Asianet Suvarna News Asianet Suvarna News

ಚನ್ನಪಟ್ಟಣ : ನಿಖಿಲ್ ಸ್ಪರ್ಧೆಗೆ ಜೆಡಿಎಸ್ ಡಿಮ್ಯಾಂಡ್- ಕಾಂಗ್ರೆಸ್ ಮತಗಳಿಕೆ ಹೆಚ್ಚಳ

ಚನ್ನಪಟ್ಟಣ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಬೇಕು ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಎಚ್.ಸಿ.ಜಯಮುತ್ತು ಒತ್ತಾಯಿಸಿದರು.

Channapatnam  JDS leaders demand Nikhil contest in by-elections snr
Author
First Published Jul 16, 2024, 12:30 PM IST | Last Updated Jul 16, 2024, 12:30 PM IST

 ಚನ್ನಪಟ್ಟಣ :  ಚನ್ನಪಟ್ಟಣ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಬೇಕು ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಎಚ್.ಸಿ.ಜಯಮುತ್ತು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಜೆಡಿಎಸ್ ಗೆದ್ದ ಏಕೈಕ ಕ್ಷೇತ್ರ ಇದಾಗಿದ್ದು, ಜೆಡಿಎಸ್ ತೆಕ್ಕೆಯಲ್ಲಿಯೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಿಖಿಲ್ ಅವರನ್ನೇ ಸ್ಪರ್ಧೆಗಿಳಿಸಬೇಕು ಎಂದು ಆಗ್ರಹಿಸಿದರು.

ಗೊಂದಲದ ಗೂಡು: ಉಪಚುನಾವಣೆಯ ಅಭ್ಯರ್ಥಿ ಯಾವ ಪಕ್ಷದಿಂದ ಯಾರೆಂಬ ವಿಚಾರ ಇನ್ನು ನಿರ್ಧಾರವಾಗದ ಕಾರಣ ಎಲ್ಲರಲ್ಲೂ ಗೊಂದಲವಿದೆ. ಕಾರ್ಯಕರ್ತರಲ್ಲಿ ಗೊಂದಲ ಪರಿಹರಿಸುವ ನಿಟ್ಟಿನಲ್ಲಿ ನಿಖಿಲ್ ಅವರ ಹೆಸರನ್ನು ವರಿಷ್ಠರು ಆದಷ್ಟು ಬೇಗ ಘೋಷಿಸಬೇಕು ಎಂದು ಒತ್ತಾಯಿಸಿದರು.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್ ಪ್ರಬಲವಾಗಿದ್ದರೂ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಟ್ಟು, ಡಾ.ಮಂಜುನಾಥ್ ಅವರನ್ನು ಬಿಜೆಪಿಯಿಂದ ಕಣಕ್ಕೆ ಇಳಿಸಲಾಗಿತ್ತು. ಇದೀಗ ರಾಜ್ಯದ ಮೂರು ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಲಿದ್ದು, ಜೆಡಿಎಸ್ ಪ್ರಬವಾಗಿರುವ ಚನ್ನಪಟ್ಟಣವನ್ನು ನಮ್ಮ ಪಕ್ಷಕ್ಕೆ ಬಿಟ್ಟುಕೊಡಬೇಕು. ಆ ನಿಟ್ಟಿನಲ್ಲಿ ಎನ್‌ಡಿಎ ವರಿಷ್ಠರು ಕುಳಿತು ಚರ್ಚಿಸಿ ಶೀಘ್ರದಲ್ಲೇ ನಿರ್ಧಾರ ಪ್ರಕಟಿಸಬೇಕು ಎಂದು ಮನವಿ ಮಾಡಿದರು.

ನಿಖಿಲ್ ಕಣಕ್ಕಿಳಿಸಿ: ಕುಮಾರಸ್ವಾಮಿ ಕೇಂದ್ರ ಸಚಿವರಾಗಿದ್ದು, ರಾಜ್ಯದಲ್ಲಿ ಪಕ್ಷ ಸಂಘಟನೆಯ ಜವಾಬ್ದಾರಿ ನಿಖಿಲ್ ಕುಮಾರಸ್ವಾಮಿ ಅವರ ಮೇಲಿದೆ. ಕ್ಷೇತ್ರದಿಂದ ನಿಖಿಲ್ ಅವರನ್ನು ಕಣಕ್ಕಿಳಿಸಿದಲ್ಲಿ ಪಕ್ಷ ಸಂಘಟನೆಗೆ ಅನುಕೂಲವಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಜಿಲ್ಲೆಯಲ್ಲಿ ಜೆಡಿಎಸ್ ಅಸ್ತಿತ್ವ ಉಳಿಸಿಕೊಳ್ಳಬೇಕು ಎಂದರು.

ಸಿಪಿವೈ ಮುಂದಾಳತ್ವ ವಹಿಸಲಿ:

ವಿಧಾನ ಪರಿಷತ್ ಸದಸ್ಯರಾಗಿರುವ ಸಿ.ಪಿ.ಯೋಗೇಶ್ವರ್ ಅಧಿಕಾರಾವಧಿ ಇನ್ನು ಮೂರುವರೆ ವರ್ಷವಿದೆ. ಈಗಾಗಲೇ ಅವರು ಸಾಕಷ್ಟು ಬಾರಿ ಶಾಸಕರಾಗಿದ್ದು, ಈಗ ಎಂಎಲ್‌ಸಿ ಆಗಿದ್ದಾರೆ. ಅವರು ಮನಸ್ಸು ಮಾಡಿ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಬೇಕು. ಚುನಾವಣೆಯ ಮುಂದಾಳತ್ವವನ್ನು ಅವರೇ ವಹಿಸಿಕೊಂಡು ನಿಖಿಲ್ ಅವರನ್ನು ಗೆಲ್ಲಿಸುವ ಹೊಣೆ ಹೊರಬೇಕು ಎಂದರು.

ಹೆಚ್ಚಿದ ಕೈ ಮತಗಳಿಕೆ:

ಲೋಕಸಭೆ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಮತಗಳಿಕೆ ಹೆಚ್ಚಳಗೊಂಡಿದೆ. ಚುನಾವಣೆಯಲ್ಲಿ ೮೫ ಸಾವಿರ ಮತ ಪಡೆಯುವ ಮೂಲಕ ಸುಮಾರು ೭೦ ಸಾವಿರದಷ್ಟು ಮತಗಳಿಕೆ ಹೆಚ್ಚಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಮೈತ್ರಿ ಅಭ್ಯರ್ಥಿ ಘೋಷಣೆ ತಡ ಮಾಡಬಾರದು. ಕ್ಷೇತ್ರದಲ್ಲಿ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ನಿಟ್ಟಿನಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಕುಮಾರಸ್ವಾಮಿ ಶೀಘ್ರ ತೀರ್ಮಾನ ಕೈಗೊಳ್ಳಬೇಕು ಎಂದರು.

ಸಿಪಿವೈ ಜೆಡಿಎಸ್‌ನಿಂದಲೇ ಸ್ಪರ್ಧೆ ಮಾಡಿದರೆ ತಾಲೂಕು ಜೆಡಿಎಸ್ ಬೆಂಬಲ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಯೋಗೇಶ್ವರ್ ಜೆಡಿಎಸ್‌ನಿಂದ ಸ್ಪರ್ಧಿಸುತ್ತೇನೆ ಎಂದು ಎಲ್ಲೂ ಹೇಳಿಲ್ಲ. ಅವರು ಜೆಡಿಎಸ್‌ಗೆ ಬಂದರೆ ಸ್ವಾಗತ. ಅವರಿಗೆ ಟಿಕೆಟ್ ನೀಡುವುದೋ ಬಿಡೋವುದೋ ಎಂಬದನ್ನು ಪಕ್ಷದಲ್ಲಿ ಚರ್ಚೆ ಮಾಡುತ್ತೇವೆ. ಪಕ್ಷದ ವರಿಷ್ಠರು ಸೂಚಿಸಿದರೆ ಜೆಡಿಎಸ್ ನಿಂದಲೇ ಅಭ್ಯರ್ಥಿ ಆಗಲಿ. ಆದರೆ ನಿಖಿಲ್ ಅವರೇ ಅಭ್ಯರ್ಥಿ ಆಗಲಿ ಅನ್ನೋದು ನಮ್ಮ ಒತ್ತಾಯ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ನಗರಾಧ್ಯಕ್ಷ ಅಜಯ್, ಒಕ್ಕಲಿಗರ ಸಂಘದ ನಿರ್ದೇಶಕ ಹಾಪ್‌ಕಾಮ್ಸ್ ದೇವರಾಜು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ನಗರಸಭೆ ಸದಸ್ಯ ಮಂಜುನಾಥ್, ಮುಖಂಡರಾದ ಬೋರ್‌ವೆಲ್ ರಾಮಚಂದ್ರು ಇತರರಿದ್ದರು. 

Latest Videos
Follow Us:
Download App:
  • android
  • ios