Asianet Suvarna News Asianet Suvarna News

ಹುನಗುಂದ: 'ಸರ್ಕಾರ ಮಾತೆ ಮಹಾದೇವಿ ಅಧ್ಯಯನ ಪೀಠ ಸ್ಥಾಪಿಸಲಿ'

ಯುವಜನರಲ್ಲಿ ಮಾತೆ ಮಹಾದೇವಿ ಕೊಡುಗೆ ಪರಿಚಯ ಮಾಡಿಕೊಡಲು ಅಧ್ಯಯನ ಪೀಠ ಸ್ಥಾಪಿಸಲು ಸರ್ಕಾರ ಮುಂದಾಗಬೇಕು| ಹುಬ್ಬಳ್ಳಿ ಜಗದ್ಗುರು ಬೃಹನ್ಮಠದ ಚಂದ್ರಶೇಖರ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಆಗ್ರಹ|

Chandrashekhara Shivayogi Swamiji Talks Over Mate Mahadevi
Author
Bengaluru, First Published Jan 12, 2020, 9:45 AM IST
  • Facebook
  • Twitter
  • Whatsapp

ಹುನಗುಂದ(ಜ.12): ಮಾತೆ ಮಹಾದೇವಿ ಅವರು ಬಸವಣ್ಣನವರ ಸಮಗ್ರ ಚಿಂತನೆಗಳನ್ನು ನಾಡಿನ ಜನರಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಅವರ ಸೇವೆಯನ್ನು ಎಲ್ಲರೂ ಸ್ಮರಿಸಬೇಕಾಗಿದೆ. ಯುವಜನರಲ್ಲಿ ಅವರ ಕೊಡುಗೆ ಪರಿಚಯ ಮಾಡಿಕೊಡಲು ಅಧ್ಯಯನ ಪೀಠ ಸ್ಥಾಪಿಸಲು ಸರ್ಕಾರ ಮುಂದಾಗಬೇಕು ಎಂದು ಹುಬ್ಬಳ್ಳಿ ಜಗದ್ಗುರು ಬೃಹನ್ಮಠದ ಚಂದ್ರಶೇಖರ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಆಗ್ರಹಿಸಿದರು.

ಇಲ್ಲಿಯ ಬಸವಧರ್ಮ ಪೀಠದ ವತಿಯಿಂದ ಏರ್ಪಡಿಸಿರುವ ಶರಣಮೇಳದ ಮೊದಲ ದಿನವಾದ ಶನಿವಾರ ಮಾತೆ ಮಹಾದೇವಿ ಅವರ ಸಂಕಲ್ಪ ಕುರಿತ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು. ಲಿಂಗಾಯತ ಧರ್ಮ, ಬಸವಾದಿ ಶರಣರ ಸಾಹಿತ್ಯ, ಸಂಸ್ಕೃತಿಯ ಅಧ್ಯಯನ ಮತ್ತು ಪ್ರಚಾರಕ್ಕಾಗಿ ಮಾತಾಜಿ ಮತ್ತು ಲಿಂಗಾನಂದ ಸ್ವಾಮೀಜಿಯವರು ನೀಡಿದ ಕೊಡುಗೆ ಅಪಾರ. ಬಸವಧರ್ಮ ಪೀಠದ ಧರ್ಮಗುರುಗಳಾದ ಲಿಂಗಾನಂದ ಸ್ವಾಮೀಜಿ ಮತ್ತು ಮಾತೆ ಮಹಾದೇವಿ ಅವರ ಹೆಸರಿನಲ್ಲಿ ವಿವಿಧ ವಿವಿಗಳಲ್ಲಿ ಅಧ್ಯಯನ ಪೀಠ ಸ್ಥಾಪಿಸಬೇಕು ಎಂದರು. ಬಸವಣ್ಣನವರ ವಿಚಾರಗಳನ್ನು ರಾಜ್ಯದ ಹಳ್ಳಿ ಹಳ್ಳಿಗೆ ಮಾತ್ರವಲ್ಲ ಜಗತ್ತಿನ ವಿವಿಧ ದೇಶಗಳಿಗೆ ತಿಳಿಸಿ, ಅವರಲ್ಲಿ ಸಂಸ್ಕೃತಿ ಬಿತ್ತಿದ್ದಾರೆ. ಯಾವುದೇ ಫಲಾಪೇಕ್ಷೆ ಇಲ್ಲದೆ, ಎಲ್ಲರನ್ನೂ ಒಳಗೊಂಡ ಬಸವಧರ್ಮ ಸಂಸ್ಕಾರದ ಸಂಪ್ರೀತಿಯನ್ನು ಹರಡಿದ್ದಾರೆ. ಅವರು ಶರಣ ಸಾಹಿತ್ಯದಲ್ಲಿ ಮಾಡಿದ ಕೃಷಿ ಅಪಾರ. ಅವರ ಸಮಗ್ರ ಸಾಹಿತ್ಯದ ಅಧ್ಯಯನ, ಸಂಶೋಧನೆಗಳಿಗೆ ಪೋ›ತ್ಸಾಹ ನೀಡಲು ಎಲ್ಲರೂ ಮುಂದಾಗಬೇಕು ಎಂದು ಹೇಳಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಜನರಲ್ಲಿ ಧರ್ಮದ ಸಂಸ್ಕಾರದ ಕೊರತೆ ಎದುರಾದಾಗ ಜಗತ್ತಿಗೆ ಅಪಾಯ ತಪ್ಪಿದ್ದಲ್ಲ. ಧರ್ಮ-ಧರ್ಮಗಳ ನಡುವಿನ ಸಂಘರ್ಷಕ್ಕೆ ಅವಕಾಶ ನೀಡದೇ ಎಲ್ಲರನ್ನೂ ಸಮಾನವಾಗಿ ಕಾಣುವ, ಸಮಷ್ಠಿ ಧರ್ಮವನ್ನು ಸಾರುವ ಶರಣರ ವಚನಗಳು ಎಲ್ಲದಕ್ಕೂ ಪರಿಹಾರ. ಮಠಾಧೀಶರು ಶರಣ ತತ್ವ, ಧರ್ಮ ಪಾಲನೆ ಮೂಲಕ ಜಗತ್ತಿನ ಏಕತೆ, ಸಮಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು. ಆಗ ಮಾನವ ಕೋಟಿಯ ಉದ್ಧಾರವಾಗುವುದು ಎಂದು ಸಲಹೆ ನೀಡಿದರು.
ಹಾವೇರಿ ಜಿಲ್ಲೆ ಅಗಡಿ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ ಮಾತನಾಡಿ, ಟಿವಿಯಿಂದ ಧರ್ಮದರ್ಶನದ ಕೊರತೆ ತೀವ್ರವಾಗಿ ಕಾಡುತ್ತಿದೆ. ಟಿವಿ ಮುಂದೆ, ಮೊಬೈಲ್‌ ಮುಂದೆ ದಿನಗಟ್ಟಲೆ ಕುಳಿತುಕೊಳ್ಳುವ ಯುವಜನರು ಧರ್ಮ ಚಿಂತನೆಗೆ ಆಸಕ್ತಿ ತೋರದಿರುವುದು ದುರದೃಷ್ಟಕರ ಎಂದು ವಿಷಾದಿಸಿದರು.

ಯುವಜನರು ದಾರಿ ತಪ್ಪಿದಾಗ ಅವರನ್ನು ಸರಿದಾರಿಗೆ ತರುವ ಕೆಲಸವನ್ನು ಧರ್ಮಾಧಿಕಾರಿಗಳು ಮಾಡಬೇಕು. ಧರ್ಮಗುರುಗಳು ರಾಜಕೀಯ ಹಿತಾಸಕ್ತಿ ಬಿಟ್ಟು, ಧರ್ಮ ಸಂಸ್ಕಾರಕ್ಕೆ ಮುಂದಾದಾಗ ಜಗತ್ತಿನ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ನುಡಿದರು.

ಬಸವಾದಿ ಶರಣರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕಿದ ಮಾತಾಜಿ, ಜಗಲಿ ಜ್ಯೋತಿಯಾಗದೆ ಜಗದ ಜ್ಯೋತಿಯಾಗಿ ಬೆಳಗಿದರು. ವಾಸ್ತವ ಸತ್ಯವನ್ನು ಎಲ್ಲರಿಗೂ ತಿಳಿಸಿದ ಮಹಾನ್‌ ತಾಯಿ ಎಂದು ಅಭಿಪ್ರಾಯಪಟ್ಟರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಲಿಂಗಾಯತ ಧರ್ಮ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ ಶಿವರಾಜ ಪಾಟೀಲ್‌ ಅತಿವಾಳ ಮಾತನಾಡಿ, ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮವೆಂದು ಘೋಷಿಸಬೇಕೆಂಬುದು ಮಾತಾಜಿಯವರ ಆಶಯವಾಗಿತ್ತು. ಅದಕ್ಕಾಗಿಯೇ ಮೂರು ದಶಕಗಳ ಕಾಲ ಹೋರಾಟ ನಡೆಸಿದರು. ಪ್ರತ್ಯೇಕ ಧರ್ಮ ಆಗುವವರೆಗೂ ಹೋರಾಟ ನಿರಂತರವಾಗಿ ನಡೆಯುತ್ತದೆ ಎಂದು ತಿಳಿಸಿದರು.

ಸ್ವಾರ್ಥಕ್ಕಾಗಿ ದೇಶದ ಹಿತಾಸಕ್ತಿ, ಸಮುದಾಯದ ಸಾಮರಸ್ಯವನ್ನು ಬಲಿ ಕೊಡಬಾರದು. ಇದರಿಂದ ಇಡೀ ಸಾಮಾಜಿಕ ವ್ಯವಸ್ಥೆ ಮೇಲೆ ದುಷ್ಪರಿಣಾಮ ಬಿರುವುದು. ಅಪಾಯಕ್ಕೆ ಅವಕಾಶ ನೀಡದೆ ಸದೃಢ, ಸುಂದರ ದೇಶ ಕಟ್ಟುವ ಕೆಲಸಕ್ಕೆ ಎಲ್ಲರೂ ಕೈಜೋಡಿಸಬೇಕು. ನೊಂದವರ ಹಿತ ಕಾಪಾಡಬೇಕು ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ, ಮಾತಾಜಿಯವರು ಜಾತಿ, ಮತ, ಧರ್ಮಗಳ ಭೇದವಿಲ್ಲದೆ ಎಲ್ಲ ವರ್ಗದ ಜನರ ಕಾರಣ್ಯದ ತಾಯಿ ಆಗಿದ್ದರು. ಅವರು ಹಾಕಿಕೊಟ್ಟಮಾರ್ಗದರ್ಶನದಲ್ಲಿ ನಡೆಯುವ ಸಂಕಲ್ಪ ತಮ್ಮದಾಗಿದೆ ಎಂದರು.

ಸಮಾರಂಭದಲ್ಲಿ ಕಂಪ್ಲಿ ಅಕ್ಕಿಗಿರಣಿ ಮಾಲೀಕರ ಸಂಘದ ಅಧ್ಯಕ್ಷ ಕೆ.ಎಂ.ಹೇಮಯ್ಯಸ್ವಾಮಿ, ಸವದತ್ತಿಯ ಹಿರಿಯ ವಕೀಲ ಎಂ.ಎಂ.ಹಿರಿಲಿಂಗನವರ, ಬೀದರನ ವಕೀಲ ಗಂಗಶೆಟ್ಟಿಪಾಟೀಲ ರಾಷ್ಟ್ರೀಯ ಬಸವದಳದ ರಾಜ್ಯ ಗೌರವಾಧ್ಯಕ್ಷ ವೀರಣ್ಣ ಕೊರ್ಲಹಳ್ಳಿ, ರಾಜ್ಯಾಧ್ಯಕ್ಷ ಬಸವರಾಜ ಕೊಂಡಗುಳಿ, ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷ ಚನ್ನಬಸವಾನಂದ ಸ್ವಾಮೀಜಿ, ಬೆಳಗಾವಿ ಬಸವ ಮಂಟಪದ ಪ್ರಭುಲಿಂಗ ಸ್ವಾಮೀಜಿ ಉಪಸ್ಥಿತರಿದ್ದರು. ಬಸವಪ್ರಕಾಶ ಸ್ವಾಮೀಜಿ ಪ್ರಾರ್ಥನೆ ಗೀತೆ ಹಾಡಿದರು. ಬಸವಪ್ರಭು ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಿಂಗಾಯ ಧರ್ಮ ಮಹಾಸಭಾ ಗೌರವಾಧ್ಯಕ್ಷ ಕೆ. ಬಸವರಾಜ ಸ್ವಾಗತಿಸಿದರು. ರಾಷ್ಟ್ರೀಯ ಬಸವದಳದ ಕಾರ್ಯದರ್ಶಿ ದಿಲೀಪ ಬತಮುರಗಿ ಕಾರ್ಯಕ್ರಮ ನಿರೂಪಿಸಿದರು. ಬೀದರ ರಾಷ್ಟ್ರೀಯ ಬಸವದಳದ ಸಿದ್ರಾಮ ಶಟಗಾರ ವಂದಿಸಿದರು.
 

Follow Us:
Download App:
  • android
  • ios