ತುಮಕೂರು [ಆ.29]:  ಭದ್ರಾ ನಾಲೆಯ ನೀರು ಶಿರಾ ತಾಲೂಕಿಗೆ ಹರಿಯಲು ನಾಲೆಯ ತಾಂತ್ರಿಕತೆ ಬದಲಿಸುವುದು ಅವಶ್ಯಕ ಎಂದು ನಿವೃತ್ತ ಎಂಜಿನಿಯರ್‌ ಆರ್‌.ಜಯರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ಅವರು ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಶಿರಾ ತಾಲೂಕಿನ ಸಾರ್ವಜನಿಕರು ಅವಶ್ಯವಾದ ನೀರು ಪಡೆದುಕೊಳ್ಳುವ ಅರಿವು ಹೊಂದಿರಬೇಕಾದ್ದು ಅಗತ್ಯ. ಹೇಮಾವತಿ ನಾಲೆಯ ನೀರನ್ನು ಶಿರಾ ಸೀಮೆಯ ಕೆರೆಗಳಿಗೆ ಸಾಕಷ್ಟುಪ್ರಮಾಣದಲ್ಲಿ ಒದಗಿಸಲು ಸಾಧ್ಯವಿಲ್ಲ. ಭದ್ರಾ ನಾಲೆ ಯೋಜನೆಯಲ್ಲಿ ಕೆಲವು ಕೆರೆಗಳು ಸೇರ್ಪಡೆಯಾಗಿವೆ. ಸೇರಲ್ಪಟ್ಟಿರುವ ಎಲ್ಲಾ ಕೆರೆಗಳಿಗೂ ನೀರು ಹರಿಯುವ ಭೌಗೋಳಿಕ ಸ್ಥಿತಿ ಇರುವುದು ಕಳ್ಳಂಬೆಳ್ಳ ಕೆರೆಯ ಮೂಲಕ ಮಾತ್ರವೇ ಎಂದಿದ್ದಾರೆ.

ಭದ್ರ ನಾಲೆ ನೀರು ಶಿರಾಗೆ ಕಷ್ಟಕರ:

ಭೌಗೋಳಿಕವಾಗಿ ಶಿರಾ ತಾಲೂಕು ಎತ್ತರ ಪ್ರದೇಶ. ಪ್ರಸ್ತುತ ಮೆ. ಸೀಕಾನ್‌ ಪ್ರೈ.ಲಿ. ಕಂಪನಿಯವರು ಭದ್ರಾ ಮೇಲ್ದಂಡೆ ತುಮಕೂರು ಶಾಖಾ ನಾಲೆಯ ನಿರ್ಮಾಣಕ್ಕಾಗಿ 118ನೇ ಕಿ.ಮೀ. ನಿಂದ 160 ನೇ ಕಿ.ಮೀ. ಬುಕ್ಕಾಪಟ್ಟಣದವರೆಗೆ ನಾಲಾ ಮಾರ್ಗದ ನಕ್ಷೆಯನ್ನು ತಯಾರಿಸಿ ಕೊಟ್ಟಿದ್ದಾರೆ. ಇಲಾಖೆಯ ಎಂಜಿನಿಯರ್‌ಗಳು ಅನುಮೋದಿಸಿಕೊಳ್ಳುವ ಹಂತದಲ್ಲಿರುವ ಸದರಿ ನಾಲಾ ಮಾರ್ಗವನ್ನು ಗಮನಿಸಿದ್ದು, ಭದ್ರಾ ನಾಲೆಯ ನೀರು ಶಿರಾ ತಾಲೂಕಿಗೆ ಪ್ರವೇಶ ಗೊಳ್ಳುವುದೇ ಬಹು ಕಷ್ಟಕರ ಎಂದು ವಿವರಿಸಿದ್ದಾರೆ.

ಹಲವು ಭೌಗೋಳಿಕ ಮತ್ತು ತಾಂತ್ರಿಕ ತೊಡರು ಉಲ್ಬಣಿಸುತ್ತವೆ. ಈ ಪರಿಸ್ಥಿತಿಯಲ್ಲಿ ಶಿರಾ ತಾಲೂಕಿನ ನಾಗರೀಕರು ‘ಭದ್ರಾ ಮೇಲ್ದಂಡೆ ನಾಲಾ ಯೋಜನೆಯ ಪಟ್ಟಿಯಲ್ಲಿ ನಮ್ಮ ಕೆರೆಗಳು ಸೇರಲ್ಪಟ್ಟಿವೆ’ ಎಂಬ ನಿಶ್ಚಿಂತೆಯಲ್ಲಿದ್ದರೆ, ಭದ್ರಾ ಮೇಲ್ದಂಡೆ ನಾಲೆಯ ನೀರು ಶಿರಾ ಸೀಮೆಗೆ ಹರಿಯುವುದೇ ಬಹು ಕಷ್ಟ. ರಾಜಕಾರಿಣಿಗಳು ಪ್ರಾಕೃತಿಕತೆಗಳನ್ನು, ತಾಂತ್ರಿಕತೆಗಳನ್ನು ಮತ್ತು ಅಡಚಣೆಗಳನ್ನು ಅರಿಯದೆಯೇ ಶುಷ್ಕ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಸಂಬಂಧಿಸಿದ ಎಂಜಿನೀಯರ್‌ಗಳಿಗೆ ಸ್ಥಳೀಯ ಭೌಗೋಳಿಕ ಮತ್ತು ತಾಂತ್ರಿಕತೆಗಳ ಅರಿವು ಅ-ಲಭ್ಯವಾಗಿದೆ ಎಂದು ತಿಳಿಸಿದ್ದಾರೆ.

ಸರಾಗವಾಗಿ ಹರಿಯುವ ಭೌಗೋಳಿಕ ನಕ್ಷೆ ತಯಾರಿ

ಈ ಸಂಬಂಧ ಬುಕ್ಕಾಪಟ್ಟಣ, ಹೊಸಪಾಳ್ಯ ಕೆರೆ, ರಾಮಲಿಂಗಾಪುರ ಕೆರೆ, ದೊಡ್ಡಅಗ್ರಹಾರ ಕೆರೆಗಳ ಮೂಲಕ ಕಳ್ಳಂಬೆಳ್ಳ ಕೆರೆಯನ್ನು ಗುರಿಯಾಗಿರಿಸಿ, ಸರಾಗವಾಗಿ ಹರಿಯುವಂತಹ ಭೌಗೋಳಿಕ ನಕ್ಷೆಯನ್ನು ತಯಾರಿಸಿದ್ದೇನೆ. ಈಗ ನಾನು ತಯಾರಿಸಿರುವ ನಾಲಾ ಮಾರ್ಗದ ನಕ್ಷೆಯ ಅನ್ವ ಯ ತುಮಕೂರು ಶಾಖಾ ನಾಲೆಯಿಂದ ಚಿಕ್ಕನಾಯಕನಹಳ್ಳಿ ತಾಲೂಕಿನ ಕೆಂಕೆರೆ, ಗಾಣದಾಳು ಮುಂತಾದ ಕೆರೆಗಳಿಗೆ ಮತ್ತು ಉಪಕಾಲುವೆಯ ನಿರ್ಮಾಣದ ಮೂಲಕ ಉತ್ತರ ಭಾಗದ ದಸೂಡಿ ಕೆರೆ, ಮುಂದುವರಿಸಿದಂತೆ ಹಿರಿಯೂರು ತಾಲೂಕಿನ ದಿಂಡಾವರ ಕೆರೆ ಇತ್ಯಾದಿಗಳಿಗೆ ಸರಾಗವಾದ ಅನುಕೂಲ ಕಲ್ಪಿಸಬಹುದು ಎಂದು ಹೇಳಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

119ನೇ ಕಿ.ಮೀ. ನಿಂದ ಮತ್ತೊಂದು ಕಡೆಯಲ್ಲಿ ಉಪ ಕಾಲುವೆಯ ನಿರ್ಮಾಣದ ಮೂಲಕ ತೊರೆಸೂರಗೊಂಡನಹಳ್ಳಿ, ಬಿದರೆ ಕೆರೆಗಳ ಮಾರ್ಗ ಬೆಳವಾಡಿ ಕೆರೆಯವರೆಗೆ ಸರಳವಾದ ಕಾಲುವೆ ನಿರ್ಮಿಸಿ ನೀರನ್ನು ಹರಿಸಬಹುದು. ಈ ನಕ್ಷೆಯನ್ನು ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಸಲ್ಲಿಸಿ, ಇದನ್ನುಪರಿಗಣಿಸಿ ಶೀಘ್ರ ಕ್ರಮ ಕೈ ಗೊಳ್ಳಬೇಕೆಂದು ಮನವಿ ಮಾಡಲಾಗಿದೆ ಎಂದರು.