹೀಗಾಗಿ ಆಗಸ್ಟ್ 9 ರಿಂದ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಸಂಚಾರ ಬಂದ್ ಆಗಿದ್ದರಿಂದ ಚಿಕ್ಕಮಗಳೂರು-ದಕ್ಷಿಣ ಕನ್ನಡ ಸಂಪರ್ಕ ಕಡಿತವಾಗಿತ್ತು.
ಷರತ್ತು ಏನು?
ಘಾಟಿಯಲ್ಲಿ ಪ್ರತಿ ಗಂಟೆಗೆ 20 ಕಿ.ಮೀ ವೇಗದಲ್ಲಿ ವಾಹನ ಚಲಾಯಿಸುವುದು, ಭೂ ಕುಸಿತದಿಂದ ರಸ್ತೆಗೆ ಸಮಸ್ಯೆ ಆಗಿರುವುದರಿಂದ ಜಾಗರೂಕತೆಯಿಂದ ಚಾಲನೆ ಮಾಡುವುದು, ಫೋಟೋಗ್ರಫಿ, ಸೆಲ್ಫಿ ನಿಷೇಧಿಸಲಾಗಿದೆ.
ಕಾರು, ಜೀಪು, ಟೆಂಪೋ, ವ್ಯಾನ್, ಎಲ್‍ಸಿವಿ(ಮಿನಿ ವ್ಯಾನ್), ಅಂಬುಲೆನ್ಸ್, ದ್ವಿಚಕ್ರ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಬುಲೆಟ್ ಟಾಂಕರ್ಸ್, ಷಿಪ್ ಕಾರ್ಗೋ ಕಾಂಟೈನರ್, ಲಾಂಗ್ ಚಾಸೀಸ್ ವಾಹನಗಳು, ಹೆವಿ ಕಮರ್ಷಿಯಲ್ ವಾಹನಗಳು, ಮಲ್ಟಿ ಎಕ್ಸೆಲ್ ಟ್ರಕ್, ಸಾರ್ವಜನಿಕರು ಸಂಚರಿಸುವ ಎಲ್ಲ ಸರ್ಕಾರಿ, ಖಾಸಗಿ ಬಸ್ಸುಗಳ ಸಂಚಾರವನ್ನು ನಿಷೇಧಿಸಲಾಗಿದೆ.