ಚನ್ನಪಟ್ಟಣ ಬಸ್ ನಿಲ್ದಾಣದಲ್ಲಿ, ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಸೀಟ್ ಹಿಡಿಯಲು ಯತ್ನಿಸಿದ ಮಹಿಳೆಯೊಬ್ಬರು ಆಯತಪ್ಪಿ ಬಿದ್ದು, ಬಸ್‌ನ ಚಕ್ರ ಅವರ ಕೈ ಮೇಲೆ ಹರಿದು ಕೈ ನಜ್ಜುಗುಜ್ಜಾಗಿದೆ. ಈ ಘಟನೆ ಬೆನ್ನಲ್ಲೇ, ಸಾರ್ವಜನಿಕರು ಕೆಎಸ್‌ಆರ್‌ಟಿಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಮನಗರ (ಏ.02): ಚನ್ನಪಟ್ಟಣದ ಬಸ್ ನಿಲ್ದಾಣದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಸೀಟ್ ಹಿಡಿಯಲು ಹೋದ ಮಹಿಳೆಯೊಬ್ಬರು ಆಯತಪ್ಪಿ ಬಿದ್ದು, ಬಸ್‌ನ ಚಕ್ರ ಅವರ ಕೈ ಮೇಲೆ ಹರಿದು ಕೈ ನಜ್ಜುಗುಜ್ಜಾದ ಭೀಕರ ಘಟನೆ ಗುರುವಾರ ನಡೆದಿದೆ. ಸಾರ್ವಜನಿಕ ಸಾರಿಗೆಯ ಅವ್ಯವಸ್ಥೆಯೇ ಈ ದುರಂತಕ್ಕೆ ಕಾರಣ ಎಂದು ಆಕ್ರೋಶ ವ್ಯಕ್ತವಾಗಿದೆ.
ಏನಿದು ಘಟನೆ?
ಚನ್ನಪಟ್ಟಣ ತಾಲೂಕಿನ ಹೊನ್ನಾಯಕನಹಳ್ಳಿ ಗ್ರಾಮದ ನಿವಾಸಿ ಜಯಮ್ಮ (58) ಎಂಬುವವರೇ ಈ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ದುರ್ದೈವಿ. ಚನ್ನಪಟ್ಟಣದಿಂದ ಕೆಸ್ತೂರ್ ಮಾರ್ಗವಾಗಿ ಸಂಚರಿಸುವ ಬಸ್ ಹತ್ತಲು ಜಯಮ್ಮ ನಿಲ್ದಾಣಕ್ಕೆ ಬಂದಿದ್ದರು. ಬಸ್ ನಿಲ್ದಾಣಕ್ಕೆ ಬರುತ್ತಿದ್ದಂತೆಯೇ ಸೀಟ್ ಹಿಡಿಯಬೇಕೆಂಬ ಆತುರದಲ್ಲಿ ಬಸ್‌ನೊಂದಿಗೆ ಓಡಲು ಹೋದಾಗ ಈ ಅವಘಡ ಸಂಭವಿಸಿದೆ.
ಬಸ್ ಚಲಿಸುತ್ತಿರುವಾಗಲೇ ಕಿಟಕಿಯ ಮೂಲಕ ಸೀಟು ಹಿಡಿಯಲು ಪ್ರಯತ್ನಿಸಿದಾಗ ಜಯಮ್ಮ ಅವರು ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ದುರದೃಷ್ಟವಶಾತ್, ಚಲಿಸುತ್ತಿದ್ದ ಬಸ್‌ನ ಹಿಂಬದಿಯ ಚಕ್ರ ಜಯಮ್ಮ ಅವರ ಕೈ ಮೇಲೆಯೇ ಹರಿದಿದೆ. ಪರಿಣಾಮವಾಗಿ ಅವರ ಕೈ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ತೀವ್ರ ರಕ್ತಸ್ರಾವ ಸಂಭವಿಸಿದೆ. ತಕ್ಷಣವೇ ಸ್ಥಳೀಯರು ಮತ್ತು ಬಸ್ ನಿಲ್ದಾಣದ ಸಿಬ್ಬಂದಿ ಅವರನ್ನು ಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಅಧಿಕಾರಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ:
ಈ ಘಟನೆ ತಿಳಿಯುತ್ತಿದ್ದಂತೆಯೇ ಬಸ್ ನಿಲ್ದಾಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಬೇಜವಾಬ್ದಾರಿತನವೇ ಈ ಘಟನೆಗೆ ನೇರ ಕಾರಣ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. 'ಗ್ರಾಮೀಣ ಭಾಗಗಳಿಗೆ ಸರಿಯಾದ ಪ್ರಮಾಣದಲ್ಲಿ ಬಸ್ ವ್ಯವಸ್ಥೆ ಇಲ್ಲ. ಗಂಟೆಗಟ್ಟಲೆ ಕಾದರೂ ಬಸ್‌ಗಳು ಬರುವುದಿಲ್ಲ. ಬಂದ ಒಂದು ಬಸ್ಸಿಗಾಗಿ ನೂರಾರು ಜನ ಮುಗಿಬೀಳುತ್ತಾರೆ. ಇಂತಹ ಪರಿಸ್ಥಿತಿ ಇರುವುದರಿಂದಲೇ ಜನರು ಪ್ರಾಣದ ಹಂಗು ತೊರೆದು ಸೀಟ್ ಹಿಡಿಯಲು ಓಡುತ್ತಾರೆ' ಎಂದು ಪ್ರಯಾಣಿಕರು ದೂರಿದ್ದಾರೆ.
ಸಾರಿಗೆ ಸಂಸ್ಥೆಗೆ ಎಚ್ಚರಿಕೆ:
ಶಕ್ತಿ ಯೋಜನೆ ಜಾರಿಗೆ ಬಂದ ನಂತರ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಆದರೆ ಅದಕ್ಕೆ ತಕ್ಕಂತೆ ಬಸ್‌ಗಳ ಸಂಖ್ಯೆ ಹೆಚ್ಚಿಸದ ಕಾರಣ ಇಂತಹ ಅನಾಹುತಗಳು ಸಂಭವಿಸುತ್ತಿವೆ ಎಂಬುದು ಸಾರ್ವಜನಿಕರ ವಾದ. ಮಹಿಳೆಯ ಕೈ ನಜ್ಜುಗುಜ್ಜಾದ ವಿಷಯ ತಿಳಿದು ಸಂಬಂಧಿಕರ ಆಕ್ರೋಶ ಕಟ್ಟೆ ಒಡೆದಿತ್ತು. ಸಾರಿಗೆ ಸಂಸ್ಥೆಯು ಗಾಯಾಳು ಮಹಿಳೆಯ ಚಿಕಿತ್ಸಾ ವೆಚ್ಚವನ್ನು ಭರಿಸಬೇಕು ಮತ್ತು ಗ್ರಾಮೀಣ ಭಾಗಗಳಿಗೆ ಹೆಚ್ಚಿನ ಬಸ್‌ಗಳನ್ನು ಓಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಸದ್ಯ ಜಯಮ್ಮ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚನ್ನಪಟ್ಟಣ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


